ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿ ಮೈ ಕಚ್ಚಿದ ಇಲಿಯ ಪಾಡು

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಎಲ್ಲ ಜೀವಿಗಳೂ ನೆಮ್ಮದಿಯಾಗಿ ಬದುಕಬಲ್ಲ ಸಮೃದ್ಧ ಕಾಡು. ಒಂದು ಗುಹೆಯಲ್ಲಿ ಕರಡಿ ಸಂಸಾರ, ಇನ್ನೊಂದು ಬಿಲದಲ್ಲಿ ಇಲಿ ಕುಟುಂಬ. ಕರಡಿ ಹೊತ್ತು ತರುವ ಭಾರೀ ಗಾತ್ರದ ಹಲಸಿನ ಹಣ್ಣು ನೋಡಿದಾಗಲೆಲ್ಲಾ ಇಲಿಗೆ ತನ್ನ ಶಕ್ತಿಯ ಬಗ್ಗೆ ಕೀಳರಿಮೆ. ಅಸ್ತಿತ್ವದ ಆತಂಕ. ಕರಡಿಯನ್ನು ಕಂಡರೆ ನಖಶಿಖಾಂತ ಸಿಟ್ಟು. ಹೇಗಾದರೂ ಮಾಡಿ ಕರಡಿಯನ್ನು ಮಟ್ಟ ಹಾಕಬೇಕಲ್ಲಾ ಎಂಬುದೇ ಸದಾ ಮನಸು ಕೊರೆಯುವ ಯೋಚನೆ.

ಕರಡಿ ಓಡಾಡುವ ಹಾದಿಯಲ್ಲಿ ಮುಳ್ಳು ಹರಡುತ್ತಿತ್ತು, ಸಮಯ ಕಾದು ಕರಡಿಯ ಮೈ ಕಚ್ಚಿ ಗಾಯ ಮಾಡುತ್ತಿತ್ತು. ಅದರ ಮಕ್ಕಳನ್ನು ಹೆದರಿಸುತ್ತಿತ್ತು. ಇಲಿಯನ್ನು ಹೊಸಕಿ ಹಾಕೋಣ ಎಂದು ಕರಡಿ ಕೈ ಎತ್ತಿದ ತಕ್ಷಣ ಪರಾರಿಯಾಗುತ್ತಿತ್ತು. ಕೆಲವೇ ತಿಂಗಳಲ್ಲಿ ಕರಡಿಗೆ ಮೈತುಂಬಾ ಗಾಯ, ವಿಪರೀತ ಹಿಂಸೆ. ಕರಡಿಗೆ ಇಲಿಯ ವರ್ತನೆ ಅಸಹಜ ಎನಿಸಿತು. ಇಲಿಯನ್ನು ಕರೆದು ಬುದ್ಧಿ ಹೇಳಲು, ಅವರಿವರಿಂದ ಬುದ್ಧಿ ಹೇಳಿಸಲೂ ಯತ್ನಿಸಿತು.

ಆದರೆ ಇಲಿಯಾದರೋ ತೊಡೆತಟ್ಟಿ, ‘ತಾಕತ್ತಿದ್ದರೆ ನನ್ನನ್ನು ಹಿಡಿದು ಮುಗಿಸು’ ಎಂದು ಸವಾಲು ಹಾಕಿತು. ಇಲಿಯನ್ನು ಯಕಃಶ್ಚಿತ್ ಜೀವಿ ಎಂದು ಉಪೇಕ್ಷಿಸಿದ್ದ ಕರಡಿಗೆ ಈಗ ಏನಾದರೂ ಮಾಡಲೇಬೇಕೆಂದು ಅನಿಸಿತು. ಅದರ ದೃಷ್ಟಿ ಇಲಿಯ ಬಿಲದತ್ತ ಹರಿಯಿತು.

‘ತನ್ನ ಬಿಲದಲ್ಲಿ ಇಲಿ ನೆಮ್ಮದಿಯಾಗಿದೆ, ಹೀಗಾಗಿ ನನ್ನನ್ನು ಸುಮ್ಮನಿರಲು ಬಿಡದೆ ಗೋಳು ಹೊಯ್ದುಕೊಳ್ಳುತ್ತಿದೆ. ನಾನು ನೆಮ್ಮದಿಯಾಗಿರಬೇಕು ಎಂದರೆ, ಇಲಿಯ ಮನೆಯಲ್ಲಿ ಕೋಲಾಹಲ ಶುರುವಾಗಬೇಕು. ಸದಾ ಜೀವಭಯದಲ್ಲಿ ಅದು ಬದುಕುವಂತಾಗಬೇಕು’ ಎಂದು ನಿಶ್ಚಯಿಸಿ ಕೌಂಟರ್‌ ಪ್ಲಾನ್ ಮಾಡಿತು.

***
ಇದು ಐದು ವರ್ಷಗಳ ಹಿಂದೆ ಬೆಂಗಳೂರಿನ ಕ್ರೈಸ್ಟ್‌ ವಿ.ವಿ.ಯಲ್ಲಿ ನಡೆದ ‘ನ್ಯಾಷನಲ್ ಡಿಫೆನ್ಸ್’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಸೇನಾಧಿಕಾರಿಗಳು ಹೇಳಿದ ಕಥೆ.

ಅವರು ಪ್ರತ್ಯಕ್ಷ ಬಾಯಿಬಿಟ್ಟು ಹೇಳದಿದ್ದರೂ ಇದು ಭಾರತ ಮತ್ತು ಪಾಕ್ ಸಂಬಂಧದ ಬಗೆಗಿನ ಕಥೆ ಎಂಬುದು ಎಲ್ಲರಿಗೂ ಅರ್ಥವಾಗುತ್ತಿತ್ತು.
ಪಾಕಿಸ್ತಾನದ ಪಶ್ಚಿಮಕ್ಕಿರುವ ಇರಾನ್ ಮತ್ತು ಅಫ್ಘಾನಿಸ್ತಾನದಲ್ಲಿ ಈಚೆಗೆ ನಡೆದ ಕೆಲ ಬೆಳವಣಿಗೆಗಳನ್ನು ಈ ಕಥೆಯ ಹಿನ್ನೆಲೆಯಲ್ಲಿ ನೋಡಿದರೆ ಮಹತ್ವದ ರಾಜಕೀಯ ಚದುರಂಗದಾಟವೊಂದನ್ನು ಭಾರತ ಮುನ್ನಡೆಸುತ್ತಿರುವುದು ಅರಿವಾಗುತ್ತದೆ.

‘ಚೀನಾ– ಪಾಕಿಸ್ತಾನ ಆರ್ಥಿಕ ಕಾರಿಡಾರ್’ ವಿರುದ್ಧ ಹೋರಾಡುತ್ತಿರುವ ಪಾಕ್‌ನ ‘ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್’ ನಾಯಕರು ನೇರವಾಗಿ ಭಾರತದ ಸಹಾಯ ಕೋರುತ್ತಾರೆ. ಪಾಕಿಸ್ತಾನ ಕೊಡಲು ಮುಂದಾದ 50 ಕೋಟಿ ಡಾಲರ್‌ನಷ್ಟು ಸಹಾಯವನ್ನು ಅಫ್ಘಾನ್‌ ಅಧ್ಯಕ್ಷರು ನಿರಾಕರಿಸುತ್ತಾರೆ. ಆದರೆ ಭಾರತದ ಎಂಜಿನಿಯರ್‌ಗಳಿಗೆ ರಸ್ತೆ ನಿರ್ಮಿಸಲು ಅವಕಾಶ ಕೊಡುತ್ತಾರೆ.

ಭಾರತದ ನೆರವು ಒಪ್ಪಿಕೊಳ್ಳುತ್ತಾರೆ. ಭಾರತದಲ್ಲಿ ಪಾಕಿಸ್ತಾನ ವಿಧ್ವಂಸಕ ಕೃತ್ಯ ನಡೆಸಿದಾಗಲೆಲ್ಲಾ ಪಾಕಿಸ್ತಾನದ ವಾಯವ್ಯ ಪ್ರಾಂತ್ಯದಲ್ಲಿ ಪ್ರತ್ಯೇಕತೆಯ ಕೂಗು ಮತ್ತು ಪ್ರತಿಭಟನೆಗಳು ನಡೆಯುತ್ತವೆ. ಇರಾನ್‌ ವಿದ್ಯಾರ್ಥಿಗಳಿಗೆ ಓದಲು ಭಾರತ ಸುಲಭದಲ್ಲಿ ವೀಸಾ ಸೌಲಭ್ಯ ಕೊಡುತ್ತೆ.

ಭಾರತದ ಗಡಿಯಲ್ಲಿದ್ದ ಪಾಕ್‌ ಸೇನೆಯ ಹಲವು ಬೆಟಾಲಿಯನ್‌ಗಳು ಈಗ ಭಯೋತ್ಪಾದಕರನ್ನು ಮಟ್ಟ ಹಾಕುವ ಕಾರ್ಯಾಚರಣೆಗಾಗಿ ಒಳ ಪ್ರದೇಶಗಳಿಗೆ ತೆರಳಿವೆ. ಹಲವು ತುಕಡಿಗಳು ಅಫ್ಘಾನ್‌ಗೆ ಹೊಂದಿಕೊಂಡ ಪಶ್ಚಿಮ ಗಡಿಯನ್ನು ಕಾಯಲೆಂದು ಸ್ಥಳಾಂತರಗೊಂಡಿವೆ.

ಬೆಂಗಳೂರಿನಲ್ಲಿ ಸೇನಾಧಿಕಾರಿಗಳು ಹೇಳಿದ ಕಥೆಯಲ್ಲಿ ಬರುವ ಕರಡಿಗೆ ಇತ್ತೀಚೆಗೆ ಹೇಳಿಕೊಳ್ಳುವಂಥ ಹೊಸ ಗಾಯ ಆಗಲಿಲ್ಲ. ಹಾಗೆಂದು, ಕರಡಿ ಮೇಲಿನ ಸಿಟ್ಟಂತೂ ಇಲಿಗೆ ಕಡಿಮೆಯಾಗಿಲ್ಲ. ಆದರೆ ಕರಡಿಯ ಗುಹೆಯ ತನಕ ಬಂದು ಕಚ್ಚಲು ಅದಕ್ಕೆ ಶಕ್ತಿಯಾಗಲೀ, ಸಮಯವಾಗಲೀ ಸಿಗುತ್ತಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT