ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಕಚೇರಿ ಮುಂದೆ ಪ್ರತಿಭಟನೆ

ಅರಣ್ಯ ಅಧಿಕಾರಿಗಳಿಂದ ದೌರ್ಜನ್ಯ: ಆರೋಪ
Last Updated 18 ಏಪ್ರಿಲ್ 2017, 4:48 IST
ಅಕ್ಷರ ಗಾತ್ರ
ಲಿಂಗಸುಗೂರು: ತಾಲ್ಲೂಕಿನಲ್ಲಿ ಶತಮಾನಗಳಿಂದ ಅರಣ್ಯ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು ಬಂದಿರುವ ಅರಣ್ಯ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವುದನ್ನು ತಡೆಯುವ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಶಾಸಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
 
ಸೋಮವಾರ ಶಾಸಕ ಮಾನಪ್ಪ ವಜ್ಜಲ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕೆಆರ್‌ಎಸ್‌ ಕಾರ್ಯಕರ್ತರು, ಐದಭಾವಿ, ರಾಯದುರ್ಗ, ಗುಂತಗೋಳ, ರಾಮಲೂಟಿ, ಪರಾಂಪುರ, ಗದ್ದಗಿ, ಯರಡೋಣ, ಚಿಕ್ಕಹೆಸರೂರು, ದೇವರಭೂಪುರ, ಬಂಡೆಭಾವಿ, ಫೂಲಭಾವಿ, ಟಣಮನಕಲ್‌, ಬಸಾಪುರ, ಚಿಕ್ಕನಗೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ಭೂ ಹೀನ ರೈತರು ಅರಣ್ಯ–ಕಂದಾಯ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದಾರೆ.
 
ಅರಣ್ಯ ಇಲಾಖೆ 3 ಎಕರೆಗಿಂತ ಕಡಿಮೆ ಜಮೀನು ಸಾಗುವಳಿ ಮಾಡುವ ರೈತರನ್ನು ಒಕ್ಕಲೆಬ್ಬಿಸದಂತೆ ಆದೇಶ ಹೊರಡಿಸಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಸುತ್ತೋಲೆ ಉಲ್ಲಂಘಿಸಿ ರೈತರನ್ನು ಒಕ್ಕಲೆಬ್ಬಿಸಿ ಬೆಳೆದ ಬೆಳೆ ಹಾಳು ಮಾಡುತ್ತಿದ್ದಾರೆ. ಅರಣ್ಯಾಧಿಕಾರಿಗಳು ಕಿರುಕುಳ ನೀಡುತ್ತಿರುವುದನ್ನು ಕೂಡಲೆ ತಡೆಯುವಂತೆ ಒತ್ತಾಯಿಸಿದರು.
 
ರೈತರಿಗೆ ಬೆಳೆನಷ್ಟ ಪರಿಹಾರ ಕೊಡಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ತುಂಗಭದ್ರಾ ವಲಯ ಹಂಗಾಮಿ ನೀರಾವರಿ ಕಾರ್ಮಿಕರ ಮೇಲೆ ಹಾಕಿರುವ ಸುಳ್ಳು ಪ್ರಕರಣ ಕೈಬಿಡಬೇಕು.

ಕುಡಿವ ನೀರಿನ ಬವಣೆಯಿಂದ ತತ್ತರಿಸಿದ ಜನತೆ, ಜಾನುವಾರುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಸಬೇಕು. ಭೂಮಾಪನ ಇಲಾಖೆ ಭ್ರಷ್ಟಾಚಾರ ತನಿಖೆ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
 
ಪ್ರತಿಭಟನೆ ನೇತೃತ್ವವನ್ನು ಕೆಆರ್‌ಎಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಶೇಖರಯ್ಯ ಗೆಜ್ಜಲಗಟ್ಟಾ, ತಾಲ್ಲೂಕು ಘಟಕ ಅಧ್ಯಕ್ಷ ಗೌಸ್‌ಸಾಬ, ಕಾರ್ಯದರ್ಶಿ ತಪ್ಪರಾಜ ಗೆಜ್ಜಲಗಟ್ಟಾ. ಮುಖಂಡರಾದ ಮಿಯಾಖಾನ, ಮುತ್ತುಸಾಬ, ತಿಪ್ಪಣ್ಣ, ಆದಪ್ಪ, ಶಿವು ಡಿ.ಜಿ, ಸಾಬಯ್ಯ, ಅಶೋಕ, ಹನುಮಂತ, ಹುಸೇನಪ್ಪ, ಸಂಗಪ್ಪ, ಮಲ್ಲಣ್ಣ, ಮಾನಪ್ಪ, ನಾಗರಾಜ, ಅಯ್ಯನಗೌಡ, ಮೊಹ್ಮದ ಸೇರಿದಂತೆ ಆರ್‌ವೈಎಫ್‌ಐ, ಎಐಡಿಎಸ್‌ಒ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT