ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಗಳ ಪಾಲನೆಗೆ ಪಂಚ ಸೂತ್ರ

Last Updated 10 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

-ಡಾ. ಸತೀಶ ಜಿ. ಎಂ.

*

ಹೈನುಗಾರಿಕೆಯು ಒಂದು ಲಾಭದಾಯಕ ಉದ್ದಿಮೆಯಾಗಬೇಕಾದರೆ, ಅದರಲ್ಲಿ ಕರು ಸಾಕಣೆಯು ಒಂದು ಮಹತ್ವದ ಘಟ್ಟ. ವೈಜ್ಞಾನಿಕ ಪಾಲನಾ ಪದ್ಧತಿಗಳನ್ನು ಅಳವಡಿಸಿಕೊಂಡು ಕರುವನ್ನು ಸಾಕಿದರೆ ಕೇವಲ ಒಂದೇ ವರ್ಷದಲ್ಲಿ ಅದು ಪ್ರೌಢಾವಸ್ಥೆಯನ್ನು ತಲುಪುತ್ತದೆ. ಇದರಿಂದ ಅಧಿಕ ಉತ್ಪಾದನೆಯ ಗುಣವನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು.

ಕರುಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಐದು ಸೂತ್ರಗಳನ್ನು ಇಲ್ಲಿ ವಿವರಿಸಲಾಗಿದೆ.

* ಹಸುವಿನ ಗರ್ಭದಲ್ಲೇ ಕರುವಿನ ಪಾಲನೆ: ಕರುಗಳ ಪಾಲನೆ ಹಸುವಿನ ಗರ್ಭದಲ್ಲಿದ್ದಾಗಲೇ ಪ್ರಾರಂಭವಾಗುತ್ತದೆ. ಹಸುವಿನ ಗರ್ಭದ 6ನೇ ತಿಂಗಳ ನಂತರ ಕರುಗಳ ಬೆಳವಣಿಗೆ ಬಹಳ ವೇಗವಾಗಿ ಆಗುತ್ತದೆ. ಇದಕ್ಕಾಗಿಯೇ ತಾಯಿಗೆ ಮತ್ತು ಬೆಳೆಯುತ್ತಿರುವ ಕರುವಿನ ಬೆಳವಣಿಗೆಗಾಗಿ ಸರಿಯಾದ ಸಮತೋಲನ ಆಹಾರವನ್ನು ಹಸುವಿನ ತೂಕವನ್ನಾಧರಿಸಿ ನೀಡಬೇಕು. ಹೀಗೆ ಮಾಡುವುದರಿಂದ ಕರುವಿನ ಬೆಳವಣಿಗೆ ಉತ್ತಮವಾಗುವುದಲ್ಲದೆ, ಬರುವ ಸೂಲಿನಲ್ಲಿ ಹೆಚ್ಚು ಹಾಲು ಉತ್ಪಾದನೆಗೆ ಸಹಾಯವಾಗುತ್ತದೆ.

* ನವಜಾತ ಕರುವಿನ ಆರೈಕೆ: ಸಾಮಾನ್ಯವಾಗಿ ಹಸುಗಳು ಒಂಬತ್ತು ತಿಂಗಳು ಒಂಬತ್ತು ದಿವಸದ ಗರ್ಭಾವಸ್ಥೆ ನಂತರ ಕರುಗಳಿಗೆ ಜನ್ಮ ನೀಡುತ್ತವೆ. ಕರು ಗರ್ಭದಿಂದ ಹೊರಬರುತ್ತಿದ್ದಂತೆಯೇ ಹಸುವು ತಕ್ಷಣ ಕರುವನ್ನು ನೆಕ್ಕಲು ಪ್ರಾರಂಭಿಸುತ್ತದೆ. ನೆಕ್ಕದಿದ್ದರೆ, ಮೂಗು ಮತ್ತು ಬಾಯಿಗೆ ಅಂಟಿಕೊಂಡಿರುವ ಲೋಳೆಯನ್ನು ಸ್ವಚ್ಛ ಬಟ್ಟೆಯಿಂದ ಒರಸಿ ತೆಗೆಯಬೇಕು. ಇದರಿಂದ ಕರು ಸರಾಗವಾಗಿ ಉಸಿರಾಡಲು ಸಹಾಯವಾಗುತ್ತದೆ. ನವಜಾತ ಕರುವಿನಲ್ಲಿ ಹೊಕ್ಕಳ ಬಳ್ಳಿಯ ಆರೈಕೆ ಬಹಳ ಮುಖ್ಯವಾದದ್ದು. ಕರುವಿನಲ್ಲಿ ಹೊಕ್ಕಳ ಬಳ್ಳಿ ಹರಿದಿದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಬೇಕು. ಹರಿಯದಿದ್ದರೆ ಹೊಕ್ಕಳ ಬಳ್ಳಿಯನ್ನು ಸುಮಾರು ಎರಡು ಅಂಗುಲ ದೂರದಲ್ಲಿ ಸ್ವಚ್ಛವಾದ ದಾರವೊಂದರಿಂದ ಕಟ್ಟಿ, ಅದರ ಕೆಳಭಾಗವನ್ನು ಹೊಸ ಬ್ಲೇಡಿನಿಂದ ಕತ್ತರಿಸಿ ಸೋಂಕು ನಾಶಕ ದ್ರಾವಣವನ್ನು ಲೇಪಿಸಬೇಕು.

* ಗಿಣ್ಣು ಹಾಲಿನ ಮಹತ್ವ: ಕರು ಜನಿಸಿದ 30 ನಿಮಿಷದಿಂದ ಒಂದು ಗಂಟೆಯ ಒಳಗಾಗಿ ಗಿಣ್ಣದ ಹಾಲನ್ನು ನೀಡುವುದು ಬಹಳ ಮುಖ್ಯ. ಗಿಣ್ಣದ ಹಾಲು ಕರುವಿಗೆ ಅಮೃತ ಸಮಾನ. ಈ ಹಾಲು ಕರುವಿನ ಬೆಳವಣಿಗೆಗೆ ಬೇಕಾದ ಸಸಾರಜನಕ, ವಿಟಮಿನ್ಸ್ ಹಾಗೂ ರೋಗ ನಿರೋಧಕ ಶಕ್ತಿ ಒದಗಿಸಬಲ್ಲ ಜೀವಸತ್ವಗಳ ಆಗರ. ಕರುವಿನ ದೇಹ ತೂಕದ ಶೇಕಡ 10ರಷ್ಟು ಗಿಣ್ಣು ಹಾಲನ್ನು ಸಮಭಾಗ ಮಾಡಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಕುಡಿಸುವುದು ಅತ್ಯವಶ್ಯ. ಸರಿಯಾದ ಸಮಯದಲ್ಲಿ ಗಿಣ್ಣು ಹಾಲು ಸಿಗದ ಕರುಗಳು ಬೇಧಿ, ನೆಗಡಿ, ಜ್ವರ ಇತ್ಯಾದಿ ರೋಗಗಳಿಂದ ಸೊರಗುತ್ತವೆ. ಶೇಕಡ 10ಕ್ಕಿಂತ ಹೆಚ್ಚು ಗಿಣ್ಣು ಹಾಲನ್ನು ಕುಡಿಸಿದಾಗಲೂ ಕೆಲವೊಮ್ಮೆ ಬೇಧಿಯಾಗುತ್ತದೆ. ಗಿಣ್ಣು ಹಾಲು ಹೆಚ್ಚು ಕುಡಿಸಿದರೆ ಜಂತು ಹುಳುಗಳಾಗುತ್ತವೆ ಎಂಬುದು ತಪ್ಪು ಕಲ್ಪನೆ. ಲಾಭದಾಯಕ ಹೈನುಗಾರಿಕೆಗೆ ಕರುಗಳ ಹುಟ್ಟು ತೂಕ 25ರಿಂದ 30 ಕಿ. ಗ್ರಾಂ. ಇರಬೇಕು ಮತ್ತು ಹುಟ್ಟಿದಾಗಿನಿಂದ ನಿರಂತರವಾಗಿ ಪ್ರತಿನಿತ್ಯ 500 ಗ್ರಾಂ ನಷ್ಟು ದೇಹ ತೂಕ ಹೆಚ್ಚಾದಾಗ ಮಾತ್ರ ಅದು ಸುಮಾರು 12ತಿಂಗಳ ವಯಸ್ಸಿಗೆ 180 –200 ಕಿ.ಗ್ರಾಂ ದೇಹ ತೂಕ ತಲುಪಿ ಬೆದೆಗೆ ಬರುತ್ತದೆ.

* ಕರುಗಳ ಪಾಲನೆ: ಕೆಲವೊಮ್ಮೆ ಮೊದಲ ಬಾರಿಗೆ ಕರು ಹಾಕಿದ ಹಸುಗಳು ಕರುವಿಗೆ ಸರಿಯಾಗಿ ಹಾಲು ಕುಡಿಸದಿದ್ದಾಗ ಒಂದು ಸ್ವಚ್ಛವಾದ ಅಗಲ ಬಾಯಿರುವ ಪಾತ್ರೆಯಲ್ಲಿ ಹಾಲನ್ನು ಹಾಕಿ ತೊಳೆದ ತೋರು ಬೆರಳು ಮತ್ತು ಮಧ್ಯದ ಬೆರಳನ್ನು ಹಾಲಿನಲ್ಲಿ ಅದ್ದಿ ಕರುವಿಗೆ ಚೀಪಿಸಬೇಕು. ನಂತರ ಕರುವಿನ ಬಾಯಿಯನ್ನು ಹಾಲಿನ ಪಾತ್ರೆಯ ಹತ್ತಿರ ಚೀಪಿಸುತ್ತಾ ತಂದು ಹಾಲಿನ ಪಾತ್ರೆಯಲ್ಲಿ ಮುಳುಗಿಸಬೇಕು. ಒಂದೆರೆಡು ಬಾರಿ ಹೀಗೆ ಮಾಡಿದರೆ, ಕ್ರಮೇಣ ಕರು ತಾನೇ ಪಾತ್ರೆಯಲ್ಲಿನ ಹಾಲನ್ನು ಕುಡಿಯಲು ಪ್ರಾರಂಭಿಸುತ್ತದೆ. ಕರುಗಳು 12ನೇ ವಾರ ಅಥವಾ 75ಕೆ.ಜಿ. ದೇಹ ತೂಕ ತಲುಪಿದಾಗ ಕರುವನ್ನು ತಾಯಿಯಿಂದ ಬೇರ್ಪಡಿಸಿ ಹಾಲು ಕುಡಿಸುವುದನ್ನು ನಿಲ್ಲಿಸಬಹುದು. ನಂತರದ ದಿನಗಳಲ್ಲಿ ಸಮತೋಲನ ಪಶು ಆಹಾರ ಮತ್ತು ಉತ್ತಮ ಮೇವುಗಳನ್ನು ನೀಡಬೇಕು. ಕರುವು ಒಂದು ತಿಂಗಳು ತುಂಬಿದ ನಂತರ ನಿಧಾನವಾಗಿ ಸ್ವಲ್ಪ ಪ್ರಮಾಣ ಎಳೆಯ ಹುಲ್ಲು ಹಾಗೂ ಒಣಗಿದ ಹಸಿರು ಮೇವು ನೀಡಬಹುದು.

ಇದರ ಜೊತೆಗೆ ಕರುಗಳ ಸರ್ವತೋಮುಖ ಬೆಳವಣಿಗೆಗೆ ಕರುಗಳಿಗೆ ವಿಶೇಷವಾಗಿ ಸಮತೋಲನ ಆಹಾರ ನೀಡಬೇಕು. ಸ್ಥಳೀಯವಾಗಿ ಸಿಗುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಪಶುವೈದ್ಯರ ಮಾರ್ಗದರ್ಶನ ಪಡೆದು ರೈತರೇ ದಾಣಿ ಮಿಶ್ರಣವನ್ನು ತಯಾರಿಸಬಹುದು. ಹೈನುಗಾರಿಕೆಗಾಗಿ ಸಾಕಿದ ರಾಸುಗಳಿಗೆ ಕೋಡುಗಳ ಅವಶ್ಯಕತೆ ಇರುವುದಿಲ್ಲ. ಆದ ಕಾರಣ ಕರುವಿನ ಕೊಂಬನ್ನು ಒಂದರಿಂದ ಮೂರು ವಾರಗಳ ಒಳಗೆ ಪಶುವೈದ್ಯರಿಂದ ಸುಡಿಸಬೇಕು. ಇದರ ಜೊತೆಗೆ ಕರುಗಳನ್ನು ಗುರುತಿಸಲು ಕಿವಿಯಲ್ಲಿ ಹಚ್ಚೆ ಹಾಕಿಸುವುದು ಅಥವಾ ಕಿವಿಯಲ್ಲಿ ಹಿತ್ತಾಳೆ/ಪ್ಲಾಸ್ಟಿಕ್ ನಂಬರಿನ ಓಲೆಯನ್ನು ಹಾಕುವುದು ಉತ್ತಮ.

* ಜಂತು ಹುಳುಗಳಿಂದ ಸಂರಕ್ಷಣೆ ಮತ್ತು ಲಸಿಕೆಗಳ ಮಹತ್ವ: ಸಾಮಾನ್ಯವಾಗಿ ಹುಟ್ಟಿದ ಒಂದರಿಂದ ಎರಡು ತಿಂಗಳ ಆವಧಿಯಲ್ಲಿ ಜಂತು ಬಾಧೆಯಿಂದ ಕರುಗಳು ಬಳಲುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಕರು ಹುಟ್ಟಿದ 10 ದಿನಕ್ಕೆ, ಒಂದು ತಿಂಗಳಿಗೆ ಮತ್ತು ನಂತರ ಆರು ತಿಂಗಳ ವಯಸ್ಸಿನವರೆಗೆ ತಿಂಗಳಿಗೊಮ್ಮೆ ಹಾಗೂ ತದ ನಂತರ ಮೂರು ತಿಂಗಳಿಗೊಮ್ಮೆ ಪಶುವೈದ್ಯರ ಸಲಹೆ ಪಡೆದು ಸೂಕ್ತ ಜಂತು ನಾಶಕವನ್ನು ನೀಡುವುದು ಬಹಳ ಮುಖ್ಯ. ಇದರಿಂದ ಕರುಗಳ ಬೆಳವಣಿಗೆ ಹಾಗೂ ಮೊದಲನೆಯ ಬೆದೆಗೆ ಬರುವುದಕ್ಕೆ ಸಹಕಾರಿ. ಹಾಗೆಯೇ ಕರುಗಳನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಲು ಪಶುವೈದ್ಯರ ಬಳಿ ಕಾಲಕಾಲಕ್ಕೆ ಕಾಲುಬಾಯಿ ಜ್ವರ, ಚಪ್ಪೆ ರೋಗ, ಗಂಟಲು ಬೇನೆ, ನೆರಡಿ ರೋಗ ಮತ್ತು ಬ್ರುಸೆಲ್ಲಾ ರೋಗಗಳ ವಿರುದ್ಧ ಲಸಿಕೆ ಹಾಕಿಸುವುದು ಅತ್ಯಂತ ಅವಶ್ಯಕ.

*

(ಲೇಖಕರು ಸಹಾಯಕ ಪ್ರಾಧ್ಯಾಪಕರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT