, 'ಪುಂಟಿಲಾ' ನಾಟಕದಿಂದ ಸ್ಫೂರ್ತಿ ಪಡೆದು ಬ್ಯೂಟಿಫುಲ್ ಮನಸುಗಳು ಚಿತ್ರದ ‘ನಮ್ಮೂರಲ್ಲಿ ಚಳಿಗಾಲದಲ್ಲಿ’ ಹಾಡು ಹುಟ್ಟಿತೆ? | ಪ್ರಜಾವಾಣಿ
ಹಾಡು ಹುಟ್ಟಿದ ಸಮಯ

'ಪುಂಟಿಲಾ' ನಾಟಕದಿಂದ ಸ್ಫೂರ್ತಿ ಪಡೆದು ಬ್ಯೂಟಿಫುಲ್ ಮನಸುಗಳು ಚಿತ್ರದ ‘ನಮ್ಮೂರಲ್ಲಿ ಚಳಿಗಾಲದಲ್ಲಿ’ ಹಾಡು ಹುಟ್ಟಿತೆ?

ನಮ್ಮೂರಲ್ಲಿ ಮೇ ತಿಂಗಳಲ್ಲಿ ಎಂದು ಆರಂಭವಾಗುವ ಆ ಹಾಡು, ಬ್ಯೂಟಿಫುಲ್ ಮನಸುಗಳು ಚಿತ್ರದಲ್ಲಿ ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೆ ಚಂದ ಎಂಬ ಹಾಡಾಗಿ ಬದಲಾಗಿದ್ದು ಹೇಗೆ?

ಬೆಂಗಳೂರು: 2016ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾದ ಬೆನ್ನಲ್ಲೇ ಸಿನಿಮಾಗೆ ಪ್ರಶಸ್ತಿ ನಿರೀಕ್ಷಿಸಿದ್ದವರ ಪಟ್ಟಿ ಒಂದೆಡೆಯಾದರೆ, ಅರ್ಹರಿಗೆ ಪ್ರಶಸ್ತಿ ಸಿಗಲಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಪ್ರತಿ ಬಾರಿ ಯಾವುದೇ ವಿಭಾಗದಲ್ಲಿ ಪ್ರಶಸ್ತಿ ಪ್ರಕಟವಾದಾಗಲೂ ಇಂಥಾ ಮಾತುಗಳು, ಅಸಮಧಾನಗಳು ಇದ್ದೇ ಇರುತ್ತದೆ.

ಆದರೆ ವಿಷಯ ಇದಲ್ಲ. ಬ್ಯೂಟಿಫುಲ್ ಮನಸುಗಳು ಸಿನಿಮಾದ ಹಾಡಿನ ಗಾಯನಕ್ಕಾಗಿ ಈ ಬಾರಿ ವಿಜಯ ಪ್ರಕಾಶ್ ಅವರಿಗೆ ಪ್ರಶಸ್ತಿ ಲಭಿಸಿದೆ.

'ಬ್ಯೂಟಿಫುಲ್ ಮನಸುಗಳು' ಸಿನಿಮಾದ ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೆ ಚಂದ ಈ ಹಾಡಿನ ಗಾಯನಕ್ಕಾಗಿ ವಿಜಯ ಪ್ರಕಾಶ್ ಅವರಿಗೆ ಶ್ರೇಷ್ಠ ಗಾಯಕ ಪ್ರಶಸ್ತಿ ದಕ್ಕಿದೆ.

ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೆ ಚಂದ.. ಬ್ಯೂಟಿಫುಲ್ ಮನಸುಗಳು ಸಿನಿಮಾದ ಸುಂದರವಾದ ಹಾಡು. ಈ ಹಾಡನ್ನು ವಿಜಯ ಪ್ರಕಾಶ್ ಅವರು ತುಂಬಾ ಇಂಪಾಗಿ ಹಾಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಹಾಡಿನ ಸಾಹಿತ್ಯವನ್ನೊಮ್ಮೆ ಗಮನಿಸಿ

‘ನಮ್ಮೂರಲ್ಲಿ ಚಳಿಗಾಲದಲ್ಲಿ
ಮುಂಜಾವು ಮೂಡೋದೆ ಚಂದ
ಮಾರ್ಕೆಟ್  ರೋಡಲ್ಲಿ ಬಾಸ್ಕೆಟ್ ಹಿಡ್ಕೊಂಡು
ನಮ್ಮುಡುಗಿ ನಡೆಯೋದೆ ಅಂದ
ಬಡಿಸೋಳೆ ಕನ್ಸೂ ನೂರಾರು
ಮರೆತೋಯ್ತು ಮುದ್ದೆ ಬಸ್ಸಾರು
ಬ್ಯೂಟಿಫುಲ್ ಮನಸುಗಳು...

ಈಗ ಈ ಕೆಳಗಿನ ಸಾಲುಗಳನ್ನು ಗಮನಿಸಿ

‘ನಮ್ಮೂರಲ್ಲಿ ಮೇ ತಿಂಗಳಲ್ಲಿ
ಮುಂಜಾವು ಮೂಡೋದೇ ಚಂದ...
ಚೆರ್ರಿ ಮರಗಳಲಿ ಹಣ್ಣು  ತುಂಬುವವು
ಗಾಳೀಲಿ ಅದರದ್ದೇ ಗಂಧ
ಒಮ್ಮೆ ಅಂಥದೊಂದು ಬೆಳಗು ಮುಂಜಾವು
ಬ್ಯಾಸ್ಕೆಟ್ಟು ಕೈಲಿತ್ತು ಹುಡುಗೇರು ನಾವು...

ಇದು ಕೆವಿ ಸುಬ್ಬಣ್ಣ ಅವರು ರಚಿಸಿದ ಹಾಡು. ಬರ್ಟೋಲ್ಟ್ ಬ್ರೆಕ್ಟ್ ಅವರ ಪುಂಟಿಲಾ(1990ರಲ್ಲಿ ಕನ್ನಡಕ್ಕೆ ಅನುವಾದವಾಗಿದೆ) ನಾಟಕವನ್ನು ಜಸವಂತ್ ಜಾಧವ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದು. ಈ ನಾಟಕದಲ್ಲಿ 'ನಮ್ಮೂರಲ್ಲಿ ಮೇ ತಿಂಗಳಲ್ಲಿ' ಹಾಡು ಬಳಕೆಯಾಗಿದೆ. ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದವರು ಬಿ.ವಿ ಕಾರಂತರು.

ಬ್ಯೂಟಿಫುಲ್ ಮನಸುಗಳು ಸಿನಿಮಾದ ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೆ ಚಂದ ಹಾಡಿಗೂ 'ಪುಂಟಿಲಾ' ನಾಟಕದ ನಮ್ಮೂರಲ್ಲಿ ಮೇ ತಿಂಗಳಲ್ಲಿ ಮುಂಜಾವು ಮೂಡೋದೇ ಚಂದ ಹಾಡಿಗೂ ಸಾಮ್ಯತೆ ಇದೆ ಅಲ್ಲವೇ? ಇದು ಹೇಗೆ? ಏನು? ಎಂಬ ಪ್ರಶ್ನೆ ಓದುಗರಿಗೆ ಬಿಟ್ಟದ್ದು.

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗ ಸಂಗೀತ'ದ ದಾಖಲೀಕರಣ ವಿಡಿಯೊಗಳಲ್ಲಿ  'ನಮ್ಮೂರಲ್ಲಿ ಮೇ ತಿಂಗಳಲ್ಲಿ' ಹಾಡು ಲಭ್ಯವಿದೆ.

Comments