ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ ತಂಡಕ್ಕೆ ಶಿವಾಜಿಯನ್ಸ್‌ ಸವಾಲು

Last Updated 21 ಏಪ್ರಿಲ್ 2017, 20:40 IST
ಅಕ್ಷರ ಗಾತ್ರ

ಬೆಂಗಳೂರು: ಎಎಫ್‌ಸಿ ಕಪ್‌ ಫುಟ್‌ಬಾಲ್‌ ಟೂರ್ನಿ ಯಲ್ಲಿ ‘ಹ್ಯಾಟ್ರಿಕ್‌’ ಗೆಲುವಿನ ಸಾಧನೆ ಮಾಡಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಈಗ ಮತ್ತೆ ಜಯದ ಮಂತ್ರ ಜಪಿಸುತ್ತಿದೆ.

ಶನಿವಾರ ನಡೆಯುವ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರಿನ ತಂಡ ಡಿಎಸ್‌ಕೆ ಶಿವಾಜಿ ಯನ್ಸ್‌ ಸವಾಲಿಗೆ ಎದೆಯೊಡ್ಡಲಿದ್ದು ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.

ಉಭಯ ತಂಡಗಳ ನಡುವಣ ಈ ಹೋರಾಟಕ್ಕೆ ಕಂಠೀರವ ಕ್ರೀಡಾಂಗಣ ದಲ್ಲಿ ವೇದಿಕೆಯೂ ಸಿದ್ಧವಾಗಿದೆ.

ಮೂರು ವರ್ಷಗಳ ಹಿಂದೆ ಐ ಲೀಗ್‌ಗೆ ಅಡಿ ಇಟ್ಟಿದ್ದ ಸುನಿಲ್‌ ಚೆಟ್ರಿ ಸಾರಥ್ಯದ ತಂಡ ಚೊಚ್ಚಲ ಪ್ರಯತ್ನದಲ್ಲೇ ಪ್ರಶಸ್ತಿ ಎತ್ತಿ ಹಿಡಿದಿತ್ತು. ಮರು ವರ್ಷ ರನ್ನರ್ಸ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಬೆಂಗಳೂರಿನ ತಂಡ ಹೋದ ವರ್ಷ ಮತ್ತೆ ಕಿರೀಟ ಮುಡಿಗೇರಿಸಿಕೊಂಡು ಬೀಗಿತ್ತು. ಆದರೆ ಈ ವರ್ಷ ತಂಡದ ಪ್ರಶಸ್ತಿಯ ಹಾದಿ ಮುಚ್ಚಿದೆ. 16 ಪಂದ್ಯಗಳನ್ನು ಆಡಿರುವ ಚೆಟ್ರಿ ಬಳಗದ ಖಾತೆಯಲ್ಲಿ 24 ಪಾಯಿಂಟ್ಸ್‌ ಇದ್ದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿದೆ.

ಉಭಯ ತಂಡಗಳು ಇದುವರೆಗೂ ಐ ಲೀಗ್‌ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಬಿಎಫ್‌ಸಿ ಒಂದು ಪಂದ್ಯದಲ್ಲಿ ಗೆದ್ದಿದ್ದರೆ, ಉಳಿದೆರಡು ಪಂದ್ಯಗಳು ಡ್ರಾ ಆಗಿವೆ.

ಹಿಂದಿನ ಈ ಗೆಲುವಿನ ಬಲ ಮತ್ತು ತವರಿನ ಅಭಿಮಾನಿಗಳ ಬೆಂಬಲ ದೊಂದಿಗೆ ಕಣಕ್ಕಿಳಿಯುತ್ತಿರುವ ಬಿಎಫ್‌ಸಿ ತಂಡ ಮತ್ತೊಮ್ಮೆ ಶಿವಾಜಿಯನ್ಸ್‌ ಸವಾಲು ಮೀರಿ ನಿಲ್ಲುವ ವಿಶ್ವಾಸ ಹೊಂದಿದೆ.

ಬಾಂಗ್ಲಾದೇಶದ ಅಬಹಾನಿ ಎಫ್‌ಸಿ ತಂಡದ ವಿರುದ್ಧ ನಡೆದಿದ್ದ ತನ್ನ ಹಿಂದಿನ ಪಂದ್ಯದಲ್ಲಿ ಬಿಎಫ್‌ಸಿ ಗೆದ್ದು ಬೀಗಿತ್ತು.

ಈ ಪಂದ್ಯದಲ್ಲಿ ಮಾರ್ಜಾನ್‌ ಜುಗುವಿಚ್‌ ಮತ್ತು ನಿಶುಕುಮಾರ್‌ ಮೋಡಿ ಮಾಡಿದ್ದರು. ಹೀಗಾಗಿ ಇವರ ಮೇಲೆ ಅಪಾರ ನಿರೀಕ್ಷೆ ಇದೆ.

ಅಮರಿಂದರ್‌ ಸಿಂಗ್‌ ಅನುಪಸ್ಥಿತಿಯಲ್ಲಿ  ಕಣಕ್ಕಿಳಿದಿದ್ದ ಗೋಲ್‌ಕೀಪರ್‌ ಲಾಲ್ತುಮಾವಿಯ ರಾಲ್ಟೆ ಹಿಂದಿನ ಪಂದ್ಯ ದಲ್ಲಿ ಗೋಡೆಯಂತೆ ನಿಂತು ಎದುರಾಳಿ ಗಳ ಗೋಲು ಗಳಿಕೆಯ ಅವಕಾಶಗಳನ್ನು ತಡೆದಿದ್ದರು.

(ಅಭ್ಯಾಸನಿರತ ಸುನಿಲ್ ಚೆಟ್ರಿ  ಪ್ರಜಾವಾಣಿ ಚಿತ್ರ/ಕಿಶೋರ್‌ಕುಮಾರ್ ಬೋಳಾರ್)

ರಕ್ಷಣಾ ವಿಭಾಗದ ಆಟಗಾರರಾದ ಸಲಾಂ ರಂಜನ್‌ ಸಿಂಗ್‌, ಕೀಗನ್‌ ಪೆರೇರಾ, ರಿನೊ ಆ್ಯಂಟೊ ಮತ್ತು ಜಾನ್‌ ಜಾನ್ಸನ್‌ ಅವರೂ ಮಿಂಚುವ ತವಕದಲ್ಲಿದ್ದಾರೆ.

ಮುಂಚೂಣಿ ವಿಭಾಗದಲ್ಲಿ ನಾಯಕ ಚೆಟ್ರಿ, ಡೇನಿಯಲ್‌ ಲಾಲಿಂಪುಯಿಯಾ, ಸಿ.ಕೆ.ವಿನೀತ್‌ ಮತ್ತು ಬೀಕೊಕಿ ಬಿಯಾಂಗೈಚೊ ಅವರ ಮೇಲೆ ಅಪಾರ ನಿರೀಕ್ಷೆ ಇದೆ.

ಮಿಡ್‌ಫೀಲ್ಡರ್‌ಗಳಾದ ಆಲ್ವಿನ್ ಜಾರ್ಜ್‌, ಸಿಮೆನ್‌ಲೆನ್‌ ಡೌಂಗಲ್‌, ಯೂಜೆನ್ಸೆನ್‌ ಲಿಂಗ್ಡೊ ಅವರ ಮೇಲೂ ಹೆಚ್ಚಿನ ಜವಾಬ್ದಾರಿ ಇದೆ.

ವಿಶ್ವಾಸದಲ್ಲಿ ಶಿವಾಜಿಯನ್ಸ್‌: ಹಿಂದಿನ ಪಂದ್ಯದಲ್ಲಿ ಈಸ್ಟ್‌ ಬೆಂಗಾಲ್‌ ತಂಡವನ್ನು ಮಣಿಸಿ ಬೀಗುತ್ತಿ ರುವ ಶಿವಾಜಿಯನ್ಸ್‌  ತಂಡ ಚೆಟ್ರಿ ಪಡೆಗೆ ತವರಿನಲ್ಲಿ ಆಘಾತ ನೀಡಲು ಕಾದಿದೆ.

ಆಡಿರುವ 16 ಪಂದ್ಯಗಳಿಂದ ಈ ತಂಡ 17 ಪಾಯಿಂಟ್ಸ್‌ ಮಾತ್ರ ಕಲೆಹಾಕಿದೆ. ಈ ತಂಡ ಪಟ್ಟಿಯಲ್ಲಿ ಏಳನೇ ಸ್ಥಾನ ಹೊಂದಿದೆ. ಚರ್ಚಿಲ್‌ ಬ್ರದರ್ಸ್‌ ಮತ್ತು ಚೆನ್ನೈಯಿನ್‌ ಎಫ್‌ಸಿ ಕೂಡ ಇಷ್ಟೇ ಪಾಯಿಂಟ್ಸ್‌ ಹೊಂದಿವೆ.

ಭಾರತದ ಅನುಭವಿ ಗೋಲ್‌ಕೀಪರ್‌ ಸುಬ್ರತಾ ಪಾಲ್‌ ಅವರ ಬಲ ಪ್ರವಾಸಿ ತಂಡಕ್ಕಿದೆ.

**

ನಮ್ಮದು ಶ್ರೇಷ್ಠ ತಂಡ. ಹಿಂದಿನ ಪಂದ್ಯಗಳಲ್ಲಿ ಎದುರಾಳಿಗಳಿಗೆ ಅಂತಿಮ ಅವಧಿಯಲ್ಲಿ ಗೋಲು ಬಿಟ್ಟು ಕೊಟ್ಟಿದ್ದ ರಿಂದ ಹಿನ್ನಡೆ  ಎದು ರಾಗಿತ್ತು.   ಈ ತಪ್ಪು ತಿದ್ದಿಕೊಳ್ಳುತ್ತೇವೆ.
-ಡೇವ್‌ ರೋಜರ್ಸ್‌, ಶಿವಾಜಿಯನ್ಸ್‌ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT