ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಳ

Last Updated 7 ಏಪ್ರಿಲ್ 2017, 5:52 IST
ಅಕ್ಷರ ಗಾತ್ರ

ಶಿವಮೊಗ್ಗ: ಖಾಲಿ ನಿವೇಶನಗಳಿಗೆ ಶೇ 30, ವಸತಿ ಉದ್ದೇಶದ ಕಟ್ಟಡಗಳಿಗೆ ಶೇ 15ರಿಂದ 20, ವಾಣಿಜ್ಯ ಕಟ್ಟಡಗಳಿಗೆ ಶೇ 22 ಹಾಗೂ ಕೈಗಾರಿಕಾ ಕಟ್ಟಡಗಳಿಗೆ ಶೇ 15ರಷ್ಟು ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಿಸಲು ಮಹಾನಗರಪಾಲಿಕೆ ಆಡಳಿತ ಗುರುವಾರ ನಿರ್ಧರಿಸಿದೆ.
ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಗುರುವಾರ ನಡೆದ ತುರ್ತು ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ.

ಸರ್ಕಾರದ ಸುತ್ತೋಲೆ ಅನ್ವಯ, ಕರ್ನಾಟಕ ಪೌರ ನಿಯಮಗಳ ಅಧಿನಿಯಮ 1976ರ ಕಲಂ 109 ಎ ಪ್ರಕಾರ ಮೂರು ವರ್ಷಗಳಿಗೊಮ್ಮೆ ಸ್ವಯಂಘೋಷಿತ ಆಸ್ತಿ ತೆರಿಗೆ ಶುಲ್ಕವನ್ನು ಶೇ 15ರಿಂದ 30ಕ್ಕೆ ಏರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಡಳಿತ ತೆರಿಗೆ ಹೆಚ್ಚಳದ ನಿರ್ಧಾರ ಕೈಗೊಂಡಿದೆ.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ನಾಗರಾಜ ಕಂಕಾರಿ, ರಮೇಶ್, ಎನ್.ಜೆ. ರಾಜಶೇಖರ್, ಫಾಲಾಕ್ಷಿ ಮಾತನಾಡಿ, ಖಾಲಿ ನಿವೇಶನಕ್ಕೆ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಕೆಲ ಸದಸ್ಯರು ಸುದೀರ್ಘ ಚರ್ಚೆ ನಡೆಸಿದರು. 20X30 ಅಳತೆಯ ನಿವೇಶನವನ್ನು ತೆರಿಗೆ ಹೆಚ್ಚಳ ವ್ಯಾಪ್ತಿಯಿಂದ ಕೈಬಿಡಲು ಮನವಿ ಮಾಡಿದರು. 20X30 ನಿವೇಶನ ಬಹುತೇಕ ಬಡವರ್ಗದವರಿಗೆ ಸೇರಿದ್ದರಿಂದ ತೆರಿಗೆ ಹೆಚ್ಚಳ ಸರಿಯಲ್ಲ. ಇದರ ಹೊರತಾಗಿ 30X40 ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ನಿವೇಶನಗಳಿಗೆ ತೆರಿಗೆ ಹೆಚ್ಚಿಸಬಹುದು ಎಂದು ತಿಳಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಎಸ್.ಕೆ. ಮರಿಯಪ್ಪ, 20X30 ನಿವೇಶನಗಳಿಗೆ ರಿಯಾಯ್ತಿ ನೀಡಿದರೆ, ಮುಂದಿನ ದಿನಗಳಲ್ಲಿ ಉಳಿದ ನಿವೇಶನದಾರರು ರಿಯಾಯ್ತಿ ಆಗ್ರಹಿಸ ಬಹುದು. ಇದು ಸಾಕಷ್ಟು ಸಮಸ್ಯೆಗೂ  ಕಾರಣವಾಗಬಹುದು ಎಂದರು.

ಅಂತಿಮವಾಗಿ 20X30ರ ನಿವೇಶನಕ್ಕೆ ತೆರಿಗೆ ಹೆಚ್ಚಳದಿಂದ ರಿಯಾಯ್ತಿ ನೀಡಲು ತೀರ್ಮಾನಿಸಲಾಯಿತು. ವಾಣಿಜ್ಯ ಉದ್ದೇಶದ ಕಟ್ಟಡಕ್ಕೆ ತೆರಿಗೆ ಹೆಚ್ಚಿಸುವ ಸಂಬಂಧ ವಿಶೇಷ ಚರ್ಚೆ ನಡೆಯಿತು.

ಮೇಯರ್ ಏಳುಮಲೈ ಮಾತನಾಡಿ, ಸರ್ಕಾರದ ಸುತ್ತೋಲೆ ಪ್ರಕಾರ ತೆರಿಗೆ ದರ ಏರಿಕೆ ಮಾಡುವುದು ಅನಿವಾರ್ಯ. ಅದರಂತೆ ತೆರಿಗೆ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಪಾಲಿಕೆ ಆಯುಕ್ತೆ ತುಷಾರಮಣಿ ಮಾತನಾಡಿ, ಎಸ್ಎಫ್‌ಸಿ ಮುಕ್ತ ನಿಧಿ ಹಾಗೂ 14ನೇ ಹಣಕಾಸು ಯೋಜನೆಯ ಅನುದಾನ ತಯಾರಿಸಲು ಸರ್ಕಾರ ಸೂಚನೆ ನೀಡಿದೆ. ಏ. 30ರೊಳಗೆ ಕ್ರಿಯಾ ಯೋಜನೆ ತಯಾರಿಸಬೇಕಿದೆ. ಈ ಬಗ್ಗೆ ಸದಸ್ಯರು ಸಲಹೆ ನೀಡಬೇಕು. ಎಸ್ಎಫ್‌ಸಿ ಮುಕ್ತನಿಧಿಯಲ್ಲಿ 2016- 17ರ ಸಾಲಿನಲ್ಲಿ ₹ 12.60 ಕೋಟಿ ಮಂಜೂರಾಗಿದ್ದು, ₹ 9.30 ಕೋಟಿ ಮಾತ್ರ ಬಿಡುಗಡೆಯಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್, ಉಪ ಮೇಯರ್ ರೂಪಾ ಲಕ್ಷ್ಮಣ್ ಉಪಸ್ಥಿತರಿದ್ದರು.

**

2014ರಲ್ಲಿಯೂ ಹೆಚ್ಚಳ

ಕರ್ನಾಟಕ ಪೌರ ನಿಯಮಗಳ ಅಧಿನಿಯಮದಂತೆ ಪ್ರತಿ ಮೂರು ವರ್ಷಕ್ಕೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಶೇ 15 ರಿಂದ 30 ರಷ್ಟು ಹೆಚ್ಚಿಸಬೇಕಿದೆ. ಈ ಹಿಂದೆ 2014ರ ಜನವರಿ 20ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯ ತೀರ್ಮಾನದಂತೆ 2014- 15ನೇ ಸಾಲಿಗೆ ಜಾರಿಗೆ ಬರುವಂತೆ ಆಸ್ತಿ ತೆರಿಗೆ ದರ ಏರಿಕೆ ಮಾಡಲಾಗಿತ್ತು.

ಇದೀಗ 2017- 18ನೇ ಸಾಲಿನಿಂದ ಆಸ್ತಿ ತೆರಿಗೆ ಹೆಚ್ಚಿಸಬೇಕಿದ್ದ ಹಿನ್ನೆಲೆಯಲ್ಲಿ 2016ರ ಡಿ. 14 ರಿಂದ ನಡೆದ ತೆರಿಗೆ ನಿರ್ಧಾರ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಸಭೆಯ ತೀರ್ಮಾನ ಕೈಗೊಳ್ಳಲಾಗಿದೆ.

ಮಾರ್ಚ್ 31ರಂದು ನಡೆದ 2017- 18ನೇ ಸಾಲಿನ ಆಯವ್ಯಯ ಮಂಡನೆ ಸಂದರ್ಭದಲ್ಲಿ ಸ್ಥಾಯಿ ಸಮಿತಿಯಲ್ಲಿ ಹೆಚ್ಚಿಸಿರುವ ಪರಿಷ್ಕೃತ ದರದಂತೆ ಆಸ್ತಿ ತೆರಿಗೆ ಆದಾಯ ನಿರೀಕ್ಷಿಸಲಾಗಿರುವುದನ್ನು ಸಭೆ ಅನುಮೋದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT