ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಹಳ್ಳಿಯ ಹೆಣ್ಣುಮಕ್ಕಳ ನಂಟು ನನ್ನ ಜೀವನದ ದೊಡ್ಡ ಸಂಗತಿ...

Last Updated 15 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

* ವಸಂತ್, ನಿಮ್ಮ ಆತ್ಮಚರಿತ್ರೆ ಪ್ರಕಟವಾಗ್ತಾ ಇದೆ. ಆ ಬರವಣಿಗೆಯ ಕಾರಣಕ್ಕಾಗಿ ನಿಮ್ಮ ನಿಡುಗಾಲದ ಬದುಕು, ಅದರ ಏರಿಳಿತಗಳು, ಬದುಕು ತಾನಾಗೇ ಕೊಟ್ಟದ್ದು, ನೀವಾಗಿ ಪಡೆದುಕೊಂಡದ್ದು... ಈ ಎಲ್ಲವನ್ನ ಹೊರಳಿ ನೋಡ್ತಾ ಇರುವಾಗ ನಿಮ್ಮ ಬಾಲ್ಯ, ಆ ವಾತಾವರಣ, ಅದರ ಪ್ರಭಾವ...
ನಮ್ಮದೊಂದು ಮಧ್ಯಮವರ್ಗದ ಕುಟುಂಬ. ಆದರೆ, ಸಾಮಾನ್ಯವಾಗಿ ಆ ಕಾಲದ ಮಧ್ಯಮವರ್ಗದ ಕುಟುಂಬಗಳಿಗಿಂತ ನಮ್ಮ ಕುಟುಂಬ ತುಸು ಬೇರೆಯೇ ಆಗಿತ್ತು ಅನ್ನಿಸುತ್ತೆ. ಇದಕ್ಕೆ ಮುಖ್ಯ ಕಾರಣ ನನ್ನ ಅಜ್ಜ. ಅವರ ತಾತ್ವಿಕ ನಿಲುವುಗಳು ಏನೇ ಇರಲಿ, ಅವರೊಬ್ಬ ಉದಾರವಾದಿಯಾಗಿದ್ರು. ಆದ್ದರಿಂದಲೇ ನನ್ನ ಚಿಕ್ಕಪ್ಪಂದಿರು ಅವರ ಆಯ್ಕೆಯ ಕ್ಷೇತ್ರಗಳನ್ನ ಆರಿಸಿಕೊಳ್ಳೋದಿಕ್ಕೆ ಸಾಧ್ಯವಾಯಿತು.

ಇಬ್ಬರು ಚಿಕ್ಕಪ್ಪಂದಿರೂ ಎಡಪಂಥೀಯ ವಿಚಾರಧಾರೆಗಳಿಗೆ ಒಲಿದವರಾಗಿದ್ದರು. ಒಬ್ಬರು ತಮಿಳುನಾಡಿನ ಪೌರಕಾರ್ಮಿಕರ ನಾಯಕರಾದರು. ಮತ್ತೊಬ್ಬರು ವಕೀಲರಾದರು. ಈ ಕಾರಣಕ್ಕೇ ನಮ್ಮ ಮನೆಯಲ್ಲಿ ಸದಾ ಪ್ರಗತಿಪರ ಆಲೋಚನೆಗಳ ಆಗು–ಹೋಗುಗಳ ಚರ್ಚೆಗಳು ನಿರಂತರವಾಗಿ ನಡೀತಾ ಇದ್ದವು. ಇದರ ನಡುವೆ ತುಂಬಾ ಸಂಪ್ರದಾಯಶೀಲೆಯಾದ ನನ್ನ ಅಜ್ಜಿ. ಈ ಎಲ್ಲವುಗಳನ್ನೂ ನೋಡುತ್ತಲೇ ಬೆಳೆದವಳು ನಾನು. ನನ್ನ ಅಜ್ಜನಿಗೆ ಮುಕ್ತ, ಉದಾರವಾದಿ ಮನಸ್ಥಿತಿ ಇಲ್ಲದೇ ಇದ್ದರೆ ಇದೆಲ್ಲಾ ಸಾಧ್ಯವಾಗ್ತಾ ಇರಲಿಲ್ಲವೇನೋ ಅಥವಾ ಸಂಘರ್ಷಗಳು ಇನ್ನೂ ಹೆಚ್ಚಾಗ್ತಾ ಇದ್ದವು ಅನ್ನಿಸುತ್ತೆ.

* ಇಂಥ ರಾಜಕೀಯ ಅನ್ನಬಹುದಾದ ವಾತಾವರಣ ಇದ್ದೂ ನಿಮ್ಮ ಮೊದಲ ಪ್ರೀತಿ ಸಾಹಿತ್ಯವೇ ಆಯಿತು...
ಇದೊಂದು ಕುತೂಹಲಕರವಾದ ಸಂಗತಿ. ತಮಾಷೆ ಅಂದ್ರೆ, ಸ್ವಲ್ಪ ಹೆಚ್ಚು ಕಡಿಮೆ ಆಗಿದ್ರೂ ನಾನೊಬ್ಬ ಡಾಕ್ಟರ್ ಆಗಿಬಿಡ್ತಿದ್ದೆ! ನನ್ನ ಅಪ್ಪ ಇದ್ದೋರು, ‘ಅದೂ ತುಂಬಾ ಒಳ್ಳೇ ಕೋರ್ಸ್, ಯಾಕೆ ಬೇಡಾ ಅಂತೀಯಾ’ ಅಂತ ಚೂರು ಬಲವಂತ ಮಾಡಿ ನನ್ನನ್ನ ಮೆಡಿಕಲ್ ಕಾಲೇಜಿಗೆ ಸೇರಿಸೇಬಿಟ್ಟಿದ್ರು. ಆದರೆ, ಸ್ವಲ್ಪ ದಿನಗಳಲ್ಲೇ ನನಗೆ ಇದು ನನ್ನ ಕ್ಷೇತ್ರ ಅಲ್ಲವೇ ಅಲ್ಲ ಅನ್ನಿಸಿದ್ದೇ ಅಲ್ಲಿಂದ ಹೊರಬಿದ್ದೆ. ಆಮೇಲೆ ಇಂಗ್ಲಿಷ್ ಸಾಹಿತ್ಯ ತೊಗೊಂಡು ಶಿಕ್ಷಣ ಮುಂದುವರಿಸಿದೆ.

* ನಿಮ್ಮ ಬದುಕಿನ ಬಹಳ ದೊಡ್ಡ ತಿರುವು ಕಣ್ಣಬಿರನ್ ಅವರ ಜೊತೆಗಿನ ಮದುವೆ. ಮದುವೆ ಅನ್ನುವ ಕಾರಣಕ್ಕಾಗಿಯೂ ಹೌದು, ಅದು ಕಣ್ಣಬಿರನ್ ಎನ್ನುವ ವಿಶಿಷ್ಟ ವ್ಯಕ್ತಿಯ ಜೊತೆ ಅನ್ನುವ ಕಾರಣಕ್ಕಾಗಿಯೂ ಹೌದು, ಅಲ್ಲವೇ?
ಹೌದು. ಯಾವೆಲ್ಲ ಪ್ರಗತಿಪರ ಆಲೋಚನೆಗಳು, ಜನಪರ, ಪ್ರಜಾಪ್ರಭುತ್ವದ ಆಶಯಗಳು ಈ ಎಲ್ಲದರ ಬಗ್ಗೆ ಕೇಳ್ತಾ ಬೆಳೆದಿದ್ದೆನೋ ಅದರ ಪ್ರಾಯೋಗಿಕ ಸ್ವರೂಪ ಅನ್ನುವ ಹಾಗೆ ಕಣ್ಣಬಿರನ್ ನನ್ನ ಬದುಕಿನಲ್ಲಿ ಬಂದ್ರು. ಆರಂಭದಲ್ಲಿ, ಅಂದ್ರೆ ಮದುವೆಯಾದ ಹೊಸದರಲ್ಲಿ ಈ ಯಾವುದೂ ನನ್ನ ಅನುಭವಕ್ಕೆ ಅಷ್ಟು ತೀವ್ರವಾಗಿ ಬರಲಿಲ್ಲ. ಎಲ್ಲ ಯುವತಿಯರ ಹಾಗೇ ನನಗೂ ಬದುಕು ಬಹಳ ರೊಮ್ಯಾಂಟಿಕ್ ಆಗಿ ಕಂಡಿತ್ತು. ಚಂದವಾದ ಸ್ಥಳಗಳಿಗೆ, ಚಂದವಾಗಿ ಅಲಂಕರಿಸಿಕೊಂಡು, ನನ್ನ ಜೀವದ ಗೆಳೆಯನೊಂದಿಗೆ ಓಡಾಡುವ ಸಣ್ಣ ಪುಟ್ಟ ಸಂಗತಿಗಳೂ ಖುಷಿ ಕೊಡ್ತಾ ಇದ್ದ ದಿನಗಳೂ ಇದ್ದವು. ಆದರೆ ಈ ಎಲ್ಲವನ್ನೂ ತಿರುವು ಮುರುವು ಆಗಿಸಿದ್ದು ತುರ್ತು ಪರಿಸ್ಥಿತಿ. ಬದುಕನ್ನ ಇನ್ನೊಂದೇ ಸ್ವರೂಪದಲ್ಲಿ ಅದು ತೆರೆದು ತೋರಿಸಿತು.

ಕಣ್ಣಬಿರನ್ ಮತ್ತು ಅವರ ಗೆಳೆಯರೆಲ್ಲಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತೀವ್ರವಾದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಮಾನವ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವನ್ನು ಖಂಡಿಸುವುದಕ್ಕೆ ಇವರೆಲ್ಲಾ ಮಾತು ಮತ್ತು ಕ್ರಿಯೆ ಎರಡರ ಮೂಲಕವೂ ಪ್ರತಿಕ್ರಿಯಿಸೋದಕ್ಕೆ ಆರಂಭ ಮಾಡಿದ್ರು. ಇದರಲ್ಲಿ ನನ್ನ ಪಾತ್ರ ಏನು ಗೊತ್ತಾ? ದಿನಾ ಅರೆಸ್ಟ್ ಆಗ್ತಾ ಇದ್ದ ನಮ್ಮ ಗೆಳೆಯರ ಮನೆಯವರಿಗೆ, ಪ್ರಕಟವಾಗಲಿ ಬಿಡಲಿ ಮಾಧ್ಯಮದವರಿಗೆ, ಈ ವಿಷ್ಯ ತಿಳಿಸೋದು. ನಾನು ಕಣ್ಣಬಿರನ್‌ಗೆ ತಮಾಷೆ ಮಾಡ್ತಾ ಇದ್ದೆ, ‘ಇದೆಲ್ಲಾ ಸರಿ, ನೀನು ಅರೆಸ್ಟ್ ಆದರೆ ತಿಳಿಸೋದಕ್ಕೆ ಒಬ್ಬರು ಇರಬೇಕಲ್ಲಾ ಅಂತ!’. ಜೀವನ ನಿಜಕ್ಕೂ ಕಷ್ಟವಾಗಿತ್ತು ಆವಾಗ. ಆದರೆ, ಜೀವ ಮತ್ತು ಜೀವನದ ಬೆಲೆ ಗೊತ್ತಾಗಿದ್ದೂ ಆವಾಗಲೇ. ಜೀವದ ಹಂಗು ತೊರೆದು ಇವರೆಲ್ಲಾ ಆಗ ಹೋರಾಟ ಮಾಡಿದ್ರು. ಜೀವಕ್ಕೆ ಅಪಾಯವಿದೆ ಅಂತ ಗೊತ್ತಾದಾಗಲೂ ಇವರು ಹೋರಾಟವನ್ನ ಬಿಡಲಿಲ್ಲ.

* ನಂತರದ ದಿನಗಳಲ್ಲಿಯೂ ಇದು ಮುಂದುವರೆಯಿತು ಅಲ್ಲವೇ? ಕಣ್ಣಬಿರನ್ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ವಕೀಲರಾಗಿಯೇ ರೂಪುಗೊಂಡರು.
ನಿಜ. ಯಾವತ್ತಿಗೂ ಕಣ್ಣಬಿರನ್ ತನ್ನ ಮಾನವಪರ ಆಶಯಗಳನ್ನ ಕಳೆದುಕೊಳ್ಳಲಿಲ್ಲ ಅನ್ನೋದು ನನಗೆ ಬಹಳ ಮುಖ್ಯವಾದ ಅಂಶ ಅನ್ನಿಸುತ್ತೆ.

* ಈ ಎಲ್ಲ ಬೆಳವಣಿಗೆಗಳ ಹಿಂದೆ ಜೇಪಿ ಅವರ ಪ್ರಭಾವ ಇತ್ತು...
ಆ ಪ್ರಭಾವ ತಾತ್ವಿಕವಾಗಿತ್ತೋ ಇಲ್ಲವೋ ಹೇಳುವುದು ನನಗೆ ಕಷ್ಟ. ಆದರೆ ಒಂದು ನೆನಪಾಗ್ತಾ ಇದೆ. ‘ತಾರ್ಕುಂಡೆ ಕಮಿಟಿ’ಯನ್ನ (ಮಾನವ ಹಕ್ಕುಗಳ ರಕ್ಷಣೆಯನ್ನು ಕುರಿತ ಕಾನೂನುಗಳ ರಚನೆಗೆ ನೇಮಿಸಲಾದ ಸಮಿತಿ) ನೇಮಕ ಮಾಡಿದ್ದು ಜೇಪಿ. ಕಣ್ಣಬಿರನ್ ಅದರ ಕಾರ್ಯದರ್ಶಿಯಾಗಿದ್ರು.

* ಈ ಹೊತ್ತಿಗಾಗಲೇ ನೀವು ಅಧ್ಯಾಪಕರಾಗಿ ಕೆಲಸ ಮಾಡ್ತಾ ಇದ್ರಿ. ಜೊತೆಗೆ ಈ ಹೋರಾಟದ ಬದುಕು. ಎರಡೂ ಪರಸ್ಪರ ವಿರುದ್ಧ...
ಆ ಸಂದಭದಲ್ಲಿ ನಾನು ಎರಡು ಬದುಕುಗಳನ್ನ ನಡೆಸ್ತಾ ಇದ್ದೆ ಅನ್ನಿಸುತ್ತೆ. ಬೆಳಗ್ಗೆ 9ರಿಂದ ಮಧ್ಯಾಹ್ನ 3ರತನಕದ ಕಾಲೇಜಿನ ಬದುಕೇ ಬೇರೆ. ನಾನು ಕೆಲಸ ಮಾಡ್ತಾ ಇದ್ದದ್ದು ಒಂದು ಖಾಸಗಿ ಕಾಲೇಜಿನಲ್ಲಿ. ಪಾಠ ಮಾಡ್ತಾ, ಕಾಲೇಜಿನ ರಿಸಲ್ಟ್ ಹೆಚ್ಚಿಸೋದು ಹೇಗೆ, ಜಾಸ್ತಿ ಮಕ್ಕಳು ಫಸ್ಟ್ ಕ್ಲಾಸ್ ಪಡೆಯೋದಕ್ಕೆ ಏನು ಮಾಡಬೇಕು ಅಂತ ಯೋಚಿಸ್ತಾ, ಅದಕ್ಕೆ ಬೇಕಾದ್ದನ್ನ ಮಾಡ್ತಾ ಇದ್ದ ವಸಂತಳೇ ಬೇರೆ. ಮೂರು ಗಂಟೆಯ ನಂತರ ಬೀದಿ ಬೀದಿ ಅಲೀತಾ ಹೆಣ್ಣುಮಕ್ಕಳ ಸ್ಥಿತಿಗತಿಗಳ ಬಗ್ಗೆ ಯೋಚಿಸ್ತಾ ಕರಪತ್ರಗಳನ್ನ ಬರೆದು ಹಂಚ್ತಾ ಇದ್ದ ವಸಂತಳೇ ಬೇರೆ!

* ಖಾಸಗಿ ಕಾಲೇಜು, ಮೇನೇಜ್‌ಮೆಂಟ್‌ನ ಪ್ರತಿಕ್ರಿಯೆ? ಅವರು ಇದನ್ನ ವಿರೋಧಿಸಿದ್ರಾ? ಬೆಂಬಲ ಕೊಟ್ರಾ?
ಮೇನೇಜ್ಮೆಂಟ್‌ಗೆ ಈ ಎಲ್ಲದರ ಬಗ್ಗೆ ತಿಳಿವಳಿಕೇನೇ ಇರಲಿಲ್ಲವೇನೋ ಅನ್ನಿಸುತ್ತೆ ನನಗೆ. ಅವರಿಗೆ ರಿಸಲ್ಟ್ ಚೆನ್ನಾಗಿ ಬಂದ್ರೆ ಸಾಕಿತ್ತು. ಇಷ್ಟಕ್ಕೂ ಅವರಿಗೆಲ್ಲಾ ಸಾಮಾಜಿಕ ಕಳಕಳಿ ಎಲ್ಲಿರುತ್ತೆ ಹೇಳಿ?

* ಈ ಬಗೆಯ ಪರಸ್ಪರ ವಿರುದ್ಧವಾದ ಬದುಕು ಒತ್ತಡದ್ದೇ ಆಗಿರಬೇಕು

ಒಂದು ರೀತಿಯಲ್ಲಿ ಹೌದು. ಸಮಯ, ಕೆಲಸ ಮಾತ್ರವಲ್ಲ, ಅದರ ರೀತಿ ನೀತಿ ಆಶಯಗಳೇ ಬೇರೆ ಆಗಿದ್ರಿಂದ ತುಂಬಾ ಸಲ ಒತ್ತಡ ಆಗ್ತಾ ಇತ್ತು. ಆದರೆ ಅಭ್ಯಾಸ ಆದಮೇಲೆ ಅದೊಂದು ಸವಾಲು ಅಂತ ಅನ್ನಿಸಲೇ ಇಲ್ಲ.

* ನಿಮ್ಮ ಆಕ್ಟಿವಿಸ್ಟ್ ಬದುಕು ಆರಂಭವಾಗಿದ್ದು, ‘ಸ್ತ್ರೀಶಕ್ತಿ ಸಂಘಟನಾ’ ಮೂಲಕ. ಅದರ ಬಗ್ಗೆ ಹೇಳಿ.
1979–80ರ ಹೊತ್ತಿನಲ್ಲಿ ನಾವು ‘ಸ್ತ್ರೀಶಕ್ತಿ ಸಂಘಟನೆ’ ಶುರು ಮಾಡಿದ್ದು. ಆಗಲೇ ನಾನು ಹೆಣ್ಣಿನ ಸ್ಥಿತಿಗತಿಗಳ ಬಗ್ಗೆ ತುಂಬಾ ಯೋಚಿಸಿದ್ದು, ಓದಿದ್ದು, ಬರೆದದ್ದು. ನಾವು ಮಾಡಬೇಕಾದ ಕೆಲಸ ಎಷ್ಟೊಂದಿದೆ ಅಂತ ನನಗೆ ಸ್ಪಷ್ಟವಾದದ್ದೇ ಆ ಅವಧಿಯಲ್ಲಿ. ಯಾವೆಲ್ಲಾ ರೀತಿಯಲ್ಲಿ ಬದಲಾವಣೆಗಳಾದರೆ ಹೆಣ್ಣಿನ ಬದುಕಿನಲ್ಲಿ ಬದಲಾವಣೆಗಳಾಗಬಹುದು ಅಂತಾ ಬಹಳ ಗಂಭೀರವಾಗಿ ನಾವು ಆಲೋಚನೆ ಮಾಡ್ತಾ ಇದ್ವಿ. ಉದಾಹರಣೆಯಾಗಿ ಹೇಳಬೇಕು ಅಂದ್ರೆ, ಗರ್ಭನಿರೋಧಕಗಳು ಹೆಣ್ಣಿನ ಬದುಕಿನಲ್ಲಿ ನಿರ್ಣಾಯಕವಾದ ಪಾತ್ರ ವಹಿಸುತ್ತವೆ ಅಂತ, ಅವುಗಳ ಬಳಕೆಯ ಬಗ್ಗೆ ಅರಿವು ಮೂಡಿಸೋಕೆ ನಾವು ಪಟ್ಟ ಪ್ರಯತ್ನ. ಕರಪತ್ರಗಳು, ಬೀದಿನಾಟಕಗಳು, ಕೌನ್ಸಿಲಿಂಗ್, ಸಮಾವೇಶಗಳು... ಹೀಗೆ ಅದನ್ನ ಬಳಸೋದರ ಬಗ್ಗೆ ಅವರಿಗಿದ್ದ ಅನುಮಾನ, ಸಂಕೋಚಗಳನ್ನ ಹೋಗಲಾಡಿಸೋಕೆ ನಾವು ಇನ್ನಿಲ್ಲದ ಪ್ರಯತ್ನಗಳನ್ನ ಮಾಡಿದೆವು.

ಆಮೇಲಾಮೇಲೆ ಈ ಹೋರಾಟದಲ್ಲಿ ಎಷ್ಟು ತೊಡಗಿಕೊಂಡು ಬಿಟ್ಟೆ ಅಂದ್ರೆ, 1985ರಲ್ಲಿ ನಾನು ಕೆಲಸದಿಂದ ಸ್ವಯಂನಿವೃತ್ತಿ ಪಡೆದು, ಪೂರ್ಣಪ್ರಮಾಣದಲ್ಲಿ ಈ ಕೆಲಸಗಳಲ್ಲಿ ಮುಳುಗಿಹೋದೆ. ನಿಜ ಹೇಳಬೇಕು ಅಂದ್ರೆ, ಮಧ್ಯಮವರ್ಗದ ಸುರಕ್ಷಿತ ವಲಯದಿಂದ ಬಂದ ನನಗೆ ಗ್ರಾಮೀಣ ಹೆಣ್ಣುಮಕ್ಕಳ ಬದುಕು ಬವಣೆಗಳ ಬಗ್ಗೆ ಗೊತ್ತೇ ಇರಲಿಲ್ಲ. ಅದೆಲ್ಲಾ ಗೊತ್ತಾಗಿದ್ದೇ ‘ಸ್ತ್ರೀಶಕ್ತಿ ಸಂಘಟನೆ’ಯಲ್ಲಿ ಸೇರಿಕೊಂಡಾಗ. ಹಳ್ಳಿಯ ಹೆಣ್ಣುಮಕ್ಕಳ ಜೊತೆ ಸಾಧ್ಯವಾದ ನಂಟು ನನ್ನ ಜೀವನದ ದೊಡ್ಡ ಸಂಗತಿ ಅಂತ ನಾನು ತಿಳಿದಿದ್ದೇನೆ. ಆದರೆ ನಿಧಾನವಾಗಿ ನಮ್ಮ ಕೆಲಸದ ಪರಿಧಿ ಸ್ವರೂಪ ಬದಲಾದ ಹಾಗೆ ಈ ಸಂಘಟನೆಯಲ್ಲಿ ಸೇರಿದ್ದ ನಾವು ನಮ್ಮ ನಮ್ಮ ಆದ್ಯತೆಯಲ್ಲಿ ಕೆಲಸ ಮಾಡೋದಕ್ಕೆ ಶುರು ಮಾಡಿದ್ವಿ. ಹೀಗಾಗಿ, ಅಧಿಕೃತವಾಗಿ ನಾವು ವಿಸರ್ಜನೆ ಮಾಡದೇ ಇದ್ದರೂ ‘ಸ್ತ್ರೀಶಕ್ತಿ ಸಂಘಟನೆ’ ನಿಂತುಹೋಯಿತು.


* ಮುಂದಿನದು ‘ಅಸ್ಮಿತ’ ಪರ್ವ

ಹೌದು, 1999ರಲ್ಲಿ ನಾವು ‘ಅಸ್ಮಿತಾ’ ಶುರು ಮಾಡಿದ್ವಿ – ವೋಲ್ಗಾ, ಕಲ್ಪನಾ ಮೊದಲಾದವರು ಸೇರಿ. ನಾವೆಲ್ಲರೂ ಪರಿಚಿತರೂ ಸ್ನೇಹಿತೆಯರೂ ಆಗಿದ್ವಿ. ಆದರೆ ಒಂದು ನಿರ್ದಿಷ್ಟ ಕಾರಣಕ್ಕಾಗಿ ನಾವು ಹತ್ತು ಲೇಖಕಿಯರು ಸೇರಿ ‘ಅಸ್ಮಿತಾ’ ಆರಂಭ ಮಾಡಿದೆವು. ಮಾನವ ಹಕ್ಕುಗಳನ್ನು ಕುರಿತ ಕಮ್ಮಟಗಳು, capacity bui* ding workshopಗಳನ್ನೆಲ್ಲ ತುಂಬಾ ಮಾಡಿದ್ವಿ ಆವಾಗ. ಇವುಗಳ ಪ್ರಭಾವ ಹೇಗಿತ್ತು ಅಂದ್ರೆ, ಗಂಡಸರು ಕೂಡ ಈ ಕಾರ್ಯಾಗಾರಗಳಿಗೆ ಬರೋದಿಕ್ಕೆ ತುಂಬಾ ಆಸೆ ಪಡ್ತಾ ಇದ್ರು.

* ಹೆಣ್ಣಿನ ಹೋರಾಟದ ರಾಜಕೀಯ ನೆಲೆಯನ್ನ ಕಂಡುಕೊಳ್ಳುವ ಈ ಪ್ರಯತ್ನದಲ್ಲಿ ನಿಮ್ಮ ಸಂಘಟನೆ ಕಂಡ ಯಶಸ್ಸು ಅಖಿಲ ಭಾರತ ಮಟ್ಟದಲ್ಲಿಯೂ ದೊಡ್ಡದೇ ಆಗಿತ್ತು.
ಸುಮಾರು ಸೆಮಿನಾರ್‌ಗಳನ್ನ, ಜೆಂಡರ್ ಕುರಿತ ಬರವಣಿಗೆಗಳು ಮತ್ತು ಚರ್ಚೆಗಳನ್ನ ಆಯೋಜನೆ ಮಾಡ್ತಾ ಇದ್ವಿ. ಒಂದು ರೀತೀಲಿ, ತಾತ್ವಿಕತೆ ಮತ್ತು ಪ್ರಾಯೋಗಿಕತೆ ಈ ಎರಡನ್ನೂ ಒಟ್ಟೊಟ್ಟಿಗೇ ತೊಗೊಂಡು ಹೋಗೋದಿಕ್ಕೆ ನಾವು ಪ್ರಯತ್ನಪಟ್ಟೆವು. ವೋಲ್ಗಾ ಅವರ ಕಥೆ–ಕಾದಂಬರಿಗಳು ಕೂಡ ಇದನ್ನೇ ವಸ್ತುವಾಗಿ ಹೊಂದಿದ್ದು ನಮಗೆ ತುಂಬಾನೇ ಸಹಾಯ ಮಾಡ್ತು. ಒಂದು ವಿಶ್ವಾಸಾರ್ಹತೆ ಸಿಗ್ತು ನಮ್ಮ ಹೋರಾಟಕ್ಕೆ. ಇನ್ನೊಂದು ಕಡೆ ಕಲ್ಪನಾ ಅವರ ಸಂಶೋಧನೆಗಳು ಕೂಡ ಇದಕ್ಕೆ ಪೂರಕವಾಗಿ ಒದಗಿ ಬಂದವು. ಕಲ್ಪನಾ ಅವರ Women and Governence ಕೃತಿ ಈಗಲೂ ಬಹಳ ಮುಖ್ಯವಾದ ಸಂಶೋಧನಾ ಕೃತಿಯಾಗಿದೆ.

ಸರಿ ಸುಮಾರು ಇದೇ ಹೊತ್ತಿನಲ್ಲೇ ನನ್ನ Menaka and other bya* * ey ಪ್ರಕಟವಾಯ್ತು. ಮೇನಕಾ, ಅಹಲ್ಯಾ, ಗಾಂಧಾರಿ ಮತ್ತು ರಾಜಸಿಂಹಳನ್ನು ಕುರಿತ ಬ್ಯಾಲೆಗಳು ಇವು.

* ನಿಮ್ಮ ಇನ್ನೊಂದು ಬಹು ಚರ್ಚಿತವಾದ ಕೃತಿ ಶಾಂತಿಗಾಗಿ ಬದುಕನ್ನೇ ಮುಡುಪಿಟ್ಟ ಮಹಿಳೆಯರನ್ನು ಕುರಿತಾದುದು.
ಜಗತ್ತಿನ ನಾಲ್ವರು ಶ್ರೇಷ್ಠ ಮಹಿಳೆಯರನ್ನು ಕುರಿತ ಕೃತಿ ಇದು. ಎಸ್ತರ್, ಮೇರಿ, ರಾಬಿಯಾ ಮತ್ತು ಅಕ್ಕಮಹಾದೇವಿಯರನ್ನು ನಾಯಕಿಯರನ್ನಾಗಿಸಿ, ಮಹಿಳಾ ಚೈತನ್ಯವನ್ನು ಪ್ರತಿಪಾದಿಸುವ ಪ್ರಯತ್ನ ಮಾಡಿದ್ದೇನೆ ಇದರಲ್ಲಿ. ನನಗೆ ಬಹಳ ಸಂತೋಷ ಮತ್ತು ಸಮಾಧಾನ ಕೊಟ್ಟ ಕೃತಿ ಇದು.

* Grief to bury ಒಂದು ವಿಶಿಷ್ಟವಾದ ಕೃತಿಪ್ರಯೋಗ. ಒಂದು ರೀತೀಲಿ ಈ ಕೃತಿ ಮಹಿಳಾ ಸಂಕಥನದ ಮೂಲನೆಲೆಯೊಂದನ್ನು ಅಧಿಕೃತಗೊಳಿಸುವಂಥದ್ದೂ ಹೌದು. ಈ ಕೃತಿ ರೂಪುಗೊಂಡಿದ್ದು ಹೇಗೆ?
ಮದುವೆ ಅನ್ನುವ ಸಂಸ್ಥೆ ಮತ್ತು ಮಹಿಳೆಯರ ಬದುಕಿನ ನಡುವೆ ಒಂದು ಅವಿನಾ ಸಂಬಂಧ ಇದೆ ನಿಜ. ಆದರೆ ಅದೇ ಅವಳ ಬದುಕಿನ ಶುರು ಮತ್ತು ಕೊನೆ ಅನ್ನುವ ಹಾಗೆ, ಮದುವೆಯನ್ನ ಸಂಭಾಳಿಸುವುದೇ ಅವಳ ಪರಮ ಗುರಿ ಅಂತ ಮತ್ತೆ ಮತ್ತೆ ಹೇಳಲಾಗುತ್ತೆ. ಆದರೆ ಜೀವನ ಎಲ್ಲಕ್ಕಿಂತ ದೊಡ್ಡದು, ಹೆಣ್ಣಿನ ಚೈತನ್ಯವಾದರೂ ಅದಮ್ಯವಾದದ್ದು. ಈ ಕೃತಿಯಲ್ಲಿ ಮದುವೆ ಮತ್ತು ಹೆಣ್ಣಿನ ಸಂಬಂಧದ ಕೆಲವು ಮುಖ್ಯ ಆಯಾಮಗಳು ಕಾಣಿಸಿಕೊಳ್ತಾವೆ. ಗಂಡಂದಿರನ್ನು ಕಳೆದುಕೊಂಡ ಕೆಲವು ಮಹಿಳೆಯರ ನಂತರದ ಬದುಕನ್ನು ಅವರೇ ಇಲ್ಲಿ ನಿರೂಪಿಸ್ತಾ ಹೋಗಿದ್ದಾರೆ. ಆಪ್ತವಾದ ಆತ್ಮ ಸಖ್ಯದ ದಾಂಪತ್ಯಗಳಷ್ಟೇ ತೀವ್ರ ಸಂಘರ್ಷದ ಮತ್ತು ಏರಿಳಿತಗಳೇ ಇಲ್ಲದ ಮಟ್ಟಸವಾದ ದಾಂಪತ್ಯದ ಕಥೆಗಳೂ ಇಲ್ಲಿವೆ. ಆದರೆ ದಾಂಪತ್ಯ ಅನ್ನೋದು ಹೆಣ್ಣಿನ ಮಟ್ಟಿಗೆ, ಅದರಲ್ಲೂ ಸ್ವಂತಿಕೆ ಮತ್ತು ಸ್ವಪ್ರಜ್ಞೆಯ ಹೆಣ್ಣಿಗೆ ನಿಜವಾದ ಹೋರಾಟವೇ ಆಗಿರುತ್ತೆ. ಹುಗಿದುಬಿಡಬೇಕು ಅನ್ನುವಂಥ ದುಃಖ ಮತ್ತು ಕೊರತೆಯ ಸಂದರ್ಭಗಳು ಇವೆಲ್ಲ. ಆದರೆ ಇದರಾಚೆಗೂ ಬದುಕು ಇದ್ದೇ ಇರುತ್ತದೆ. ಮತ್ತು ಬಹುತೇಕ ಸಂದರ್ಭಗಳಲ್ಲಿ ಹೆಣ್ಣುಮಕ್ಕಳು ತಮ್ಮ ಧೀಶಕ್ತಿಯಿಂದ ಇದನ್ನು ಎದುರಿಸಿ ತಮ್ಮ ಬದುಕಿನ ಕೇಂದ್ರದ ಕಡೆಗಿನ ಪ್ರಯಾಣವನ್ನು ಮುಂದುವರಿಸ್ತಾರೆ ಅನ್ನೋದು ತುಂಬಾ ಮುಖ್ಯವಾದದ್ದು. ಜೊತೆಗೆ, ಎಷ್ಟೋ ಸಲ, ಹೆಣ್ಣುಮಕ್ಕಳು ವೈಧವ್ಯದಲ್ಲಿ ಇನ್ನೂ ಹೆಚ್ಚು ಚೈತನ್ಯಶಾಲಿಗಳಾಗುವ ವಿಲಕ್ಷಣ ಸಂಗತಿಯೂ ಈ ಕೃತಿಯನ್ನ ರೂಪಿಸುವಾಗ ನನ್ನ ಅನುಭವಕ್ಕೆ ಬಂತು. ಇದು ಸಂತೋಷದ ಸಂಗತಿಯೇನೂ ಅಲ್ಲ ನಿಜ, ಆದರೆ ನಾವು ಗಮನಿಸಲೇಬೇಕಾದ, ಚರ್ಚಿಸಲೇಬೇಕಾದ ಅಪ್ರಿಯ ಸತ್ಯ ಇದು. ಮದುವೆ ಅನ್ನುವ ಸಂಸ್ಥೆಯ ಬಗೆಗೆ ಇದು ಅನೇಕ ಸಂಗತಿಗಳನ್ನ ಹೇಳುತ್ತೆ. ನಿಜ ಹೇಳಬೇಕು ಅಂದ್ರೆ, ನನ್ನನ್ನ ಬಹುವಾಗಿ ಕಾಡಿದ ಕೃತಿ ಇದು. ಇದರಲ್ಲಿ ತಮ್ಮ ಬದುಕನ್ನ ನಿರೂಪಿಸಿದ ಎಲ್ಲ ಹೆಣ್ಣುಮಕ್ಕಳದ್ದೂ ಒಂದೊಂದು ಭಿನ್ನವಾದ, ಅನನ್ಯವಾದ ಕಥನಗಳು. ಅದೆಷ್ಟು ಹೆಣ್ಣುಮಕ್ಕಳು ಈ ಕೃತಿಯ ಜೊತೆ ತಮ್ಮನ್ನ ಗುರುತಿಸಿಕೊಂಡಿದ್ದಾರೆ ಅನ್ನೋದು ಆಶ್ಚರ್ಯ ಆಗುತ್ತೆ. ಇದು ಬೇರೆ ಭಾಷೆಗೆ ಬಂದದ್ದು ಕನ್ನಡದಿಂದಲೇ! ನೀವು ಇದನ್ನ ಕನ್ನಡಕ್ಕೆ ತಂದ ಮೇಲೆ – ಇದು ತೆಲುಗಿಗೆ, ಮರಾಠಿಗೆ ಅನುವಾದ ಆಗಿದೆ.

* ಇವತ್ತು ನಮ್ಮೆದುರಿಗಿರುವ ಮುಖ್ಯವಾದ ಸವಾಲುಗಳು ಯಾವುವು ಅನ್ನಿಸುತ್ತೆ ನಿಮಗೆ?
ಫ್ಯಾಸಿಸಂ ನನ್ನನ್ನು ತುಂಬಾ ಕಾಡುತ್ತೆ. ಇದು ಎಷ್ಟೊಂದು ಅಪಾಯಕಾರಿ ಅಂತ ಗೊತ್ತಿದ್ದರೂ ಇದನ್ನು ಬೆಳೆಸ್ತಾ ಇದ್ದೀವಲ್ಲ ಅಂತ ತುಂಬಾನೇ ಕಳವಳ ಆಗುತ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT