ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಕೋತಿ ಆಡುತ್ತಾ ಬೆಳೆದವ ನಾನು

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಗೊಟ್ಟಿಗೆರೆ (ಬನ್ನೇರುಘಟ್ಟ ರಸ್ತೆ) ಬಳಿ ಇರುವ ಕಾಳೇನಅಗ್ರಹಾರ ನನ್ನೂರು. ಈಗ ಅದೂ ಸಿಟಿಯ ಭಾಗವಾಗಿ ಬೆಳೆದಿದೆ. ಮೂರನೇ ತರಗತಿಯವರೆಗೆ ಮಾತ್ರ ಅಲ್ಲಿದ್ದೆವು. ನಂತರ ಬಂದು ಸೇರಿದ್ದು ಶಂಕರಪುರವನ್ನು.
 
ಅಪ್ಪ ಎಂ.ಶಾಮಣ್ಣ ಅವರು ಟೆನಿಸ್‌ ತರಬೇತುದಾರರಾಗಿದ್ದರು. ನಿತ್ಯ ನಮ್ಮೂರಿನಿಂದ ಶಂಕರಪುರದ ಮಹಿಳಾ ಸೇವಾ ಸಮಾಜದ ಟೆನಿಸ್‌ ಕ್ಲಬ್‌ನಲ್ಲಿ ಆಸಕ್ತರಿಗೆ ಟೆನಿಸ್‌ ಹೇಳಿಕೊಡಲು ಸೈಕಲ್‌ನಲ್ಲಿ ಬಂದು ಹೋಗುತ್ತಿದ್ದರು. ಆಗ ಬೆಂಗಳೂರು ರಸ್ತೆ ಎಂದರೆ ಕಾಡು. ದಾರಿಗುಂಟ ತಂಪೆರೆಯುವ ಹಸಿರು ಮರಗಳು. ಅಲ್ಲೊಂದು ಇಲ್ಲೊಂದು ಮನೆ.
 
ಒಮ್ಮೆ ಕಳ್ಳರು ಅಪ್ಪನ ಮೇಲೆ ದಾಳಿ ಮಾಡಿಬಿಟ್ಟರು. ಹೀಗಾಗಿ ಓಡಾಡುವ ಗೋಜು ಬೇಡ ಎಂದು ಮೂರೂ ಮಕ್ಕಳನ್ನು ಕರೆದುಕೊಂಡು ಬಂದು ಶಂಕರಪುರದಲ್ಲಿಯೇ ಮನೆ ಮಾಡಿದರು. ಅದಕ್ಕೂ ಮೊದಲೇ ಅಮ್ಮ ತೀರಿಹೋಗಿದ್ದರು.
 
ಟೆನಿಸ್‌ ತರಬೇತಿ ಸ್ಥಳದ ಆವರಣದಲ್ಲಿದ್ದ ಒಂದು ಚಿಕ್ಕ ಕೊಠಡಿಯಲ್ಲಿ ನಮ್ಮ ವಾಸ. ಅಣ್ಣ ನಾರಾಯಣ, ತಮ್ಮ ಗೋವಿಂದ, ನಾನು ಕೃಷ್ಣ. ಅನ್ಯೋನ್ಯವಾಗಿದ್ದೆವು. ಅಮ್ಮನಿಲ್ಲದೆ ಬೆಳೆದಿದ್ದರಿಂದ ಅಪ್ಪನೇ ಎಲ್ಲವೂ ಆಗಿದ್ದರು. ಸುತ್ತಮುತ್ತಲಿನ ಹೋಟೆಲ್‌, ಬೇಕರಿಗಳೇ ಹೊಟ್ಟೆ ತುಂಬಿಸಿಕೊಳ್ಳುವ ನೆಚ್ಚಿನ ತಾಣಗಳು.
 
ಆ ಏರಿಯಾ ಇಂದಿಗೂ ಉತ್ತಮ ಹೋಟೆಲ್‌ಗಳಿಗೆ ಹೆಸರುವಾಸಿ. ವಿದ್ಯಾರ್ಥಿ ಭವನ, ಜನತಾ ಹೋಟೆಲ್‌, ವಿ.ಬಿ.ಬೇಕರಿ, ಎಸ್‌.ಎಲ್‌.ವಿ. ಕಾರ್ನರ್‌, ಶೆಟ್ರ ಅಂಗಡಿಯ ಕೋಡುಬಳೆ, ನಿಪ್ಪಟ್ಟು... ಹೀಗೆ ಎಲ್ಲ ಹೋಟೆಲ್‌– ಬೇಕರಿಗಳಲ್ಲಿ  ಆಹಾರದ ರುಚಿ ನೋಡಿದ್ದೇನೆ. ಚಿತ್ರ ನಟರೂ ಆಗಿದ್ದ ಗೋಡೆ ಲಕ್ಷ್ಮಿನಾರಾಯಣ ಅವರ ಹೋಟೆಲ್‌ಗೆ ವಿಷ್ಣು ಸರ್‌, ಚಂದ್ರಶೇಖರ್‌ ಸೇರಿದಂತೆ ಹಲವರು ಬರುತ್ತಿದ್ದರು. ಅವರನ್ನು ನೋಡುವುದೇ ನಮಗೆ ಖುಷಿಯಾಗಿತ್ತು.
 
ನಾನು ಓದಿದ್ದು ದ್ವಿತೀಯ ಪಿಯುಸಿವರೆಗೆ ಮಾತ್ರ. ಪ್ರಾಥಮಿಕ ಶಿಕ್ಷಣ ಶಂಕರಪುರ ಶಾಲೆಯಲ್ಲಿ ನಡೆಯಿತು. ಅಲ್ಲಿಯ ಕಟ್ಟೆಯ ಮೇಲೆ ಗೆಳೆಯರೆಲ್ಲಾ ಕುಳಿತು ಆಡುತ್ತಿದ್ದ ನೆನಪು ನಿನ್ನೆ ಮೊನ್ನೆ ಎನಿಸುವಷ್ಟು ಹಸಿರಾಗಿದೆ. ಈಗ ಆ ಕಟ್ಟಡ ಸರ್ಕಾರಿ ಕಚೇರಿ ಆಗಿದೆ. ವುಮೆನ್ಸ್‌ ಪೀಸ್‌ ಲೀಗ್‌ನಲ್ಲಿ ಫ್ರೌಢಶಾಲೆ ಮುಗಿಸಿದೆ. ಎಪಿಎಸ್‌ ಸಂಜೆ ಕಾಲೇಜಿನಲ್ಲಿ ಪಿಯುಸಿಗೆ ಸೇರಿಕೊಂಡೆ.
 
ಮರಕೋತಿ ಆಟ
ನನ್ನ ಬಾಲ್ಯದ ಸುಂದರ ನೆನಪುಗಳಿರುವುದು ಶಂಕರಪುರ, ವಿ.ವಿ.ಪುರ, ಕತ್ರಿಗುಪ್ಪೆ, ಹನುಮಂತನಗರದಲ್ಲೇ. ನಾವು ವಾಸವಿದ್ದ ಜಾಗದಲ್ಲಿ ಅಪ್ಪ ಹಣ್ಣಿನ ಮರಗಳನ್ನು ಬೆಳೆಸಿದ್ದರು. ಹಣ್ಣುಗಳನ್ನು ತಿನ್ನುವುದು, ಮರಕೋತಿ ಆಡುವುದು ಮಾಮೂಲಿಯಾಗಿತ್ತು. ಅಲ್ಲೇ ದೊಡ್ಡದಾದ ಬಾವಿಯಿತ್ತು. ನಮ್ಮ ಉಪಟಳ ತಾಳಲಾರದೆ ಅದಕ್ಕೆ ಜಾಲರಿ ಹಾಕಿಸಿದ್ದರು. ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಕ್ರಿಕೆಟ್‌ ಆಡುತ್ತಿದ್ದೆವು.
 
ಹನುಮಂತನಗರ ರಾಮಾಂಜನೇಯ ಗುಡ್ಡದ ಎದುರೇ ಬಾಡಿಗೆ ಮನೆಯಲ್ಲಿ ನಾವು ಇದ್ದೆವು. ಗುಡ್ಡದಲ್ಲಿ ದೊಡ್ಡ ಮರಗಳಿದ್ದವು. ಅದರ ಮೇಲೆ ಮರಕೋತಿ ಆಡುತ್ತಿದ್ದೆವು. ನಟ ರಜನಿಕಾಂತ್‌ ಅವರು ಕೂಡ ಅಲ್ಲೇ ಆಡಿ ಬೆಳೆದವರು. ಅವರ ಅಣ್ಣನ ಮಕ್ಕಳಾದ ರಾಮಕೃಷ್ಣ, ಮಹದೇವ ಸಹ ನನ್ನೊಂದಿಗೆ ಆಡಲು ಬರುತ್ತಿದ್ದರು. ಗವಿಪುರ ಗುಡ್ಡ, ಹರೋಹರ ಗುಡ್ಡ, ಸುಬ್ರಹ್ಮಣ್ಯ ದೇವಸ್ಥಾನದ ಗುಡ್ಡಗಳೂ  ಮಕ್ಕಳ ನಲ್ಮೆಯ ತಾಣಗಳಾಗಿದ್ದವು. 
 
ನಾವೆಲ್ಲಾ ಔಟಿಂಗ್ ಹೋಗುತ್ತಿದ್ದೆವು. ತಮಾಷೆ ಮಾಡುವುದು, ವೆಜ್‌, ನಾನ್‌ವೆಜ್‌ ಅಡುಗೆ ಮಾಡಿ ಬಡಿಸುವುದು ನನ್ನದೇ ಕೆಲಸವಾಗಿತ್ತು. ಆಗೆಲ್ಲಾ ಸೈಕಲ್‌ ನನ್ನ ಸಾಥಿ. ಸಿನಿಮಾ ನಟನಾದ ಮೇಲೆಯೇ ನಾನು ಸ್ಕೂಟರ್‌ ಖರೀದಿಸಿದ್ದು.
 
ಅದು ಹಸಿರು ಹೊದ್ದ ಬೆಂಗಳೂರು, ಕೆರೆಗಳು ತುಂಬಿರುತ್ತಿದ್ದವು. ಮುಂದೆ ಕತ್ರಿಗುಪ್ಪೆಯ ಸ್ವಂತ ಮನೆಗೆ ಬಂದೆವು.  ಅಲ್ಲಿ ಹತ್ತಿರವೇ ನೀರು ಹರಿಯುತ್ತಿತ್ತು. ಅದರಲ್ಲಿಯೇ ಸ್ನಾನ ಮಾಡುತ್ತಿದ್ದೆವು. ಹೊಸಕೆರೆಹಳ್ಳಿ ಬಳಿಯ ದತ್ತಾತ್ರೆಯ ದೇವಸ್ಥಾನದ ಬಳಿಯೂ ನೀರು ಹರಿಯುತ್ತಿತ್ತು. ಅದರಲ್ಲೇ ಆಡುತ್ತಿದ್ದೆವು. ಕುಡಿಯಲೂ ಬಳಸುತ್ತಿದ್ದೆವು.
 
ಟೆನಿಸ್‌ ಕೋಚ್‌
ಟೆನಿಸ್‌ ತರಬೇತುದಾರರಾಗಿದ್ದ ಅಪ್ಪನನ್ನು ನೋಡುತ್ತಲೇ ಕಲಿತವ ನಾನು. ಚಿಕ್ಕ ವಯಸ್ಸಿನಲ್ಲಿ ಟೆನಿಸ್‌ ಕೋಚ್‌ ಕೂಡ ಆದೆ. ನಾನು ತುಂಬಾ ಶಿಸ್ತಿನ ಮನುಷ್ಯ ಆಗಿದ್ದರಿಂದ ನನ್ನನ್ನು ಕಂಡರೆ ಎಲ್ಲರೂ ಭಯ ಪಡುತ್ತಿದ್ದರು. 
 
ಮೈಕೈ ತುಂಬಿಕೊಂಡು ಸ್ಮಾರ್ಟ್‌ ಆಗಿದ್ದೆ. ಒಳ್ಳೆಯ ಕೋಚ್‌ ಬೇರೆ. ಹೀಗಾಗಿ ಹುಡುಗಿಯರಿಗೆ ನನ್ನ ಮೇಲೆ ಕಣ್ಣು. ನಾನು ಟೆನಿಸ್‌ ತರಬೇತಿ ನೀಡುತ್ತಿದ್ದರೆ, ಮೇಲೆ ನಿಂತು ಬಳಪದಿಂದನಿಂದ ಹೊಡೆಯುತ್ತಿದ್ದರು. ತಿರುಗಿ ನೋಡಿದರೆ ಕಾಲ್ಕೀಳುತ್ತಿದ್ದರು.

ನಂತರದ ದಿನಗಳಲ್ಲಿ ಅದೇ ಜಾಗದಲ್ಲಿ ಷಟಲ್‌, ಸ್ವಿಮ್ಮಿಂಗ್‌ ತರಬೇತಿಗಳೂ ಪ್ರಾರಂಭವಾದವು. ನಾನು ಷಟಲ್‌ ತರಬೇತುದಾರನೂ ಆದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರ್‌ನಲ್ಲೂ ಟೆನಿಸ್‌ ಕೋಚ್‌ ಆಗಿದ್ದೆ. ಕಾಯಂ ಮಾಡಲಿಲ್ಲ ಎಂದು ಕೆಲಸ ಬಿಟ್ಟೆ. ರೋಜರ್‌ ಬಿನ್ನಿ, ವಿಶ್ವನಾಥ, ವೆಂಗ್‌ಸರ್ಕಾರ ಎಲ್ಲಾ ಬರುತ್ತಿದ್ದರು. ಹೀಗೆ ಆಸಕ್ತರಿಗೆ ಟೆನಿಸ್‌ ಕಲಿಸುತ್ತಾ ಟೆನಿಸ್‌ ಕೃಷ್ಣ ಎಂದೇ ಖ್ಯಾತಿ ಗಳಿಸಿದೆ. 
 
 
ಸಿನಿ ಪಯಣ 
ಟೆನಿಸ್‌ ಕೋರ್ಟ್‌ ಪಕ್ಕದಲ್ಲಿ ನಾನು ರಾಜಕುಮಾರ ಅವರ ವಿವಿಧ ಭಂಗಿಗಳಲ್ಲಿ ನಿಲ್ಲುತ್ತಿದ್ದೆ. ನನ್ನ ತಮ್ಮ ನನ್ನ ನೆರಳನ್ನು ನೋಡಿ ಚಿತ್ರ ಬಿಡಿಸಬೇಕಿತ್ತು. ಸಿನಿಮಾ ಪ್ರೀತಿ ಅಂಕುರಿಸಿದ್ದು ಅಲ್ಲಿಂದಲೇ ಎನಿಸುತ್ತೆ. ನಾನು ಓದುತ್ತಿದ್ದ ಎಪಿಎಸ್‌ ಕಾಲೇಜಿನ ಹಿಂಭಾಗದಲ್ಲಿ ಮಹಿಳಾ ಮಂಡಳಿ ಶಾಲೆಯಿತ್ತು.
 
ನಟ ಸಿ.ಎಚ್‌. ಲೋಕನಾಥ ಅವರು ಅಲ್ಲಿ ನಾಟಕ ಅಭ್ಯಾಸ ಮಾಡುತ್ತಿದ್ದರು. ಅವರು ಆ ವೇಳೆಗೆ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಕಾಲೇಜಿಗೆ ಹೋಗುವ ಬದಲು ಅಲ್ಲಿಗೆ ಹೋಗಿ ಅವರ ಅಭ್ಯಾಸ ನೋಡುತ್ತಾ ನಿಲ್ಲುತ್ತಿದ್ದೆ. ಹೀಗಾಗಿ ನನಗೂ ನಾಟಕದ ಆಸೆ ಮೂಡಿತು.
 
ನಂತರ ವೇಮಗಲ್‌ ಜಗನ್ನಾಥ ಅವರು ನಾಟಕ ತಂಡಕ್ಕೆ ಸೇರಿಸಿಕೊಂಡರು. ಹನುಮಂತನಗರದಲ್ಲಿದ್ದಾಗ ಎ.ಎಸ್‌.ಮೂರ್ತಿ ಅವರು ಹುಡುಗರನ್ನೆಲ್ಲಾ ಸೇರಿಸಿ ಕಟ್ಟಿದ್ದ ನಾಟಕ ತಂಡದಲ್ಲಿ ನಾನೂ ಇದ್ದೆ. ವಿಭಿನ್ನ ದನಿಯ ವಿಶೇಷ ಹಾಸ್ಯ ಮಾಡುವ ನನ್ನೊಳಗಿನ ಪ್ರತಿಭೆಯನ್ನು ಹೊರಹಾಕಿದವರು ಎ.ಎಸ್‌.ಮೂರ್ತಿ. 
 
ಅಲ್ಲಿ ಪ್ರಕಾಶ್‌ ರೈ, ಬಿ.ಸುರೇಶ್‌ ಎಲ್ಲಾ ಇದ್ರು. ಹೀಗೆ ನಟನೆಯ ಪಟ್ಟು ಕಲಿತಿದ್ದ ನಾನು ಒಂದು ದಿನ ಗಾಂಧಿನಗರದಲ್ಲಿ ಓಡಾಡುತ್ತಿದ್ದೆ. ಅಲ್ಲಿ ಸಿಕ್ಕ ನಿರ್ದೇಶಕ ವೇಮಗಲ್‌ ಜಗನ್ನಾಥ ಅವರು ನನಗೆ ಸಹಾಯಕ ನಿರ್ದೇಶಕನ ಕೆಲಸವನ್ನೂ ಕೊಟ್ಟು, ನಟನಾಗುವ ಬಯಕೆಯನ್ನೂ ತೀರಿಸಿದರು. 
 
ಸಿಹಿಕಹಿ ಚಂದ್ರು, ವಿಶ್ವವಿಜೇತ, ಪ್ರಕಾಶ್‌ ರೈ, ರವಿಕಿರಣ್‌, ನಾನು ಎಲ್ಲಾ  ಗಾಂಧಿನಗರದ ಕಚೇರಿಯಲ್ಲಿ ಸೇರುತ್ತಿದ್ದೆವು. ಧಾರಾವಾಹಿಗಳನ್ನು ಮಾಡಿದೆವು.
ಎನ್‌.ಎಸ್‌.ರಾವ್‌ ತೀರಿಕೊಂಡ ನಂತರ ಹೊಸ ಹಾಸ್ಯ ಕಲಾವಿದರಿಗಾಗಿ ಹುಡುಕಾಟ ನಡೆದಿತ್ತು. ಎ.ಎಸ್‌.ಮೂರ್ತಿ ಗುರುತಿಸಿದ ಹಾಸ್ಯದ ದನಿಯನ್ನೇ ಮುಂದುವರೆಸಿಕೊಂಡು ಹೋದೆ. ಆ ದನಿ, ಆ ಶೈಲಿಯಿಂದಲೇ ಇಂದಿಗೂ ಈ ಟೆನಿಸ್‌ ಕೃಷ್ಣ ಜನಪ್ರಿಯ ಹಾಸ್ಯ ಕಲಾವಿದನಾಗಿ ಜನರ ಮನಸ್ಸಿನಲ್ಲಿ ನೆಲೆಸಿದ್ದಾನೆ.
ಸಂಪರ್ಕಕ್ಕೆ: namaskarakannanno@gmail.com
***
ಟೆನಿಸ್‌ ಕೃಷ್ಣ
1963ರಲ್ಲಿ ಜನಿಸಿದ ಕೃಷ್ಣ ಅವರು ಎಂ.ಶಾಮಣ್ಣ ಹಾಗೂ ಲಕ್ಷ್ಮಮ್ಮ ದಂಪತಿಯ ಎರಡನೇ ಮಗ.  ತಂದೆಯನ್ನು ನೋಡುತ್ತಲೇ ಟೆನಿಸ್‌ ಪಟ್ಟುಗಳನ್ನು ಅರಗಿಸಿಕೊಂಡ ಅವರು ಚಿಕ್ಕ ವಯಸ್ಸಿಗೇ ಕೋಚ್‌ ಆದರು. ಚಿತ್ರಕಲೆ ಅವರ ಆಸಕ್ತಿ. ರಾಧಾ ಶ್ರೀಧರ್‌ ಅವರ ಬಳಿ ಭರತನಾಟ್ಯವನ್ನೂ ಕಲಿತಿದ್ದಾರೆ.

ಅಡುಗೆ ಅವರ ನೆಚ್ಚಿನ ಹವ್ಯಾಸ. ಇತ್ತೀಚೆಗೆ ಯಕ್ಷಗಾನ ಕಲೆಯನ್ನೂ ಕಲಿತು ಹಾಸ್ಯ ಪಾತ್ರಕ್ಕೆ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ. ಹಾಸ್ಯ ಕಲಾವಿದನಾಗಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಗಾಯನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಅವರ ದನಿಯ ಅನೇಕ ಕ್ಯಾಸೆಟ್‌ಗಳು ಹೊರ ಬಂದಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT