ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರ ಕೋಪ ತಣಿಸಲು ರಾಜಮೌಳಿ ಯತ್ನ

Last Updated 20 ಏಪ್ರಿಲ್ 2017, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ಬಾಹುಬಲಿ 2’ ಸಿನಿಮಾದ ನಟ ಸತ್ಯರಾಜ್‌ ಕನ್ನಡಿಗರ ವಿರುದ್ಧ ನೀಡಿರುವ ಹೇಳಿಕೆಯಿಂದ ಉಂಟಾಗಿರುವ ವಿವಾದವನ್ನು ತಣ್ಣಗಾಗಿಸಲು ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಮುಂದಾಗಿದ್ದಾರೆ. ಗುರುವಾರ ವಿಡಿಯೊ ತುಣುಕೊಂದನ್ನು ಅವರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ ಅವರು ಕನ್ನಡದ
ಲ್ಲಿಯೇ ಮಾತನಾಡಿದ್ದು, ‘ನಟ ಸತ್ಯರಾಜ್‌ ಮೇಲಿನ ಕೋಪವನ್ನು ಬಾಹುಬಲಿ ಸಿನಿಮಾದ ಮೇಲೆ ತೋರಿಸಬೇಡಿ’ ಎಂದು ಕನ್ನಡಿಗರಲ್ಲಿ ವಿನಂತಿಸಿಕೊಂಡಿದ್ದಾರೆ. ಈ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅದರಲ್ಲಿ ರಾಜಮೌಳಿ ಆಡಿದ ಮಾತಿನ ಅಕ್ಷರರೂಪ ಇಲ್ಲಿದೆ.

‘‘ಅರ್ಕ ಮೀಡಿಯಾ ನಿರ್ಮಾಣದಲ್ಲಿ ನಾನು ನಿರ್ದೇಶನ ಮಾಡಿರುವ ಬಾಹುಬಲಿ ದಿ ಬಿಗಿನಿಂಗ್ ಚಿತ್ರಕ್ಕೆ ನೀವು ನೀಡಿದ ಪ್ರೋತ್ಸಾಹಕ್ಕೆ ನಾವು ಋಣಿಯಾಗಿರುತ್ತೇವೆ. ನೀವೆಲ್ಲರೂ ಬಾಹುಬಲಿ ಮೊದಲನೆಯಭಾಗವನ್ನು ನೋಡಿದ್ದೀರಿ. ಪ್ರೀತಿಸಿದ್ದೀರಿ. ಈಗ ‘ಬಾಹುಬಲಿ ದಿ ಕನ್‌ಕ್ಲೂಜನ್’ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಒಂದು ಮುಖ್ಯಪಾತ್ರದಲ್ಲಿ ಸತ್ಯರಾಜ್ ನಟಿಸಿರುವ ವಿಚಾರ ನಿಮ್ಮೆಲ್ಲರಿಗೂ ಗೊತ್ತು. ಸತ್ಯರಾಜ್ ಅವರ ಕೆಲವು ಮಾತುಗಳಿಂದ ನಿಮ್ಮಲ್ಲಿ ಸಾಕಷ್ಟು ಜನರಿಗೆ ನೋವಾಗಿದೆ ಎಂದು ನಮಗೆ ಗೊತ್ತಾಗಿದೆ. ಇದರ ಕುರಿತಾಗಿ ಒಂದು ವಿವರಣೆಯನ್ನು ನೀಡುವುದು ನಮ್ಮ ಕರ್ತವ್ಯ ಎಂದು ಭಾವಿಸುತ್ತಿದ್ದೇವೆ. ಬಾಹುಬಲಿ ಚಿತ್ರಕ್ಕೂ ಸತ್ಯರಾಜ್ ಅವರ ಮಾತುಗಳಿಗೂ ಯಾವ ಸಂಬಂಧವೂ ಇಲ್ಲ. ಈ ಚಿತ್ರವನ್ನು ನಿರ್ಮಾಣ ಮಾಡಿದವರು ಅವರಲ್ಲ. ಈ ಚಿತ್ರಕ್ಕಾಗಿ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮುಂತಾದ ಯಾವ ವಿಭಾಗದಲ್ಲೂ ಅವರು ಕೆಲಸ ಮಾಡಿರಲಿಲ್ಲ. ಅವರು ಕೇವಲ ಒಂದು ಪಾತ್ರದಲ್ಲಿ ನಟಿಸಿದ್ದಾರಷ್ಟೇ. ಅದಕ್ಕೆ ಸಂಭಾವನೆಯನ್ನೂ ಪಡೆದಿದ್ದಾರೆ.

ಸತ್ಯರಾಜ್ ಅವರ ಅಭಿಪ್ರಾಯ ಏನೇ ಇದ್ದರೂ ಅದು ಅವರಿಗೆ ಮಾತ್ರವೇ ಸೀಮಿತ. ಒಬ್ಬ ನಟನ ವೈಯಕ್ತಿಕ ಅಭಿಪ್ರಾಯದಿಂದಾಗಿ ಆತ ನಟಿಸಿರುವ ಒಂದು ಚಿತ್ರಕ್ಕೆ ಯಾವ ತೊಂದರೆಯೂ ಉಂಟಾಗಬಾರದು ಎಂಬುದು ನಮ್ಮ ಉದ್ದೇಶ. ಹಾಗಾಗಿ ಈ ವಿಚಾರದ ಕುರಿತು ಸತ್ಯರಾಜ್ ಅವರಿಗೆ ಫೋನ್ ಮಾಡಿ ಪರಿಸ್ಥಿತಿಯನ್ನು ತಿಳಿಸಿದ್ದೇವೆ. ಅದಕ್ಕೂ ಮೀರಿದ ಶಕ್ತಿ ನಮಗಿಲ್ಲ. ಒಂಬತ್ತು ವರ್ಷಗಳ ಹಿಂದೆ ಸತ್ಯರಾಜ್ ಅವರು ಆ ವಿವಾದಿತ ಹೇಳಿಕೆ ನೀಡಿದ್ದಾರೆ. ಆ ನಂತರ ಅವರು ನಟಿಸಿರುವ, ನಿರ್ಮಾಣ ಮಾಡಿದ ಸಾಕಷ್ಟು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆ ಆಗಿವೆ. ಬಾಹುಬಲಿ ಭಾಗ 1 ಸಹ ಬಿಡುಗಡೆ ಆಗಿದೆ. ಅವು ಗಳನ್ನು ಪ್ರೋತ್ಸಾಹಿಸಿದ್ದ ಹಾಗೆಯೇ ಬಾಹುಬಲಿ ದಿ ಕನ್‌ಕ್ಲೂಜನ್ ಚಿತ್ರವನ್ನು ಸಹ ಪ್ರೀತಿಯಿಂದ ನೋಡಬೇಕಾಗಿ ಬಯಸು ತ್ತಿದ್ದೇವೆ. ಈ ಸಿನಿಮಾದ ಪ್ರದರ್ಶನ ನಿಲ್ಲಿಸಿದರೆ ಸತ್ಯರಾಜ್ ಅವರಿಗೆ ಆಗುವ ಕಷ್ಟ ಅಥವಾ ನಷ್ಟ ಏನೂ ಇಲ್ಲ. ಐದು ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ ಕಲಾವಿದರಿಗೂ ತಂತ್ರಜ್ಞರಿಗೂ ಕರ್ನಾಟಕದ ಹಂಚಿಕೆದಾರರಿಗೂ ಮತ್ತು ಚಿತ್ರರಸಿಕರಿಗೂ ತೊಂದರೆಯಾಗುತ್ತದೆ. ನನ್ನ ಮೊದಲನೆಯ ಸಿನಿಮಾ ‘ಸ್ಟೂಡೆಂಟ್ ನಂಬರ್ ಒನ್‌’ನಿಂದ, ‘ಬಾಹುಬಲಿ ದಿ ಬಿಗಿನಿಂಗ್’ ತನಕ ನನ್ನ ಎಲ್ಲ ಚಿತ್ರಗಳನ್ನೂ ನೀವು ಪ್ರೋತ್ಸಾಹಿಸಿದ್ದೀರಿ. ಅದಕ್ಕೆ ನಾನು ನಿಮಗೆ ಕೃತಜ್ಞತೆ
ಗಳನ್ನು ಸಲ್ಲಿಸುತ್ತಿದ್ದೇನೆ. ಈಗ ಸತ್ಯರಾಜ್ ಮೇಲಿನ ಕೋಪವನ್ನು ಬಾಹುಬಲಿಯ ಮೇಲೆ ತೋರಿಸಬಾರದೆಂದು ವಿನಂತಿಸಿಕೊಳ್ಳುತ್ತಿದ್ದೇನೆ. ಚಿತ್ರರಸಿಕರಾದ ಪ್ರೀತಿಯ ಕನ್ನಡ ವೀಕ್ಷಕರು ‘ಬಾಹುಬಲಿ ದಿ ಕನ್‌ಕ್ಲೂಜನ್’ ಚಿತ್ರವನ್ನು ಪ್ರೋತ್ಸಾಹಿಸಬೇಕೆಂದು   ಕೋರುತ್ತಿದ್ದೇವೆ’’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT