ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಕುಲ ಸಮಾನತೆ ತುಡಿತ ಭಾರತಕ್ಕೆ ಮಾತ್ರ

‘ಅಂಬೇಡ್ಕರ್‌ ಮತ್ತು ಮಹಿಳೆ’ ಕಾರ್ಯಗಾರ; ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಕಾಳೇಗೌಡ ನಾಗವಾರ ಅಭಿಮತ
Last Updated 22 ಏಪ್ರಿಲ್ 2017, 6:19 IST
ಅಕ್ಷರ ಗಾತ್ರ
ವಿಜಯಪುರ: ವಿಶ್ವದಲ್ಲೇ ಮನುಕುಲದ ಸಮಾನತೆ ತುಡಿತ ಇರುವುದು ಭಾರತಕ್ಕೆ ಮಾತ್ರ ಎಂದು ಮೈಸೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳೇಗೌಡ ನಾಗವಾರ ಅಭಿಮತ ವ್ಯಕ್ತಪಡಿಸಿದರು.
 
ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿ.ವಿ.ಯ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಅಂಬೇಡ್ಕರ್‌ ಜಯಂತಿ ಅಂಗವಾಗಿ ಶುಕ್ರವಾರ ನಡೆದ ‘ಅಂಬೇಡ್ಕರ್ ಮತ್ತು ಮಹಿಳೆ ಕುರಿತ’ ಕಾರ್ಯಗಾರಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.
 
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಅಂತರರಾಷ್ಟ್ರೀಯ ಸಮ್ಮೇಳನ ಆಯೋ­ಜನಾ ಸಮಿತಿ, ಅಂಬೇಡ್ಕರ್ ಜ್ಞಾನ­ದರ್ಶನ ಅಭಿಯಾನ, ಅಹಲ್ಯಾಬಾಯಿ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಅರ್ಥಶಾಸ್ತ್ರ ವಿಭಾಗ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಘಟಕದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 
ಪ್ರಕೃತಿಗೂ ಹೆಚ್ಚು ಕ್ರಿಯಾತ್ಮಕವಾದ ಅವಕಾಶವನ್ನು ಭಾರತೀಯರು ಹೆಣ್ಣು ಮಕ್ಕಳಿಗೆ ಕೊಟ್ಟಿದ್ದಾರೆ. ಹೀಗಾಗಿ  ಹೂವು, ನದಿಗಳಿಗೆ ಹೆಣ್ಣಿನ ಹೆಸರಿದೆ. ಸಮಾಜ ಹೆಣ್ಣನ್ನು ಶೀಲಶಂಕೆ, ಅತ್ಯಾ­ಚಾರ, ವಿಧವೆಯರ ಕುರಿತಿರುವ ಮೌಢ್ಯತೆ, ದೌರ್ಜನ್ಯ, ನವಮಾಸ­ಗಳಂತಹ ಪೈಶಾಚಿಕ ಕೃತ್ಯದಿಂದ ಆಗುವ ತೊಂದರೆಯನ್ನು ಸಣ್ಣ ಸಮಸ್ಯೆ ಅಲ್ಲ ಎಂದು ಅರಿತು ನಿಜವಾದ ನಾಗರಿಕತೆ ಬಯಸಿದ್ದ ಅಂಬೇಡ್ಕರ್‌, ಸಂವಿ­ಧಾನದಲ್ಲಿ ಮಹಿಳೆಯರ ಏಳಿಗೆಗಾಗಿ ಕಾನೂನು ರೂಪಿಸಿದ್ದಾರೆ ಎಂದು ಹೇಳಿದರು.
 
ಮಹಿಳಾ ವಿ.ವಿ. ಕುಲಪತಿ ಪ್ರೊ.ಸಬಿಹಾ ಮಾತನಾಡಿ ಅಂಬೇಡ್ಕರ್ ವಿಚಾರಧಾರೆಗಳನ್ನು ಯುವ ಸಮು­ದಾಯಕ್ಕೆ ತಿಳಿಸುವವರ ಅವಶ್ಯವಿದೆ. ಅವರ ಸಂದೇಶ ಪುಸ್ತಕ ಓದಿ ಎನ್ನುವುದಾಗಿತ್ತು. ಅದೇ ಅವರ ಮೂಲ ಮಂತ್ರವೂ ಸಹ ಆಗಿತ್ತು.
 
ಇದು ಬೇರೆಯವರಿಗೆ ಹೇಳುವುದಷ್ಟೇ ಅಲ್ಲದೇ ಅವರು ಅನುಸರಿಸಿದ್ದು ಇದೇ ಮಾರ್ಗ. ಓದಿದ್ದನ್ನು ಅರಗಿಸಿಕೊಂಡು, ವಿಶ್ಲೇಷಿಸಿ ಹಂಚಿಕೊಳ್ಳಬೇಕು. ಅಂತಹ ಅನುಭವ­ಗಳನ್ನು ಹಂಚಿಕೊಳ್ಳಲು ಈ ಕಾರ್ಯಗಾರ ವೇದಿಕೆಯಾಗಿದೆ ಎಂದು ಹೇಳಿದರು.
 
ಇದೇ ವೇಳೆ ಪರಿಶಿಷ್ಟ ಜಾತಿ/ಪಂಗಡದ ಘಟಕದ ವತಿಯಿಂದ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ/ಪಂಗಡದ ಅಂಗವಿಕಲ ವಿದ್ಯಾರ್ಥಿನಿಯರಿಗೆ ತ್ರಿಚಕ್ರ ವಾಹನ­ಗಳನ್ನು ಉಚಿತವಾಗಿ ವಿತರಿಸಲಾಯಿತು.
 
ಪುಣೆಯ ಬಹುಜನ ಸ್ತ್ರೀವಾದಿ ಸಾಮಾಜಿಕ ಕಾರ್ಯಕರ್ತ ಲತಾ ಪಿ.ಎಂ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಎಂ.ಮದರಿ, ಮಾನವ ಹಕ್ಕುಗಳ ಹೋರಾಟಗಾರ ಪ್ರೊ.ನಗರಿ ಬಾಬ­ಯ್ಯ, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
 
ಅಹಲ್ಯಾಬಾಯಿ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥೆ ಪ್ರೊ.ಆರ್.­ಸುನಂದಮ್ಮ ಸ್ವಾಗತಿಸಿದರು. ಡಾ.ಸುಕನ್ಯಾ ಹಾವನೂರ ಪರಿಚಯಿ­ಸಿದರು. ಡಾ.ರೇಣುಕಾ ಮಂದ್ರೂಪ ನಿರೂಪಿಸಿದರು. ಡಾ.ಸಕ್ಪಾಲ್ ಹೂವಣ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT