ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವರ್ಷಕ್ಕೊಮ್ಮೆ ಸಭೆ ಕರೆಯಿರಿ’

ತಾ.ಪಂ. ಸಭೆಗೆ ತಹಶೀಲ್ದಾರ್‌ ಗೈರು: ಸದಸ್ಯರ ಆಕ್ಷೇಪ
Last Updated 18 ಏಪ್ರಿಲ್ 2017, 7:11 IST
ಅಕ್ಷರ ಗಾತ್ರ
ಮಂಗಳೂರು: ‘ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ತಹಶೀಲ್ದಾರರು ಪದೇ ಪದೇ ಗೈರು ಹಾಜರಾಗುತ್ತಿದ್ದಾರೆ. ತಾಲ್ಲೂಕು ಪಂಚಾಯಿತಿ ಸಭೆಯ ಬಗ್ಗೆ ಉದಾಸೀನ ಏಕೆ? ತಹಶೀಲ್ದಾರರು ಬರದೇ ಇದ್ದರೆ, ಸಭೆ ನಡೆಸುವುದಾ ದರೂ ಏಕೆ’ ಎಂದು ಮಂಗಳೂರು ತಾಲ್ಲೂಕು ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
 
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು, ‘ಜನರು ನಮ್ಮನ್ನು ಕೇಳುತ್ತಾರೆ. ಜನರಿಂದ ಬೈಗುಳ ತಿನ್ನುವವರು ನಾವು.
 
ಸಮಸ್ಯೆಗಳ ಬಗ್ಗೆ ಉತ್ತರ ನೀಡಬೇಕಾದ ತಹಶೀಲ್ದಾರರು ಗೈರು ಹಾಜರಾದರೆ ಹೇಗೆ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಾರ್ಯನಿರ್ವಾ ಹಕ ಅಧಿಕಾರಿ ಸದಾನಂದ, ‘ಬಜ್ಪೆಯಲ್ಲಿ ಜನಸಂಪರ್ಕ ಸಭೆ ಇದ್ದು, ತಹಶೀ ಲ್ದಾರರು ಅಲ್ಲಿಗೆ ಹೋಗಿದ್ದಾರೆ’ ಎಂದು ತಿಳಿಸಿದರು.
 
ಇದರಿಂದ ಮತ್ತಷ್ಟು ಕುಪಿತರಾದ ಸದಸ್ಯರು, ‘ಸಭೆಯ ಬಗ್ಗೆ 15 ದಿನ ಮೊದಲೇ ನೋಟಿಸ್ ನೀಡಲಾಗುತ್ತದೆ. ಸಭೆ ಇರುವ ದಿನವೇ ಜನಸಂಪರ್ಕ ಸಭೆ ಇಟ್ಟುಕೊಳ್ಳುವುದು ಸರಿಯೇ? ನಮಗೂ ಅನೇಕ ಕೆಲಸಗಳಿರುತ್ತವೆ. ಆದರೂ ಸಭೆಗೆ ಬರುತ್ತೇವೆ. ಅಧಿಕಾರಿಗಳಿಗೆ ಸಭೆಯ ಮಹತ್ವ ಅರ್ಥವಾಗುತ್ತಿಲ್ಲ’ ಎಂದು ಹೇಳಿದರು.
 
ಮಧ್ಯ ಪ್ರವೇಶಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮೊಹ್ಮದ್ ಮೋನು, ಮಧ್ಯಾಹ್ನ ಒಂದು ಗಂಟೆಗೆ ತಹಶೀಲ್ದಾರರು ಸಭೆಗೆ ಬರಲಿದ್ದಾರೆ. ಅಲ್ಲಿಯವರೆಗೆ ಬೇರೆ ವಿಷಯ ಚರ್ಚಿಸೋಣ ಎಂದು ಹೇಳಿದರು. 
 
‘ಆರೋಗ್ಯ ಇಲಾಖೆ, ಲೋಕೋಪ ಯೋಗಿ ಇಲಾಖೆ, ಆಹಾರ ಇಲಾಖೆಯ ಅಧಿಕಾರಿಗಳೂ ಸಭೆಗೆ ಬಂದಿಲ್ಲ’ ಎಂದು ಸದಸ್ಯರು ದೂರಿದರು. ‘ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಸಭೆಗೆ ಬರುವುದಿಲ್ಲ. ಅವರು ಜಿಲ್ಲಾ ಪಂ ಚಾಯಿತಿ ಸಭೆಗೆ ಮಾತ್ರ ಹೋಗುತ್ತಾರೆ. ಏನಿದ್ದರೂ ನನ್ನ ಗಮನಕ್ಕೆ ತನ್ನಿ. ನಾನು ಮಾತನಾಡುತ್ತೇನೆ’ ಎಂದು ಮೊಹ್ಮದ್ ಮೋನು ಸಮಜಾಯಿಷಿ ನೀಡಿದರು. 
 
ಇದರಿಂದ ಕೆರಳಿದ ಸದಸ್ಯರು, ‘ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಕೆಲಸಗಳಿದ್ದರೆ, ಅಧಿಕಾರಿಗಳನ್ನು ಮೊಬೈಲ್‌ ಅಥವಾ ನಿಮ್ಮ ಮೂಲಕ ಸಂಪರ್ಕಿಸಬೇಕೆ? ಸಂಬಂಧಿಸಿದ ಅಧಿಕಾರಿಗಳು ಬರದೇ ಇದ್ದರೆ, ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಏನು ಪ್ರಯೋಜನ? ಎಲ್ಲ ಅಧಿಕಾರಿಗಳು ಖಾಲಿ ಇರುವ ದಿನಾಂಕ ಪಡೆದು, ವರ್ಷಕ್ಕೊಮ್ಮೆ ಸಭೆ ನಡೆಸಿ. ಆಗಲಾದರೂ, ಸಭೆಯ ಉದ್ದೇಶ ಈಡೇರುತ್ತದೆ’ ಎಂದು ಛೇಡಿಸಿದರು. 
 
ಉಪಾಧ್ಯಕ್ಷೆ ಪೂರ್ಣಿಮಾ ಭಟ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ರೀಟಾ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು. 
***
ಅಸಹಾಯಕತೆ ವ್ಯಕ್ತಪಡಿಸಿದ ಇಒ
ತಾಲ್ಲೂಕು ಪಂಚಾಯಿತಿ ಸದಸ್ಯೆಗೆ ಮಾನಸಿಕ ಹಿಂಸೆ ನೀಡುತ್ತಿರುವ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಅವರ ಪತ್ನಿಯ ವಿರುದ್ಧ ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸದಾನಂದ ಅಸಹಾಯಕತೆ ವ್ಯಕ್ತಪಡಿಸಿದರು.

‘ಪ್ರಾಧ್ಯಾಪಕ ಡಾ. ಉಮೇಶ್‌ ನಾಯ್ಕ್‌ ಹಾಗೂ ಅವರ ಪತ್ನಿ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ಸದಸ್ಯೆ ಪದ್ಮಾವತಿ ಅವರು, ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಆದರೂ ಏನು ಪ್ರಯೋಜನವಾಗಿಲ್ಲ. ಈ ಕುರಿತು ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೂ ತಿಳಿಸಲಾಗಿದೆ.
 
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಆದರೆ, ಈ ಹಿಂದೆ ತನಿಖೆಗೆ ತೆರಳಿದ್ದ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಅಗತ್ಯ ಸಿದ್ಧತೆಯೊಂದಿಗೆ ಸ್ಥಳಕ್ಕೆ ತೆರಳಬೇಕಾಗಿದೆ’ ಎಂದು ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT