ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಾರ್ಹ ಅಪರಾಧ ಪಟ್ಟಿಯಿಂದ ಆತ್ಮಹತ್ಯೆ ಹೊರಕ್ಕೆ: ಸ್ವಾಗತಾರ್ಹ

Last Updated 30 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಅನೇಕ ದೇಶಗಳಲ್ಲಿ ಆತ್ಮಹತ್ಯೆ ‘ಶಿಕ್ಷಾರ್ಹ ಅಪರಾಧವೇ ಅಲ್ಲ’. ಆದರೆ ನಮ್ಮಲ್ಲಿ ಬ್ರಿಟಿಷರ ಕಾಲದಿಂದಲೂ   ಇರುವ ಭಾರತೀಯ ದಂಡ ಸಂಹಿತೆಯ 309ನೇ ಕಲಂ ಮಾತ್ರ, ‘ಆತ್ಮಹತ್ಯೆ ಯತ್ನವೂ ಗಂಭೀರ ಅಪರಾಧ’ ಎಂದೇ ಪರಿಗಣಿಸುತ್ತ ಬಂದಿದೆ. ಅದಕ್ಕಾಗಿ ಜೈಲು ಶಿಕ್ಷೆ ವಿಧಿಸಬಹುದು. ‘ಇದು ತೀರಾ ಅಮಾನವೀಯ; ಆದ್ದರಿಂದ ಈ ಕಲಂ ರದ್ದು ಮಾಡಬೇಕು’ ಎಂಬ ಬೇಡಿಕೆ ಬಹಳ ಕಾಲದಿಂದಲೂ ಇತ್ತು.  ನಮ್ಮ ಕಾನೂನುಗಳು ಎಷ್ಟು ವಿಚಿತ್ರ ಎಂದರೆ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ವ್ಯಕ್ತಿಯ ಮೇಲೆಯೇ  ಮೊಕದ್ದಮೆ ದಾಖಲಾಗುತ್ತಿತ್ತು. ಅದೇ ರೀತಿ, ಆತ್ಮಹತ್ಯೆಗೆ ಯತ್ನಿಸುವ ವ್ಯಕ್ತಿಯೂ ‘ಅಪರಾಧಿ’ ಎನಿಸಿಕೊಂಡು ಮೊಕದ್ದಮೆ ಎದುರಿಸಬೇಕಾಗುತ್ತಿತ್ತು. ಮೊದಲೇ ನೊಂದ ಜೀವಕ್ಕೆ ಇದು ಮತ್ತೊಂದು ಬಗೆಯ ಹಿಂಸೆ, ನಾಗರಿಕ ಸಮಾಜವೇ ನಡೆಸುತ್ತಿದ್ದ ಮಾನಸಿಕ ಕ್ರೌರ್ಯ.  ಕೋರ್ಟ್‌ಗಳು ಕೂಡ ಈ ಬಗ್ಗೆ ಕಾಲಕಾಲಕ್ಕೆ ವಿಭಿನ್ನ ನಿಲುವು ತಳೆದಿದ್ದರಿಂದ ವಿಷಯ ಮತ್ತಷ್ಟು ಗೋಜಲಾಗಿತ್ತು. ಲೋಕಸಭೆ ಈಗ ಅಂಗೀಕರಿಸಿದ ‘2016ರ ಮಾನಸಿಕ ಆರೋಗ್ಯ  ಆರೈಕೆ ಮಸೂದೆ’ ಈ ಎಲ್ಲ ಗೊಂದಲಗಳಿಗೆ ಕೊನೆ ಹಾಡಿದೆ. ರಾಜ್ಯಸಭೆ ಕಳೆದ ಆಗಸ್ಟ್‌ನಲ್ಲಿಯೇ ಮಸೂದೆಗೆ ಒಪ್ಪಿಗೆ ನೀಡಿರುವುದರಿಂದ ಇದು ಕಾನೂನು ಆಗಲು ಕೆಲ ಆಡಳಿತಾತ್ಮಕ ಪ್ರಕ್ರಿಯೆಗಳಷ್ಟೇ ಉಳಿದಿವೆ. ಇದೊಂದು ಕ್ರಾಂತಿಕಾರಕ ಮತ್ತು ಐತಿಹಾಸಿಕ ಹೆಜ್ಜೆ.

ಆತ್ಮಹತ್ಯೆ ಯತ್ನವನ್ನು ಈ ಮಸೂದೆ  ಮಾನಸಿಕ ಅಸ್ವಸ್ಥತೆಯ ನೆಲೆಯಲ್ಲಿ ನೋಡುತ್ತದೆ. ‘ಇದು ಮಾನಸಿಕ ಒತ್ತಡದ ಫಲ; ತಕ್ಷಣವೇ ಸಹಾಯ ಹಸ್ತ ಚಾಚಬೇಕಾದ ಅಗತ್ಯವಿರುವ ಭಾವನಾತ್ಮಕ ಸ್ಥಿತಿ. ಆದ್ದರಿಂದ ಆತ್ಮಹತ್ಯೆಯ ಯತ್ನವನ್ನು ಅಪರಾಧ ಎಂದು ಪರಿಗಣಿಸುವಂತಿಲ್ಲ’ ಎಂದು ಸ್ಪಷ್ಟವಾಗಿ ಹೇಳುತ್ತದೆ. ಒತ್ತಡದಿಂದ ಹೊರಬರಲು ನೆರವು ನೀಡುವುದು, ಪುನರ್‌ವಸತಿ ಮತ್ತು ಆರೈಕೆ ಇನ್ನು ಮುಂದೆ ಸರ್ಕಾರದ ಶಾಸನಬದ್ಧ ಹೊಣೆಯಾಗಲಿದೆ. ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಮತ್ತೆ ಯತ್ನಿಸದಂತೆ ನೋಡಿಕೊಳ್ಳುವುದು ಇದರ ಉದ್ದೇಶ.

2015ರಲ್ಲಿ ನಮ್ಮ ದೇಶದಲ್ಲಿ 1.32 ಲಕ್ಷ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲೂ ಪುರುಷರಿಗೆ ಹೋಲಿಸಿದರೆ ಮಹಿಳೆಯರೇ ಹೆಚ್ಚು. ಬಾಳಿ ಬದುಕಬೇಕಾದ ಯುವಜನರಲ್ಲಿಯೂ ಆತ್ಮಹತ್ಯೆ ಪ್ರವೃತ್ತಿ ಅಧಿಕವಾಗುತ್ತಿದೆ. ವಿಶ್ವದಲ್ಲಿ ನಡೆಯುವ ಆತ್ಮಹತ್ಯೆಗಳಲ್ಲಿ ನಮ್ಮ ಪಾಲು ಸುಮಾರು ಶೇ 30ರಷ್ಟು. ಈ ಪ್ರಮಾಣ ಕಡಿಮೆಯಾಗುವ ಬದಲು ಏರುಮುಖದಲ್ಲಿದೆ. ಇದಕ್ಕೆಲ್ಲ ಮುಖ್ಯ ಕಾರಣ ಹತಾಶೆ, ಅವಮಾನ, ತಾರತಮ್ಯ, ಬಡತನ, ಅನಾರೋಗ್ಯ... ಹೀಗೆ ನಾನಾ ಸಮಸ್ಯೆಗಳು  ಮತ್ತು ಅವುಗಳಿಂದ ಉಂಟಾಗುವ ಮಾನಸಿಕ ಒತ್ತಡ. ಇದು ವ್ಯಕ್ತಿಯನ್ನು ಎಲ್ಲ ರೀತಿಯಿಂದ ಕುಗ್ಗಿಸುತ್ತದೆ.  ಖಿನ್ನತೆ, ಅಸಹಜ ನಡವಳಿಕೆ, ಮಾನಸಿಕ ಏರುಪೇರುಗಳಿಗೆ ಕಾರಣವಾಗುತ್ತದೆ.

ಸಕಾಲಕ್ಕೆ ಚಿಕಿತ್ಸೆ ಸಿಕ್ಕರೆ ಸರಿ. ಇಲ್ಲದಿದ್ದರೆ ಇದರಿಂದ ಹೊರಬರಲು ಆಗದೆ ಆತ್ಮಹತ್ಯೆಗೆ ಮುಂದಾಗುವವರೇ ಹೆಚ್ಚು. ನಮ್ಮಲ್ಲಿ ಬಹಳಷ್ಟು ಜನರಿಗೆ, ದೇಹಕ್ಕೆ ಬರುವ ಕಾಯಿಲೆಗಳ ಬಗ್ಗೆ ಇರುವಷ್ಟು ವೈಜ್ಞಾನಿಕ ಜಾಗೃತಿ ಮಾನಸಿಕ ಕಾಯಿಲೆಗಳ ಬಗ್ಗೆ ಇಲ್ಲ. ಸಾಮಾಜಿಕ, ಕೌಟುಂಬಿಕ, ಧಾರ್ಮಿಕ, ಆರ್ಥಿಕ ವಿಚಾರಗಳು ಕೂಡ ಇಲ್ಲಿ ಪ್ರಭಾವ ಬೀರುತ್ತವೆ. ಹೊಸ ಮಸೂದೆ ಆ ಬಗ್ಗೆಯೂ ಗಮನಹರಿಸಿದೆ. ಮಾನಸಿಕ ಒತ್ತಡ ಅನುಭವಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ಸರ್ಕಾರದಿಂದ ಅಥವಾ ಅದರ ಅನುದಾನದಿಂದ ನಡೆಯುವ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವ ಹಕ್ಕು ನೀಡುತ್ತದೆ. ಅಂತಹ ವ್ಯಕ್ತಿಗಳು ಬಡ ಕುಟುಂಬಕ್ಕೆ ಸೇರಿದ್ದರೆ ಅಥವಾ ವಸತಿಹೀನರಾಗಿದ್ದರೆ ಬಿಪಿಎಲ್‌ ಕಾರ್ಡ್‌ ಇಲ್ಲದಿದ್ದರೂ ಉಚಿತ ಚಿಕಿತ್ಸೆ ಪಡೆಯಬಹುದು. ಮುಂದೆ ತನಗೆ ಮಾನಸಿಕ ಕಾಯಿಲೆ ಉಲ್ಬಣಿಸಿದರೆ ಯಾವ ರೀತಿ ನೋಡಿಕೊಳ್ಳಬೇಕು ಎಂದು ಮೊದಲೇ ಸೂಚನೆ ನೀಡುವ, ಅದರ ಪಾಲನೆ ಮೇಲೆ ನಿಗಾ ಇಡಲು ಹಿತೈಷಿಯನ್ನು ನೇಮಕ ಮಾಡುವ ಹಕ್ಕು ಕೊಡುತ್ತದೆ. ಅವರ ಆಸ್ತಿಯನ್ನು ಬೇರೆಯವರು ಕಬಳಿಸದಂತೆ ರಕ್ಷಣೆ, ಒಂದು ವೇಳೆ ಕಬಳಿಕೆಯಾಗಿದ್ದರೆ ಮರು ಸ್ವಾಧೀನಪಡಿಸಿಕೊಳ್ಳಲು ಅವಕಾಶಕೊಡುವ ಅಂಶಗಳೂ ಮಸೂದೆಯಲ್ಲಿವೆ.

1987ರ ಮಾನಸಿಕ ಆರೋಗ್ಯ ಕಾಯ್ದೆಯು ಚಿಕಿತ್ಸಾ ಸಂಸ್ಥೆಗಳನ್ನು ಕೇಂದ್ರೀಕರಿಸಿತ್ತು. ಆದರೆ ಈಗಿನ ಮಸೂದೆ ವ್ಯಕ್ತಿ ಕೇಂದ್ರಿತವಾಗಿದೆ.  ಇಂತಹ ಮೂಲಭೂತ ಬದಲಾವಣೆಯ ಅಗತ್ಯ ಇತ್ತು. ಇನ್ನು ಆಗಬೇಕಿರುವುದು ಕುಟುಂಬ ಮತ್ತು ಸಮಾಜದ ಧೋರಣೆ ಹಾಗೂ ಆತ್ಮಹತ್ಯೆಯೊಂದೇ ದಾರಿ ಎಂದು ಭಾವಿಸಿಕೊಂಡ ವ್ಯಕ್ತಿಯ ಮನೋಭಾವದಲ್ಲಿ ಬದಲಾವಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT