ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 5ರಂದು ‘ಮರಳಿ ಮನೆಗೆ’ ಚಿತ್ರ ಬಿಡುಗಡೆ

Last Updated 24 ಏಪ್ರಿಲ್ 2017, 6:25 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸ್ವರಚಿತ ಕಾದಂಬರಿ ಆಧಾರಿತ ‘ಮರಳಿ ಮನೆಗೆ’ ಕನ್ನಡ ಚಲನಚಿತ್ರ ಮೇ 5ರಂದು ರಾಜ್ಯದಾದ್ಯಂತ 50 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ’ ಎಂದು ಚಿತ್ರದ ನಿರ್ದೇಶಕ ಯೋಗೇಶ್‌ ಮಾಸ್ಟರ್‌ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಖಿಲ್‌ ಹೋಂ ಸ್ಕ್ರೀನ್‌ ಚಿತ್ರ ನಿರ್ಮಿಸಿದ್ದು, ಎಸ್.ಎನ್‌.ಲಿಂಗೇಗೌಡ, ಸುಭಾಷ್‌ ಎಲ್‌.ಗೌಡ ನಿರ್ಮಾಪಕರಾಗಿದ್ದಾರೆ. ಶೃತಿ, ಶಂಕರ್‌ ಆರ್ಯನ್‌, ಸಹನಾ, ಸುಚೇಂದ್ರಪ್ರಸಾದ್‌, ರೋಹಿತ್‌ ನಾಗೇಶ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಅರುಂಧತಿ ಜಟ್ಕರ್‌ ನಟಿಸಿದ್ದು, ಪತ್ರಕರ್ತೆ ಗೌರಿ ಲಂಕೇಶ್‌ ಮೊದಲ ಬಾರಿಗೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ’ ಎಂದರು.

‘ಮರಳಿ ಮನೆಗೆ ಕಾದಂಬರಿಯನ್ನು ನಾಟಕವಾಗಿಯೂ ಪ್ರದರ್ಶಿಸಲಾಗಿದೆ. ಸಾಹಿತ್ಯ, ಸಂಗೀತ ಹೊಣೆಯನ್ನು ನಾನೇ ನಿರ್ವಹಿಸಿದ್ದು, ಲಂಡನ್‌, ಕೆನಡಾ, ಲಾಸ್‌ ಏಂಜಲಿಸ್‌, ಪ್ರಯಾಗ, ಪೂನಾವೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ’ ಎಂದು ವಿವರಿಸಿದರು.

‘ಮರಾಠಿ ಕುಟುಂಬವೊಂದು ಪ್ರಧಾನವಾಗಿರುವ ಈ ಚಿತ್ರದಲ್ಲಿ ಮರಾಠಿ ಭಾಷೆಯ ಪ್ರಯೋಗವೂ ಇದೆ. ಅದಕ್ಕೆ ಕನ್ನಡ ಉಪಶೀರ್ಷಿಕೆಗಳನ್ನು ನೀಡಲಾಗಿದೆ. ತಿಪಟೂರು ಸಮೀಪದ ದಂಡಿನ ಶಿವರ, ಅಮ್ಮಸಂದ್ರ ಹಾಗೂ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ರಾಜ್‌ ಶಿವಶಂಕರ್‌ ಅವರು ಛಾಯಾಗ್ರಹಣ ಮಾಡಿದ್ದಾರೆ’ ಎಂದು ಹೇಳಿದರು.

‘ಸಂಬಂಧಗಳಲ್ಲಿ ಒಡಕು ಮೂಡಿದಾಗ ಸಹಜವಾಗಿ ಕುಟುಂಬದಲ್ಲಿ ತಲ್ಲಣ ಮತ್ತು ತಳಮಳಗಳು ಉಂಟಾಗುತ್ತವೆ. ಹಟಕ್ಕಿಂತ ಪ್ರೀತಿ ದೊಡ್ಡದು, ಮನಸ್ತಾಪಕ್ಕಿಂತ ಸಂಬಂಧ ದೊಡ್ಡದೆನ್ನುವ ಈ ಚಿತ್ರದಲ್ಲಿ ಮಕ್ಕಳು ಮನೆ ಬಿಟ್ಟು ಹೋದಾಗ ಪಾಲಕರು ಪಡುವ ಸಂಕಟ, ನೋವನ್ನು ಕಾಣಬಹುದು. ಅನಿವಾಸಿ ಭಾರತೀಯರಿಗೆ ಮಕ್ಕಳನ್ನು ವಿದೇಶಕ್ಕೆ ಕಳಿಸಿರುವ ಖುಷಿ ಮೊದಲು ಇರುತ್ತದೆ. ನಂತರ ಒಂಟಿತನ ಕಾಡುತ್ತದೆ. ನಿಜ ಅರ್ಥದಲ್ಲಿ ‘ಘರ್‌ ವಾಪಸಿ’ ಅಂದರೆ ಕಳ್ಳು–ಬಳ್ಳಿ ಸೇರಿಕೊಳ್ಳುವುದು ಎಂದು ವಿವೇಚಿಸುವುದು. ಚಿತ್ರ ಇದನ್ನು ಅರ್ಥೈಸುತ್ತದೆ’ ಎಂದರು.

ನಟ ಶಂಕರ್‌ ಆರ್ಯನ್‌ ಮಾತನಾಡಿ, ‘ಚಿತ್ರಕತೆ 80ರ ದಶಕದ್ದಾಗಿದೆ. ಆಧುನಿಕ ತಂತ್ರಜ್ಞಾನದಲ್ಲೂ ಅದೇ ಹಳೆಯ ಶೈಲಿಯಲ್ಲಿ ಎಲ್ಲ ಕಲಾವಿದರು ನಟಿಸಿದ್ದೇವೆ. ಪ್ರತಿಯೊಬ್ಬರೂ ಚಿತ್ರ ನೋಡಿ ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.

**

ಸ್ಟಾರ್‌ ನಟರು ಅವರ ಘನತೆಗೆ ತಕ್ಕಂತೆ ಚಿತ್ರಕತೆ ಬದಲಾಯಿಸುತ್ತಾರೆ. ಕತೆಗೆ ನ್ಯಾಯ ಸಲ್ಲಿಸುವ ಕಲಾವಿದರು ಬೇಕು. ಬಜೆಟ್‌ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ.
-ಯೋಗೇಶ್‌ ಮಾಸ್ಟರ್‌, ಮರಳಿ ಮನೆಗೆ ಚಿತ್ರದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT