ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ರಾಜ್ಯಗಳಲ್ಲಿ ಸಾಗಣೆ ಸಂಪೂರ್ಣ ಬಂದ್‌: ಸಂಧಾನ ವಿಫಲ; ಮುಷ್ಕರ ತೀವ್ರ

ಎಪಿಎಂಸಿ ಲಾರಿ ಮಾಲೀಕರ ಸಂಘದ ಬೆಂಬಲ
Last Updated 3 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಮಾ ಕ್ಷೇತ್ರ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎ) ಅಧ್ಯಕ್ಷ ಪಿ.ಎಸ್‌.ವಿಜಯ್‌ ಅವರು ‘ದಕ್ಷಿಣ ವಲಯ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ  ಸಂಘ’ದ ಮುಖಂಡರೊಂದಿಗೆ ಹೈದರಾಬಾದ್‌ನಲ್ಲಿ ಸೋಮವಾರ ನಡೆಸಿದ ಸಂಧಾನ ವಿಫಲವಾಗಿದ್ದು, ಮುಷ್ಕರ  ಮತ್ತಷ್ಟು ತೀವ್ರಗೊಂಡಿದೆ.

ವಾಹನಗಳ ವಿಮೆ ಕಂತಿನ ದರದ ಏರಿಕೆಯನ್ನು ಕೈಬಿಡುವಂತೆ ಮುಖಂಡರು ಒಕ್ಕೊರಲಿನಿಂದ ಮನವಿ ಮಾಡಿದ್ದರು. ಆ ಮನವಿಗೆ ಐಆರ್‌ಡಿಎ ಅಧ್ಯಕ್ಷರು ಸ್ಪಂದಿಸದಿದ್ದರಿಂದ ಮುಷ್ಕರವನ್ನು ಮುಂದುವರಿಸಲು ಮುಖಂಡರು ನಿರ್ಧರಿಸಿದರು.

‘ಅಖಿಲ ಭಾರತ ಮೋಟಾರ್‌ ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌’ ಸಂಘಟನೆ ಮಂಗಳವಾರದಿಂದ ಲಾರಿಗಳನ್ನು ದಕ್ಷಿಣದ ರಾಜ್ಯಗಳಿಗೆ ಕಳುಹಿಸದಿರಲು ತೀರ್ಮಾನಿಸಿದೆ. ಇದರಿಂದ ಉತ್ತರ ಭಾರತದಿಂದ ಬರುತ್ತಿದ್ದ ವಸ್ತುಗಳ ಸಾಗಣೆ ಸಂಪೂರ್ಣ ಸ್ಥಗಿತವಾಗಲಿದೆ.

ಬೆಂಗಳೂರಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೂ (ಎಪಿಎಂಸಿ) ಮುಷ್ಕರದ ಬಿಸಿ ತಟ್ಟಿದೆ. ಸೋಮವಾರ  ಎಪಿಎಂಸಿ ಲಾರಿ ಮಾಲೀಕರ ಸಂಘವು ಮುಷ್ಕರಕ್ಕೆ ಬೆಂಬಲ ನೀಡಿದ್ದು. ಬೆಳಿಗ್ಗೆಯಿಂದ ಎಪಿಎಂಸಿಯಲ್ಲೇ ಲಾರಿಗಳು ಸಾಲುಗಟ್ಟಿ ನಿಂತಿವೆ. 

ಜತೆಗೆ ಕೃಷಿ ಉತ್ಪನ್ನಗಳು ಸಾಗಣೆಯಾಗದೆ ಉಳಿದಿರುವುದರಿಂದ ಮಾರುಕಟ್ಟೆಯ ವರ್ತಕರು, ಉತ್ಪನ್ನಗಳನ್ನು ತರದಂತೆ ರೈತರಿಗೆ ಹೇಳುತ್ತಿದ್ದಾರೆ.
‘ಲಾರಿಗಳು ಲೋಡ್‌ ಆಗಿ ಮಾರುಕಟ್ಟೆಯಲ್ಲೇ ನಿಂತಿವೆ. ರಾತ್ರಿ ನಿಗದಿತ ಸ್ಥಳಕ್ಕೆ ಹೋಗುವ ಲಕ್ಷಣ ಕಾಣುತ್ತಿಲ್ಲ’ ಎಂದು ಎಪಿಎಂಸಿ ವರ್ತಕರ ಸಂಘದ ಉದಯ್‌ಶಂಕರ್‌ ತಿಳಿಸಿದರು.

‘ಮುಷ್ಕರಕ್ಕೆ ಬೆಂಬಲ ನೀಡುವಂತೆ ಲಾರಿ ಮಾಲೀಕರ ಸಂಘದವರು ಪತ್ರ ಬರೆದಿದ್ದಾರೆ. ನಮಗೆ ರೈತರು ಮುಖ್ಯ. ಹೀಗಾಗಿ ಪದಾಧಿಕಾರಿಗಳ ಸಭೆ
ನಡೆಸಿದ ಬಳಿಕವಷ್ಟೇ ಬೆಂಬಲ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ರಾಜ್ಯ ಖಾಸಗಿ ಬಸ್‌ಗಳ ಮಾಲೀಕರ ಸಂಘ, ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ, ಸರಕು ಸಾಗಣೆದಾರರ ಸಂಘವು ಮುಷ್ಕರಕ್ಕೆ ಬೆಂಬಲ ನೀಡಿವೆ. ಹೀಗಾಗಿ ಅಂಥ ವಾಹನಗಳು ಸಹ ಮಂಗಳವಾರದಿಂದ ರಸ್ತೆಗೆ ಇಳಿಯುವುದಿಲ್ಲ.

ಅಗತ್ಯ ವಸ್ತುಗಳ ಸಾಗಣೆ ಸ್ಥಗಿತ: ಸಂಧಾನ ವಿಫಲವಾಗಿದ್ದರಿಂದ ಮಂಗಳವಾರದಿಂದ ಹಾಲು, ಹಣ್ಣು–ತರಕಾರಿ ಸೇರಿ ಅಗತ್ಯ ವಸ್ತುಗಳ ಸಾಗಣೆಯನ್ನೂ ಸ್ಥಗಿತಗೊಳಿಸಲು ವಾಹನಗಳ ಮಾಲೀಕರು ತೀರ್ಮಾನಿಸಿದ್ದಾರೆ.

ಈಗಾಗಲೇ ಬೇಳೆ, ಅಕ್ಕಿ, ಮೊಟ್ಟೆ ಸೇರಿ ಹಲವು ವಸ್ತುಗಳ ಸಾಗಣೆ ಬಂದ್‌ ಆಗಿದೆ. ಈಗ ಅಗತ್ಯ ವಸ್ತುಗಳ ಸಾಗಣೆಯೂ ಸ್ಥಗಿತವಾಗುವುದರಿಂದ  ಮಾರುಕಟ್ಟೆಯಲ್ಲಿ ಅವುಗಳ ಲಭ್ಯತೆ ಕಡಿಮೆಯಾಗುವ ಸಾಧ್ಯತೆ ಇದೆ.

ಸಭೆ ಇಂದು: ಸಂಧಾನ ವಿಫಲವಾಗಿದ್ದರಿಂದ ತೈಲ ಸಾಗಣೆ ಟ್ಯಾಂಕರ್‌ ಮಾಲೀಕರು ಹಾಗೂ ಚಾಲಕರು ಮಂಗಳವಾರ ಸಭೆ ನಡೆಸಲು ನಿರ್ಧರಿಸಿದ್ದಾರೆ.
‘ಐಆರ್‌ಡಿಎ ವರ್ತನೆ ಬೇಸರ ತರಿಸಿದೆ. ತೈಲ ಸಾಗಣೆ ಸ್ಥಗಿತಗೊಳಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ.  ಬಂಕ್‌ ಮಾಲೀಕರು ಸಹ ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ ತಿಳಿಸಲಿದ್ದಾರೆ’ ಎಂದು ತೈಲ ಸಾಗಣೆ ಟ್ಯಾಂಕರ್‌ ಚಾಲಕರ ಸಂಘದ ಶ್ರೀರಾಮ್‌ ಹೇಳಿದರು.

ಹಾಪ್‌ಕಾಮ್ಸ್‌ಗೂ ತಟ್ಟಿದ ಬಿಸಿ: ಹಣ್ಣು–ತರಕಾರಿ ಸರಬರಾಜು ಮಾಡುವ ಹಾಪ್‌ಕಾಮ್ಸ್‌ಗೂ ಮುಷ್ಕರದ ಬಿಸಿ ತಟ್ಟಿದೆ.

‘ಹೊರರಾಜ್ಯಗಳಿಗೆ ಹೋಗಬೇಕಿದ್ದ  ಬೀನ್ಸ್‌, ಟೊಮೆಟೊ, ಸೊಪ್ಪು ಸಾಗಣೆಯಾಗಿಲ್ಲ. ಬೆಲೆಯನ್ನು  ಶೇ 5–10ರಷ್ಟು ಕಡಿಮೆ ಮಾಡಿ, ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದೇವೆ’ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕಡಾ. ಬಿ.ಕೃಷ್ಣ  ತಿಳಿಸಿದರು.

‘ಹೊರ ರಾಜ್ಯಗಳಿಂದ ಬರುತ್ತಿದ್ದ ಕ್ಯಾರೆಟ್‌, ಬಟಾಣಿ, ನುಗ್ಗೆಕಾಯಿ,  ಕಿತ್ತಳೆ, ಸೇಬು ಸಹ ಬಂದಿಲ್ಲ. ಸದ್ಯ ಸಂಗ್ರಹವಿದ್ದಷ್ಟು ಮಾತ್ರ ಮಾರಾಟ ಮಾಡುತ್ತಿದ್ದೇವೆ. ಪೂರೈಕೆ ಕಡಿಮೆ ಇರುವುದರಿಂದ ಶೇ 15–20ರಷ್ಟು ಬೆಲೆ ಹೆಚ್ಚಳವಾಗಿದೆ’ ಎಂದು ಹೇಳಿದರು.

ಏಪ್ರಿಲ್‌ 8ರಿಂದ ದೇಶವ್ಯಾಪಿ ಮುಷ್ಕರ
ಸದ್ಯ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಪುದುಚೇರಿ ಹಾಗೂ ತೆಲಂಗಾಣದಲ್ಲಿ ಮಾತ್ರ ಮುಷ್ಕರ ಆರಂಭಗೊಂಡಿದೆ. ಏಪ್ರಿಲ್‌ 8ರಿಂದ ದೇಶವ್ಯಾಪಿ ಮುಷ್ಕರ ಶುರುವಾಗಲಿದೆ.

ವಾಹನಗಳ ವಿಮೆ ಕಂತಿನ ದರ ಏರಿಕೆ ಕೈಬಿಡುವಂತೆ ಎಲ್ಲ ವಾಹನಗಳ ಮಾಲೀಕರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ದೇಶವ್ಯಾಪಿ ಮುಷ್ಕರಕ್ಕೆ ‘ಅಖಿಲ ಭಾರತ ಮೋಟಾರ್‌ ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌ ಕರೆ ನೀಡಿದೆ.

ಇದರಿಂದ ದೇಶದಾದ್ಯಂತ ವಸ್ತುಗಳ ಸಾಗಣೆ ಸಂಪೂರ್ಣ ಸ್ಥಗಿತವಾಗಲಿದ್ದು, ದೇಶದ ಆರ್ಥಿಕತೆ ಹಾಗೂ ಜನರ ಮೇಲೆ ಗಂಭೀರ ಪರಿಣಾಮ ಬೀರಲಿದೆ.

‘ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ’
ಬೆಂಗಳೂರು:
‘ಪ್ರಾದೇಶಿಕ ಸಾರಿಗೆ ಅಧಿಕಾರಿಗಳು  (ಆರ್‌ಟಿಒ) ವಿಧಿಸುವ ದಂಡದ ಪ್ರಮಾಣ ಕಡಿಮೆ ಮಾಡಬೇಕು ಎಂಬ ಲಾರಿ ಮಾಲೀಕರ ಸಂಘದ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

‘ಮುಷ್ಕರ ನಿರತ ಲಾರಿ ಮಾಲೀಕರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತೀರ್ಮಾನ ಕೈಗೊಳ್ಳಬೇಕಿದೆ. ವಿವಿಧ ಉಲ್ಲಂಘನೆಗಳಿಗೆ ಆರ್‌ಟಿಒ ವಿಧಿಸುವ  ದಂಡದ ಪ್ರಮಾಣವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಆದರೆ, ಅದನ್ನು ಪರಿಷ್ಕರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಇದರ ಆಧಾರದಲ್ಲಿ ದಂಡ ಪ್ರಮಾಣ ಇಳಿಕೆ ಮಾಡುತ್ತೇವೆ’ ಎಂದು ಅವರು ಹೇಳಿದರು.

‘ಲಾರಿ ಮಾಲೀಕರು 2–3 ದಿನ ಮುಷ್ಕರ ಮುಂದುವರಿಸಿದರೆ ಸಾರಿಗೆ ಬಸ್‌ಗಳ ಓಡಾಟ ಮಾತ್ರವಲ್ಲದೆ, ಎಲ್ಲ ಸೇವೆಗಳೂ ವ್ಯತ್ಯಯವಾಗಲಿವೆ’ ಎಂದು ಅವರು ತಿಳಿಸಿದರು.

ಅಗತ್ಯ ವಸ್ತುಗಳ ಸಾಗಟವೂ ಸ್ಥಗಿತ
ಅಕ್ಕಿ, ಬೇಳೆ ಕಾಳು, ಸಕ್ಕರೆ,  ದಿನಸಿ ವಸ್ತುಗಳು, ಕೋಳಿ ಹಾಗೂ ಮೊಟ್ಟೆ, ಹಣ್ಣು– ತರಕಾರಿ ,  ಹಾಲು ಹಾಗೂ ಹಾಲಿನ ಉತ್ಪನ್ನಗಳು

ಟೊಮೆಟೊ ಬೆಲೆ ಕುಸಿತ
ಕೋಲಾರ: ಲಾರಿ ಮುಷ್ಕರದಿಂದ ಜಿಲ್ಲೆಯಲ್ಲಿ ಟೊಮೆಟೊ ಬೆಲೆ ದಿಢೀರ್‌ ಕುಸಿತ ಕಂಡಿದೆ.

ಹೊರ ರಾಜ್ಯಗಳಿಗೆ ಟೊಮೆಟೊ ಸಾಗಿಸಲು ಲಾರಿಗಳೇ ಇಲ್ಲದಂತಾಗಿದೆ. ಇದರಿಂದ ಹೊರ ರಾಜ್ಯಗಳ ವರ್ತಕರು ಜಿಲ್ಲೆಯ ಎಪಿಎಂಸಿಗಳಿಗೆ ಬರುತ್ತಿಲ್ಲ.

ಮಂಡಿ ಮಾಲೀಕರು ಟೊಮೆಟೊ ಖರೀದಿಸಲು ಹಿಂದೇಟು ಹಾಕುತ್ತಿದ್ದು, ರೈತರು ಚಿಂತೆಗೀಡಾಗಿದ್ದಾರೆ. ಮಾ. 27ರಂದು ಸ್ಥಳೀಯ ಎಪಿಎಂಸಿಯಲ್ಲಿ ಕ್ವಿಂಟಲ್‌ ಟೊಮೆಟೊ ದರ ಗರಿಷ್ಠ ₹ 1,667 ಇತ್ತು. ಆದರೆ, ಲಾರಿ ಮುಷ್ಕರ ಆರಂಭವಾದ ನಂತರ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಸೋಮವಾರ (ಏ.3) ಕ್ವಿಂಟಲ್‌ ಟೊಮೆಟೊ ದರ ₹ 1,066ಕ್ಕೆ ಕುಸಿದಿದೆ. ಸಗಟು ದರಕ್ಕೆ ಅನುಗುಣವಾಗಿ ಚಿಲ್ಲರೆ ಮಾರಾಟ ದರವು ಕೆ.ಜಿಗೆ ₹ 30ರಿಂದ ₹ 15ಕ್ಕೆ ಇಳಿದಿದೆ. ಅದೇ ರೀತಿ ಬೀಟ್ರೂಟ್‌, ಕ್ಯಾರೆಟ್‌. ಆಲೂಗಡ್ಡೆ, ಬೀನ್ಸ್‌, ನುಗ್ಗೆಕಾಯಿ, ಮೂಲಂಗಿ ಬೆಲೆಯೂ ಕಡಿಮೆಯಾಗಿದೆ.

ಚಾಲಕರು, ಕ್ಲೀನರ್‌ಗೆ ಹೆದ್ದಾರಿಯೇ ಮನೆ 
ಮುಷ್ಕರದಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿದ್ದು, ಚಾಲಕರು ಹಾಗೂ ಕ್ಲೀನರ್‌ಗೆ ಹೆದ್ದಾರಿಯೇ ಮನೆಯಾಗಿ ಮಾರ್ಪಟ್ಟಿದೆ.

ನೆಲಮಂಗಲದಿಂದ ತುಮಕೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಅಕ್ಕ–ಪಕ್ಕದಲ್ಲೇ ಕಳೆದ ಮೂರು ದಿನಗಳಿಂದ ಲಾರಿಗಳನ್ನು ನಿಲ್ಲಿಸಲಾಗಿದ್ದು, ಟೋಲ್‌ ದಾಟಿ ನಗರಕ್ಕೂ ಬರುತ್ತಿಲ್ಲ

‘ಲಾರಿಗಳ ಸಂಚಾರ ವಿರಳವಾಗಿದೆ. ಪ್ರತಿದಿನಕ್ಕಿಂತ ಕಳೆದ ಮೂರು ದಿನಗಳಿಂದ ಟೋಲ್‌ ಸಂಗ್ರಹದಲ್ಲಿ ಶೇ 20ರಷ್ಟು ಇಳಿಕೆಯಾಗಿದೆ’ ಎಂದು ನೆಲಮಂಗಲ ಟೋಲ್‌ ಅಧಿಕಾರಿ ರಮೇಶ್‌ ತಿಳಿಸಿದರು.

ಅಂಕಿ–ಅಂಶ

* 25ಲಕ್ಷ ದಕ್ಷಿಣ ರಾಜ್ಯಗಳಲ್ಲಿ ಓಡಾಟ ನಿಲ್ಲಿಸಿದ ಲಾರಿಗಳು (ಪ್ರತಿದಿನ)

* 7.5 ಸಾವಿರ ಕೋಟಿ ಒಂದು ದಿನದ ನಷ್ಟ

* 37.5 ಸಾವಿರ ಕೋಟಿ ಐದು ದಿನದಲ್ಲಿ ಉಂಟಾದ ನಷ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT