ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೇತನ ಚಿಲುಮೆ’ಯಾಗಿ ಕಂಡ ಅಂಬೇಡ್ಕರ್...

Last Updated 14 ಏಪ್ರಿಲ್ 2017, 6:06 IST
ಅಕ್ಷರ ಗಾತ್ರ

ಬುದ್ಧ ಹಾಗೂ ಅಂಬೇಡ್ಕರ್ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಆ ಚಿಂತನೆಗಳನ್ನು ಹಬ್ಬುತ್ತಾ ಬಂದವರು ದಲಿತ ಹೋರಾಟಗಾರ ಹಾಗೂ ನಾಡಿನ ಹಿರಿಯ ಶಿಕ್ಷಣ ತಜ್ಞ ಎಲ್.ಶಿವಲಿಂಗಯ್ಯ. ಅಂಬೇಡ್ಕರ್ ಅವರೊಂದಿಗೆ ಕೆಲ ಸಮಯವನ್ನು ಕಳೆದ ಅವರು, ದಲಿತ ಚಿಂತನೆಗಳ ಬೆಳಕಿನಿಂದ ದಲಿತರ ಉದ್ಧಾರದ ಹೊಸ ಮಾರ್ಗ ತೆರೆಯುತ್ತದೆ ಎಂದು ನಂಬಿರುವ ಅವರು ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಅಂಬೇಡ್ಕರ್ ಚಿಂತನೆಗಳ ಭವಿಷ್ಯದ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಂಗತಿಯನ್ನು ದಯಾನಂದ ಅವರು ಪ್ರಶ್ನೋತ್ತರ ರೂಪದಲ್ಲಿ ನೀಡಿದ್ದಾರೆ.


* ದಲಿತ ಬಂಡವಾಳಶಾಹಿ ವ್ಯವಸ್ಥೆಯನ್ನು ಬೆಂಬಲಿಸುವುದು ಸಮಗ್ರ ದಲಿತ ಸಮುದಾಯದ ಹಿತದೃಷ್ಟಿಯಿಂದ ದೊಡ್ಡ ಗಂಡಾಂತರವನ್ನು ಸ್ವಾಗತಿಸಿದಂತೆ. ಬಂಡವಾಳ ವ್ಯವಸ್ಥೆ ಮಾದರಿಯಾಗಿ ಇರಬೇಕಾದರೆ ಸಾಮಾಜಿಕ ಪ್ರಜಾಪ್ರಭುತ್ವ ಗಟ್ಟಿಯಾಗಿರಬೇಕು. ಸಾಮಾಜಿಕ ಪ್ರಜಾಪ್ರಭುತ್ವದ ಗೈರುಹಾಜರಿಯಲ್ಲಿ ‘ದಲಿತ ಬಂಡವಾಳಶಾಹಿ’ಯನ್ನು ಕಲ್ಪಿಸಿಕೊಳ್ಳುವುದೇ ಶ್ರೇಷ್ಠ ನಾಯಕರ ಸಾಮಾಜಿಕ ಹೋರಾಟದ ಮೂಲತತ್ವಗಳಿಂದ ವಿಮುಖರಾಗುವುದು ಎಂದರ್ಥ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಿದ್ದಾರೆ ವಿಶಾಲ್‌ ಠಾಕ್ರೆ ಅವರು.

* ಅವನು ನನ್ನ ಅಣ್ಣನೇ.... ತಮ್ಮನೇ.... ಬಂಧುವೇ.... ಬಳಗವೇ.... ಇಲ್ಲಪ್ಪ ಇಲ್ಲ.... ನೋವು–ಅವಮಾನಗಳಲ್ಲಿ ಬೆಂದು ಗಟ್ಟಿಯಾದ ಜೀವ.... ತಾನೇ ಅರೆಜೀವ.... ಆದರೂ....  ಮುಳುಗುತ್ತಿದ್ದವ ತೇಲುತ್ತಿದ್ದ ನನ್ನತ್ತ ಕೈ ಚಾಚಿದ.... –ಹೀಗೆ ಸವಿತಾ ನಾಗಭೂಷಣ ಅವರು ಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ.

* ಈ ಪಕ್ವತೆಯು ಒಂದು ರಾಜಕೀಯ ಶಕ್ತಿಯಾಗಿ ಹೇಗೆ ಮಾರ್ಪಾಟು ಹೊಂದುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ, ಆದರೆ ಅದರ ಕಡೆ ಇಟ್ಟಿರುವ ಹೆಜ್ಜೆಗಳು ದೃಢವಾಗಿವೆ. ಕೇವಲ ‘ಇಂಕ್ವಿಲಾಬ್ ಜಿಂದಾಬಾದ್’ ಎಂದು ಕೂಗುತ್ತಿರುವ ಪ್ರಗತಿಪರ ಶಕ್ತಿಗಳು ಇದೀಗ ‘ಇಂಕ್ವಿಲಾಬ್ ಜಿಂದಾಬಾದ್ – ಜೈ ಭೀಮ್’ ಎಂದು ತಮ್ಮ ಭಾಷಣಗಳನ್ನು ಕೊನೆಗೊಳಿಸುತ್ತಿವೆ. ಈ ಅನುಭವದ ಹಿನ್ನೆಲೆಯಲ್ಲಿ ಉತ್ತರ ಭಾರತದ ಎಲ್ಲ ವಿದ್ಯಾರ್ಥಿ ಸಂಘಟನೆಗಳನ್ನು ಒಂದೆಡೆ ತರುವ ಪ್ರಯತ್ನಗಳೂ ಆರಂಭವಾಗಿವೆ ಎಂಬುದನ್ನು ಪುರುಷೋತ್ತಮ ಬಿಳಿಮಲೆ ಅವರು ವಿಶ್ಲೇಷಿಸಿದ್ದಾರೆ.

* ಅ ಆ ಇ ಈ ಮತ್ತು ಹೋರಾಟದ ದಾರಿ...
ದಲಿತ ಕವಿ ಸಿದ್ಧಲಿಂಗಯ್ಯ ಆಗಷ್ಟೇ ಎಂ.ಎ. ಪೂರ್ಣಗೊಳಿಸಿ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ನನ್ನಂಥವರನ್ನು ಪ್ರಭಾವಿಸಿದ್ದು ಅವರೇ. ಅದು 1974–75ರ ಸಂದರ್ಭ. ಆಗ ಕೊಳೆಗೇರಿಗಳಲ್ಲಿ ಪಾಠದ ಮನೆಗಳು ಶುರುವಾಗಿದ್ದವು. ಅಲ್ಲಿ ರಾತ್ರಿ ಶಾಲೆ ನಡೆಯುತ್ತಿದ್ದವು. ‘ಇವು ಪೋಲಿ ಬೀಳ್ತವೆ’ ಎಂದು ನಮಗೆ ಪಾಠದ ಮನೆ ಜವಾಬ್ದಾರಿ ವಹಿಸಿದ್ದರು. ಶೂದ್ರ ಶ್ರೀನಿವಾಸ್, ಮೋಹನ್ ಕೊಂಡಜ್ಜಿ, ಎಂ.ಕೆ. ಭಟ್ಟರು ಸೇರಿದಂತೆ ಹಲವರು ಅಲ್ಲಿಗೆ ಬರುತ್ತಿದ್ದರು. ಸಾಮಾಜಿಕ ಬದಲಾವಣೆಯ ಪ್ರಾಮಾಣಿಕ ತುಡಿತ ಇದ್ದ ಅವರ ಬಗ್ಗೆ ಗೌರವ ಬೆಳೆಯಿತು. ಶ್ರೀರಾಂಪುರದಲ್ಲಿ ದಲಿತ ಮಕ್ಕಳಿಗಾಗಿ ಆರ್‌. ಗೋಪಾಲಸ್ವಾಮಿ ಅಯ್ಯರ್‌ ಒಂದು ಹಾಸ್ಟೆಲ್‌ ತೆರೆದರು. –ಹೀಗೆ ರಂಗಕರ್ಮಿ ಜನಾರ್ದನ್ (ಜನ್ನಿ) ಅವರು ಬದುಕಿನ ಕೆಲವು ಪುಟಗಳ ನೆನಪಿನಗಣಿನ್ನು ತೆರೆದಿಟ್ಟಿದ್ದಾರೆ.


* ಪ್ರಿಯ ಅಂಬೇಡ್ಕರ್... ಓಹ್ ಪಾತ್ರವಿಲ್ಲದ ಪ್ರಕ್ಷುಬ್ಧ ನದಿಗಳ ಕಲರವವೇ ಕುದಿವ ಜ್ವಾಲಾಗ್ನಿ ರವರವವೇ ಇರಲಿ ಇರಲಿ ನನ್ನ ನಿನ್ನ ನಂಟು ಆ ಆದಿ ಅನಾದಿ ಗಂಟು... ಎಂದು ಆರಂಭವಾಗುವ ಕೋಟಿಗಾನಹಳ್ಳಿ ರಾಮಯ್ಯ ಅವರ ಕಾವ್ಯ

ಬೇಲಿ ಹೂಗಳು ಬಂದು ಡಸ್ಟ್ ಬಿನ್‌ಗೆ
ಬೀಳುತ್ತಿರುವುದಕ್ಕೆ ಕೊನೆಯೇ ಇಲ್ಲವೇನು?

ಧರೆಗುರುಳಿ ಅರಳಿದಲ್ಲೆ ಇದ್ದಲ್ಲಿ ಬಿದ್ದಲ್ಲಿ
ನೀರುಂಡ ನೆಲಕೆ
ಎದೆಹಾಲ ಹೊಲಕೆ
ಚೆಲ್ಲಬಹುದಿತ್ತಲ್ಲ ಒಂಚೂರು ನಿಟ್ಟುಸಿರು, ಕಣ್ಣೀರು
ನೀರವ ರಾತ್ರಿಯ ಆ ನಿಮ್ಮ ನಿತ್ಯದಾತ್ಮ ರೋದನದಂತೆ...
ಎಂದು ಕೊನೆಯಾಗುತ್ತದೆ.

* ಅಂಬೇಡ್ಕರ್‌ರ ಚಿಂತೆನೆಗಳಿಗೆ ಆಕರ್ಷಿತಳಾದೆ. ಸಹಮಾನವ ದ್ವೇಷವಿರದ ಅವರ ತತ್ವಚಿಂತನೆಗಳು ನನ್ನನ್ನು ಪ್ರಭಾವಿಸಿದವು. ನನ್ನಲ್ಲಿ ಸತತ ಅಭ್ಯಾಸದ ಅನ್ವೇಷಕ ಪ್ರವೃತ್ತಿಯನ್ನು ಹುಟ್ಟಿಸಿದವು.  ಮುಂದೆ ನಾನು ನನ್ನ ಸಂಶೋಧನಾ ಅಧ್ಯಯನಕ್ಕೆ ‘ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್‌ರ ಪ್ರಭಾವ: ಕಾವ್ಯವನ್ನು ಅನುಲಕ್ಷಿಸಿ’ ಎಂಬ ಮಹಾಪ್ರಬಂಧ ಬರೆಯಲೂ ಪ್ರೇರಣೆ ಒದಗಿಸಿತು.  ಇವೊತ್ತಿನ ನನ್ನ ಬರಹ ಎಲ್ಲ ಶೋಷಿತ ದಲಿತ ಮಹಿಳೆ ಹಾಗೂ ಕೋಮುಸೌಹಾರ್ದತೆ ಕುರಿತ ನಡೆವ ಎಲ್ಲ ಪ್ರಗತಿಪರ ವೇದಿಕೆಗಳ ಕಾರ್ಯಕ್ರಮ, ಹೋರಾಟಗಳಲ್ಲೂ ಪಾಲ್ಗೊಳ್ಳುವಂಥ ಮನಸ್ಥಿತಿಯನ್ನು ನನ್ನಲ್ಲಿ ನಿರ್ಮಿಸಿದ್ದು ಅಂಬೇಡ್ಕರ್‌ರರೇ ಎಂದು ಡಾ. ಅನಸೂಯ ಕಾಂಬಳೆ ಅವರು ಬೆಳಕು ಕಂಡ ಬಗೆಯನ್ನು ಕಟ್ಟಿಕೊಟ್ಟಿದ್ದಾರೆ.

* ಗಾಂಧಿಯಂತೆ ಅಂಬೇಡ್ಕರರನ್ನು ‘ದಲಿತ್ ಬ್ರ್ಯಾಂಡ್’ನಿಂದ ಬಿಡುಗಡೆಗೊಳಿಸಿ, ಹೊಸ ತಲೆಮಾರಿನ ಉತ್ಸಾಹಿ ಯುವ ಮನಸುಗಳಿಗೆ ಅಂಬೇಡಕರ್ ಚಿಂತನೆ ದಕ್ಕುವಂತೆ ಮಾಡುವುದು ‘ನಿಜ ಅಂಬೇಡ್ಕರ್’ ವಾದಿಗಳ ಜವಾಬ್ದಾರಿಯಾಗಿದೆ ಎಂದಿದ್ದಾರೆ ಆರೀಫ್ ರಾಜಾ ಅವರು.


* ಜಾತಿ-ಮತಗಳನ್ನು ಮೀರಿ ದಮನಿತರ, ನೊಂದವರ ಧ್ವನಿಯಾಗಿ ಅಂಬೇಡ್ಕರರ ವ್ಯಕ್ತಿತ್ವವನ್ನು ಘನೀಕರಿಸಿಕೊಳ್ಳ­ಬೇಕಾದ ಕಾಲ ನಮ್ಮದಾಗಿದೆ. ಅವರ ಬದುಕಿನ ಒಂದೊಂದು ಪುಟವೂ ಕಾವ್ಯವಾಗಿ, ಕತೆಯಾಗಿ, ನಾಟಕವಾಗಿ ಪ್ರತಿಯೊಬ್ಬನನ್ನೂ ಮುಟ್ಟಬೇಕಾಗಿದೆ ಎಂದು ಮಹದೇವ ಹಡಪದ ಅವರು ‘ನನ್ನ ಅಂಬೇಡ್ಕರ್’ ಕುರಿತು ಹೇಳಿದ್ದಾರೆ.
ಬೇಲಿಯೊಳಗಿನ ಅಸ್ಪೃಶ್ಯನಿಗೆ ಎದುರಾದ ಅಂಬೇಡ್ಕರ್

* ಈಗ ಅಂಬೇಡ್ಕರ್ ನನ್ನ ಕುತ್ತಿಗೆಯ ಸುತ್ತ ಉದ್ದ ಕರಿ ನೂಲಿಗೆ ಪೋಣಿಸಿರುವ ಚಿತ್ರ ಮಾತ್ರವಲ್ಲ; ಅವರೀಗ ತಲೆಯೊಳಗೆ ಕುಳಿತು ನನ್ನನ್ನು ನಿಯಂತ್ರಿಸುತ್ತಿದ್ದಾರೆ.  ಅಂಬೇಡ್ಕರ್ ಜೊತೆಗಿನ ನನ್ನ ಸಂಬಂಧಕ್ಕೆ ದೇಹದ ಹೊರಗೊಂದು ಸಂಕೇತ ಬೇಕಾಗಿಲ್ಲ. ಅವರು ನನ್ನೊಳಗೇ ಇದ್ದು ನನ್ನನ್ನು ಸಬಲನನ್ನಾಗಿಸಿದ್ದಾರೆ. ಇಪ್ಪತ್ತಮೂರು ಸಂಪುಟಗಳಲ್ಲಿರುವ ಅವರ ಕೃತಿ ಶ್ರೇಣಿಯ ಪ್ರತೀ ಪದಗಳ ಮೂಲಕ ಅವರು ನನಗೆ ಶಕ್ತಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ ಪ್ರೊ. ಗೋಪಾಲ್‌ ಗುರು ಅವರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT