ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಉತ್ಪನ್ನ ಮಾರಾಟಕ್ಕೆ ಸಾವಯವ ಸಂತೆ

Last Updated 15 ಏಪ್ರಿಲ್ 2017, 7:37 IST
ಅಕ್ಷರ ಗಾತ್ರ

ಶಿರಸಿ: ಸಾವಯವ ಪದ್ಧತಿಯಲ್ಲಿ ಬೆಳೆದ ತಾಜಾ ತರಕಾರಿ, ಬೇಳೆ– ಕಾಳು, ಸಿರಿಧಾನ್ಯಗಳು, ಕೆಂಪಕ್ಕಿ, ಗೃಹ ಉತ್ಪನ್ನಗಳ ಮಾರುಕಟ್ಟೆಗೆ ಅವಕಾಶ ಕಲ್ಪಿಸುವ ಸಾವಯವ ಸಂತೆ ನಗರದಲ್ಲಿ ಪ್ರತಿ 15 ದಿನಕ್ಕೊಮ್ಮೆ ನಡೆಯಲಿದೆ.

ಕೃಷಿ ಇಲಾಖೆ ಅಡಿಯಲ್ಲಿ ರಚಿತವಾಗಿರುವ ಉತ್ತರ ಕನ್ನಡ ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಸಂಘಟಿಸಿರುವ ಮೊದಲ ಸಾವಯವ ಸಂತೆ ಶುಕ್ರವಾರ ಇಲ್ಲಿ ನಡೆಯಿತು. ಕುಮಟಾದ ಸಿಹಿ ಈರುಳ್ಳಿ, ತಾಜಾ ತರಕಾರಿ, ಯಲ್ಲಾಪುರದ ಜೇನುತುಪ್ಪ, ಹೊನ್ನಾವರದ ಬದನೆಕಾಯಿ, ಕಿಲಾರದ ಕೆಂಪಕ್ಕಿ, ದಾವಣಗೆರೆಯ ಸಿರಿ­ಧಾ­ನ್ಯಗಳು, ಕಲಬುರ್ಗಿಯ ತೊಗರಿಬೇಳೆ, ಗೃಹ ಉತ್ಪನ್ನಗಳಾದ ಹಲಸಿನಕಾಯಿ ಚಿಪ್ಸ್, ಹಪ್ಪಳ, ಕೋಕಂ, ಸಾಂಬಾರ ಪುಡಿ ಮಾರಾಟಕ್ಕೆ ಬಂದಿದ್ದವು.

ಒಕ್ಕೂಟದ ಜಿಲ್ಲಾ ಸಂಯೋಜಕಿ ಪದ್ಮಜಾ ನಾಯ್ಕ ಮಾತನಾಡಿ, ಸಾವಯವ ಕೃಷಿಯಲ್ಲಿ ಮುಂಚೂಣಿಯಲ್ಲಿರುವ ಉತ್ತರ ಕನ್ನಡ ಜಿಲ್ಲೆ ರಾಜ್ಯದ ಗಮನ ಸೆಳೆದಿದೆ. ಜಿಲ್ಲೆಯ ಸಾವಯವ ಉತ್ಪನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ಶಿರಸಿ ಹಾಗೂ ಕಾರವಾರಗಳಲ್ಲಿ ಪ್ರತಿ 15 ದಿನಕ್ಕೊಮ್ಮೆ ಸಾವಯವ ಸಂತೆ ಆಯೋಜಿಸಿಲು ನಿರ್ಧರಿಸಲಾಗಿದೆ. ಜಿಲ್ಲೆಯ ಸಾವಯವ ಕೃಷಿಕರು, ರೈತ ಸಂಘಗಳು ಮತ್ತು ಉತ್ಪಾ­ದಕರ ಆರ್ಥಿಕ ಮತ್ತು ಸಾಮಾಜಿಕ ಸ್ಥಾನ ಉನ್ನ­ತೀಕರಿಸುವ ಗುರಿಯನ್ನು ಒಕ್ಕೂಟ ಹೊಂದಿದೆ. ಸಾವಯವ ಉತ್ಪನ್ನಗಳ ಗುಣ­ಮಟ್ಟ, ತೂಕ ಮತ್ತು ಅಳತೆ ಬಗ್ಗೆ ಮಾಹಿತಿ ಸೇರಿದಂತೆ ವಿವಿಧ ಹಂತಗಳ ಅನುಭವ ನೀಡಲು ಮೇ 2ನೇ ವಾರದಲ್ಲಿ ಸಾವಯವ ಕೃಷಿಕರಿಗೆ ತರಬೇತಿ ಸಮಾವೇಶವನ್ನು ಶಿರಸಿಯಲ್ಲಿ ಆಯೋಜಿಸಲಾಗುತ್ತಿದೆ ಎಂದರು.

ಒಕ್ಕೂಟದ ನಿರ್ದೇಶಕ ಬಾಲಚಂದ್ರ ಶೆಟ್ಟಿ ಮಾತನಾಡಿ, ಅಡುಗೆ ಮನೆಯೇ ಔಷ­ಧಾ­ಲಯ ಎಂಬ ಸಾಂಪ್ರದಾಯಿಕ ಚಿಂತನೆ ಇತ್ತೀ­ಚಿನ ದಿನಗಳಲ್ಲಿ ಜನರಲ್ಲಿ ಜಾಗೃತ­ವಾಗುತ್ತಿದೆ. ಇದರಿಂದ ಸಾವಯು ಉತ್ಪನ್ನ­ಗಳಿಗೆ ಮಾರುಕಟ್ಟೆ ಲಭ್ಯವಾಗುತ್ತಿದೆ ಎಂದರು.

ರಾಜ್ಯದಲ್ಲಿ ಒಟ್ಟು 14 ಒಕ್ಕೂಟಗಳು ರಚನೆಯಾಗಿವೆ. ಜಿಲ್ಲೆಯಲ್ಲಿ ಸಾವಯವ ಭಾಗ್ಯ ಯೋಜನೆಯಡಿ 24 ಸಂಘಗಳು ಕಾರ್ಯ­ನಿರ್ವಹಿಸುತ್ತಿವೆ. 2500 ಸದಸ್ಯರು 2300 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಉತ್ಪನ್ನ ಬೆಳೆಸುತ್ತಿದ್ದಾರೆ. ಕಳೆದ 6 ತಿಂಗಳಲ್ಲಿ ₹  32 ಲಕ್ಷ ಉತ್ಪನ್ನ ಮಾರಾಟ ಮಾಡಲಾಗಿದೆ ಎಂದು ಜಿಲ್ಲಾ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ತಿಳಿಸಿದರು. ಒಕ್ಕೂಟದ ಪ್ರಮುಖರಾದ ವೆಂಕಟೇಶ ನಾಯ್ಕ, ಟಿ.ಜಿ.ಭಟ್ಟ, ಶಂಕರ ಭಟ್ಟ, ಗಣಪತಿ ಭಟ್ಟ, ರವೀಂದ್ರ ಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT