ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿನಂದನೆ

Last Updated 22 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ವಿವಾಹ ವಿಚ್ಛೇದನವಲ್ಲ ಸಾಮಾನ್ಯ ಘಟನೆ;
ಹೋಗಗೊಡುವುದೇ ಅದನ್ನು ಹಾಗೇ ಸುಮ್ಮನೆ?
ಆಚರಿಸಬೇಕು ಸಕಲ ಸಂಭ್ರಮದೊಡನೆ.

ಗೊತ್ತುಮಾಡಿ ಆಚರಣೆಗೆ ಒಳ್ಳೇ ಛತ್ರವನ್ನು;
ರವಾನಿಸಿ ಎಲ್ಲರಿಗೂ ಆಹ್ವಾನಪತ್ರವನ್ನು;
ಮರೆಯದೆ ಆಪ್ತೇಷ್ಟ ಎಲ್ಲ ಬಂಧುಮಿತ್ರರನ್ನೂ.

ಮೂರೇ ತಿಂಗಳು, ಹೌದು, ಇವರ ಮದುವೆಯಾಗಿ;
ಸಾಲದೇ ತಿಳಿಯಲು ಪರಸ್ಪರ ಅಳೆದು ಸುರಿದು ತೂಗಿ
ಸಾಧ್ಯವಿಲ್ಲವೆಂದು ಬಾಳ್ವೆ ಗಂಡಹೆಂಡಿರಾಗಿ.

ಅನ್ನ ಬೆಂದದ್ದಕ್ಕೆ ಸಾಕ್ಷಿ ಸಾಕು ಒಂದು ಅಗುಳು;
ರೋಗದ ಪತ್ತೆಗೆ ಬಿಂದು ರಕ್ತ, ತೊಟ್ಟು ಉಗುಳು;
ಸಾಹಚರ್ಯ ಪರೀಕ್ಷೆಗೆ ಬೇಕೆ ಮೂರು ತಿಂಗಳು?

ಆದರೂ ಇವರು ಏಗಿದ್ದಾರೆ ಹೇಗೋ ಕಷ್ಟಪಟ್ಟು:
ತಗ್ಗಿದ್ದಾರೆ ಬಗ್ಗಿದ್ದಾರೆ ನುಂಗಿ ತಮ್ಮ ಸಿಟ್ಟು;
ಗೌರವ ಮರ್ಯಾದೆಗೆಂದು ಬಿಟ್ಟುಕೊಡದೆ ಗುಟ್ಟು.

ಇಂದಿನ ಸಿನಿಮಾಗಳಂತೆ ಇಂದಿನ ಮದುವೆ:
ಬೆಳ್ಳಿಹಬ್ಬ ಬಂಗಾರದ ಹಬ್ಬ, ಇಲ್ಲ ಗೊಡವೆ;
ಇಪ್ಪತ್ತೈದನೇ ಪ್ರದರ್ಶನ, ಸಿಲ್ವರ್ ಜ್ಯುಬಿಲಿ ಅದುವೇ.
ಮದುವೆ ಎಂದರೇನು ಜೀವಾವಧಿ ಬಂಧವೇ?
ಅದೆಲ್ಲ ಹಳೆಯ ಮಾತು, ಇಂದಿಗದು ಚಂದವೇ?
ಮದುವೆಯೊಂದು ತಾತ್ಕಾಲಿಕ ಪ್ರಯೋಗವಷ್ಟೇ, ಗುರುವೇ.

ಮದುವೆಯೆಂಬ ಬೇಡಿ ಕಳಚಿ ನಿಂತಿದೆ ಈ ಜೋಡಿ;
ಬನ್ನಿ, ಆನಂದಿಸೋಣ ನಾವೆಲ್ಲರೂ ಕೂಡಿ
ಇನ್ನೊಂದು ಪ್ರಯೋಗಕ್ಕೆ ಬೇಗ ಅವರ ದೂಡಿ.

ಗೊತ್ತುಮಾಡಿ ತಡ ಮಾಡದೆ ಒಳ್ಳೇ ಛತ್ರವನ್ನು;
ರವಾನಿಸಿ ಎಲ್ಲರಿಗೂ ಆಹ್ವಾನಪತ್ರವನ್ನು;
ಮರೆಯದೆ ಆಪ್ತೇಷ್ಟ ಎಲ್ಲ ಬಂಧುಮಿತ್ರರನ್ನೂ.

ವಿವಾಹ ವಿಚ್ಛೇದನವಲ್ಲ ಸಾಮಾನ್ಯ ಘಟನೆ;
ಹೋಗಗೊಡಬಾರದು ಅದನ್ನು ಹಾಗೇ ಸುಮ್ಮನೆ;
ಆಚರಿಸಬೇಕು ಸಕಲ ಸಂಭ್ರಮದೊಡನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT