ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗುವಳಿ ಭೂಮಿ ಸಕ್ರಮಕ್ಕೆ ಆಗ್ರಹಿಸಿ ಧರಣಿ

Last Updated 13 ಏಪ್ರಿಲ್ 2017, 7:11 IST
ಅಕ್ಷರ ಗಾತ್ರ

ಹಾಸನ: ಹಲವು ವರ್ಷಗಳಿಂದ ಬಗರ್‌ಹುಕುಂ ಅಡಿಯಲ್ಲಿ ಸಾಗುವಳಿ ಭೂಮಿಯನ್ನು ಸರ್ಕಾರದ ಆದೇಶದಂತೆ ಸಕ್ರಮಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿತು.

ತಾಲ್ಲೂಕಿನಾದ್ಯಂತ ಹಲವು ವರ್ಷಗಳಿಂದ ಬಗರ್‌ಹುಕುಂನಡಿ ಸಾವಿರಾರು ರೈತರು ಸಾಗುವಳಿ ಮಾಡುತ್ತಿದ್ದಾರೆ. ಬಗರ್‌ಹುಕುಂ ಸಕ್ರಮೀಕರಣ ಸಮಿತಿಗೆ ಫಾರಂ ಸಂಖ್ಯೆ 50 ಹಾಗೂ 54 ರಲ್ಲಿ ಅರ್ಜಿ ಸಲ್ಲಿಸಿರುವ ರೈತರ ಹೆಸರಿಗೆ ಸಕ್ರಮಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರ್‌ ಶಿವಶಂಕರಪ್ಪ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಬಗರ್‌ಹುಕುಂ ಸಾಗುವಳಿಯಡಿ ಅರ್ಜಿದಾರರಿಗೆ ಜಮೀನನ್ನು ಸಕ್ರಮಗೊಳಿಸುವಂತೆ ಹಲವು ಬಾರಿ ರೈತ ಸಂಘ ಮನವಿ ಮಾಡಿತ್ತು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಕಾನೂನು ತೊಡಕಿಗೆ ತಿದ್ದುಪಡಿ ತಂದು ಬಾಕಿ ಉಳಿದಿರುವ ಅರ್ಜಿಗಳನ್ನು ಪರಿಶೀಲಿಸಿ ಸಕ್ರಮಗೊಳಿಸುವಂತೆ ಆದೇಶ ಹೊರಡಿಸಿತ್ತು. ಈಗಿದ್ದರೂ ತಾಲ್ಲೂಕು ಆಡಳಿತ ಮಾತ್ರ ಭೂಮಿಯನ್ನು ಸಕ್ರಮಗೊಳಿಸಲು ವಿಫಲವಾಗಿದೆ ಎಂದು ಆರೋಪಿಸಿದರು.

ಕೂಡಲೇ ಬಾಕಿ ಉಳಿದಿರುವ ಅರ್ಜಿದಾರರಿಗೆ ಸಕ್ರಮಗೊಳಿಸಬೇಕು. ಹಿಂದೆ ಸಕ್ರಮೀಕರಣ ಸಮಿತಿಯಿಂದ ಸೂಕ್ತ ಕಾರಣವಿಲ್ಲದೆ ವಜಾಗೊಳಿಸಿದ್ದ ಅರ್ಜಿಗಳನ್ನು ಪುನರ್‌ ಪರಿಶೀಲಿಸಬೇಕು. ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಸಾಲಗಾಮೆ ಹೋಬಳಿಯ ತಿರುಮಲದೇವರ ಗುಡ್ಡ ಕಾವಲಿನಲ್ಲಿ ಸಾಗುವಳಿ ಚೀಟಿ ಪಡೆದಿರುವರಿಗೆ ಪೋಡಿ ಮಾಡಿಸಿಕೊಡಬೇಕು ಮತ್ತು ಅರ್ಜಿಗಳನ್ನು ವಿಲೇವಾರಿ ಮಾಡುವಾಗ ಅರ್ಜಿದಾರರ ಅನುಭವ ಪರಿಗಣಿಸಿ ಗ್ರಾಮಸಭೆ ನಡೆಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಆರ್‌.ನವೀನ್‌ಕುಮಾರ್, ತಾಲ್ಲೂಕು ಘಟಕದ ಕಾರ್ಯದರ್ಶಿ ಪ್ರಕಾಶ್‌, ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜ್‌, ಜಿಲ್ಲಾ ಘಟಕದ ಕಾರ್ಯದರ್ಶಿ ವಸಂತ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT