ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫೀ ತೋಟದಲ್ಲಿ ಹಾಡುಗಳ ಸ್ವಾದ

Last Updated 13 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸ್ಟಾರ್‌ ಹೋಟೆಲ್‌ಗಳ ಆವಾರದಲ್ಲಿ – ‘ಪಾರ್ಕಿಂಗ್‌’, ‘ನೋ ಪಾರ್ಕಿಂಗ್‌’, ‘ಪಾರ್ಟಿ ಹಾಲ್‌’ ಹೀಗೆಲ್ಲ ಫಲಕ ಬರೆದು ಅದು ಇರುವ ದಿಕ್ಕಿನಲ್ಲಿ ಬಾಣದ ಚಿಹ್ನೆ ಹಾಕಿ ತೋರಿಸುವುದು ವಾಡಿಕೆ. ಆದರೆ ಅಂದು ಸಂಜೆ ಬೆಂಗಳೂರಿನ ಏಟ್ರಿಯಾ ಹೋಟೆಲ್‌ ಗೇಟು ದಾಟಿ ಹೋಗುತ್ತಿದ್ದಂತೆಯೇ ಕಣ್ಣಿಗೆ ಬಿದ್ದಿದ್ದು ‘ಕಾಫೀತೋಟ’ ಎಂಬ ಫಲಕ ಜತೆಗೊಂದು ದಾರಿ ಸೂಚಕ ಬಾಣದ ಗುರುತು!

ಅರೆ, ಇದ್ಯಾವಾಗ ಸ್ಟಾರ್‌ ಹೋಟೆಲುಗಳಲ್ಲಿ ಕಾಫೀತೋಟ ಬೆಳೆಯಲು ಪ್ರಾರಂಭಿಸಿದರು ಎಂದೆಲ್ಲ ನಾವೇನೂ ಅಚ್ಚರಿಗೆ ಬೀಳಲಿಲ್ಲ. ನಮಗೆ ಗೊತ್ತಿತ್ತು, ಅಲ್ಲಿ ಟಿ.ಎನ್‌. ಸೀತಾರಾಮ್‌ ನಿರ್ದೇಶನದ ‘ಕಾಫೀತೋಟ’ ಸಿನಿಮಾದ ಧ್ವನಿಮುದ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ ಎಂದು.

ಅಂದು ಬೆಂಗಳೂರಿನ ಖಾಸಗಿ ಹೋಟೆಲ್‌ನ ಪಾರ್ಟಿಹಾಲ್‌ನಲ್ಲಿ ಹಾಡುಗಳ ಘಮವಿತ್ತು, ಮಾತಿನ ಗದ್ದಲವಿತ್ತು. ಒಬ್ಬರನ್ನೊಬ್ಬರು ಹೊಗಳಿಕೊಳ್ಳುವ, ಹಾಗೆಯೇ ಕಾಲೆಳೆದುಕೊಳ್ಳುವ ಲಘು ವಾತಾವರಣ ಇತ್ತು. ಒಂದಿಷ್ಟು ಹೊಸ ನಿರ್ದೇಶಕರು, ಹಿರಿಕಿರಿಯ ನಟರು, ಚಿತ್ರರಂಗದವರು, ಕಿರುತೆರೆಯವರು, ಪತ್ರಕರ್ತರು, ಜೊತೆಗೆ ನಟ ಪುನೀತ್‌ ಎಲ್ಲ ಅಲ್ಲಿದ್ದರು. ಆ ಸಂಜೆಯ ಗುಂಗೇರಿಸಲು ಕಾಫಿಯ ಬದಲಾಗಿ ‘ತೀರ್ಥ’ ಸಮಾರಾಧನೆಯಿತ್ತು. ಮಗಳ ಮದುವೆಯೇನೋ ಎಂಬಷ್ಟು ಗಡಿಬಿಡಿಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ ಟಿಎನ್‌ಎಸ್‌ ಮುಖದಲ್ಲಿ ಕೊಂಚ ದಣಿವು ಕಾಣುತ್ತಿದ್ದರೂ ಮಾತಿನಲ್ಲಿನ ಹರೆಯ ಅದನ್ನು ಮರೆಸುವಂತಿತ್ತು.

‘ಕಾಫೀತೋಟ’ ಸಿನಿಮಾದಲ್ಲಿ ಎರಡು ಹಾಡುಗಳಿವೆ. ಚಿತ್ರದ ನೆಪದಲ್ಲಿ ನಡೆದ ‘ಟ್ಯಾಲೆಂಟ್‌ ಹಂಟ್‌’ಗಾಗಿ ಯೋಗರಾಜ ಭಟ್ಟರು ಒಂದು ಹಾಡನ್ನು ಬರೆದಿದ್ದಾರೆ. ಅದಕ್ಕೆ ಸಂಗೀತ ಸಂಯೋಜಿಸುವಂತೆ ಯುವ ಸಂಗೀತ ಸಂಯೋಜಕರಿಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಆ ಸ್ಪರ್ಧೆಯಲ್ಲಿ ಆಯ್ಕೆಯಾದ ಕೆಲವರಿಗೆ ಇದೇ ಸಂದರ್ಭದಲ್ಲಿ ಬಹುಮಾನವನ್ನೂ ವಿತರಿಸಲಾಯಿತು.

ಧ್ವನಿಮುದ್ರಿಕೆ ಬಿಡುಗಡೆ ಮಾಡಿದ ಪುನೀತ್‌, ‘ಸೀತಾರಾಮ್‌ ಅವರ ಕಾರ್ಯಕ್ರಮಗಳು, ಅವರ ಮಾತುಗಳಿಂದ ನಾವೆಲ್ಲರೂ ಸಾಕಷ್ಟು ಕಲಿತಿದ್ದೇವೆ’ ಎಂದು ಹೇಳಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿತ್ರದಲ್ಲಿನ ಎರಡು ಹಾಡುಗಳಿಗೆ ಜೆ. ಅನೂಪ್‌ ಸೀಳಿನ್‌ ಮತ್ತು ಮಿದುನ್‌ ಮುಕುಂದನ್‌ ಸಂಗೀತ ಸಂಯೋಜಿಸಿದ್ದಾರೆ. ಜೋಗಿ ಬರೆದಿರುವ ‘ಹಾಡಾಡ್ಕೊಂಡಿರು ಓಡಾಡ್ಕೊಂಡಿರು...’ ಎಂಬ ಹಾಡಿಗೆ ಸಂಗೀತ ಸಂಯೋಜಿಸಿರುವ ಅನೂಪ್‌, ಅದನ್ನು ವೇದಿಕೆಯ ಮೇಲೆ ಹಾಡಿಯೂ ತೋರಿಸಿದರು. ಇನ್ನೊಬ್ಬ ಸಂಗೀತ ನಿರ್ದೇಶಕ ಮಿದುನ್‌ ಮುಕುಂದನ್‌ ಕೂಡ ತಾವು ಸಂಗೀತ ಸಂಯೋಜಿಸಿರುವ ‘ಇಂದು ನಿನ್ನ ಎದುರಲಿ ಮಾತೇ ಬೇಡ ಅನಿಸಿದೆ’ ಎಂಬ ಹಾಡನ್ನು ಹಾಡಿದರು. ಈ ಹಾಡಿಗೆ ಜಯಂತ್‌ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

ನಂತರ ಮಾತಿಗೆ ನಿಂತ ಟಿ.ಎನ್‌. ಸೀತಾರಾಮ್‌ ಚಿತ್ರಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಹೇಳಿದರು.

‘ಮಾಯಾಮೃಗ’ ಧಾರಾವಾಹಿಯಿಂದ ‘ಕಾಫೀ ತೋಟ’ ಸಿನಿಮಾ ನಡುವಿನ ಅವಧಿಯಲ್ಲಿ ಕಾಲ ಸಾಕಷ್ಟು ಬದಲಾಗಿದೆ. ಬದುಕನ್ನು ಹೊಸತನದಿಂದ ನೋಡಬಲ್ಲ ನಿರ್ದೇಶಕರು ಬಂದಿದ್ದಾರೆ. ನನಗೆ ಬೆಳಕಿನ ದಾರಿ ತೋರಿಸಿದವರು ಈ ಕಿರಿಯ ನಿರ್ದೇಶಕರು. ಆ ಹೊಸಬರ ಜತೆಗೆ ನಾನೂ ಓಟಕ್ಕೆ ನಿಂತಿರುವುದು ವಿಧಿಯ ವಿಪರ್‍ಯಾಸ. ಇದು ನನ್ನಲ್ಲಿ ಸಂಕೋಚವನ್ನೂ ನಾಚಿಕೆಯನ್ನೂ ಉಂಟುಮಾಡಿದೆ. ಆದರೂ ಜನಪ್ರಿಯ ಮಾದರಿಯಲ್ಲಿಯೇ ಹಳೆಯ ಜೀವನ ಮೌಲ್ಯಗಳನ್ನು ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದರು.

‘ಇದು ತ್ರಿಕೋನ ಪ್ರೇಮಕಥೆ. ಒಂದು ಕೊಲೆಯ ಸುತ್ತ ಕಥೆಯ ಹಂದರ ಇದೆ. ಇದರಲ್ಲಿ ನಾನು ಯಾವುದೇ ರೀತಿಯ ಸಾಮಾಜಿಕ ಕಳಕಳಿ, ಸಂದೇಶ ಏನನ್ನೂ ಹೇಳಹೊರಟಿಲ್ಲ. ಸಿನಿಮಾದ ಕಥೆಯಲ್ಲಿಯೇ ಅದು ಹಾಸುಹೊಕ್ಕಾಗಿದ್ದರೂ ಇರಬಹುದು’ ಎಂದು ಕಥೆಯ ಬಗ್ಗೆ ಹೇಳಿದರು.

ನಂತರ ಬಂದ ನಟಿ ಶ್ರುತಿ ಹರಿಹರನ್‌ ಜೊತೆಗೆ ಚಿತ್ರದ ನಟನಟಿಯರು ಚಿತ್ರೀಕರಣದ ಸಂದರ್ಭದ ರಸನಿಮಿಷಗಳನ್ನು ನೆನಪಿಸಿಕೊಳ್ಳುವ ಪ್ರಹಸನವೂ ನಡೆಯಿತು. ಚಿತ್ರದ ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಹಂತದ ಕೆಲಸಗಳು ನಡೆಯುತ್ತಿವೆಯಂತೆ.

ರಘು ಮುಖರ್ಜಿ, ರಾಧಿಕಾ ಚೇತನ್‌, ಸಂಯುಕ್ತಾ ಹೊರನಾಡು, ರಾಹುಲ್‌ ಮಾಧವ್‌, ಅಪೇಕ್ಷಾ ಪುರೋಹಿತ್‌, ಸುಂದರ್‌ರಾಜ್‌, ಸುಧಾ ಬೆಳವಾಡಿ ಮುಂತಾದವರು ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT