ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನದಲ್ಲಿ ಯುವಜನತೆ ಪಾಲ್ಗೊಳ್ಳಲಿ

ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಮಾಲತಿ ಪಟ್ಟಣಶೆಟ್ಟಿ ಸಲಹೆ
Last Updated 28 ಮಾರ್ಚ್ 2017, 9:30 IST
ಅಕ್ಷರ ಗಾತ್ರ
ಧಾರವಾಡ:  ‘ಭಾಷಣಗಳ ಬದಲು ಚರ್ಚೆ, ಸಂವಾದ ಹಾಗೂ ಸಮ್ಮೇಳನಾಧ್ಯಕ್ಷರೊಂದಿಗೆ ಸಂದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುವ ಪ್ರಯತ್ನ ನಡೆದಾಗ ಮಾತ್ರ ಇಂಥ ಸಮ್ಮೇಳನಗಳಲ್ಲಿ ಯುವಜನತೆಯೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬಹುದು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.
 
ಇಲ್ಲಿನ ಸಾಹಿತ್ಯ ಪರಿಷತ್‌ ಆವರಣದಲ್ಲಿ ನಿರ್ಮಿಸಲಾಗಿದ್ದ ಡಾ. ಎಂ.ಎಂ.ಕಲಬುರ್ಗಿ ವೇದಿಕೆಯಲ್ಲಿ ಭಾನುವಾರ ನಡೆದ 11ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ  ಮಾತನಾಡಿದರು.
 
‘ಇಂಥ ಸಮ್ಮೇಳನದಲ್ಲಿ ಯುವ ಲೇಖಕರಿಗೆ, ಸಾಹಿತಿಗಳಿಗೆ, ಕವಿಗಳಿಗೆ, ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಾಜದಲ್ಲಿ ಎಲ್ಲಿ ಅನ್ಯಾಯ ನಡೆದರೂ, ಅದನ್ನು ಲೇಖಕ ತನ್ನ ಲೇಖನಿಯ ಮೂಲಕ ಪ್ರತಿರೋಧಿಸುವ ಮನೋಭಾವ ಬೆಳೆಸುವಲ್ಲಿ ಇದು ಸಹಕಾರಿಯಾಗಲಿದೆ. ಅಂದಾಗ ಮಾತ್ರ ಸಮಾಜ ಎಚ್ಚೆತ್ತು ನಡೆಯಲಿದೆ.
 
ಧಾರವಾಡ ಕವಿ ಕೋಗಿಲೆಗಳ ವನವಿದ್ದಂತೆ. ಇದು ಎಂದಿಗೂ ಬಾಡದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮಂಥ ಹಿರಿಯ ತಲೆಮಾರಿನವರ ಮೇಲಿದೆ’ ಎಂದರು,
‘ತಮ್ಮ ಪಾಡಿಗೆ ತಾವೂ ಮನೆಯ ಮೂಲೆಯಲ್ಲಿ ಪ್ರೇಮಗೀತೆ ರಚಿಸುತ್ತ ಅತ್ಯಂತ ಸರಳವಾಗಿ ಬದುಕು ಸಾಗಿಸುತ್ತಿದ್ದ ವಿ.ಸಿ.ಐರಸಂಗ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವುದು ಹೆಮ್ಮೆಯ ಸಂಗತಿ.
 
ಸಾಹಿತ್ಯ ಹಾಗೂ ಸಮಯ ಬದಲಾಗುತ್ತಿದೆ. ಹೀಗಾಗಿ ಪರಿಷತ್ತಿನ ರೂಪರೇಷೆಯೂ ಬದಲಾಗಬೇಕಿದೆ. ಮುಂದಿನ ಸಮ್ಮೇಳನದಲ್ಲಿ ಜಲ್ವಂತ ಸಮಸ್ಯೆಗಳ ಕುರಿತು ಯುವಜನಾಂಗದ ಸಂವಾದ, ಚರ್ಚಾಕೂಟ ಏರ್ಪಡಿಸಬೇಕು’ ಎಂದು ಸಲಹೆ ನೀಡಿದರು.
 
‘ಮಳೆಗಾಲದಲ್ಲಿ ರೈತ ಬಿತ್ತನೆ ಬೀಜ, ಫಲ ನೀಡುವವರೆಗೂ ಕಾದಂತೆ ಶಿವಾನಂದ ಗಾಳಿ ಅವರು ಧಾರವಾಡದಲ್ಲಿ ಪರಿಷತ್ತಿನ ಗುಡಿ ಕಟ್ಟಿದರೆ, ಅವರ ನಂತರದವರು ಅದಕ್ಕೆ ಜೀವ ತುಂಬಿದರು. ಇಂದಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅದಕ್ಕೆ ಕಳಸ ಸ್ಥಾಪಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ’ ಎಂದರು.
 
ಡಾ. ಸೋಮಶೇಖರ ಇಮ್ರಾಪುರ ಮಾತನಾಡಿ, ‘ಕನ್ನಡಿಗರಲ್ಲಿ ಕನ್ನಡ ಸಾಹಿತ್ಯದ ಕುರಿತು ಹಾಗೂ ಕನ್ನಡಾಭಿಮಾನ ಏಕೆ ಕಡಿಮೆ ಆಗಿದೆ ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ. ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕನ್ನಡ ಇಂದು ಅಧೋಗತಿಯ ಹಾದಿ ಹಿಡಿದೆ. ಹೀಗಾಗಿ ಕನ್ನಡ ಸಾಹಿತ್ಯ ಪುನಃ ಅದೇ ಸ್ಥಿತಿಯನ್ನು ತಲುಪಲು ಇಂಥ ಸಮ್ಮೇಳನಗಳು ಪೂರಕವಾಗಿ ಕೆಲಸ ಮಾಡಬೇಕು’ ಎಂದರು.
 
ಸಮ್ಮೇಳನದ ಅಧ್ಯಕ್ಷ ವಿ.ಸಿ.ಐರಸಂಗ ಮಾತನಾಡಿ, ‘ಜೀವಮಾನದಲ್ಲಿ ಮರೆಯದಂತ ಕ್ಷಣಕ್ಕೆ ಈ ಸಮ್ಮೇಳನ ಕಾರಣವಾಗಿದೆ. ನಾನು ರಚಿಸಿದ ಸಾಹಿತ್ಯಕ್ಕೆ ಈಗ ತಕ್ಕ ಮನ್ನಣೆ ಸಿಕ್ಕಂತಾಗಿದೆ. ಇದು ನನ್ನಲ್ಲಿ ಸಾರ್ಥಕ ಭಾವ ಮೂಡಿಸಿದೆ. ಕತ್ತಲ್ಲೆಯಲ್ಲಿ ಕುಳಿತಿದ್ದ ನನ್ನನ್ನು ಸಮ್ಮೇಳನದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡುವ ಮೂಲಕ ಬೆಳಕಿನೆಡೆಗೆ ತಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಿಗೆ ಧನ್ಯ’ ಎಂದು ಕೃತಜ್ಞತೆ ಅರ್ಪಿಸಿದರು.
 
ಸಮ್ಮೇಳನದಲ್ಲಿ ಅಧ್ಯಕ್ಷ ವಿ.ಸಿ.ಐರಸಂಗ ಅವರನ್ನು ಸ್ಮರಣಿಕೆ ಹಾಗೂ ಫಲಪುಷ್ಪ ನೀಡಿ ಗೌರವಿಸಲಾಯಿತು. ಮೋಹನ ನಾಗಮ್ಮನವರ, ಡಾ.ಲಿಂಗರಾಜ ಅಂಗಡಿ, ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಗೇರಿ, ಮಂಗಳಾ ಮೆಟಗಡ್ಡಿ, ಡಾ. ರತ್ನಾ ಐರಸಂಗ, ಪ್ರಕಾಶ ಅಂಗಡಿ, ತಾಲೂಕು ಘಟಕದ ಅಧ್ಯಕ್ಷ ಎಫ್.ಬಿ.ಕಣವಿ, ಎ.ಬಿ.ಉಪ್ಪಿನ, ಗೌರವ ಕಾರ್ಯದರ್ಶಿ ಕೆ.ಎಸ್.ಕೌಜಲಗಿ ಉಪಸ್ಥಿತರಿದ್ದರು.
 
‘ಸ್ತ್ರೀ ಸಶಕ್ತೀಕರಣ ಹೋರಾಟದ ಉದ್ದೇಶ ಇಂದಿಗೂ ಈಡೇರಿಲ್ಲ’
ಧಾರವಾಡ: ‘ಮಹಿಳೆಯರನ್ನು ಸಶಕ್ತೀಕರಣಗೊಳಿಸುವ ಸಂಬಂಧ ಶರಣರ ಕಾಲದಿಂದಲೂ ಹೋರಾಟ ಮುಂದುವರೆಯುತ್ತಲೇ ಬಂದಿದ್ದು, ಆ ಉದ್ದೇಶ ಇದುವರೆಗೂ ಈಡೇರಿಲ್ಲ’ ಎಂದು ಮಂಡ್ಯದ ಸಾಹಿತಿ ಡಾ.ವಿಜಯಾ ಸಬರದ ಕಳವಳ ವ್ಯಕ್ತಪಡಿಸಿದರು.
 
‘ಮಹಿಳೆ: ಸಶಕ್ತೀಕರಣದ ಹಾದಿಯಲ್ಲಿ’ ಎಂಬ ಗೋಷ್ಠಿಯಲ್ಲಿ ‘ಮಹಿಳಾ ಸಶಕ್ತೀಕರಣ’ ವಿಷಯ ಕುರಿತು ಮಾತನಾಡಿದರು.‘ಈವರೆಗೂ ಹೋರಾಟದ ಉದ್ದೇಶ ಈಡೇರಿಲ್ಲ. ಒಂದೊಮ್ಮೆ ಈಡೇರಿದ್ದರೆ ಪ್ರಧಾನಿ ‘ಬೇಟಿ ಬಚಾವೋ ಬೇಟಿ ಪಢಾವೋ’ ಎಂಬ ಯೋಜನೆ ರೂಪಿಸುತ್ತಿರಲಿಲ್ಲ’ ಎಂದರು.
 
‘ಮಹಿಳೆಯರು ಪ್ರೀತಿ, ಪ್ರೇಮ ಎಂಬ ಪಾಶಕ್ಕೆ ಸಿಲುಕಿ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣ, ಆರ್ಥಿಕ, ಸಾಮಾಜಿಕ ಬೆಳವಣಿಗೆ ಜೊತೆಗೆ ರಾಜಕೀಯ, ವೈಚಾರಿಕ ಹಾಗೂ ವೈಜ್ಞಾನಿಕವಾಗಿ ಮಹಿಳೆಯರು ಮುನ್ನಡೆ ಸಾಧಿಸಬೇಕಿದೆ’ ಎಂದರು.
 
‘ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ 50 ರಷ್ಟು ಮೀಸಲಾತಿ ಬೇಕಿದೆ. ಈ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮೌನ ವಹಿಸಿವೆ. ಈ ಕುರಿತು ಮಸೂದೆ ಪಾಸ್ ಮಾಡಲು ಆಗ್ರಹಿಸಿದಾಗ, ಮೇಲ್ಮನೆಯಲ್ಲಿ ಪಾಸಾದ ಮಸೂದೆಯನ್ನು ಕೆಳಮನೆ ತಿರಸ್ಕರಿಸಿದ್ದು ನಾಚಿಕೆಗೇಡಿನ ಸಂಗತಿ. ಮಹಿಳೆಯರಿಗೆ ಸಹಾನುಭೂತಿ ಬೇಕಾಗಿಲ್ಲ. ಅದರ ಬದಲಾಗಿ ಸಮಾನತೆ ಬೇಕಿದೆ’ ಎಂದರು.
 
ಮಹಿಳಾ ಸಂಘಟನೆ ಕುರಿತು ವಿಷಯ ಮಂಡಿಸಿದ ಸಾಧನಾ ಸಂಸ್ಥೆಯ ಮುಖ್ಯಸ್ಥೆ ಇಸಬೆಲ್ಲಾ ಝೇವಿಯರ್‌, ‘ಜಾಗತಿಕ ಸಮಾಜದಲ್ಲಿ ಇಂದಿಗೂ ಹೆಣ್ಣು  ಭ್ರೂಣಹತ್ಯೆ ನಿಂತಿಲ್ಲ. ಎಷ್ಟೋ ಮಹಿಳೆಯರು ಇಂದಿಗೂ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಹೀಗಾದರೆ, ಸ್ತ್ರೀ ಸಶಕ್ತೀಕರಣ ಎಲ್ಲಿಂದ ಮಾಡುವುದು? ಇನ್ನು ಮಹಿಳಾ ಸಂಘಟನೆಗಳನ್ನು ಒಡೆದು ಆಳುವ ಹುನ್ನಾರಗಳು ನಡೆಯುತ್ತಿವೆ. ಲಿಂಗ ತಾರತಮ್ಯ ಹೋಗಲಾಡಿಸುವ ತನಕ ಸಮಾಜದ ಬದಲಾವಣೆ ಸಾಧ್ಯವಿಲ್ಲ’ ಎಂದರು.

ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಶಾಂತಾ ಇಮ್ರಾಪುರ, ‘ಮಹಿಳೆಯರಲ್ಲಿ ಸಾಮಾಜಿಕ ಪ್ರಜ್ಞೆ, ಸೂಕ್ಷ್ಮ ಸಮಾಜಿಕ ಸಂವೇದನೆ ಜಾಗೃತಿಗೊಳಿಸಬೇಕು. ಒಂದು ಸಮುದಾಯದ ಸ್ತ್ರೀ ಇನ್ನೊಂದು ಸಮುದಾಯದ ದೇವರ ನಾಮಸ್ಮರಣೆ ಮಾಡಿದರೆ, ಹಾಡಿದರೆ ಆಕೆಗೆ ಆ ಸಮುದಾಯ ಬಹಿಷ್ಕಾರ ಹಾಕುವುದು ಸರಿಯಲ್ಲ. ಜಾತಿ-ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ಕಟ್ಟಿ ಹಾಕಲಾಗುತ್ತಿದೆ’ ಎಂದು ವಿಷಾದಿಸಿದರು.
 
 ಕಲಘಟಗಿ ತಾಲ್ಲೂಕು ಘಟಕದ ಅಧ್ಯಕ್ಷೆ ಅನಿತಾ ಹತ್ತಿ, ಮಲ್ಲಿಕಾರ್ಜುನ ಪುರದನಗೌಡರ, ಈಶ್ವರ ಜವಳಿ, ಆರ್.ಎಂ.ಹೊಲ್ತಿಕೋಟಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT