ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3.70 ಲಕ್ಷ ಕ್ವಿಂಟಲ್‌ ತೊಗರಿ ಖರೀದಿ ಬಾಕಿ

Last Updated 16 ಏಪ್ರಿಲ್ 2017, 9:05 IST
ಅಕ್ಷರ ಗಾತ್ರ

ಬೀದರ್‌: ಬೆಂಬಲ ಬೆಲೆ ನೀಡಿ ತೊಗರಿ ಖರೀದಿ ದಿನಾಂಕ ಶನಿವಾರ ಕೊನೆಗೊಂಡರೂ ಜಿಲ್ಲೆಯಲ್ಲಿ ಸುಮಾರು 3.70 ಲಕ್ಷ ಕ್ವಿಂಟಲ್‌ ತೊಗರಿ ಬಾಕಿ ಉಳಿದಿದೆ. ಎಪಿಎಂಸಿಯಲ್ಲಿ ರೈತರು ಮೂರು ದಿನಗಳಿಂದ ವಾಸ್ತವ್ಯ ಹೂಡಿದರೂ ತೊಗರಿ ಖರೀದಿ ಸಾಧ್ಯವಾಗಿಲ್ಲ. ರೈತರು ಆತಂಕದಲ್ಲಿದ್ದರೆ, ಎಪಿಎಂಸಿ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗಿದೆ.

ಬೀದರ್‌ ತಾಲ್ಲೂಕಿನ ಚಿಲ್ಲರ್ಗಿ, ಚಿಮಕೋಡ, ಸಿರ್ಸಿ, ಕಾಡವಾದ, ಕಮಠಾಣಾ ಹಾಗೂ ಬೆನಕನಳ್ಳಿ ಗ್ರಾಮದ ರೈತರು ಮೂರು ದಿನಗಳ ಹಿಂದೆಯೇ ಎಪಿಎಂಸಿ ಆವರಣದಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ತೊಗರಿ ಚೀಲಗಳನ್ನು ತುಂಬಿಕೊಂಡು ಬಂದಿದ್ದಾರೆ. ಶುಕ್ರವಾರ ಅಂಬೇಡ್ಕರ್‌ ಜಯಂತಿ ರಜೆ ಇದ್ದ ಕಾರಣ ಕಾರ್ಮಿಕರು ಇರಲಿಲ್ಲ. ಶನಿವಾರ ಕೆಲ ರೈತರ ತೊಗರಿ ಖರೀದಿಸಲಾಗಿದೆ.

ಜಿಲ್ಲೆಯಲ್ಲಿ ತಾಲ್ಲೂಕು ವ್ಯವಸಾಯ ಉತ್ಪನ್ನಗಳ ಮಾರುಕಟ್ಟೆ ಸಮಿತಿ (ಟಿಎಪಿಸಿಎಂಎಸ್) ಹಾಗೂ ಪ್ರಾಥಮಿಕ ಕೃಷಿ ಉತ್ಪನ್ನ ಸಹಕಾರ ಸಂಘದ ಒಟ್ಟು 21 ಕೇಂದ್ರಗಳ ಮೂಲಕ 1,52,786 ಕ್ವಿಂಟಲ್‌ ತೊಗರಿ ಖರೀದಿ ಮಾಡಲಾಗಿದೆ. ಬೀದರ್‌ ತಾಲ್ಲೂಕು ಒಂದರಲ್ಲೇ 36,000 ಕ್ವಿಂಟಲ್‌ ತೊಗರಿ ಖರೀದಿ ಆಗಿದೆ.

ಜಿಲ್ಲೆಯ 19,812 ರೈತರು ತೊಗರಿ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ. ಅದರಲ್ಲಿ 10,903 ರೈತರು ಬೆಂಬಲ ಬೆಲೆಯ ಲಾಭ ಪಡೆದುಕೊಂಡಿದ್ದಾರೆ. ನಫೆಡ್‌ನ ಮೂರು ಕೇಂದ್ರಗಳಲ್ಲಿ ಖರೀದಿ ಸ್ಥಗಿತಗೊಳಿಸಲಾಗಿದೆ. 8,909 ರೈತರು  ಖರೀದಿ ಕೇಂದ್ರಗಳಲ್ಲಿ ತೊಗರಿ ಮಾರಾಟ ಮಾಡಿಲ್ಲ ಎಂದು ಹೇಳುತ್ತಾರೆ ಎಪಿಎಂಸಿ ಕಾರ್ಯದರ್ಶಿ ತುಳಸಿರಾಮ ಲಾಖೆ.

ಹೆಚ್ಚು ತೊಗರಿ ಖರೀದಿಸಲು ಅನುಕೂಲವಾಗುವಂತೆ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ ತೂಕದ ಯಂತ್ರಗಳನ್ನು ಅಳವಡಿಸಲಾಗಿದೆ. ಬೀದರ್‌ ಜಿಲ್ಲೆಯಲ್ಲಿ ಚೀಲಗಳ ಕೊರತೆಯಾಗಿಲ್ಲ. 4,09,988 ಚೀಲಗಳನ್ನು ಸರಬರಾಜು ಮಾಡಲಾಗಿದೆ. ಈಗಾಗಲೇ 3,68,794 ಚೀಲಗಳು ಬಳಕೆಯಾಗಿವೆ. 41,194 ಚೀಲಗಳು ಉಳಿದಿವೆ. ಆದರೂ ಇನ್ನೂ 4,45,450 ಚೀಲಗಳ ಅಗತ್ಯವಿದೆ. ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ.

ಬೀದರ್‌ ಜಿಲ್ಲೆಯಲ್ಲಿ 8 ಲಕ್ಷ  ಕ್ವಿಂಟಲ್‌ ತೊಗರಿ ಉತ್ಪಾದನೆಯಾಗಿದೆ. ಈವರೆಗೆ ಸರ್ಕಾರ, 1.80 ಲಕ್ಷ ಕ್ವಿಂಟಲ್ ಖರೀದಿ ಮಾಡಿದೆ. ರೈತರು ಮುಕ್ತ ಮಾರುಕಟ್ಟೆಯಲ್ಲಿ 2.5 ಲಕ್ಷ ಕ್ವಿಂಟಲ್‌ ತೊಗರಿ ಮಾರಾಟ ಮಾಡಿದ್ದಾರೆ. 3.70 ಲಕ್ಷ ಕ್ವಿಂಟಲ್‌ ತೊಗರಿ  ರೈತರ ಬಳಿ ಉಳಿದಿದೆ ಎಂದು ವಿವರಿಸುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್‌.

ಏಪ್ರಿಲ್‌ 12ರಂದು ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಅವರು ನವದೆಹಲಿಯ ಕೇಂದ್ರ ಕೃಷಿ ಇಲಾಖೆಯ ಸಲಹೆಗಾರ ಡಾ.ವಿ.ಎಸ್‌.ಪಹಿಲ್, ಎಪಿಎಂಸಿ, ಕೃಷಿ ಇಲಾಖೆ, ಸಹಕಾರ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಬೀದರ್‌ ಜಿಲ್ಲೆಯ ತೊಗರಿ ಖರೀದಿ ಕುರಿತು ಸಮಾಲೋಚನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.ಒಂದೇ ದಿನದಲ್ಲಿ ಒಂದು ಲಕ್ಷ ಕ್ವಿಂಟಲ್‌ ತೊಗರಿ ಖರೀದಿಸಲು ಕಷ್ಟವಾಗಲಿದೆ. ಹೀಗಾಗಿ ಖರೀದಿ ಅವಧಿಯನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT