ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಮುನ್ಸೂಚನೆ ಆಶಾದಾಯಕ ಕೃಷಿ ವಲಯವನ್ನು ಸನ್ನದ್ಧಗೊಳಿಸಿ

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಈ ವರ್ಷದ ನೈರುತ್ಯ ಮುಂಗಾರು ವಾಡಿಕೆ ಪ್ರಮಾಣದ ಮಳೆಯನ್ನು ತರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ರೈತಾಪಿ ವರ್ಗದಲ್ಲಿ ಹೊಸ ಉತ್ಸಾಹವನ್ನೇ ಮೂಡಿಸಿದೆ. ಸತತವಾಗಿ ಬರದ ಅಗ್ನಿಕುಂಡದಲ್ಲಿ ಸಿಕ್ಕಿ ನಲುಗಿದವರನ್ನು ಮತ್ತೆ ಜೀವನ್ಮುಖಿ ಪಯಣಕ್ಕೆ ಸನ್ನದ್ಧಗೊಳಿಸುವ ಶಕ್ತಿ ಇರುವುದು ವರ್ಷಧಾರೆಗೆ ಮಾತ್ರ. ದೇಶದ ಗ್ರಾಮೀಣ ಆರ್ಥಿಕತೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸುರಿಯುವ ಮಳೆಯನ್ನೇ ಬಹುವಾಗಿ ನೆಚ್ಚಿಕೊಂಡಿರುವ ಕಾರಣ ಕೃಷಿ ಚಟುವಟಿಕೆ ‘ಮುಂಗಾರಿನೊಂದಿಗೆ ಜೂಜಾಟ’ ಎಂದೇ ಬಿಂಬಿತವಾಗಿದೆ. ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಗಣನೀಯ ಕೊಡುಗೆ ನೀಡುವ ಕೃಷಿ ವಲಯದ ಯಶಸ್ಸು ದೇಶದ ಅಭಿವೃದ್ಧಿಯಲ್ಲಿ ಬಹುಮುಖ್ಯ.

ಆದರೆ, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಭೂಮಿಯ ದಾಹದ ದಾರುಣ ನೋಟಗಳು ಕೃಷಿ ವಲಯ ಸದ್ಯ ಎದುರಿಸುತ್ತಿರುವ ಬಿಕ್ಕಟ್ಟಿನ ಸ್ಥಿತಿಗೆ ಕನ್ನಡಿ ಹಿಡಿಯುತ್ತಿವೆ. ಮುಂಗಾರಿನಲ್ಲಿ ಹಸಿರಿನಿಂದ ಮುಕ್ಕಳಿಸಬೇಕಾಗಿದ್ದ ಹೊಲ ಗದ್ದೆಗಳು ಸತತವಾಗಿ ಆವರಿಸಿದ ಬರಗಾಲದಿಂದ ಬರಡಾಗಿವೆ. ಬೆಳೆ ಹಾನಿಯಿಂದ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆಗಳು ಇನ್ನೂ ಕಹಿ ನೆನಪುಗಳಾಗಿ ಕಾಡುತ್ತಿವೆ. ಉಡಿಯೊಳಗೆ ಬಿದ್ದ ಇಂತಹ ನೋವಿನ ಉರಿಯಿಂದ ಸುಟ್ಟುಕೊಂಡವರಿಗೆ ‘ವಾಡಿಕೆ ಮಳೆ ಬೀಳಲಿದೆ’ ಎಂಬ ಶುಭಸುದ್ದಿ ಹಾಯ್‌ ಎನಿಸುವಂತಹ ಸಮಾಧಾನ ತಂದಿದೆ; ಮಾತ್ರವಲ್ಲ, ಹೊಸ ಭರವಸೆಯನ್ನೂ ಮೂಡಿಸಿದೆ. ಹವಾಮಾನ ಇಲಾಖೆಯು ದೇಶದ ಮಳೆಸ್ಥಿತಿ ಕುರಿತು ಸಾಮಾನ್ಯವಾದ  ಮುನ್ನೋಟ ಬೀರುವುದಕ್ಕಿಂತ ರಾಜ್ಯವಾರು ಸ್ಪಷ್ಟ ಚಿತ್ರಣ ನೀಡಿದರೆ ಆಯಾ ರಾಜ್ಯ ಸರ್ಕಾರಗಳು ಸಂಭಾವ್ಯ ಸನ್ನಿವೇಶ ಎದುರಿಸುವುದಕ್ಕೆ ಅಣಿಯಾಗಲು ಸಾಧ್ಯವಾಗುತ್ತದೆ. ತಂತ್ರಜ್ಞಾನದ ಈ ಯುಗದಲ್ಲಿ ಕೃಷಿ ವಲಯಗಳಿಗೆ ತಕ್ಕಂತೆ ಹವಾಮಾನ ಮಾಹಿತಿ ಒದಗಿಸುವುದು ಕಷ್ಟವೇನಲ್ಲ.

ಸದ್ಯ ಮುನ್ಸೂಚನೆ ಸಿಕ್ಕಿರುವಂತೆಯೇ ಮುಂಗಾರು ಕರುಣೆ ತೋರಿದರೆ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ಕುಡಿಯುವ ನೀರಿನ ಕೊರತೆ ದೂರವಾಗಲಿದೆ. ವಿದ್ಯುತ್‌ ಉತ್ಪಾದನೆಯನ್ನು ಹೆಚ್ಚಿಸಲು ಜಲಾಶಯಗಳು ಸಾಮರ್ಥ್ಯ ಪಡೆಯಲಿವೆ. ಉತ್ತಮ ಫಸಲಿನಿಂದ ಆಹಾರ ಪದಾರ್ಥಗಳ ಬೆಲೆ ತಗ್ಗಲಿದ್ದು, ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ. ಆದ್ದರಿಂದ ಮುಂಗಾರು ನಮಗೆ ತುಂಬಾ ಮುಖ್ಯವಾಗಿದೆ. ಹವಾಮಾನ ಇಲಾಖೆ ಭವಿಷ್ಯದ ಬಗೆಗೆ ಆಶಾದಾಯಕ ಮಾತುಗಳನ್ನು ಆಡಿದ್ದರಿಂದ ಹಿಗ್ಗಿ ಮೈಮರೆತು ಕೂರುವ ಕಾಲ ಇದಲ್ಲ. ಮಳೆಗಾಲಕ್ಕೆ ಬೇಸಿಗೆಯಲ್ಲೇ ಸನ್ನದ್ಧಗೊಳ್ಳುವುದು ಜಾಣ ನಡೆ. ಹಿಂದಿನ ಹತ್ತು ವರ್ಷಗಳಲ್ಲಿ ಮುಂಗಾರಿನ ಕುರಿತ ಮುನ್ಸೂಚನೆಗಳ ಯಶಸ್ಸಿನ ಪ್ರಮಾಣ ಶೇ 30ರಷ್ಟು ಮಾತ್ರವಿದೆ. ಕಳೆದ ವರ್ಷವೂ ಅದರ ಲೆಕ್ಕಾಚಾರ ತಪ್ಪಾಗಿತ್ತು. ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಲು ಬೇಕಾದ ವ್ಯವಸ್ಥೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಲೇ ಮಾಡಿಕೊಳ್ಳಬೇಕು. ಜತೆಯಲ್ಲೇ ಮಳೆ ನೀರನ್ನು ಇಂಗಿಸಲು ಮತ್ತು ಸಂಗ್ರಹಿಸಲು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಬೇಕು.

ಉದ್ಯೋಗ ಖಾತ್ರಿ ಯೋಜನೆಯ ಮೂಲಕ ದೇಶದಾದ್ಯಂತ ಐದು ಲಕ್ಷ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹಿಂದಿನ ಬಜೆಟ್‌ನಲ್ಲೇ ಕೇಂದ್ರ ಘೋಷಿಸಿತ್ತು. ಇಂತಹ ಯೋಜನೆಗಳು ಕಾಗದದಲ್ಲಿ ಉಳಿದರೆ ಏನೂ ಪ್ರಯೋಜನವಿಲ್ಲ.  ಕೇಂದ್ರದಿಂದ ಕೃಷಿ ಯೋಜನೆಗಳಿಗೆ ಸಿಗುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ರಾಜ್ಯ ಕೃಷಿ ಇಲಾಖೆಯು ಯಾವ ಕಾರಣಕ್ಕೂ ಹಿಂದೆ ಬೀಳಬಾರದು. ಕೆರೆಗಳ ಹೂಳನ್ನು ಬೇಸಿಗೆಯಲ್ಲೇ ಮೇಲೆತ್ತಿ, ಮಳೆಗಾಲದಲ್ಲಿ ಅವುಗಳನ್ನು ತುಂಬಿಸಲು ಮುಂದಡಿ ಇಡಬೇಕು. ತಮ್ಮ ಹೊಲದಲ್ಲಿ ಬಿದ್ದ ಮಳೆನೀರನ್ನು ಅಲ್ಲಿಯೇ ಇಂಗುವಂತೆ ಮಾಡುವುದರ ಮಹತ್ವವೇನು ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಬೇಕು. ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಎದುರಿಸಲು ಕೃಷಿಕ ಸಮುದಾಯವನ್ನು ಸನ್ನದ್ಧಗೊಳಿಸಬೇಕು. ಮಳೆಬಿದ್ದಾಗ ವಿಳಂಬವಿಲ್ಲದೆ ಬಿತ್ತನೆ ಚಟುವಟಿಕೆ ನಡೆಸುವಂತಾಗಲು ಬೀಜ–ಗೊಬ್ಬರದ ದಾಸ್ತಾನಿಗೂ ಈಗಿನಿಂದಲೇ ತಯಾರಿ ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT