ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕೊಳವೆಬಾವಿಯಿಂದ ನೀರು ಪೂರೈಸಿ

ಚಳ್ಳಕೆರೆ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಅಧ್ಯಕ್ಷ ವೀರೇಶ್‌ಗೆ ಪ್ರಸ್ತಾವ
Last Updated 22 ಏಪ್ರಿಲ್ 2017, 4:19 IST
ಅಕ್ಷರ ಗಾತ್ರ
ಚಳ್ಳಕೆರೆ: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಸರಬರಾಜು, ಮೇವು ಬ್ಯಾಂಕ್‌ಗಳ ಚಾಲನೆ ಮತ್ತು ಹಳ್ಳಿಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಶ್ರೂಷಕಿಯರ ನೇಮಕ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಜಿ.ವೀರೇಶ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು.
 
ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
 
ಸದಸ್ಯ ಗಿರಿಯಪ್ಪ ಮಾತನಾಡಿ, ‘ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಕೊಳವೆ ಬಾವಿಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದೆ. ಕೆಲವು ಗ್ರಾಮಗಳಲ್ಲಿ ಕಿಲೋ
ಮೀಟರ್‌ನಷ್ಟು ದೂರದಿಂದ ನೀರು ತರುವ ಪರಿಸ್ಥಿತಿ ಇದೆ. ಇಂತಹ ಸ್ಥಳಗಳಲ್ಲಿ ಸ್ಥಳೀಯ ಆಡಳಿತ ಟ್ಯಾಂಕರ್‌ ಮತ್ತು ಖಾಸಗಿ ಜಮೀನುಗಳಲ್ಲಿರುವ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಬೇಕು’ ಎಂದು ಒತ್ತಾಯಿಸಿದರು.
 
ಈ ಬಗ್ಗೆ ಎಇಇ ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿ, ‘ಮಳೆ ಅಭಾವ ಮತ್ತು ಬೇಸಿಗೆಯಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಆದ್ದರಿಂದ, ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಅಗತ್ಯ ಇರುವ ಕಡೆ ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು ಸಮಸ್ಯೆ ಪರಿಹರಿಸಲಾಗುತ್ತದೆ. ಪ್ರತಿ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.
 
ಸದಸ್ಯ ರಾಮರೆಡ್ಡಿ ಮಾತನಾಡಿ, ‘ತಾಲ್ಲೂಕಿನ ಹಲವು ಕಡೆ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಿ ಜಾನುವಾರಿಗೆ ಮೇವು ಒದಗಿಸುವ ಅಗತ್ಯವಿದೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಟಿ.ಸಿ.ಕಾಂತರಾಜು, ‘ತಾಲ್ಲೂಕಿನ ಹಲವು ಭಾಗಗಳಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ. ಹೆಚ್ಚುವರಿ
ಯಾಗಿ ಮೇವು ಬ್ಯಾಂಕ್‌ ತೆರೆಯುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತದೆ’ ಎಂದರು.
 
ತಾಲ್ಲೂಕು ಪಂಚಾಯ್ತಿ ಸದಸ್ಯ ಆರ್‌.ಸಮರ್ಥರಾಯ ಮಾತನಾಡಿ, ‘ಗ್ರಾಮೀಣ ಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಶ್ರೂಷಕಿಯರ ಕೊರತೆ ಇದೆ. ಜತೆಗೆ, ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲದೆ ಸಮಸ್ಯೆ ಎದುರಿಸುವಂತಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
 
‘ಹಲವು ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು  ಕ್ರಮ ಕೈಗೊಳ್ಳಲಾಗಿದೆ. ಕೆಲವು ಗ್ರಾಮಗಳಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲಾಗಿದ್ದು, ನಿಗದಿತ ಸಮಯದಲ್ಲಿ ನಿರ್ಮಾಣ ಪೂರ್ಣಗೊಳಿಸಲಾಗುತ್ತದೆ’ ಎಂದು ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಅಧಿಕಾರಿ ಸಿ.ಕೆ.ಗಿರಿಜಾಂಬಾ ಹೇಳಿದರು.
 
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೂಶ್ರೂಷಕಿಯರ ಕೊರತೆ ಬಗ್ಗೆ ಉತ್ತರಿಸಿದ ಟಿಎಚ್‌ಒ ಡಾ.ಪ್ರೇಮಸುಧಾ, ‘ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಶ್ರೂಷಕಿಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದ್ದು,  ಸಮಸ್ಯೆ ಬಗೆಹರಿಯಲಿದೆ’ ಎಂದು ಭರವಸೆ ನೀಡಿದರು.
 
ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಬಿ.ಎಲ್.ಈಶ್ವರ ಪ್ರಸಾದ್‌, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಸುವರ್ಣಮ್ಮ ವೀರೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಕರುಡಪ್ಪ, ಸದಸ್ಯರಾದ ಗದ್ದಿಗೆ ತಿಪ್ಪೇಸ್ವಾಮಿ, ಎಚ್‌.ಆಂಜನೇಯ, ಸಣ್ಣಸೂರಯ್ಯ, ಪಿ.ಶ್ರೀನಿವಾಸ್‌, ಮಲ್ಲಮ್ಮ, ರಂಜಿತಾ, ವಿಜಯಲಕ್ಷ್ಮಿ, ಉಮಾದೇವಿ, ಕೆ.ಟಿ.ತಿಪ್ಪೇಸ್ವಾಮಿ, ಡಾ.ಮಾರುತಿ, ಬಿಇಒ ರಾಜಣ್ಣ, ಆರ್ಎಫ್‌ಒ ಎಸ್‌.ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT