ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರಾಣಿಯಲ್ಲಿ ರೋಚಕ ಸ್ಕೂಬಾ ಡೈವಿಂಗ್‌

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಅದೊಂದು ಕಾಲವಿತ್ತು. ಸ್ಕೂಬಾ ಡೈವಿಂಗ್‌ ಸಾಹಸದಲ್ಲಿ ಪಾಲ್ಗೊಳ್ಳುವುದಿದ್ದರೆ ಆಸ್ಟ್ರೇಲಿಯಾ, ಯೂರೊಪ್‌ಗಳತ್ತ ಹೋಗಬೇಕಿತ್ತು. ಆದರೆ ಕೆಲವು ಸಮಯದ ಹಿಂದೆ ಅಂಡಮಾನ್‌, ಲಕ್ಷ ದ್ವೀಪಗಳ ಬಳಿ ಕಡಲಲ್ಲಿ ಸ್ಕೂಬಾ ಡೈವಿಂಗ್‌ ಸುದ್ದಿಯಾಗಿತ್ತು. ಗೋವಾ ಬಳಿಯ ಕಡಲಲ್ಲಿಯೂ ಈ ಕ್ರೀಡೆ  ಸಾಕಷ್ಟು ಪ್ರಚಲಿತದಲ್ಲಿದೆ.  ಇದೀಗ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದ ಬಳಿಯೂ ಈ ಕ್ರೀಡಾ ಚಟುವಟಿಕೆ ಆರಂಭಗೊಂಡಿದೆ.

ಮುರ್ಡೇಶ್ವರದಿಂದ ಬೋಟ್‌ನಲ್ಲಿ ಒಂದೂವರೆ ತಾಸು ಪಶ್ಚಿಮದತ್ತ ಸಮುದ್ರದಲ್ಲಿ ಸಾಗಿದರೆ, ನೇತ್ರಾಣಿ ಎಂಬ ದ್ವೀಪ ಸಿಗುತ್ತದೆ. ಅಲ್ಲಿ ಜನ ವಸತಿ ಇಲ್ಲ. ಅದೊಂದು ಪುಟ್ಟ ದ್ವೀಪ. ಅದನ್ನು ಪಾರಿವಾಳಗಳ ದ್ವೀಪ ಎಂದೂ ಕರೆಯುತ್ತಾರೆ.

ಈ ದ್ವೀಪದ ಬಳಿ ನೀರಿನಾಳದಲ್ಲಿ ಹವಳದ ದಿಬ್ಬಗಳು ಇವೆ. ಅಪರೂಪದ ಜೀವವೈವಿಧ್ಯ ಇದೆ.  ಇಲ್ಲಿ ಚಿಟ್ಟೆ ಮೀನು, ಕ್ಯಾಟ್ ಫಿಶ್, ಟೈಗರ್ ಫಿಶ್, ಬಂದೂಕು ಮೀನು, ಗಿಳಿ ಮೀನು, ಹಾವು ಮೀನು, ಸ್ಟಿಂಗ್‌ ರೇ, ಕಡಲಾಮೆ ಸೇರಿದಂತೆ 35ಕ್ಕೂ ಅಧಿಕ ಪ್ರಭೇದದ ಜಲಚರಗಳು ಕಾಣಸಿಗುತ್ತವೆ.

ಇಂಥ ಅಪರೂಪದ ಜೀವರಾಶಿಗಳು ಇಲ್ಲಿನ ಹವಳ ದಿಬ್ಬಗಳನ್ನೇ ಆಶ್ರಯಿಸಿವೆ. ನೀರಿನೊಳಗಿನ ಈ ಅದ್ಭುತ ಲೋಕವು ಸ್ಕೂಬಾ ಡೈವಿಂಗ್‌ ಮಾಡುವವರಿಗೆ ಒಂದು ಅನನ್ಯವಾದ ಅನುಭವ ಕಟ್ಟಿಕೊಡುತ್ತದೆ.



ಭಾರತದಲ್ಲಿ ಅಂಡಮಾನ್‌-ನಿಕೋಬಾರ್‌, ಲಕ್ಷದ್ವೀಪ ಹಾಗೂ ಗೋವಾ ಹೊರತುಪಡಿಸಿದರೆ ಸ್ಕೂಬಾ ಡೈವಿಂಗ್‌ ಹೇಳಿ ಮಾಡಿಸಿದ ಜಾಗವಿರುವುದು ನೇತ್ರಾಣಿಯಲ್ಲಿ ಮಾತ್ರ. ಇಲ್ಲಿ ಈ ಹಿಂದೆ ಸ್ಕೂಬಾ ಡೈವಿಂಗ್‌ ಚಟುವಟಿಕೆಯನ್ನು ಕೆಲವರು ಅನಧಿಕೃತವಾಗಿ ನಡೆಸುತ್ತಿದ್ದರು. ಇದನ್ನು ನಿಯಂತ್ರಿಸಿದರ ಫಲವಾಗಿ ಕಳೆದ ಕೆಲವು ವರ್ಷಗಳಿಂದ ಡೈವಿಂಗ್‌ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತವು ಈ ಕ್ರೀಡಾ ಚಟುವಟಿಕೆಗೆ ಮರುಜೀವ ನೀಡಿದ್ದು, ಇದನ್ನು ನಡೆಸಲು ಡೈವ್‌ ಗೋವಾ, ಮುಂಬೈನ ವೆಸ್ಟ್‌ ಕೋಸ್ಟ್‌ ಮತ್ತು ಮುರ್ಡೇಶ್ವರದ ನೇತ್ರಾಣಿ ಅಡ್ವೆಂಚರ್ ಸಂಸ್ಥೆಗೆ ಅನುಮತಿ ನೀಡಿದೆ.

ಪ್ರವಾಸಿಗರ ದಾಂಗುಡಿ
‘ಸ್ಕೂಬಾ ಡೈವಿಂಗ್‌ಗೆ ಬೆಂಗಳೂರು, ಮಂಗಳೂರು, ಗೋವಾ ಹಾಗೂ ಮುಂಬೈನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದು, ವಿದೇಶಿಗರೂ  ಭೇಟಿ ನೀಡುತ್ತಿದ್ದಾರೆ. ತಿಂಗಳಿಗೆ ಸುಮಾರು 80ಕ್ಕೂ ಹೆಚ್ಚು ಮಂದಿ ಇಲ್ಲಿ ಡೈವಿಂಗ್ ಮಾಡುತ್ತಿದ್ದಾರೆ. 10ರಿಂದ 30 ಮೀಟರ್‌ ಆಳದವರೆಗೆ ಹೋಗಿ ಸಮುದ್ರದಾಳದ ಜೀವರಾಶಿ ಹಾಗೂ ಅಪರೂಪದ ಹವಳ ದಿಬ್ಬಗಳನ್ನು ನೋಡಬಹುದು.

ನಮ್ಮಲ್ಲಿ ಏಳೆಂಟು ಮಂದಿ ಮಾರ್ಗದರ್ಶಕರಿದ್ದು, ಎಲ್ಲರೂ ಪ್ರೊಫೆಷನಲ್‌ ಅಸೋಸಿಯೇಷನ್‌ ಆಫ್‌ ಡೈವಿಂಗ್‌ ಇನ್‌ಸ್ಟ್ರಕ್ಟರ್ಸ್‌ (PADI) ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ತರಬೇತು ಪಡೆದಿದ್ದಾರೆ. ನವೆಂಬರ್‌ನಿಂದ ಏಪ್ರಿಲ್‌ವರೆಗೆ ಡೈವಿಂಗ್‌ ಚಟುವಟಿಕೆಗೆ ಪ್ರಶಸ್ತ ಸಮಯ’ ಎನ್ನುತ್ತಾರೆ ನೇತ್ರಾಣಿ ಅಡ್ವೆಂಚರ್ಸ್‌ನ ಮುಖ್ಯಸ್ಥ ಗಣೇಶ ಹರಿಕಂತ್ರ.

ನಿತ್ಯವೂ ಇಲ್ಲಿ ಸಾಹಸಿಗಳ ಸಾಹಸ ನಡೆದೇ ಇರುತ್ತದೆ. ‘ನೀಲಿ ಸಮುದ್ರಕ್ಕೆ ಧುಮುಕುವವರೆಗೆ ಒಂದು ರೀತಿಯ ಕುತೂಹಲ ಇತ್ತು. ಬಳಿಕ ನೀರಿನೊಳಗಿನ ಅಪೂರ್ವ ಜಗತ್ತು ಮಂತ್ರಮುಗ್ಧಗೊಳಿಸಿತು. ಸಣ್ಣ ಗಾತ್ರದಿಂದ ಮಧ್ಯಮ ಗಾತ್ರದವರೆಗಿನ ಬಣ್ಣ ಬಣ್ಣದ ಮೀನುಗಳು ಗುಂಪು ಗುಂಪಾಗಿ ಚಲಿಸುತ್ತಿದ್ದವು.

ನೀರಿನಿಂದ ಹೊರಬರಲು ಮನಸ್ಸೇ ಆಗಲಿಲ್ಲ. ನಿಜಕ್ಕೂ ಸ್ಕೂಬಾ ಡೈವಿಂಗ್‌ ನನ್ನ ಪಾಲಿಗೆ ಅವಿಸ್ಮರಣೀಯ’ ಎಂದು ಬೆಂಗಳೂರಿನಿಂದ ಬಂದು ಈ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ವಿಜಯಾರಾಣಿ ಎಂಬುವವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. 

ಸ್ಕೂಬಾ ಡೈವಿಂಗ್‌ ಎಂದರೆ?
ಸ್ಕೂಬಾ ಡೈವಿಂಗ್ ಅಂದರೆ ಕಡಲಿನೊಳಗೆ ಇಳಿದು ಗಂಟೆಗಟ್ಟಲೆ ಅಲೆಯುವುದು. ಉಸಿರಾಟದ ಉಪಕರಣದ (ಸ್ಕೂಬಾ) ಸಹಾಯದಿಂದ ಸಮುದ್ರದಾಳಕ್ಕೆ ಜಿಗಿದು, ಅಲ್ಲಿನ ಜೀವಜಗತ್ತನ್ನು ಕಣ್ಣಾರೆ ಕಂಡು ಆನಂದಿಸಬಹುದು. ನೀರಿಗಿಳಿಯುವವರಿಗೆ ಆಮ್ಲಜನಕ ಸಿಲಿಂಡರ್‌ ಒಳಗೊಂಡ ಏರ್‌ ಜಾಕೆಟ್‌ ತೊಡಿಸಲಾಗುತ್ತದೆ. ನುರಿತ ಮಾರ್ಗದರ್ಶಕರು  ನೀರಿಗೆ ಧುಮುಕುವ ಮುನ್ನ ಅವರು ಉಸಿರಾಟದ ತಂತ್ರಗಾರಿಕೆಯನ್ನು ಹೇಳಿಕೊಡುತ್ತಾರೆ.

ಸ್ಕೂಬಾ ಡೈವಿಂಗ್‌ ಮಾಡಬಯಸುವವರಿಗೆ ಆರೋಗ್ಯ ಚೆನ್ನಾಗಿರಬೇಕು ಹಾಗೂ ಕನಿಷ್ಠ 10 ವರ್ಷ ಆಗಿರಬೇಕು ಎಂಬ ನಿಯಮವಿದೆ. ಹೃದಯ ಹಾಗೂ ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿರುವವರು ಈ ಕ್ರೀಡೆಯಲ್ಲಿ ಭಾಗವಹಿಸುವಂತಿಲ್ಲ.

‘ಸ್ಕೂಬಾ ಡೈವಿಂಗ್‌’ ಉತ್ಸವಕ್ಕೆ ಚಿಂತನೆ
ಜಿಲ್ಲೆಯ ನೇತ್ರಾಣಿ ದ್ವೀಪದ ಸುತ್ತಲಿನ ನೀಲಿ ಸಮುದ್ರ ಸ್ಕೂಬಾ ಡೈವಿಂಗ್‌ಗೆ ಹೇಳಿ ಮಾಡಿಸಿದ ತಾಣ. ಇಲ್ಲಿ ಅಂತರರಾಷ್ಟ್ರೀಯ ‘ಸ್ಕೂಬಾ ಡೈವಿಂಗ್‌’ ಉತ್ಸವ ಆಯೋಜಿಸುವ ಬಗ್ಗೆ ಕೂಡ ಚಿಂತನೆ ನಡೆಸಲಾಗಿದೆ.
–ಎಸ್‌.ಎಸ್‌.ನಕುಲ್‌, ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT