ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಸಾವಿರ ರೈತರ ಖಾತೆಗೆ ಹಣ ಜಮೆ

Last Updated 15 ಏಪ್ರಿಲ್ 2017, 7:42 IST
ಅಕ್ಷರ ಗಾತ್ರ

ಹಾನಗಲ್: ‘ಎರಡು ಹಂತಗಳಲ್ಲಿ ಬೆಳೆ ಹಾನಿ ಪರಿಹಾರದ ಮೊತ್ತವು ತಾಲ್ಲೂಕಿನ 12,238 ರೈತರ ಖಾತೆಗಳಿಗೆ ಜಮೆಯಾಗಿದ್ದು, ಇನ್ನುಳಿದ ರೈತರಿಗೂ ಮುಂದಿನ ಹಂತಗಳಲ್ಲಿ ಹಣ ಜಮೆಯಾಗಲಿದೆ’ ಎಂದು ಶಾಸಕ ಮನೋಹರ ತಹಸೀಲ್ದಾರ್‌ ಹೇಳಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಬೆಳೆ ಪರಿಹಾರ ಮೊತ್ತ ಸಿಗದಿದ್ದ ರೈತರು ಆತಂಕ ಪಡುವ ಅಗತ್ಯವಿಲ್ಲ. ಒಟ್ಟು 31,756 ರೈತರ ಯಾದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಎಲ್ಲರಿಗೂ ಪರಿಹಾರ ಸಿಗಲಿದೆ’ ಎಂದು ಹೇಳಿದರು.

‘ಮೊದಲ ಹಂತದಲ್ಲಿ 9,501 ರೈತರ ಖಾತೆಗೆ ₹ 6.38 ಕೋಟಿ ಪರಿಹಾರ ಮೊತ್ತ ಜಮೆಯಾಗಿದೆ. ಎರಡನೇ ಹಂತದಲ್ಲಿ 2,730 ರೈತರ ಖಾತೆಗಳಿಗೆ ₹1.85 ಕೋಟಿ ಜಮೆಯಾಗಿದೆ. 19,518 ರೈತರ ಖಾತೆಗೆ ಮುಂದಿನ ಹಂತದಲ್ಲಿ ಬೆಳೆ ಪರಿಹಾರದ ಮೊತ್ತ ಜಮೆಯಾಗಲಿದೆ’ ಎಂದರು.
2015–16 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿಯಲ್ಲಿ ಕಳೆದ ವರ್ಷ 6,150 ರೈತರ ಖಾತೆಗೆ ₹3.11 ಕೋಟಿ ಜಮೆಯಾಗಿತ್ತು ಎಂದು ನೆನಪಿಸಿದರು.

ಬೆಳೆವಿಮೆ: ‘2015–16 ನೇ ಸಾಲಿನಲ್ಲಿ ತಾಲ್ಲೂಕಿನ 22,860 ರೈತರು ಬೆಳೆವಿಮೆ ಕಂತು ಕಟ್ಟಿದ್ದರು. ಈ ಪೈಕಿ 17,486 ರೈತರಿಗೆ ಬೆಳೆವಿಮೆ ಪರಹಾರ ಮಂಜೂರಾಗಿ 13,703 ರೈತರ ಖಾತೆಗಳಿಗೆ₹ 21.08 ಕೋಟಿ ವಿಮಾ ಪರಿಹಾರ ಜಮೆಯಾಗಿದೆ.

‘3,783 ರೈತರಿಗೆ ವಿವಿಧ ಕಾರಣಗಳಿಂದಾಗಿ ವಿಮಾ ಪರಿಹಾರ ಸಿಗುವಲ್ಲಿ ವಿಳಂಬವಾಗಿದ್ದು, ಇದರಲ್ಲಿ 2,292 ರೈತರ ಪೂರ್ಣ ಮಾಹಿತಿ ಪಡೆದುಕೊಂಡು ರಾಷ್ಟ್ರೀಕೃತ ಬ್ಯಾಂಕ್‌ಮತ್ತು ವ್ಯವಸಾಯ ಸಂಘಗಳಲ್ಲಿ ಕಟ್ಟಿದ ವಿಮಾ ಕಂತು ಪರಿಶೀಲನೆ ನಡೆಸಿ ವರದಿ ಕಳಿಸಲಾಗಿದೆ. ಶೀಘ್ರದಲ್ಲಿ ₹6.54
ಕೋಟಿ ಬಿಡುಗಡೆಯಾಗಲಿದೆ’ ಎಂದು ಹೇಳಿದರು.

ಬರ ನಿರ್ವಹಣೆ:  ಕುಡಿಯುವ ನೀರು ವ್ಯವಸ್ಥೆಗಾಗಿ ಈತನಕ ತಾಲ್ಲೂಕಿಗೆ ಒಟ್ಟು ₹2.49 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಕೊಳವೆಬಾವಿ ಕೊರೆಸುವುದು, ಕೊಳವೆಬಾವಿ ಪುನಶ್ಚೇತನ, ಪೈಪ್‌ಲೈನ್‌ ಅಳವಡಿಕೆ, ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆಯಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಜನವರಿಯಿಂದ ಈತನಕ ತಾಲ್ಲೂಕಿನಲ್ಲಿ ಒಟ್ಟು 180 ಕೊಳವೆಬಾವಿ ಕೊರೆಸಲಾಗಿದೆ, ಅದರಲ್ಲಿ 122 ಸಫಲವಾಗಿದ್ದರೆ, 58 ವಿಫಲಗೊಂಡಿವೆ. ಶೇ. 68ರಷ್ಟು ಯಶಸ್ಸು ಸಿಕ್ಕಿದೆ. 65 ಕೊಳವೆ ಬಾವಿಗಳನ್ನು ಪುನಶ್ಚೇತನ ಮಾಡಲಾಗಿದೆ. 35 ಬಾವಿಗಳಲ್ಲಿ ನೀರು ಮರುಪೂರಣವಾಗಿದ್ದರೆ, 30 ಬಾವಿಗಳು ಬತ್ತಿವೆ. ಶೇಕಡ 55 ಇದು ಯಶಸ್ವಿಯಾಗಿದೆ ಎಂದರು.

‘ಜನವರಿಗೂ ಪೂರ್ವದಲ್ಲಿ 127 ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು, 96 ಸಫಲಗೊಂಡು, 31 ವಿಫಲವಾಗಿವೆ. ಶೇ.76 ರಷ್ಟು ಯಶಸ್ವಿಯಾಗಿದೆ.
ಈತನಕ ಒಟ್ಟು 207 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ’ ಎಂದು ವಿವರಿಸಿದರು.

ತಾಲ್ಲೂಕಿನ ಬಿಂಗಾಪೂರ, ದ್ಯಾಮನಕೊಪ್ಪ, ಡೊಮ್ಮನಾಳ, ಚನ್ನಾಪೂರ ಮತ್ತು ಅಕ್ಕಿಆಲೂರನ 2 ಕಡೆಗಳಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ, ಇದಕ್ಕಾಗಿ ತಲಾ ₹10 ಸಾವಿರ ಬಾವಿ ಮಾಲೀಕರಿಗೆ ಮಾಸಿಕ ಮೊತ್ತ ನೀಡಲಾಗುತ್ತಿದೆ. ಕಂಚಿನೆಗಳೂರ ಮತ್ತು ಯಳವಟ್ಟಿ ಪ್ಲಾಟ್‌ ಭಾಗದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಶಾಸಕ ಮನೋಹರ ತಹಸೀಲ್ದಾರ್‌ ಮಾಹಿತಿ ನೀಡಿದರು.

ಕುಡಿಯುವ ನೀರು ಪೂರೈಕೆಗಾಗಿ ಮೊದಲ ಕಂತಿನಲ್ಲಿ ₹ 60 ಲಕ್ಷ ಬಿಡುಗಡೆಗೊಂಡು 49 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ 18 ಕೊಳವೆಬಾವಿ ಮತ್ತು 31 ಪೈಪ್‌ಲೈನ್‌ ಕೆಲಸಗಳನ್ನು ಮಾಡಲಾಗಿತ್ತು. ಎರಡನೇ ಹಂತದಲ್ಲಿ ಬಿಡುಗಡೆಗೊಂಡ ₹ 40 ಲಕ್ಷದಲ್ಲಿ ಪೈಪ್‌ಲೈನ್‌, ಮೋಟರ್ ಅಳವಡಿಕೆಯಂತಹ 35 ಕಾಮಗಾರಿಗಳನ್ನು ಮಾಡಲಾಗಿದೆ,‘ಮೂರನೇ ಹಂತದಲ್ಲಿ ಬಿಡುಗಡೆಯಾದ ₹1.9 ಕೋಟಿಯಲ್ಲಿ ಒಟ್ಟು 74 ಕಾಮಗಾರಿಗಳು ಅನುಷ್ಠಾನಗೊಂಡಿವೆ, ಈಗ ಮತ್ತೆ ₹ 40 ಲಕ್ಷ ಬಿಡುಗಡೆ ಆಗುತ್ತಿದ್ದು, ಈ ಅನುದಾನ ಬಳಕೆಗಾಗಿ ಟಾಸ್ಕ್‌ಪೋರ್ಸ್‌ ಸಮಿತಿಯು ಕಾಮಗಾರಿಗಳನ್ನು ನಿರ್ಣಯಿಸಲಾಗುತ್ತದೆ’ ಎಂದು  ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT