ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿನ್ನದ ಗೊಂಬೆ’ ಕಣ್ಣಲ್ಲಿ ನೀರು!

Last Updated 13 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ನಾಲ್ಕು ವರ್ಷಗಳಿಂದ ಅವಕಾಶಕ್ಕಾಗಿ ವಿಪರೀತ ಅಲೆದಾಡಿದ್ದೀನಿ. ಸಾಕಷ್ಟು ನಿರ್ದೇಶಕರನ್ನು ಕೇಳಿಕೊಂಡಿದ್ದೇನೆ. ಆದರೆ ಎಲ್ಲಿಯೂ ನನ್ನ ಪ್ರತಿಭೆಯನ್ನು ಸಾಬೀತುಪಡಿಸುವಂಥ ಪಾತ್ರ ಸಿಗಲಿಲ್ಲ. ಇಂಥ ಸಂದರ್ಭದಲ್ಲಿ ನನ್ನ ಬೆನ್ನಿಗೆ ನಿಂತವರು ಅಪ್ಪ–ಅಮ್ಮ. ಅವರ ಬೆಂಬಲದಿಂದಲೇ ನಾನಿಂದು ‘ಚಿನ್ನದ ಗೊಂಬೆ’ ಸಿನಿಮಾಕ್ಕೆ ನಾಯಕನಾಗಿದ್ದೇನೆ’’.

ಇಷ್ಟು ಹೇಳುತ್ತಿದ್ದಂತೆಯೇ ಕೀರ್ತಿ ಕೃಷ್ಣ ಅವರ ಕತ್ತುಬಿಗಿದು ಮಾತು ನಿಲ್ಲಿಸಿದರು. ಕಣ್ಣಲ್ಲಿ ನೀರು ತುಂಬಿಕೊಂಡಿತು. ಪಕ್ಕದಲ್ಲಿಯೇ ಕೂತಿದ್ದ ಅವರ ತಂದೆ ಪಿ. ಕೃಷ್ಣಪ್ಪ ಸಹ ಪಕ್ಕಕ್ಕೆ ತಿರುಗಿ ಕಣ್ಣೊರೆಸಿಕೊಂಡರು.

ಗಾಂಧಿನಗರದಲ್ಲಿ ಸಾಕಷ್ಟು ಸೈಕಲ್‌ ಹೊಡೆದು ಅಂತೂ ಅಪ್ಪನ ಬೆಂಬಲದಿಂದ ನಾಯಕ ನಟನಾಗಿ ಪರಿಚಿತರಾಗುತ್ತಿರುವ ಕೀರ್ತಿ ಕೃಷ್ಣ ಅವರ ಸಿನಿಮಾದ ಹೆಸರು ‘ಚಿನ್ನದ ಗೊಂಬೆ’. ಅವರ ತಂದೆ ಕೃಷ್ಣಪ್ಪ ಕನಕಪುರ ಅವರೇ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮಗನ ಪ್ರತಿಭೆಯ ಕುರಿತು ಅಪಾರ ಹೆಮ್ಮೆ ಮತ್ತು ಅಷ್ಟೇ ವಿಶ್ವಾಸವೂ ಇದೆ ಕೃಷ್ಣಪ್ಪ ಅವರಿಗೆ.

‘ಮೊದಮೊದಲು ನಟನೆಯತ್ತ ಆಸಕ್ತಿ ತೋರುವಾಗ ನಾನು ಮಗನನ್ನು ನಿರ್ಲಕ್ಷಿಸುತ್ತಿದ್ದೆ. ಆದರೆ ಒಮ್ಮೆ ಅವನು ದುರ್ಯೋಧನನ ಪಾತ್ರದಲ್ಲಿ ನಟಿಸಿರುವ ವಿಡಿಯೊ ತೋರಿಸಿದ. ಅದನ್ನು ನೋಡಿ ನನಗೆ ಅಳುಬಂತು. ಆಗಲೇ ಮಗನ ಪ್ರತಿಭೆ ಅರಿವಾದದ್ದು. ಅದೇ ಸಮಯಕ್ಕೆ ನಿರ್ದೇಶಕ ಪಂಕಜ್‌ ಬಾಲನ್‌ ಅವರು ಒಳ್ಳೆಯ ಕಥೆಯನ್ನು ತೆಗೆದುಕೊಂಡು ಬಂದರು. ಆ ಕಥೆ ತುಂಬಾ ಚೆನ್ನಾಗಿತ್ತು. ನನ್ನ ಮಗನನ್ನು ನಾಯಕನನ್ನಾಗಿ ಮಾಡಲು ಇದೇ ಸೂಕ್ತ ಕಥೆ ಅನ್ನಿಸಿ ನಿರ್ಮಾಣಕ್ಕೆ ಮುಂದಾದೆ’ ಎನ್ನುತ್ತಾರೆ ಕೃಷ್ಣಪ್ಪ.

‘ಚಿನ್ನದ ಗೊಂಬೆ’ಯ ನಿರ್ದೇಶಕ ಪಂಕಜ್‌ ಬಾಲನ್‌ ಆಂಧ್ರಪ್ರದೇಶದವರು. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಒಂದೊಂದು ಸಿನಿಮಾ ನಿರ್ದೇಶಿಸಿರುವ ಅವರು ಈಗ ಕನ್ನಡದಲ್ಲಿ ತಮ್ಮ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.

‘ಹ್ಯೂಮರ್‌ ಮತ್ತು ಹಾರರ್‌ ಎರಡನ್ನೂ ಸೇರಿಸಿ ಹೆಣೆದ ಪ್ರೇಮಕಥೆ ಇದು’ ಎಂದು ಅವರು ತಮ್ಮ ಸಿನಿಮಾದ ಬಗ್ಗೆ ಹೇಳಿಕೊಂಡರು. ‘ಈ ವಾರ ಚಿತ್ರೀಕರಣ ಆರಂಭಿಸಿ ಇಪ್ಪತ್ತೈದು ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಮೇನಲ್ಲಿ ಧ್ವನಿಮುದ್ರಿಕೆ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದೂ ಅವರು ಮಾಹಿತಿ ನೀಡಿದರು.
ಲೀನಾ ಖುಷಿ ಮತ್ತು ಅಂಜುಶ್ರೀ ಎಂಬ ಇಬ್ಬರು ನಾಯಕಿಯರು ಅವರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಲೀನಾ ಅವರಿಗಿದು ಮೊದಲ ಸಿನಿಮಾ. ಅಂಜುಶ್ರೀ ಅವರು ಈ ಮೊದಲು ಎರಡು ಮೂರು ಸಿನಿಮಾದಲ್ಲಿ ಚಿಕ್ಕ ಪುಟ್ಟ ಪಾತ್ರದಲ್ಲಿ ನಟಿಸಿದ್ದರೂ ಈ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಖುಷಿಯಲ್ಲಿದ್ದಾರೆ.

ಸೆಂಚುರಿ ಗೌಡ ಮತ್ತು ಗಡ್ಡಪ್ಪ ಸಹ ಈ ಚಿತ್ರದಲ್ಲಿ ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ವೆಂಕಿ ದರ್ಶನ್‌ ಛಾಯಾಗ್ರಹಣ, ಡಿ. ಶೀಲನ್‌ ಸಂಗೀತ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT