ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳೆದಂತೆಲ್ಲ ರೂಪುಗೊಂಡ ಭಾರತ!

Last Updated 8 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಸುನೀಲ್‌ ನಟೇಕರ್‌
ನ್ನೈಯಲ್ಲಿ ‘ಭಾರತದ ಮಹಾಸರ್ವೆ ಕಾರ್ಯ’ ಆರಂಭವಾದುದು 1802ರ ಏಪ್ರಿಲ್‌ 10ರಂದು. ಈ ಸಂದರ್ಭದ ನೆನಪಿಗಾಗಿ, ಪ್ರತಿ ವರ್ಷ ಏಪ್ರಿಲ್‌ 10ರಂದು ‘ಸರ್ವೆ ದಿನಾಚರಣೆ’ಯನ್ನು ಭಾರತದಲ್ಲಿ ಆಚರಿಸಲಾಗುತ್ತಿದೆ.
 
ಎರಡು ಶತಮಾನಗಳ ಹಿಂದೆ ಚೆನ್ನೈಯ ಮರೀನಾ ಬೀಚ್‌ನಲ್ಲಿ ‘ದಿ ಗ್ರೇಟ್‌ ಟ್ರಿಗ್ನೊಮೆಟ್ರಿಲ್‌ ಸರ್ವೆ’ಯನ್ನು ಆರಂಭಿಸಲಾಯಿತು. ಈ ಸರ್ವೆ ಕಾರ್ಯ 1843ರವರೆಗೆ ನಡೆದು ಹಿಮಾಲಯದ ತಪ್ಪಲಲ್ಲಿ ಕೊನೆಗೊಂಡಿತು.
 
ಬ್ರಿಟಿಷರು ತಮ್ಮ ಆಡಳಿತದ ಎಲ್ಲೆಯನ್ನು ಗುರುತಿಸಿ, ರಕ್ಷಿಸಿ, ಕಾಪಾಡಲು ಈ ಸರ್ವೆಯನ್ನು ಆರಂಭಿಸಿದರು. ಅದೇನೇ ಇದ್ದರೂ ಈ ಸರ್ವೆ ಕಾರ್ಯದಿಂದಾಗಿ ಭಾರತದ ಭೂಪಟ ರಚನೆಯಾಯಿತು ಎನ್ನುವುದಂತೂ ನಿಜ.
 
ಚೆನ್ನೈಯಲ್ಲಿ ಈ ಸರ್ವೆ ಕಾರ್ಯ ಲ್ಯಾಂಬ್ಟನ್‌ ಎಂಬ ಅಧಿಕಾರಿಯ ನೇತೃತ್ವದಲ್ಲಿ ಆರಂಭಗೊಂಡಿತು. ಈ ತಂಡ ಆಗಿನ ಮದ್ರಾಸ್‌ನಿಂದ ಹೊರಟು ಮಂಗಳೂರಿಗೆ 1806ರಲ್ಲಿ ತಲುಪುತ್ತದೆ. ಇದಕ್ಕೂ ಮೊದಲು ಕೆಡಸ್ಟ್ರಾಲ್‌ ಮತ್ತು ಆಸ್ಟ್ರೋನಾಮಿಕಲ್‌ ಸರ್ವೆ ಆಧಾರಿತ ನಕ್ಷೆಗಳಿಂದ ಮದ್ರಾಸ್‌ನಿಂದ ಮಂಗಳೂರಿಗೆ 400 ಮೈಲುಗಳು ಎಂದು ತೋರಿಸಲಾಗಿತ್ತು.
 
ಆದರೆ ಲ್ಯಾಂಬ್ಟನ್‌ ನಡೆಸಿದ ಟ್ರಿಗ್ನಾಮೆಟ್ರಿಕ್‌ ಸರ್ವೆಯ ಪ್ರಕಾರ ಆ ಅಂತರವನ್ನು 360 ಮೈಲುಗಳೆಂದು ನಿಖರವಾಗಿ ತೋರಿಸಲಾಯಿತು. ಈ ತಂಡ ದಕ್ಷಿಣ ಭಾರತದಲ್ಲೆಲ್ಲ ಸರ್ವೆ ನಡೆಸಿ ನಾಗಪುರದತ್ತ ಸಾಗುವಾಗ, 1826ರಲ್ಲಿ  ಹಿಂಗನ್‌ ಘಾಟ್‌ ಎಂಬಲ್ಲಿ ಅನಾರೋಗ್ಯದಿಂದ ಲ್ಯಾಂಬ್ಟನ್‌ ನಿಧನರಾದರು. ಲ್ಯಾಂಬ್ಟನ್‌ ಅವರಿಗೆ ಆಗ 70 ವರ್ಷ ವಯಸ್ಸಾಗಿತ್ತು. 
 
ಆಗ ಅವರ ಸಹಾಯಕರಾಗಿದ್ದ ಜಾರ್ಜ್‌ ಎವರೆಸ್ಟ್‌ ಅವರು ತಂಡದ ನೇತೃತ್ವ ವಹಿಸಿಕೊಂಡರು. ಈ ತಂಡದಲ್ಲಿ 4 ಆನೆಗಳು, ಅಧಿಕಾರಿಗಳ ಪ್ರಯಾಣಕ್ಕಾಗಿ 30 ಕುದುರೆಗಳು, ಸರಕು ಸರಂಜಾಮು ಹೊರಲು 42 ಒಂಟೆಗಳು ಇದ್ದವು. ಅದು 700 ಮಂದಿಯ ತಂಡವಾಗಿತ್ತು.
 
ಎವರೆಸ್ಟ್‌ ನೇತೃತ್ವದಲ್ಲಿ ಕಾರ್ಯ ಶುರುವಾದಾಗ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿ ತುಂಬಿ ಹರಿಯುತ್ತಿತ್ತು. ತಂಡದ ಸದಸ್ಯರನ್ನು ಮಲೇರಿಯಾ ಕಾಡಿತ್ತು. ಆದರೆ ಎವರೆಸ್ಟ್‌ ಎದೆಗುಂದಲಿಲ್ಲ. 
 
ಆ ದಿನಗಳಲ್ಲಿ ಈಗಿನಂತೆ ಸಂಪರ್ಕ ಸಾಧನಗಳಿರಲಿಲ್ಲ. ಒಂದು ಸ್ಥಳದಿಂದ ಇನ್ನೊಂದು ನಿರ್ದಿಷ್ಟ ಸ್ಥಳ ತಲುಪಿದಾಗ ಅಲ್ಲಿ ಬೆಂಕಿ ಹಾಕಿ ಹೊಗೆ ಕಾಣುವಂತೆ ಮಾಡಬೇಕು. ಒಮ್ಮೆ ಇದೇ ರೀತಿ ಒಂದು ತಂಡ ಅಲ್ಲಿಗೆ ಹೋಗಿ ವಾರ ಉರುಳಿದರೂ ಹೊಗೆ ಕಾಣಿಸಲಿಲ್ಲ. ಎರಡನೇ ತಂಡವೂ ಹೋಯಿತು. ಹೊಗೆ ಕಾಣಲಿಲ್ಲ. ಮೂರನೇ ತಂಡದ್ದೂ ಇದೇ ಸ್ಥಿತಿ.
 
ಹಾಗಾಗಿ ಜೋಸೆಫ್‌ ಆಲಿವರ್‌ ಎಂಬ ಅಧಿಕಾರಿ ಅಲ್ಲಿಗೆ ಹೋಗಿ ನೋಡಿದಾಗ ಮಲೇರಿಯಾದಿಂದ ಎಲ್ಲರೂ ಸತ್ತುಹೋಗಿದ್ದರು. ನಂತರ ಜೋಸೆಫ್‌ ಮತ್ತು ಎವರೆಸ್ಟ್‌ ಅವರನ್ನೂ ಮಲೇರಿಯಾ ಕಾಡುತ್ತದೆ.
 
ಇವರ ಜತೆಗೇ ಈ ಜ್ವರದಿಂದ ಬಳಲುತ್ತಿದ್ದ ಸುಮಾರು 150 ಮಂದಿ ಸುಮಾರು 200 ಮೈಲು ದೂರವಿದ್ದ ಹೈದರಾಬಾದ್‌ಗೆ ತೆರಳಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ತಮ್ಮ ಕಾರ್ಯವನ್ನು ಮುಂದುವರಿಸುತ್ತಾರೆ. ಆದರೆ ಅದೇ ಸಂದರ್ಭದಲ್ಲಿ ರಾಬರ್ಟ್‌ ಯಂಗ್‌, ಜೇಮ್ಸ್‌ ಗಾರ್ಲಿಂಗ್‌, ಕಾನರ್‌ ಸೇರಿದಂತೆ ಅನೇಕ ಮಂದಿ ಬ್ರಿಟಿಷ್‌ ಸರ್ವೆ ಅಧಿಕಾರಿಗಳು ಈ ಜ್ವರದಿಂದಲೇ ಸಾವನ್ನಪ್ಪಿದ್ದರು. ಇಂತಹ ಹಲವು ದುರಂತಗಳು ತಂಡದಲ್ಲಿ ನಡೆದುಹೋದವು.
 
‘ಈ ಸರ್ವೆ ಕಾರ್ಯಕ್ಕೆ ಹಾಕಿದ ಹಣ, ಸತ್ತ ಜೀವಗಳ ಲೆಕ್ಕ ಹಾಕಿದರೆ ಒಂದು ದೊಡ್ಡ ಯುದ್ಧವನ್ನು ನೆನಪಿಸುವಂತಿದೆ’ ಎಂದು ಆ ದಿನಗಳಲ್ಲೇ ‘ಭಾರತ ಸರ್ವೆ ಇಲಾಖೆ’ಯ ಮುಖ್ಯಸ್ಥ ಜಾರ್ಜ್‌ ಎವರೆಸ್ಟ್‌ ಬರೆದಿದ್ದಾರೆ.
 
 1833 ರಿಂದ 43ರವರೆಗೆ ಎವರೆಸ್ಟ್‌ ನೇತೃತ್ವದಲ್ಲೇ ಸರ್ವೆ ಕಾರ್ಯದ ಎಲ್ಲ ಚಟುವಟಿಕೆಗಳೂ ನಡೆಯುತ್ತವೆ. 1850ರ ವೇಳೆಗೆ ಗಣಿತ ಶಾಸ್ತ್ರಜ್ಞ ರಾಧಾನಾಥ ಸಿಕ್ದರ್‌ ಅವರು ಹಿಮಾಲಯದ ಎತ್ತರವನ್ನು ಲೆಕ್ಕಾಚಾರ ಹಾಕುತ್ತಾರೆ.
 
ಆ ಪರ್ವತ ಸಾಲುಗಳಲ್ಲಿ ಈಗಿನ ಎವರೆಸ್ಟ್‌ ಶಿಖರದ ಎತ್ತರ 29 ಸಾವಿರ ಅಡಿ ಎಂದು ನಿರ್ಧರಿಸಲಾಗುತ್ತದೆ. 1856ರಲ್ಲಿ ಆ ಶಿಖರಕ್ಕೆ ಎವರೆಸ್ಟ್‌ ಹೆಸರನ್ನು ನಾಮಕರಣ ಮಾಡಲಾಯಿತು. 
ಲೇಖಕರು ರಾಜ್ಯ ಸರ್ಕಾರ ಸರ್ವೆ ಇಲಾಖೆಯಲ್ಲಿ ಪರ್ಯಾವೀಕ್ಷಕರು
 
***
ಖಗೋಳ ವೀಕ್ಷಣೆಗೆ ಬಳಸುವ ಜೆನಿತ್‌ ಸೆಕ್ಟರ್‌ ಅನ್ನು ಈ ಸರ್ವೆಗೆ ಬಳಸಲಾಗಿತ್ತು. ಅಳತೆಗಾಗಿ 40 ‘ಲಿಂಕ್‌’ಗಳ ನೂರು ಅಡಿ ಉದ್ದದ, 50 ಕೆ.ಜಿ. ತೂಕದ ಉಕ್ಕಿನ ಸರಪಳಿಯನ್ನು ಇಂಗ್ಲೆಂಡ್‌ನಿಂದ ತರಿಸಲಾಗಿತ್ತು. ಇದರ ಸಾಗಾಟಕ್ಕಾಗಿಯೇ 12 ಮಂದಿ ಕೂಲಿಯಾಳುಗಳು ಇದ್ದರು.
 
ಸರ್ವೆಗೆ ಬಳಸುವ ಥಿಯಾಡಟೈಲ್‌ ಉಪಕರಣವನ್ನು ಇಂಗ್ಲೆಂಡಿನಿಂದ ಹಡಗಿನಲ್ಲಿ ಭಾರತಕ್ಕೆ ತರುವಾಗ ಅದನ್ನು ಫ್ರೆಂಚರು ವಶಪಡಿಸಿಕೊಂಡಿದ್ದರು. ಅದು ಸರ್ವೆಗೆ ಬಳಸುವ ಉಪಕರಣವೆಂದು ಮನವರಿಕೆ ಮಾಡಿಕೊಟ್ಟಾಗ, ಅದನ್ನು ಅವರು ಬ್ರಿಟಿಷರಿಗೆ ಹಿಂತಿರುಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT