ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವೇರಿ’ಗಾಗಿ ಕಣ್ಣೀರ ಕೋಡಿ: ಎಲ್ಲೆಡೆ ಪ್ರಾರ್ಥನೆ

ನಂಗೇನೂ ಬ್ಯಾಡ... ಮಗಳು ತೊಡಿ ಮ್ಯಾಲ ಆಡಿದ್ರ ಸಾಕು: ಹೆತ್ತವರ ಕೋರಿಕೆ
Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಝುಂಜರವಾಡ (ಅಥಣಿ ತಾಲ್ಲೂಕು): ‘ಕಾವಕ್ಕ ನೀ ಎಲ್ಲಿ ಹೋದ್ಯವ್ವಾ... ನಿನ್ನ ಎಲ್ಲಿ ಹುಡುಕ್ಲಿವಾ... ಆ ದೇವ್ರು ನಮ್ಗ ಹಿಂಗ್ಯಾಕ್‌ ಮಾಡ್ದಾ... ನನ್ನ ಬಂಗಾರಾ... ನೀ ಛಲೋ ಇರಬೇಕವ್ವಾ...’

ಶನಿವಾರ ಸಂಜೆ, ಝುಂಜರವಾಡದ ಹೊಲವೊಂದರಲ್ಲಿನ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಕಾವೇರಿಯ ಅಜ್ಜಿ ಚಂದ್ರವ್ವನ ಆಕ್ರಂದನವಿದು.
ಕೊಳವೆ ಬಾವಿಗೆ ಬಿದ್ದು 24 ತಾಸಾದರೂ ಮಗಳನ್ನು ಕಾಣದೇ ಅವ್ವ ಸವಿತಾ ಕಂಗೆಟ್ಟಿದ್ದರೆ, ಅಪ್ಪ ಅಜಿತ್‌ ಅನ್ನ– ನೀರು ಮುಟ್ಟದೇ ಮಗಳನ್ನು ನೆನೆಯುತ್ತ ಕಣ್ಣೀರಾಗಿದ್ದರು.

ಸಾಂತ್ವನ ಹೇಳಲು, ಮನೋಸ್ಥೈರ್ಯ ತುಂಬಲು ಸಂಬಂಧಿಕರು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಕುಟುಂಬದವರ ಬಳಿ ತೆರಳುತ್ತಿದ್ದಂತೆಯೇ ಅವರ ದುಃಖದ ಕಟ್ಟೆಯೊಡೆಯುತ್ತಿತ್ತು. ರೋದನ ಮುಗಿಲು ಮುಟ್ಟುತ್ತಿತ್ತು.

ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೇ ಸಂಬಂಧಿಕರು, ನೆರೆಹೊರೆಯವರು ಜಾಲಿ ಮರದ ಕೆಳಗೆ ಕುಳಿತು ಒಬ್ಬರನ್ನೊಬ್ಬರು ಸಂತೈಸುತ್ತಿದ್ದರು. ಬಾಲಕಿಯ ಉಳಿವಿಗಾಗಿ ಒಂದೆಡೆ ಪ್ರಾರ್ಥಿಸುತ್ತಿದ್ದರೆ, ಇನ್ನೊಂದೆಡೆ ಕಣ್ಣೀರ ಕೋಡಿ ಹರಿಯುತ್ತಿದ್ದ ದೃಶ್ಯಗಳು ಭಾನುವಾರವಿಡೀ ಬಾಲಕಿಯ ರಕ್ಷಣಾ ಕಾರ್ಯಾಚರಣೆ ಸ್ಥಳದಲ್ಲಿ ಗೋಚರಿಸಿದವು.

‘ನನ್ನ ಮಗಳು ಮತ್ತ ತೊಡಿ ಮ್ಯಾಲ ಆಡಬೇಕು. ಹಸದ್ರ ಉಣ್ಣಾಕ್‌ ಕೇಳಬೇಕು. ನೀರಡಿಕಿ ಆದ್ರ ನಾ ನೀರ್‌ ಕುಡ್ಸಬೇಕು... ಅಲ್ಲೀಮಟಾ ನಂಗ ಏನೂ ಬ್ಯಾಡ....’ ಎಂದು ತಾಯಿ ಸವಿತಾ ಸತತ ರೋದಿಸಿದ್ದರಿಂದ ಹಲವು ಬಾರಿ ಪ್ರಜ್ಞಾಹೀನರಾದರು. ತಕ್ಷಣವೇ ಸ್ಥಳದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಆಂಬುಲೆನ್ಸ್‌ನಲ್ಲಿ ಕರೆದೊಯ್ದು ಚಿಕಿತ್ಸೆ ನೀಡಿ, ಚೇತರಿಸಿಕೊಂಡ ಬಳಿಕ ಕುಟುಂಬದವರ ಬಳಿ ಕಳಿಸಿಕೊಟ್ಟರು. ಹೀಗೆ ಅವರು ಪ್ರಜ್ಞೆ ತಪ್ಪುವುದು, ಚಿಕಿತ್ಸೆ ನೀಡಿ ಕರೆತರುವುದು ಐದಾರು ಬಾರಿ ನಡೆಯಿತು.

ಅಜಿತ್‌ ಮಾದರ

ಅನ್ನ–ನೀರು ಬಿಟ್ಟ ಅಪ್ಪ: ‘ಅಕಿ ಭಾಳ್‌ ಶಾಣೇಕಿ ಇದ್ಲು. ದಿನಕ್ಕೆ ನಾಲ್ಕೈದು ಬಾರಿ ಹಸಿವು ಅಂತ ಊಟಕ್ಕ ಕೇಳ್ತಿದ್ಲು. ನನ್ನ ಹೆಂಡ್ತೀನೂ ಅಷ್ಟ ಕಾಳಜಿ ಮಾಡಿ ಕೇಳ್ದಾಗೆಲ್ಲ ಊಟಾ ಕೊಡಾಕಿ. ಅಂಥಾ ಮಗಳು ಕಾಣಲಾರದ ಗಂಟಲದಾಗ ಹನಿ ನೀರು–ತುತ್ತು ಅನ್ನ ಇಳೀವಲ್ದು..’ ಎಂದು ಕಾವೇರಿಯ ತಂದೆ ಅಜಿತ್‌ ಮಾದರ ಕಣ್ಣೀರಿಟ್ಟರು.

‘ನಾ ಮನಿಗೆ ಹೋಗೋದೊಂದ್‌ ತಡಾ, ಭಾರಿ ಕಾಳಜಿ ಮಾಡ್ತಿದ್ಲು. ಅಪ್ಪಾ ಕುಡ್ಯಾಕ್‌ ನೀರು ತಗೋ ಅಂತ ಕೊಡ್ತಿದ್ಲು. ಕೂಲಿ ಮಾಡಿ ದಣದ್‌ ಬಂದವನ ತೊಡಿ ಮ್ಯಾಲ ತುಸು ಹೊತ್‌ ಅಕಿ ಆಡಿದ್ಲಂದ್ರ ದಣುವು ಅನ್ನೋದು ಮರತ... ಹೋಗ್ತಿತ್ತು....’ ಎಂದು ಮಗಳ ನೆನಪಿನಲ್ಲಿ ಬಿಕ್ಕಳಿಸಿದರು.

‘ಊರಾಗ ಕೂಲಿ ಕೆಲ್ಸ ಸಿಕ್ಕಿದ್ದಿಲ್ರಿ. ಹಿಂಗಾಗಿ ಬಾಜೂ ಊರಿಗೆ ಹೋಗಿದ್ದೆ. ಸಂಜಿ ಮುಂದೆ ನಮ್ಮ ದೋಸ್ತ್‌ ಫೋನ್ಹಚ್ಚಿ ಲಗೂನ ಬಾ ಅಂದ. ಯಾಕ ಅಂದ್ರೂ ಹೇಳ್ಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಫೋನ್ಹಚ್ಚಿ ನೇರಗಿ ಶಂಕರಪ್ಪನ ಹೊಲಕ್ಕ ಬಾ ಅಂದ.

ಇಲ್ಲಿಗೆ ಬಂದಾಗನ.. ನನ್ನ ಮಗಳು ಕಾಲು ಜಾರಿ ಕುಣಿಯೊಳಗ ಬಿದ್ದಿರೋದು ಗೊತ್ತಾಯ್ತು. ಏನ್‌ ಮಾಡ್ಬೇಕು ಅನ್ನೋದ.... ತಿಳೀಲಿಲ್ಲ. ಆವಾಗಿಂದಲೂ ದಿಕ್‌ ತಿಳೀದ ಹಿಂಗ ಕೈ ಚೆಲ್ಲಿ ಕುಂತೇನಿ. ಎಲ್ಲಾ ದೇವ್ರೀಗೂ ಹರಕೆ ಹೊತ್ತೇನಿ. ಅವ್ನ...ನಮ್ಮ ಕೈ ಹಿಡ್ದು ಕಾಪಾಡ್ಬೇಕು...’ ಎಂದು ಅಜಿತ್‌ ಕೈ ಮುಗಿದು ಪ್ರಾರ್ಥಿಸಿದರು.

ಕಾಣದ ಕೊಳವೆಬಾವಿ: ಈ ದಂಪತಿ ಕೂಲಿ ಅರಸಿ ಬಾಗಲಕೋಟೆ ಜಿಲ್ಲೆಯಿಂದ ಇಲ್ಲಿಗೆ ಬಂದವರು. ಬೇಸಿಗೆ ಆರಂಭವಾದಾಗಿನಿಂದ ಕೆಲಸ ಸಿಗುವುದೂ ಕಡಿಮೆ ಆಗಿದೆ. ಹೀಗಾಗಿ ಅಜಿತ್‌ ಮಾದರ ಕೂಲಿ ಹುಡುಕಿಕೊಂಡು, ಸಿಕ್ಕಲ್ಲಿ ಕೆಲಸಕ್ಕೆ ಹೋಗುತ್ತಿದ್ದರು.

ಹೆಂಡತಿ ಸವಿತಾ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿದ್ದರು. ಶನಿವಾರ ಸಂಜೆ ತೋಟದ ವಸತಿಯಲ್ಲಿ ದೊಡ್ಡ ಮಗಳು ಅನ್ನಪೂರ್ಣಾಳನ್ನು ಬಿಟ್ಟು, ಚಿಕ್ಕವರಾದ ಕಾವೇರಿ ಹಾಗೂ ಪವನ್‌ನನ್ನು ಕರೆದುಕೊಂಡು ಕಟ್ಟಿಗೆ ಆಯಲು ಬಂದಿದ್ದರು. ಈ ಹೊತ್ತಿನಲ್ಲಿ ಮಕ್ಕಳಿಬ್ಬರೂ ಹೊಲದ ದಾರಿಯ ಪಕ್ಕದಲ್ಲಿ ಆಡುತ್ತಿದ್ದರು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಹೊಲವನ್ನು ಗಳೆ ಹೊಡೆದಿದ್ದರಿಂದ ದೊಡ್ಡ ದೊಡ್ಡ ಮಣ್ಣಿನ ಹೆಂಟೆಗಳು ಎದ್ದು ನಿಂತಿದ್ದವು. ಆ ಹೆಂಟೆಗಳ ನಡುವೆಯೇ ತೆರೆದ ಕೊಳವೆ ಬಾವಿ ಇರುವುದು ಮಕ್ಕಳಿಗೆ ತಿಳಿದಿಲ್ಲ. ಆಡುತ್ತ ಹೋದ ಕಾವೇರಿ ಕಾಲು ಜಾರಿ ಬಿದ್ದಿದ್ದಾಳೆ. ಇದನ್ನು ಕಂಡ ಆಕೆಯ ತಮ್ಮ ಪವನ ಗಾಬರಿಯಿಂದ ಚೀರಿದ್ದಾನೆ. ಮಗನ ದನಿ ಕೇಳುತ್ತಿದ್ದಂತೆಯೇ ಅಲ್ಲಿಗೆ ಧಾವಿಸಿದ ತಾಯಿಯ ಮುಂದೆ ‘ಅಕ್ಕ ಇದರಾಗ ಬಿದ್ಲು...’ ಎಂದು ಪವನ್‌ ಕುಣಿಯೊಂದನ್ನು ತೋರಿಸಿದ್ದಾನೆ.  ಕೂಡಲೇ ಮಗಳ ರಕ್ಷಣೆಗೆ ಮುಂದಾದ ಸವಿತಾ, ಹಗ್ಗವೊಂದನ್ನು ಬಿಟ್ಟು ಕಾವೇರಿಯನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಿದ್ದಾರೆ. ಅಕ್ಕಪಕ್ಕದವರು ನೆರವಿಗೆ ಬಂದರೂ ಪ್ರಯೋಜನವಾಗಲಿಲ್ಲ ಎಂದು ಅಜಿತ್‌ ಘಟನೆಯನ್ನು ವಿವರಿಸಿದರು.

ಝುಂಜರವಾಡದ ಪುನರ್ವಸತಿ ಕೇಂದ್ರದಿಂದ 500 ಮೀಟರ್‌ ದೂರದಲ್ಲಿರುವ, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಮುತ್ತೂರಿನ ಶಂಕರಪ್ಪ ಹಿಪ್ಪರಗಿ ಅವರ ಹೊಲದಲ್ಲಿ ಈ ದುರ್ಘಟನೆ ನಡೆದಿದೆ.

ಮಗಳು ಕೊಳವೆ ಬಾವಿಗೆ ಬೀಳುವ ಮುನ್ನ ಅಲ್ಲಿಯೇ ಇದ್ದ ಹೊಲದ ಮಾಲೀಕ ಶಂಕರಪ್ಪ, ನಂತರ ನಾಪತ್ತೆಯಾಗಿರುವುದಾಗಿ ಬಾಲಕಿಯ ತಂದೆ ಅಜಿತ್‌ ಮಾದರ ಹೇಳಿದರು.

‘ಜಿಲ್ಲಾಡಳಿತವನ್ನೇ ಹೊಣೆ ಮಾಡಲಿ’
ಹುಬ್ಬಳ್ಳಿ: ‘ರಾಜ್ಯದಲ್ಲಿ ಮಕ್ಕಳು ಕೊಳವೆಬಾವಿಗಳಲ್ಲಿ ಬೀಳುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿದ್ದು, ಇದನ್ನು ತಡೆಯಲು ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ‘ಈ ದುರಂತಗಳಿಗೆ ಆಯಾ ಜಿಲ್ಲಾಡಳಿತವನ್ನೇ ಹೊಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಮ್ಮ ಜಿಲ್ಲೆಯಲ್ಲಿ ಎಷ್ಟು ನಿರುಪಯುಕ್ತ ಕೊಳವೆಬಾವಿಗಳಿವೆ ಎಂಬುದು ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕೃಷಿ ಇಲಾಖೆ ಅಧಿಕಾರಿಗಳಿಗೇ ಗೊತ್ತಿರುವುದಿಲ್ಲ ಎಂದರೆ ಹೇಗೆ’ ಎಂದು ಖಾರವಾಗಿ ಪ್ರಶ್ನಿಸಿದ ಶೆಟ್ಟರ್‌, ‘ಈ ಅಧಿಕಾರಿಗಳನ್ನೇ ತಪ್ಪಿಗೆ ಹೊಣೆ ಮಾಡಿ ಶಿಕ್ಷಿಸುವಂತಹ ಕಾನೂನು ರೂಪಿಸಬೇಕು’ ಎಂದರು.

ಮಾಹಿತಿ ಇಲ್ಲ: ‘ದೆಹಲಿಯ ಜಂತರ್‌ ಮಂತರ್‌ನಲ್ಲಿ ತಮಿಳುನಾಡಿನ ರೈತರು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಶೆಟ್ಟರ್‌ ಹೇಳಿದರು.

‘ರೈತರ ಸಮಸ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸುತ್ತಲೇ ಬಂದಿದ್ದಾರೆ. ಆದರೂ, ಯಾವ ಬೇಡಿಕೆ ಇಟ್ಟುಕೊಂಡು ರೈತರು ಪ್ರತಿಭಟನೆಗೆ ಇಳಿದಿದ್ದಾರೆ ಎಂಬುದು ಗೊತ್ತಿಲ್ಲ.

ಆ ರೈತರ ಬೇಡಿಕೆಗಳ ಬಗ್ಗೆ ತಮಿಳುನಾಡಿನ ಸಂಸದರು ಪ್ರಧಾನಿಯವರಿಗೆ ಮನವರಿಕೆ ಮಾಡಬೇಕು’ ಎಂದು ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕ್ರಮದ ಭರವಸೆ
ನವದೆಹಲಿ: ತೆರೆದ ಕೊಳವೆ ಬಾವಿಯಲ್ಲಿ ಚಿಕ್ಕಮಕ್ಕಳು ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವ ದುರಂತ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಇಲ್ಲಿನ ಕರ್ನಾಟಕ ಭವನದಲ್ಲಿ ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಝುಂಜರವಾಡ ಬಳಿ ಸಂಭವಿಸಿರುವ ಶನಿವಾರ ಕೊಳವೆಬಾವಿಯಲ್ಲಿ ಸಿಲುಕಿರುವ ಬಾಲಕಿಯ ರಕ್ಷಣೆಗೆ ಕಾರ್ಯಾಚರಣೆ ನಡೆದಿದೆ. ಈ ಘಟನೆಯ ಕುರಿತು ವರದಿ ಕಳುಹಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.

ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ರೂಪಿಸುವ ಕುರಿತು, ವರದಿಯನ್ನು ಅವಲೋಕಿಸಿದ ನಂತರ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.

* ನಾ, ನಮ್ಮವ್ವ, ನಮ್ಮಕ್ಕ ಹೋಗಿದ್ವಿ. ಅವ್ವ ಕಟ್ಟಗಿ ಆಯಾಕ ಹೋದ್ಳು. ದಾರಿ ದಡದಾಗ ಆಟಾ ಆಡಾಕತ್ತಿದ್ವಿ. ಆ... ಕಡೆ ಹ್ವಾದಾಗ ಅಕ್ಕ ಕೆಳಗ್‌ ಬಿದ್ಲು. 
–ಪವನ, ಕಾವೇರಿಯ ತಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT