ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರ ರಕ್ಷಣೆಗೆ ಬದ್ಧ: ಉಮಾಶ್ರೀ

Last Updated 19 ಏಪ್ರಿಲ್ 2017, 6:07 IST
ಅಕ್ಷರ ಗಾತ್ರ

ತೇರದಾಳ(ಬನಹಟ್ಟಿ): ರಾಜ್ಯದ ನೇಕಾರರ ಅಭಿವೃದ್ಧಿಗೆ ಬದ್ಧಳಾಗಿದ್ದೇನೆ. ನೇಕಾರರ ನೋವು ನಲಿವುಗಳಿಗಾಗಿ ನಿರಂತರ ಹೋರಾಟ ಮಾಡಿದ್ದೇನೆ. ಜೊತೆಗೆ ರಾಜ್ಯದ ಕೆಎಚ್‌ಡಿಸಿ ಮತ್ತು ವಿದ್ಯುತ್‌ ಚಾಲಿತ ಮಗ್ಗಗಳ ಒಟ್ಟು 33ಕೋಟಿ 40 ಲಕ್ಷ ಸಾಲ ಮತ್ತು ಬಡ್ಡಿ ಮನ್ನಾ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಇದು ಸಿದ್ಧರಾಮಯ್ಯನವರ ಸರ್ಕಾರದ ಬಹು ದೊಡ್ಡ ಕೀರ್ತಿ ಎಂದು ಸಚಿವೆ ಉಮಾಶ್ರೀ ತಿಳಿಸಿದರು.

ತೇರದಾಳ ಪುರಸಭೆ ವ್ಯಾಪ್ತಿಯ 23ನೇ ವಾರ್ಡ್‌ನಲ್ಲಿ ನಿರ್ಮಾಣಗೊಂಡ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆ ಮತ್ತು ಪುರಸಭೆಯ ವತಿಯಿಂದ ಕೆಎಚ್‌ಡಿಸಿ ಕೈಮಗ್ಗ ನೇಕಾರರಿಗೆ ಉಚಿತ ಸೋಲಾರ್‌ ಲ್ಯಾಂಪ್‌ ವಿತರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.ರಾಜ್ಯದಲ್ಲಿರುವ ಕೆಎಚ್‌ಡಿಸಿ ನಿಗಮಗಳಿಗೆ ತನ್ನದೆ ಆದ ಸ್ಥಳಗಳು ಇರಲಿಲ್ಲ. ಇದನ್ನು ಅತ್ಯಂತ ಕಾಳಜಿಯಿಂದ ಸತತ ಹೋರಾಟ ಮಾಡಿ ಕೆಐಡಿಬಿಗೆ ಹಣವನ್ನು ತುಂಬಿ ಕೆಎಚ್‌ಡಿಸಿ ನೇಕಾರರಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಒಂದುವರೆ ವರ್ಷದಲ್ಲಿ ಹಕ್ಕು ಪತ್ರಗಳನ್ನು ವಿತರಣೆ ಮಾಡುವುದರ ಜೊತೆಗೆ ಯಾವುದೇ ನೋಂದಣಿ ಶುಲ್ಕ ಇಲ್ಲದೆ ಮನೆಗಳನ್ನು ನೊಂದಣಿ ಮಾಡಿಸಲಾಗಿದೆ. ಇನ್ನುಳಿದವರು ಕೂಡಾ ಆದಷ್ಟು ಬೇಗನೆ ಮನೆಗಳನ್ನು ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.

ರಾಜ್ಯದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರ ಎಲ್ಲ ಬೇಡಿಕೆಗಳನ್ನು ಸರ್ಕಾರ ಪೂರೈಸಿದೆ. ಈ ಮೊದಲು ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ 90 ಪ್ರತಿಶತ ಮತ್ತು ರಾಜ್ಯ ಸರ್ಕಾರ ಶೇ.10 ಅನುದಾನಗಳನ್ನು ನೀಡುತ್ತಿತ್ತು. ಆದರೆ ಈಗ ಸದ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ಅನುದಾನಗಳನ್ನು ನೀಡುತ್ತಿವೆ. ಇದರಿಂದಾಗಿ ರಾಜ್ಯ ಸರ್ಕಾರದ ಮೇಲೆ ಹೆಚ್ಚು ಹೊರೆ ಬಿದ್ದಂತಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಳ ಒಂದೇ ಬಾರಿಗೆ ದೊರೆಯುಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ  ಸಹಾಯಕಿಯರಿಗೆ ಕೊಡುವ ಮರಣ ಪರಿಹಾರ ಧನವನ್ನು ಐವತ್ತು ಸಾವಿರಕ್ಕೆ ಹೆಚ್ಚಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು ಕರ್ತವ್ಯದ ಮೇಲೆ ಇದ್ದಾಗ ನಿಧನ ಹೊಂದಿದರೆ ಅವರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಕೊಡುವ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಇಷ್ಟೆಲ್ಲ ಕಾರ್ಯಗಳನ್ನು ಅಂಗನನಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ ಮಾಡಿಕೊಡಲಾಗಿದೆ ಎಂದರು.
ಸಮಾರಂಭದಲ್ಲಿ ನೇಕಾರ ಮುಖಂಡ ಶಿವಪ್ಪ ಖವಾಸಿ ಮಾತನಾಡಿ, ಕೆಎಚ್‌ಡಿಸಿ ನೇಕಾರರಿಗೆ ಮನೆಗಳ ಉತಾರೆಯನ್ನು ಕೊಡಿಸುವ ಮಹತ್ವದ ಕಾರ್ಯವನ್ನು ಸಚಿವೆ ಉಮಾಶ್ರೀ ಮಾಡಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

82 ಮಂದಿ ಕೈಮಗ್ಗ ನೇಕಾರರಿಗೆ ಐದು ಲಕ್ಷ ವೆಚ್ಚದಲ್ಲಿ ಸೋಲಾರ್‌ ದೀಪಗಳನ್ನು ಸಚಿವೆ ಉಮಾಶ್ರೀ ವಿತರಣೆ ಮಾಡಿದರು.ಪುರಸಭೆಯ ಅಧ್ಯಕ್ಷೆ ಭಾರತಿ ಮಲಾಬದಿ, ಮುಖ್ಯಾಧಿಕಾರಿ ವಿಠ್ಠಲ ಲಾಟಣಿ, ಸಹಾಯಕ ಎಂಜಿನಿಯರ್‌ ಡಿ.ಬಿ.ಪಠಾಣ, ಕೆಎಚ್‌ಡಿಸಿ ಅಧಿಕಾರಿ ಅಲ್ಲಮಪ್ರಭು ಒಂಟಗುಡಿ, ಹನಮಂತ ಮಣವಡ್ಡರ, ಅಶೋಕ ಆಳಗೊಂಡ, ಗುರುರಾಜ ಕುಲಕರ್ಣಿ, ರುಸ್ತುಂ ನಿಪ್ಪಾಣಿ, ಸುರೇಶ ಕಬಾಡಗಿ, ಸಾಗರ ಚವಾಜ, ಗೌತಮ ರೋಡಕರ್‌, ಶೆಟ್ಟೆಪ್ಪ ಸುಣಗಾರ, ರಾಜು ಹೊಸಮನಿ, ಮಾಜಿ ಅಧ್ಯಕ್ಷ ಎಂ.ಕೆ.ತಹಶೀಲ್ದಾರ್‌, ವಿಶ್ವನಾಥ ಹಿರೇಮಠ, ಮಾಶೂಂ ಇನಾಮದಾರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT