ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಕಾಲು ಬಾಯಿ ಜ್ವರಕ್ಕೆ ಲಸಿಕೆ

Last Updated 7 ಏಪ್ರಿಲ್ 2017, 10:01 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ರಾಸುಗಳಿಗೆ ಕಾಲು ಬಾಯಿ ಜ್ವರಕ್ಕೆ ಹನ್ನೆರಡನೇ ಸುತ್ತಿನ ಲಸಿಕಾ ಕಾರ್ಯಕ್ರಮ ಶುಕ್ರವಾರದಿಂದ ಆರಂಭವಾಗಲಿದೆ ಎಂದು ತುಮುಲ್‌ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್‌ ತಿಳಿಸಿದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆಯಿಂದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಪಶು ಪಾಲನಾ ಇಲಾಖೆ ಜತೆ ತುಮುಲ್‌ (ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ) ಕೈ ಜೋಡಿಸಿದೆ. ತುಮುಲ್‌ನಿಂದ 67 ವಾಹನಗಳನ್ನು ನೀಡಲಾಗಿದೆ. 77 ಲಸಿಕೆದಾರರನ್ನು ಕೊಡಲಾಗಿದೆ ಎಂದು ವಿವರಿಸಿದರು.

ಕಾಲುಬಾಯಿ ಜ್ವರ ಮಾರಣಾಂತಿಕ ಕಾಯಿಲೆಯಾಗಿದೆ. ರೈತರು ಯಾವುದೇ ಕಾಣರಕ್ಕೂ ನಿರ್ಲಕ್ಷ್ಯ ವಹಿಸಬಾರದು. ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು.

ಬಿಸಿಲಿನ ಝಳ ಹೆಚ್ಚಳ ಹಾಗೂ ದೂಳು ಸೋಂಕು ಹೆಚ್ಚಾಗಲೂ ಕಾರಣವಾಗಿದೆ. 2014ರಲ್ಲಿ ರೋಗ ಕಾಣಿಸಿಕೊಂಡಾಗ ನೂರಾರು ರಾಸುಗಳು ಸಾವಿಗೀಡಾಗಿದ್ದವು. ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಉಚಿತ ಲಸಿಕಾ ಅಭಿಯಾನ ಆರಂಭಿಸಿತು ಎಂದರು.

ಬರದ ಕಾರಣದಿಂದಾಗಿ ಬೇರೆ ಬೇರೆ ರಾಜ್ಯಗಳಿಂದ ರಾಸುಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಸೋಂಕು ತಗುಲಿರುವ ರಾಸುಗಳನ್ನು ಕೊಳ್ಳುವುದರಿಂದ ಉಳಿದ ರಾಸುಗಳು ಸೋಂಕಿಗೆ ಗುರಿಯಾಗಲಿವೆ. ಹೀಗಾಗಿ ರೈತರು ಎಚ್ಚರಿಕೆಯಿಂದ ಇರಬೇಕು ಎಂದರು.

ಕಾಲು ಬಾಯಿ ಜ್ವರಕ್ಕೆ ಚಿಕಿತ್ಸೆ ಇಲ್ಲವಾಗಿದೆ. ಲಸಿಕೆ ಹಾಕಿಸುವುದೊಂದೇ ಮಾರ್ಗ. ಪ್ರತಿ ಆರು ತಿಂಗಳಿಗೊಮ್ಮೆ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಮೂರು ತಿಂಗಳು ಮೇಲ್ಪಟ್ಟ ಎಲ್ಲ ರಾಸುಗಳಿಗೆ, ಹಂದಿಗಳಿಗೆ ಲಸಿಕೆ ಹಾಕಲಾಗುವುದು ಎಂದರು.

‘ವೃಂದ ಮತ್ತು ನೇಮಕಾತಿ ನಿಯಮ ಜಾರಿಗೊಳಿಸುವಂತೆ ಪಶು ವೈದ್ಯರು ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸದೇ ಮುಷ್ಕರ ಮಾಡುವುದಾಗಿ ತಿಳಿಸಿದ್ದಾರೆ. ಸರ್ಕಾರ ವೈದ್ಯರೊಂದಿಗೆ ಮಾತುಕತೆ ನಡೆಸಿ ಅವರ ಬೇಡಿಕೆ ಈಡೇರಿಸುವ ವಿಶ್ವಾಸವಿದೆ. ಒಂದು ವೇಳೆ ವೈದ್ಯರು ಮುಷ್ಕರ ಹೂಡಿದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಭಿಯಾನ ನಿಲ್ಲದು’ ಎಂದು ಪಶು ವೈದ್ಯ ಇಲಾಖೆ ಉಪ ನಿರ್ದೇಶಕ ಡಾ. ರಾಜಶೇಖರ್‌ ತಿಳಿಸಿದರು.

ಚಿಕ್ಕನಾಯಕನಹಳ್ಳಿ, ತುಮಕೂರು, ಕೊರಟಗೆರೆ, ಶಿರಾ ತಾಲ್ಲೂಕಿನಲ್ಲಿ ಸೋಂಕು ತಗುಲಿದೆ. ಒಟ್ಟು  28 ರಾಸುಗಳು ಸೋಂಕಿಗೆ ತುತ್ತಾಗಿವೆ. ಇವುಗಳಲ್ಲಿ 2 ಹಸುಗಳು ಸಾವಿಗೀಡಾಗಿವೆ ಎಂದರು.

**

ತಂಡ ರಚನೆ
ಪ್ರತಿ 150–170 ಜಾನುವಾರುಗಳಿಗೆ ಒಂದರಂತೆ ಬ್ಲಾಕ್‌ಗಳನ್ನು ಮಾಡಲಾಗಿದೆ. ಪ್ರತಿ ಬ್ಲಾಕ್‌ಗೆ ಒಬ್ಬರು ಲಸಿಕೆದಾರರನ್ನು ನೇಮಕ ಮಾಡಲಾಗಿದೆ.  ಗ್ರಾಮ ನಕ್ಷೆ ಮತ್ತು ಜಾನುವಾರು ವಿವರಗಳನ್ನು ನಮೂದಿಸಿ ಗ್ರಾಮವಾರು ನಕ್ಷೆ ಮಾಡಲಾಗಿದೆ.

ಜಿಲ್ಲೆಯಾದ್ಯಂತ 65 ಲಸಿಕಾ ತಂಡಗಳನ್ನು ರಚಿಸಲಾಗಿದೆ.  ಪ್ರತಿ ತಂಡದ ಮುಖ್ಯಸ್ಥರಾಗಿ ಪಶು ವೈದ್ಯಾಧಿಕಾರಿಯನ್ನು ನೇಮಿಸಲಾಗಿದೆ. ತುಂಬು ಗರ್ಭದ ರಾಸುಗಳಿಗೆ ಲಸಿಕೆ ಹಾಕುವುದಿಲ್ಲ. ಮುಂದಿನ ಸುತ್ತಿನಲ್ಲಿ ಲಸಿಕೆ ಹಾಕಿಸಬೇಕಾಗುತ್ತದೆ. 

**

ಲಸಿಕೆ ಪೂರೈಕೆ ವಿಳಂಬ
ಫೆಬ್ರುವರಿ ತಿಂಗಳಲ್ಲೆ ಲಸಿಕಾ ಅಭಿಯಾನ ಹಮ್ಮಿಕೊಳ್ಳಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರದಿಂದ ಲಸಿಕೆಗಳು ಪೂರೈಕೆಯಾಗದ ಕಾರಣ ಅಭಿಯಾನ ವಿಳಂಬವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT