ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಸಂಘದ ವಿದ್ಯಮಾನ– ಮುನೇಗೌಡ ಬೇಸರ

ನಿಯಮಾವಳಿಗೆ ಅಗತ್ಯ ತಿದ್ದುಪಡಿ ತರಲು ಸಲಹೆ
Last Updated 12 ಏಪ್ರಿಲ್ 2017, 8:27 IST
ಅಕ್ಷರ ಗಾತ್ರ

ದೇವನಹಳ್ಳಿ: ರಾಜ್ಯ ಒಕ್ಕಲಿಗರ ಸಂಘದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನದ ಬಗ್ಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ. ಮುನೇಗೌಡ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಉಗನವಾಡಿ ತಮ್ಮ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಸಂಘ ಸಮುದಾಯದ ಜಿಲ್ಲಾವಾರು ವಿದ್ಯಾರ್ಥಿ ನಿಲಯಗಳನ್ನು ಮಾಡಿದೆ. ಸಂಘದ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಕಾರ್ಯಕಾರಿ ಮಂಡಳಿ ಈ ಸಂಬಂಧ ಗಮನ ಹರಿಸಬೇಕಿತ್ತು. ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಸಂಘಕ್ಕೆ ಅತಿಯಾದ ಹೊರೆ ಕಾಡತೊಡಗಿದೆ’ ಎಂದರು.

‘ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಚನ್ನಪಟ್ಟಣ, ರಾಮನಗರ, ಬೆಂಗಳೂರು ನಗರ, ಮೈಸೂರು, ತುಮಕೂರು ಮುಂತಾದ ಕಡೆ ಒಕ್ಕಲಿಗರ ಸಂಘ ಇದೆ. ಬೇರೆ ಜನಾಂಗಕ್ಕೆ ಹೋಲಿಸಿದರೆ ನಮ್ಮ ಜನಾಂಗದ ಸಾಧನೆ ಶೂನ್ಯ.

ಜಗಳದಲ್ಲಿ ಎಲ್ಲಾ ಜನಾಂಗಕ್ಕಿಂತ ಮುಂದಿನ ಸಾಲಿನಲ್ಲಿ ನಾವಿರುತ್ತೇವೆ. ರೈತರ ಮಕ್ಕಳು ಎಲ್ಲಾ ಜನಾಂಗದವರಿಗೆ ಅನ್ನ ಕೊಡುವವರು ಎಂದು ಹೇಳಿಕೊಳ್ಳುತ್ತೇವೆ, ಸಂಘದ ನಿರ್ವಹಣೆ ತೃಪ್ತಿದಾಯಕವಾಗಿರದಿದ್ದರೆ ಹೇಗೆ’ ಎಂದರು.

‘ನಿರ್ದೇಶಕರು ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದಿನ ಕಾರ್ಯಕಾರಿ ಮಂಡಳಿಯಲ್ಲಿ ಕೆಂಚಪ್ಪಗೌಡ ಅಧ್ಯಕ್ಷ, ಡಾ.ಮಹದೇವ್ ಕಾರ್ಯದರ್ಶಿಯಾಗಿದ್ದಾಗ ನಾನು ಕೆಂಪೇಗೌಡ ಆಸ್ಪತ್ರೆಯ ಅಧ್ಯಕ್ಷನಾಗಿದ್ದೆ. ಆಸ್ಪತ್ರೆಯಲ್ಲಿ ಮತ್ತು ಸಂಘದ ವಿವಿಧ ಅಡಳಿತಾತ್ಮಕ  ಇಲಾಖೆ ವಿವಿಧ ಘಟಕಗಳಲ್ಲಿ ಶಿಸ್ತು ತರುವ ಉದ್ದೇಶದಿಂದ ಕಂಪ್ಯೂಟರ್ ಅಳವಡಿಸಿ ಆದಾಯದ ಮೂಲ ಹೆಚ್ಚಿಸಲಾಯಿತು.

ಆಸ್ಪತ್ರೆಯ ಸಿಬ್ಬಂದಿಗೆ ಹಾಗೂ ಇತರೆ ಸಿಬ್ಬಂದಿಗೆ ಸಮವಸ್ತ್ರ ನೀಡಲಾಗಿತ್ತು. ಸಂಘದ ವ್ಯಾಪ್ತಿಗೆ ಒಳಪಡುವ ಹಳ್ಳಿಯ ರೈತರ ಮಕ್ಕಳಿಗೆ ಉಚಿತ ಪ್ರವೇಶ ಕೊಡಲಾಗದಿದ್ದರೂ ಉತ್ತಮ ಆರೋಗ್ಯ ವ್ಯವಸ್ಥೆ ರೂಪಿಸಲು ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಕೆಂಪೇಗೌಡ ಆಸ್ಪತ್ರೆ ಆರಂಭಿಸಲು ಯತ್ನ ನಡೆಸಿದ್ದೆ’ ಎಂದರು.

ಸಂಘದ ಕಾಲೇಜಿನಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಾಗ ಆ ಶಾಲಾ ಕಾಲೇಜಿನ ಉಪಾಧ್ಯಾಯರ ಗಮನಕ್ಕೆ ತರದೆ ನಿರ್ದೇಶಕರ ಇಷ್ಟಾನುಸಾರ ಪ್ರವೇಶ ನೀಡಿದರೆ ಹೇಗೆ ಎಂದರು.

ವಿದ್ಯಾರ್ಥಿಗಳನ್ನು ಹಿಂಸಿಸಿ ಶಾಲಾ ಕಾಲೇಜುಗಳಲ್ಲಿ ನಿಗದಿ ಪಡಿಸಿದ ಶುಲ್ಕ ಹೊರತು ಪಡಿಸಿ ಇತರೆ ಹಣ ಕಟ್ಟಿಸುವಂತೆ ಉಪಾಧ್ಯಾಯರ ಮೇಲೆ ಒತ್ತಡ ತರಬಾರದು’ ಎಂದರು.

‘ಸಂಘದ ಸದಸ್ಯರು ಒಕ್ಕಲಿಗರ ಒಳ ಪಂಗಡಗಳಿಗೆ ಸೇರಿದ್ದಾರೆ.  ಸಮುದಾಯದ ಸ್ವಾಮಿಗಳು ಮತ್ತು ರಾಜಕಾರಣಿಗಳನ್ನು ಬಳಸಿಕೊಂಡು ಒಂದೇ ಪಂಗಡದಡಿ ಸೇರುವುದು ನಮ್ಮ ಕರ್ತವ್ಯ. ಪಂಗಡವನ್ನು ಬೇರ್ಪಡಿಸುವ ಕೆಲಸ ಸಂಘದಲ್ಲಿ ನಡೆಯುತ್ತಿದೆ.

ಪ್ರಸ್ತುತ ಸಂಘದಲ್ಲಿ ತುಮಕೂರಿನ ಭಾಗದ ಕಡೆ ಕುಂಚಿಟಿಗ, ಕೆಲವು ಕಡೆ ಗಂಗಟಕಾರ, ಮತ್ತೊಂದು ಕಡೆ ಮರಸು ಒಕ್ಕಲಿಗ ಪಂಗಡ ಮಾಡಿಕೊಂಡಿದ್ದಾರೆ. ಸಂಘದಿಂದ ಪಡೆದಿರುವ ನಿವೇಶನ ಇತರೆ ಆಸ್ತಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂದು ದೂರಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಘದಿಂದ ಅನ್ಯಾಯ ಮಾಡಿರುವುದು ಸರಿಯಲ್ಲ ಎಂದು ಹೇಳಿದರು. ಗ್ರಾಮಾಂತರ ಜಿಲ್ಲೆಯ ಭಾಗದಲ್ಲಿ ರಣಬೈರೇಗೌಡ ವಂಶಸ್ಥರ ಕರ್ಮಭೂಮಿ ಅವತಿ ಗ್ರಾಮ, ಇದು  ಅಭಿವೃದ್ಧಿಯಾಗಿಲ್ಲ. ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸ್ವಂತ ವೆಚ್ಚದಲ್ಲಿ ವಸತಿ ಗೃಹ ನಿರ್ಮಾಣ ಮಾಡಿದ ಕೆ.ಎಚ್. ರಾಮಯ್ಯ ಅಧ್ಯಕ್ಷ, ಮರುದೇವೆಗೌಡ ದೊಡ್ಡಬಳ್ಳಾಪುರ ತಾಲ್ಲೂಕಿನ ಕಲ್ಲು ದೇವನಹಳ್ಳಿ ಗ್ರಾಮದವರು.

ಒಕ್ಕಲಿಗರ ಸಂಘದ ಸ್ಥಾಪಕರಲ್ಲಿ ಒಬ್ಬರಾದ ಕೆ.ಎಚ್.ರಾಮಯ್ಯನವರ ವಿರುದ್ಧವಾಗಿ ಅಧ್ಯಕ್ಷ ಬೆಟ್ಟೆಗೌಡರ ನಡವಳಿಕೆಗಳು ಒಕ್ಕಲಿಗರ ಜನಾಂಗಕ್ಕೆ ವಿರುದ್ಧವಾಗಿದೆ. ಅದು ಬೇಸರ ತಂದಿದೆ ಎಂದು ಹೇಳಿದರು.

ಸಂಘದ ನಿಯಮಾವಳಿಯಂತೆ ಒಕ್ಕಲಿಗರ ಜನಾಂಗದ ರೈತರು ಬೆಳೆಯುವ ಬೆಳೆಗಳಿಗೆ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು, ಮುಂಗಾರು ಮಳೆ ಸಂದರ್ಭದಲ್ಲಿ ರೈತರಿಗೆ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದರು.

ಸಮುದಾಯದ ಚಿಕ್ಕ ಮಕ್ಕಳಿಗೆ ಎಲ್ ಕೆಜಿ ಮತ್ತು ಯುಕೆಜಿ ವಸತಿ ಶಾಲೆ ಆರಂಭಿಸಬೇಕು. ಸಂಘದ ವ್ಯಾಪ್ತಿಯ  ಎಲ್ಲ ಶಾಲಾ ಕಾಲೇಜುಗಳು, ವಿದ್ಯಾರ್ಥಿ ನಿಲಯಗಳ ಜತೆಗೆ ಇತರೆ ಸಂಭಾವನೆ ಪಡೆಯುವ ಹುದ್ದೆಗಳಿಗೆ ಒಕ್ಕಲಿಗರ ಜನಾಂಗದವರನ್ನು ಉಚಿತವಾಗಿ  ನೇಮಿಸಬೇಕು ಎಂದು  ಒತ್ತಾಯಿಸಿದರು.

ಚುನಾಯಿತರನ್ನು ಹತೋಟಿಗೆ ತರಲು ಯಾರೂ ಇಲ್ಲದಿರುವುದರಿಂದ ಜನಾಂಗದ ಸ್ವಾಮೀಜಿಗಳ ನೇತೃತ್ವದಲ್ಲಿ ವಿಶೇಷ ಸರ್ವ ಸದಸ್ಯರ ಸಭೆ ಕರೆದು ನಿಯಮಾವಳಿ ತಿದ್ದುಪಡಿ ಮಾಡುವುದು ಸೂಕ್ತ ಎಂದು ಮುನೇಗೌಡ ಅವರು ಒತ್ತಾಯಿಸಿದರು.

ಒಳಪಂಗಡ ಒಗ್ಗೂಡಿಸಲು ಸಲಹೆ
ರೈತರಿಗೆ ಸರ್ಕಾರದಿಂದ ಬರುವ ಸವಲತ್ತು ಗಮನಿಸುವುದು, ಒಕ್ಕಲಿಗರ ಒಳ ಪಂಗಡಗಳನ್ನು ಸ್ವಾಮಿಯವರ ಸಮ್ಮುಖದಲ್ಲಿ ಒಟ್ಟುಗೂಡಿಸುವುದು, ಸಂಘದ ಸದಸ್ಯರ ಅನಾನುಕೂಲತೆಗಳ ಬಗ್ಗೆ ಗಮನವಿರಬೇಕು ಎಂದು ನಿರ್ದೇಶಕ ಬಿ. ಮುನೇಗೌಡ ಸಲಹೆ ನೀಡಿದರು.

ಸಂಘದಲ್ಲಿ ನೌಕರರಿಗೆ ಸೂಕ್ತ ವೇತನ, ಸೂಕ್ತ ಕೆಲಸ ತೆಗೆದುಕೊಳ್ಳಬೇಕು, ಗ್ರಾಮಾಂತರ ಸದಸ್ಯರ ಮಕ್ಕಳಿಗೆ ವ್ಯಾಸಂಗಕ್ಕಾಗಿ ಶಾಲೆ ಆರಂಭಿಸುವುದು, ಜನಾಂಗದ ರಕ್ಷಣೆಯ ವ್ಯವಸ್ಥೆ ಮಾಡುವುದು, ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕೆಂಪೇಗೌಡ ಕ್ಲಿನಿಕ್ ಆರಂಭಿಸಬೇಕು, ಆದಿ ಚುಂಚನಗಿರಿ ಸಂಸ್ಥೆ, ಒಕ್ಕಲಿಗರ ಸಂಘ ಜೋಡಿ ಎತ್ತಿನ ಬಂಡಿಯಂತೆ ಸಾಗಬೇಕು ಎಂದರು.

‘ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ನಾವು ಒಕ್ಕಲಿಗರ ಸಂಘಕ್ಕೆ ನಿವೇಶನ ಉಚಿತವಾಗಿ ನೀಡಿದಂತೆ ಸಂಘದ ಸದಸ್ಯರಿಂದ ಆಯ್ಕೆಯಾದ ನಿರ್ದೇಶಕರು ತಮ್ಮ ತಾಲ್ಲೂಕಿನಲ್ಲಿ ನಿವೇಶನದ ವ್ಯವಸ್ಥೆ ಮಾಡಬೇಕು, ಜಿಲ್ಲಾ ಮಟ್ಟದಲ್ಲಿ ನಿಯಮಾವಳಿ ಪ್ರಕಾರವೇ ಸಂಘದ ಚಟುವಟಿಕೆ ನಡೆಯಬೇಕು ಎಂಬ ಬೇಡಿಕೆ ಮುಂದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT