ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ವಿವಾದ ಮತ್ತು ವಿಶ್ವಾಸಾರ್ಹತೆ

ಕಾನೂನು, ನ್ಯಾಯ ಯಾವುದಕ್ಕೂ ಬೆಲೆ ಕೊಡದೇ ಬಂದವರು ಇದ್ದಕ್ಕಿದ್ದಂತೆ ಮಾತುಕತೆಗೆ ಆಹ್ವಾನ ಕೊಟ್ಟರೆ ಅದಕ್ಕೆ ವಿಶ್ವಾಸಾರ್ಹತೆ ಇದೆಯೇ?
Last Updated 9 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ತುಫೈಲ್ ಮುಹಮ್ಮದ್
ಅಯೋಧ್ಯೆ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಲಹೆ ಕೊಟ್ಟಿದ್ದಾರೆ. ಕೇಂದ್ರ ಸಂಸ್ಕೃತಿ  ಸಚಿವ ಮಹೇಶ್ ಶರ್ಮಾ ಇದನ್ನು ಸ್ವಾಗತಿಸಿದ್ದು, ‘ಎರಡೂ ಬಣಗಳು ಒಪ್ಪುವುದಾದರೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲು ಸಿದ್ಧ’ ಎಂದು ಘೋಷಿಸಿದ್ದಾರೆ. 
 
ದಾದ್ರಿಯಲ್ಲಿ ಅಖ್ಲಾಕ್ ಎಂಬ 52ರ ವ್ಯಕ್ತಿಯನ್ನು ಗೋಹತ್ಯೆ ವದಂತಿಯ ನೆಪದಲ್ಲಿ  ಹತ್ಯೆ ಮಾಡಿದ್ದನ್ನು ಪರೋಕ್ಷವಾಗಿ ಸಮರ್ಥಿಸಿದ್ದ ಮತ್ತು ಹಂತಕರ ಜತೆ ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೇ ಈ ಮಹೇಶ್ ಶರ್ಮಾ. ಹೀಗಿರುವಾಗ ಅಯೋಧ್ಯೆ ವಿವಾದ ಬಗೆಹರಿಸಲು ಮಧ್ಯಸ್ಥಿಕೆಗೆ ಇವರಿಗಿಂತ ಸೂಕ್ತ ವ್ಯಕ್ತಿ ಬಹುಶಃ ಸರ್ಕಾರದಲ್ಲಿ ಬೇರಾರೂ ಇರಲಾರರೇನೋ!
 
ಅಂದಹಾಗೆ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ 1552ರಿಂದಲೂ ತಲೆದೋರಿದ ಸಮಸ್ಯೆಗಳನ್ನು ಬಲಪ್ರದರ್ಶನದ ಮೂಲಕವೇ ಒಂದೊಂದಾಗಿ ಬಗೆಹರಿಸುತ್ತಾ ಬರಲಾಗಿದೆ.
 
ಶತಮಾನಗಳ ಕಾಲ ಮುಸ್ಲಿಮರು ನಮಾಜ್ ನಿರ್ವಹಿಸುತ್ತಾ ಬಂದ ಬಾಬ್ರಿ ಮಸೀದಿಯೊಳಗೆ 1949ರಲ್ಲಿ ರಾತ್ರೋರಾತ್ರಿ ಮೂರ್ತಿಗಳನ್ನು ಇಟ್ಟಿದ್ದು ಮತ್ತು ತದನಂತರ ಮಸೀದಿಯ ಗೇಟ್‌ಗಳಿಗೆ ಸರ್ಕಾರ  ಬೀಗ ಜಡಿದದ್ದು ಮಾತುಕತೆಯ ಮೂಲಕವೇ?  ಸ್ಥಳೀಯ ಮುಸ್ಲಿಮರ ಸಂವಿಧಾನದತ್ತ ಆರಾಧನಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ, ರಾಮಜನ್ಮಭೂಮಿಯ ಹೆಸರಲ್ಲಿ ದೇಶದಾದ್ಯಂತ ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ಬೀಜವನ್ನು ಬಿತ್ತಿದ್ದು ಕೂಡ ಹಿಂಸೆಯ ಮೂಲಕವೇ ತಾನೆ? ಈಗ ಮಾತುಕತೆಯ ಮಾತನಾಡುತ್ತಿರುವವರು ಈ ದೇಶದ ಸಂವಿಧಾನ, ಕಾನೂನು, ಜಾತ್ಯತೀತ ಪರಂಪರೆ, ಶಾಸಕಾಂಗ, ನ್ಯಾಯಾಂಗ ಎಲ್ಲವನ್ನೂ ಧಿಕ್ಕರಿಸಿ ಜಗತ್ತಿನ ಎದುರು ಭಾರತದ ಮಾನ ಹರಾಜು ಹಾಕಿದ್ದರು. ಇದನ್ನು ನ್ಯಾಯಾಲಯ ಗಣನೆಗೆ  ತೆಗೆದುಕೊಳ್ಳಬೇಕಾಗಿತ್ತಲ್ಲವೇ?
 
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮತ್ತು ಉತ್ತರಪ್ರದೇಶದಲ್ಲಿ ಈಗ ಅಧಿಕಾರಕ್ಕೆ ಬಂದಿರುವ ಬಿಜೆಪಿ ತನ್ನ ರಾಜಕೀಯವನ್ನು ರೂಪಿಸಿಕೊಂಡಿರುವುದೇ ರಾಮಮಂದಿರ ವಿವಾದ ಮತ್ತು ಆ ಮೂಲಕ ಎಬ್ಬಿಸಿದ ಕೋಮು ಧ್ರುವೀಕರಣದ ಬುನಾದಿಯ ಮೇಲೆ.
 
1984ರಲ್ಲಿ ಎರಡು ಸೀಟುಗಳಿಗೆ ಸೀಮಿತವಾಗಿದ್ದ ಪಕ್ಷ ಮುಂದಿನ ಚುನಾವಣೆಗಳಲ್ಲಿ ತನ್ನ ಬಲ ವೃದ್ಧಿಸಿಕೊಳ್ಳಲು  ಸಾಧ್ಯವಾದದ್ದು ಅಯೋಧ್ಯೆಯಲ್ಲಿ ಸಿಕ್ಕ ಭರಪೂರ ಫಸಲಿನ ಫಲ ಎಂಬುದನ್ನು ನಿರಾಕರಿಸಲು ಸಾಧ್ಯವೇ? 1990ರಲ್ಲಿ ಎಲ್‌.ಕೆ.  ಅಡ್ವಾಣಿ ಅವರು ರಾಮ ರಥಯಾತ್ರೆಯನ್ನು ಆರಂಭಿಸಿ ಸೋಮನಾಥದಿಂದ ಅಯೋಧ್ಯೆಯವರೆಗೆ ಕೋಮು ದ್ವೇಷದ ವಿಷ ಹರಡುತ್ತಾ ಸಾಗಿದಾಗ ನಿಜವಾಗಿಯೂ ಅದು ಈ ದೇಶದ ಸಂವಿಧಾನಕ್ಕೆ ಹಿಂದುತ್ವವಾದಿಗಳು ಎಸೆದ ಬಹಿರಂಗ ಸವಾಲಾಗಿತ್ತು ಎಂದು ನಮ್ಮ ಅಂದಿನ ಆಡಳಿತಾರೂಢ ಜಾತ್ಯತೀತ ಸರ್ಕಾರಗಳಿಗೆ ಹೊಳೆಯಲಿಲ್ಲವೇ ಅಥವಾ ಅವರೆಲ್ಲರೂ ಈ ಷಡ್ಯಂತ್ರದಲ್ಲಿ ಪಾಲುದಾರರಾಗಿದ್ದರೇ?
 
ಮಂದಿರದ ಹೆಸರಲ್ಲಿ ಇಟ್ಟಿಗೆ, ಕಬ್ಬಿಣ ಸಂಗ್ರಹಿಸುತ್ತಾ ತಿರುಗುವಾಗಲೂ, ಕಲ್ಯಾಣ್ ಸಿಂಗ್ ನೇತೃತ್ವದ ಸರ್ಕಾರ ವಿವಾದಿತ ಭೂಮಿಯನ್ನು ಮಂದಿರಕ್ಕಾಗಿ ವಶಪಡಿಸಿಕೊಂಡಾಗಲೂ ಒಂದು ಜಾತ್ಯತೀತ, ಪ್ರಜಾಪ್ರಭುತ್ವವಾದಿ ದೇಶದಲ್ಲಿ ಹೀಗೆಲ್ಲಾ ನಡೆಯಲು ಸಾಧ್ಯವೇ ಎಂದು ಯಾರಿಗೂ ಅನ್ನಿಸಲೇ ಇಲ್ಲವಲ್ಲ!
 
ಹೌದು, ಮಾತುಕತೆಯ ಮೂಲಕ ಬಗೆಹರಿಸಲಾಗದಂತಹ ಸಮಸ್ಯೆ ಯಾವುದೂ ಇಲ್ಲ. ಆದರೆ ಅಲ್ಲಿಯೂ ಕೆಲವು ನಿಯಮಗಳಿವೆ. ಅದರದೇ ಆದ ಘನತೆ, ಗೌರವವಿದೆ.  ಕಾನೂನು, ನ್ಯಾಯ ಯಾವುದಕ್ಕೂ ಬೆಲೆ ಕೊಡದೆ ತೋಳ್ಬಲದ ಮೇಲೆಯೇ ಇಡೀ ಪ್ರಕರಣವನ್ನು ಬೆಳೆಸುತ್ತಾ ಬಂದವರು ಇದ್ದಕ್ಕಿದ್ದಂತೆ ಮಾತುಕತೆಗೆ ಆಹ್ವಾನ ಕೊಟ್ಟರೆ ಅದಕ್ಕೆ ವಿಶ್ವಾಸಾರ್ಹತೆ ಇದೆಯೇ?
 
1990ರ ದಶಕದಲ್ಲಿ ಕೇಂದ್ರ ಗೃಹ ಸಚಿವರ ಉಸ್ತುವಾರಿಯಲ್ಲಿ ಮತ್ತು ರಾಷ್ಟ್ರೀಯ ಭಾವೈಕ್ಯ ಮಂಡಳಿ  ಮೂಲಕ ಮಾತುಕತೆಯ ಪ್ರಸ್ತಾಪ ಬಂದಾಗ ಅವುಗಳನ್ನು ಬಹಿರಂಗವಾಗಿ ಉಲ್ಲಂಘಿಸಿದವರು ಈಗ ಮಾತುಕತೆಯ ಕಕ್ಷಿದಾರರೂ, ಮಧ್ಯಸ್ಥಿಕೆದಾರರೂ ತೀರ್ಪುಗಾರರೂ ಆಗಿ ಪ್ರತ್ಯಕ್ಷಗೊಂಡರೆ ಅದು ಕಾಡಿನ ನ್ಯಾಯವಲ್ಲದೆ ಇನ್ನೇನು?

ಕೇಂದ್ರ ಸರ್ಕಾರ ಮಧ್ಯಸ್ಥಿಕೆಯ ಪ್ರಸ್ತಾಪ ಮುಂದಿಟ್ಟಿರುವಾಗ ಅದೇ ಸಂಪುಟದಲ್ಲಿ ಮಸೀದಿ ನೆಲಸಮದ ಆರೋಪಿಗಳು ಸಚಿವರಾಗಿ ಮುಂದುವರೆಯಲು ಸಾಧ್ಯವೇ? ಸರ್ಕಾರ ಈ ವಿಷಯದಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆ ಹೊಂದಿದ್ದೇ ಆದರೆ, ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ಮುಂಚೆ, ಮಸೀದಿ ನೆಲಸಮ ಪ್ರಕರಣದ ಆರೋಪಿಯಾಗಿರುವ ಸಚಿವೆ ಉಮಾ ಭಾರತಿಯವರನ್ನು ಸಂಪುಟದಿಂದ ಕೈಬಿಡಬೇಕಾಗುತ್ತದೆ. ಸರ್ಕಾರ ಅದಕ್ಕೆ ಸಿದ್ಧವಿದೆಯೇ?
 
1948ರಲ್ಲಿ ಗಾಂಧಿ ಹತ್ಯೆಯಾದ ನಂತರ ಭಾರತದ ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ಇತಿಹಾಸದಲ್ಲಿ ಅತ್ಯಂತ ಕರಾಳ ದಿನವೊಂದಿದ್ದರೆ ಅದು 1992ರ ಡಿಸೆಂಬರ್ 6. ಅಂದು ಸುಪ್ರೀಂ ಕೋರ್ಟ್‌ಗೆ ನೀಡಿದ ಲಿಖಿತ ವಾಗ್ದಾನದ ಹೊರತಾಗಿಯೂ ಮತೀಯವಾದಿ ಉನ್ಮಾದಕ್ಕೊಳಗಾಗಿದ್ದ ಲಕ್ಷಾಂತರ ಜನರು ಹಾಡಹಗಲೇ ಬಾಬ್ರಿ ಮಸೀದಿಯನ್ನು ನೆಲಸಮಗೊಳಿಸಿದರು.

ಅದು ಕಾನೂನಿನ ಆಳ್ವಿಕೆಯ ಎದುರು ಜನಜಂಗುಳಿಯ ನ್ಯಾಯ ಮೇಲುಗೈ ಸಾಧಿಸಿದ ಕೆಟ್ಟ ದಿನ. ಭಾರತದ ‘ಸೆಕ್ಯುಲರ್ ಪೊಲಿಟಿ’ ಸಾರಾಸಗಟಾಗಿ ಹಿಂದುತ್ವವಾದಿ ರಾಜಕೀಯದತ್ತ ಪಲ್ಲಟಗೊಂಡ ದುರ್ದಿನ. 
 
ಶತಮಾನಗಳ ಕಾಲ ಅಣ್ಣತಮ್ಮಂದಿರಂತೆ ಬದುಕಿದ್ದ ಸಮುದಾಯಗಳು ರಾತ್ರೋರಾತ್ರಿ ಪರಕೀಯರಂತೆ ವರ್ತಿಸತೊಡಗಿದ ಕರಾಳ ದಿನ. ಮಸೀದಿ ಧ್ವಂಸದ ಬೆನ್ನಲ್ಲಿ ದೇಶದ ಹಲವೆಡೆ ಎದ್ದ ಕೋಮು ದಳ್ಳುರಿ ಕನಿಷ್ಠ 2000  ಮಂದಿಯನ್ನು ಬಲಿ ತೆಗೆದುಕೊಂಡದ್ದಷ್ಟೇ ಅಲ್ಲ ನಂಬಿಕೆ, ವಿಶ್ವಾಸ ಮತ್ತು ಪ್ರೀತಿಯ ಮೌಲ್ಯಗಳ ಮೇಲೆ ನಿಂತಿದ್ದ ಹಿಂದೂ-ಮುಸ್ಲಿಂ ಸಂಬಂಧವನ್ನೂ ಆಹುತಿ ತೆಗೆದುಕೊಂಡಿತು. ಇಂತಹ ಐತಿಹಾಸಿಕ ದುರಂತದ ಶಿಲ್ಪಿಗಳು ಮಾತುಕತೆಯೆಂಬ ಹೊಸ ನಾಟಕಕ್ಕೆ ಮುಂದಾಗಿರುವುದು ಚಾರಿತ್ರಿಕ ವ್ಯಂಗ್ಯವಲ್ಲದೆ ಇನ್ನೇನು?
 
ಬಾಬ್ರಿ ಮಸೀದಿ- ರಾಮಮಂದಿರ ವಿವಾದ ಅಯೋಧ್ಯೆಯ 2.77 ಎಕರೆ ಜಮೀನಿನ ಪ್ರಶ್ನೆಯಲ್ಲ ಎಂಬುದೇನೋ ನಿಜ. ಬಹುಶಃ ಈ ಹಿನ್ನೆಲೆಯಲ್ಲೇ ಸುಪ್ರೀಂ ಕೋರ್ಟ್‌ ಈ ವಿವಾದವನ್ನು ಎರಡೂ ಬಣಗಳ ನಡುವೆ ಸಂಧಾನದ ಮೂಲಕ ಇತ್ಯರ್ಥಗೊಳಿಸುವಂತೆ ಸಲಹೆ ನೀಡಿರಬಹುದು. ಇದು ನಂಬಿಕೆಯ ವಿಚಾರ ಎಂಬುದನ್ನೂ ತಕ್ಕಮಟ್ಟಿಗೆ ಒಪ್ಪಿಕೊಳ್ಳಬಹುದು.

ಆದರೆ ತಮ್ಮ ರಾಜಕೀಯ ಲಾಭಕ್ಕಾಗಿ ಹಿಂದುತ್ವವಾದಿ ಪಕ್ಷಗಳು, ಅವುಗಳ ಜಾತ್ಯತೀತ ನಕಲಿ ಆವೃತ್ತಿಗಳು ಅದನ್ನು ಸಾಂಸ್ಕೃತಿಕ ರಾಷ್ಟ್ರೀಯವಾದದ ಪ್ರಶ್ನೆಯಾಗಿ ಮುಂದುಮಾಡದೇ ಇದ್ದರೆ ಬಹುಶಃ ದೇಶದ ದೆಸೆಯೇ ಇಂದು ಬದಲಾಗುತ್ತಿತ್ತೇನೊ. 
 
ಬಾಬ್ರಿ ಮಸೀದಿಯ ಪ್ರಶ್ನೆಯನ್ನು ಹಿಂದೂ- ಮುಸ್ಲಿಂ ವಿವಾದವೆಂಬ ಸರಳೀಕರಣಕ್ಕೆ ಒಳಪಡಿಸದೆ ದೇಶದ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನೊಳಗೆ ಬಗೆಹರಿಸಬೇಕಾದುದು ಎಲ್ಲಕ್ಕಿಂತಲೂ ಹೆಚ್ಚಾಗಿ ನ್ಯಾಯಾಂಗದ ಜವಾಬ್ದಾರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT