ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ: ಪ್ರವೇಶಕ್ಕೆ ತಾಂತ್ರಿಕ ಸಮಸ್ಯೆ

ಕೊಳೆಗೇರಿ ಮಕ್ಕಳ ಅರ್ಜಿ ಸಲ್ಲಿಕೆಗೆ ದಾಖಲೆ ಕೊರತೆ; ಸೌಲಭ್ಯದಿಂದ ವಂಚಿತರಾಗುವ ಪರಿಸ್ಥಿತಿ
Last Updated 14 ಏಪ್ರಿಲ್ 2017, 9:13 IST
ಅಕ್ಷರ ಗಾತ್ರ

ಬೀದರ್‌: ಅಗತ್ಯ ದಾಖಲೆಗಳ ಕೊರತೆಯಿಂದ ಅಲೆಮಾರಿ ಹಾಗೂ ಚಿಂದಿ ಆಯುವ ಕುಟುಂಬಗಳ 48 ಮಕ್ಕಳು ಕಡ್ಡಾಯ ಶಿಕ್ಷಣ ಹಕ್ಕು(ಆರ್‌ಟಿಇ) ಸೌಲಭ್ಯದಿಂದ ವಂಚಿತರಾಗುವ ಪರಿಸ್ಥಿತಿ ಬಂದೊದಗಿದೆ. 48 ಮಕ್ಕಳ ಬಳಿ ಜನ್ಮ ದಿನಾಂಕ, ಜಾತಿ ಹಾಗೂ ಆದಾಯ ಪ್ರಮಾಣಪತ್ರ ಇಲ್ಲದೇ ಇರುವುದು ಒಂದನೇ ತರಗತಿಯ ಪ್ರವೇಶಕ್ಕೆ ತೊಡಕಾಗಿದೆ. 

ಆಧಾರ್ ನೋಂದಣಿ ಇಲ್ಲದ ಕಾರಣ ಕಡ್ಡಾಯ ಶಿಕ್ಷಣ ಹಕ್ಕು ಅಡಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಮಕ್ಕಳನ್ನು ಗುರುತಿಸಿ ಆಧಾರ್‌ ನೋಂದಣಿ ಮಾಡುವ ಕಾರ್ಯ ನಡೆದಿದೆ. ಡಾನ್‌ಬೊಸ್ಕೊ ಚೈಲ್ಡ್‌ ಲೈನ್‌ನ ಕಾರ್ಯಕರ್ತರು ಚಿಂದಿ ಆಯುವ, ಭಿಕ್ಷುಕರ ಹಾಗೂ ಅಲೆಮಾರಿ ಜನಾಂಗದ ಒಟ್ಟು 72 ಮಕ್ಕಳನ್ನು ಬಿಇಒ ಕಚೇರಿಗೆ ಕರೆ ತಂದು ಆಧಾರ್‌ ನೋಂದಣಿ ಮಾಡಿಸಿದ್ದಾರೆ. ಇವುಗಳಲ್ಲಿ 26 ಅರ್ಜಿಗಳು ಮಾತ್ರ ಅಪ್‌ಲೋಡ್‌ ಆಗಿವೆ.

ಆಧಾರ್‌ ಕಾರ್ಡ್‌ನಲ್ಲಿರುವ ವಿಳಾಸ ಹಾಗೂ ಪಾಲಕರು ವಾಸವಾಗಿರುವ ವಿಳಾಸದಲ್ಲಿ ವ್ಯತ್ಯಾಸ ಇರುವ ಕಾರಣ ಆನ್‌ಲೈನ್‌ನಲ್ಲಿ ಮಕ್ಕಳ ಅರ್ಜಿ ಅಪ್‌ಲೋಡ್‌ ಮಾಡಲು ಶಿಕ್ಷಣ ಇಲಾಖೆ ಸಿಬ್ಬಂದಿ ತೊಂದರೆ ಅನುಭವಿಸಬೇಕಾಯಿತು. ಗುರುವಾರ ಸಂಜೆಯ ವರೆಗೂ 48 ಮಕ್ಕಳ ಅರ್ಜಿಗಳು ಅಪ್‌ಲೋಡ್‌ ಆಗಲೇ ಇಲ್ಲ.

ಆರ್‌ಟಿಇ ಅಡಿ ಜಿಲ್ಲೆಯಲ್ಲಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಒಟ್ಟು 4,144 ಸ್ಥಾನಗಳು ಲಭ್ಯ ಇವೆ. ಇದರಲ್ಲಿ ಎಲ್‌ಕೆಜಿ 1,080 ಹಾಗೂ ಒಂದನೇ ತರಗತಿಯ 3,094 ಸ್ಥಾನಗಳು ಇವೆ. ಪರಿಶಿಷ್ಟ ಜಾತಿಗೆ 980 ಹಾಗೂ ಪರಿಶಿಷ್ಟ ಪಂಗಡದವರಿಗೆ 289 ಸ್ಥಾನ ಸೇರಿ ಪರಿಶಿಷ್ಟರಿಗೆ ಒಟ್ಟು1,269 ಸ್ಥಾನಗಳು ಲಭ್ಯ ಇದ್ದರೂ ಕೇವಲ 941 ಅರ್ಜಿಗಳು ಬಂದಿವೆ. ಮಕ್ಕಳ ಸಂಖ್ಯೆ ಅಧಿಕ ಇದ್ದರೂ ನಿರೀಕ್ಷಿತ ಸಂಖ್ಯೆಯಲ್ಲಿ ಅರ್ಜಿಗಳು ಬಂದಿರಲಿಲ್ಲ.

328 ಸ್ಥಾನಗಳು ಖಾಲಿ ಇರುವುದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಕೊಳೆಗೇರಿಗೆ ತೆರಳಿ ಆರ್‌ಟಿಇ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದರು. ಡಾನ್‌ಬೊಸ್ಕೊ ಚೈಲ್ಡ್‌ ಲೈನ್‌ ಮತ್ತಿತರ ಸಂಘಟನೆಗಳ ನೆರವು ಪಡೆದು ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಜನ್ಮ ದಿನಾಂಕ, ಆಧಾರ್ ಸಂಖ್ಯೆ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಇರುವ 26 ಮಕ್ಕಳ ಅರ್ಜಿಗಳನ್ನು ಮಾತ್ರ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲು ಸಾಧ್ಯವಾಗಿದೆ ಎಂದು ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ  ‘ಪ್ರಜಾವಾಣಿ’ಗೆ ತಿಳಿಸಿದರು.

ನಗರಸಭೆ ವ್ಯಾಪ್ತಿಯ ವಡ್ಡರ್ ಕಾಲೊನಿ, ಆಟೊನಗರ, ದೀನದಯಾಳನಗರ, ಕೊಳಾರ(ಕೆ) ಗ್ರಾಮದ ಪಾಲಕರು ತಮ್ಮ ಮಕ್ಕಳ ಅರ್ಜಿ ಸಲ್ಲಿಸಿದ್ದಾರೆ. ಕೆಲ ಮಕ್ಕಳ ಜನ್ಮದಿನಾಂಕದ ದಾಖಲೆ ಇಲ್ಲ. ಹೀಗಾಗಿ ಪಾಲಕರಿಂದ ಘೋಷಣಾ ಪತ್ರ ಬರೆಸಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ದೃಢೀಕರಿಸಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸಲ್ಲಿಸಿದ ನಂತರವೇ ಸೀಟು ಪಡೆಯಲು ಸಾಧ್ಯವಾಗಲಿದೆ ಎಂದರು.

ಪಾಲಕರು ಏಪ್ರಿಲ್‌ 15ರ ಒಳಗೆ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.  ಇಲ್ಲದಿದ್ದರೆ ಅರ್ಜಿಗಳು ತಿರಸ್ಕೃತಗೊಳ್ಳಲಿವೆ. ಈ ಕುರಿತು ಪಾಲಕರಿಗೂ ತಿಳಿವಳಿಕೆ ನೀಡಲಾಗಿದೆ ಎಂದು ತಿಳಿಸಿದರು.

ಮಕ್ಕಳ ಹಕ್ಕು ರಕ್ಷಣೆ ಘಟಕದ ಕಾರ್ಯಕರ್ತರು ಜಿಲ್ಲಾ ಆಡಳಿತದ ಗಮನಕ್ಕೆ ತಂದ ನಂತರ ಆಧಾರ್‌ ನೋಂದಣಿ ಮಾಡಿಕೊಳ್ಳಲಾಗಿದೆ. ಮಾಹಿತಿ ಕೊರತೆಯಿಂದ ಪಾಲಕರು ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸಲ್ಲಿಸಿಲ್ಲ. ಅವರಿಗೆ ದಾಖಲೆಗಳನ್ನು ಒದಗಿಸಲು ಜಿಲ್ಲಾಡಳಿತ  ಒಂದು ವಾರ ಅವಕಾಶ ನೀಡಬೇಕು ಎಂದು ಡಾನ್‌ಬೊಸ್ಕೊ ಚೈಲ್ಡ್‌ ಲೈನ್‌ನ ಫಾದರ್‌ ವರ್ಗೀಸ್‌ ಮನವಿ ಮಾಡಿದರು.

ಅಲೆಮಾರಿ ಕುಟುಂಬಗಳ ವಿಳಾಸಕ್ಕೂ, ಮಕ್ಕಳ ಆಧಾರ್‌ ನೋಂದಣಿ ಪತ್ರದಲ್ಲಿರುವ ವಿಳಾಸಕ್ಕೂ ತಾಳೆ ಆಗುತ್ತಿಲ್ಲ. ಹೀಗಾಗಿ ಅರ್ಜಿ ಅಪ್‌ಲೋಡ್‌ ಆಗುತ್ತಿಲ್ಲ. ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

*
ಕೊಳೆಗೇರಿಯ ಕುಟುಂಬಗಳಿಗೆ ಕಡ್ಡಾಯ ಶಿಕ್ಷಣ ಹಕ್ಕು ಕುರಿತು ತಿಳಿವಳಿಕೆ ಇಲ್ಲ. ಜಾಗೃತಿ ಜಾಥಾ ನಡೆಸಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪಾಲಕರಿಗೆ ಮನವರಿಕೆ ಮಾಡಿದ್ದೇವೆ.
-ಫಾದರ್‌ ವರ್ಗೀಸ್‌,
ಡಾನ್‌ ಬೊಸ್ಕೊ ಚೈಲ್ಡ್‌ ಲೈನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT