ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಕುರಿತ ಕುತೂಹಲ ತಣಿಸುವ ‘ಹ್ಯಾಪಿ ಲ್ಯಾಂಡಿಂಗ್’

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಮಕ್ಕಳಿಗೆ, ವಿಮಾನ ಸದಾ ಕುತೂಹಲದ ವಸ್ತು. ಆಕಾಶದಲ್ಲಿ ಹಾರುವ ವಿಮಾನವನ್ನು ಬೆರಗುಗಣ್ಣಿನಿಂದ ನೋಡದೆ ಬಾಲ್ಯ ಕಳೆದವರು ಸಿಗುವುದು ಅಪರೂಪ.
 
ಟನ್ನುಗಟ್ಟಲೆ ಭಾರದ ವಿಮಾನ ಹೇಗೆ ಗಾಳಿಯಲ್ಲಿ ತೇಲುತ್ತದೆ, ಹಕ್ಕಿಯ ಹೋಲಿಕೆ ಇದ್ದರೂ ರೆಕ್ಕೆ ಬಡಿಯುವುದಿಲ್ಲ ಏಕೆ? ಒಂದು ವಿಮಾನ ಚಿಕ್ಕದಾಗಿದ್ದರೆ ಮತ್ತೊಂದು ದೊಡ್ಡದು. ಎಷ್ಟೊಂದು ಮಾದರಿಯ ವಿಮಾನಗಳು ಆಗಸದಲ್ಲಿ ಹಾರುತ್ತಿರುತ್ತವೆ... ಇವು ಮಕ್ಕಳಿಗಷ್ಟೆ ಅಲ್ಲ ದೊಡ್ಡವರನ್ನೂ ಕಾಡುವ ಪ್ರಶ್ನೆಗಳು.
 
ವಿಮಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆಲ್ಲಾ ಉತ್ತರಿಸುತ್ತದೆ ನಗರದ ‘ಹ್ಯಾಪಿ ಲ್ಯಾಂಡಿಂಗ್‌’ ಸಂಸ್ಥೆ. ವಿಮಾನಗಳ ಮಾದರಿ ತಯಾರಿಸಿ ಪ್ರಾಯೋಗಿಕವಾಗಿ ಹಾರಿಸಿ ತೋರಿಸಿ ವಿಮಾನದ ಬಗೆಗಿನ ಕುತೂಹಲ ತಣಿಸಲೆಂದೇ ಕಟ್ಟಲ್ಪಟ್ಟಿರುವ ಸಂಸ್ಥೆ ಇದು.
 
ಏರೋನಾಟಿಕ್‌ ಎಂಜಿನಿಯರ್‌ಗಳಾದ ಲಿಯೊ ಪೀಟರ್ ಚಾರ್ಲ್ಸ್‌ ಮತ್ತು ಪ್ರದೀಪ್ ವಿಜಯ್‌ 2015ರಲ್ಲಿ ‘ಹ್ಯಾಪಿ ಲ್ಯಾಂಡಿಂಗ್’ ಕಟ್ಟಿದರು. ಈ ಸಂಸ್ಥೆಯ ಮೂಲಕ ಇಲ್ಲಿಯವರೆಗೆ 3000ಕ್ಕೂ ಹೆಚ್ಚು ಮಕ್ಕಳಿಗೆ ವಿಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
 
 
ವಿಮಾನದ ಇತಿಹಾಸ, ಸಂಶೋಧನೆ, ಹಾರಾಟದ ಹಿಂದಿನ ವಿಜ್ಞಾನ, ವಿಮಾನದ ಎಂಜಿನ್‌ ಬಗ್ಗೆ ಮಾಹಿತಿ, ಹಾರಾಟದಲ್ಲಿರುವ ಭೌತಶಾಸ್ತ್ರ ನಿಯಮಗಳ ಬಗೆಗಿನ ಮಾಹಿತಿ, ಪೈಲೆಟ್‌ಗಳ ಕಾರ್ಯ, ವಿಮಾನದ ಭಾಗಗಳು ಇನ್ನಿತರ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ ಈ ಸಂಸ್ಥೆ.
 
ಎರೋನಾಟಿಕ್ ಎಂಜಿನಿಯರಿಂಗ್ ಮುಗಿಸಿ ಉತ್ತಮ ಕೆಲಸದಲ್ಲೇ ಇದ್ದ ಯುವಕರು, ವಿಮಾನದ ಬಗ್ಗೆ ಮಕ್ಕಳಿಗಿದ್ದ  ಕುತೂಹಲ ಗಮನಿಸಿ ‘ಹ್ಯಾಪಿ ಲ್ಯಾಂಡಿಂಗ್’ ಸ್ಟಾರ್ಟ್ ಅಪ್‌ ತೆರೆದರು.
 
‘ಯುಜನರಲ್ಲಿ ಮಾಹಿತಿ ಸಾಕಷ್ಟಿದೆ ಆದರೆ ಕೌಶಲದ ಕೊರತೆ ಇದೆ, ವಿದ್ಯಾರ್ಥಿ ದೆಸೆಯಿಂದಲೇ ಶಿಕ್ಷಣದ ಜೊತೆಗೆ ಕೌಶಲವನ್ನೂ ಕಲಿಸುವ ಪ್ರಯತ್ನ  ಮಾಡುತ್ತಿದೆ ನಮ್ಮ ಸಂಸ್ಥೆ’ ಎನ್ನುತ್ತಾರೆ ಸಂಸ್ಥಾಪಕರಲ್ಲೊಬ್ಬರಾದ ಲಿಯೊ.
 
ಇಲ್ಲಿಯವರೆಗೆ 300ಕ್ಕೂ ಹೆಚ್ಚು ಶಾಲೆಗಳಲ್ಲಿ ಕಾರ್ಯಾಗಾರಗಳನ್ನು ಮಾಡಿದ್ದಾರೆ. ಮಕ್ಕಳೇ ವಿಮಾನದ ಮಾದರಿಗಳನ್ನು ತಯಾರಿಸುವಂತೆ ತರಬೇತಿ ನೀಡುತ್ತಾರೆ.
 
ಕಾರ್ಯಾಗಾರದ ಹೊರತಾಗಿ ವಿದ್ಯಾರ್ಥಿಗಳಿಗೆ ವಿಮಾನ ತಯಾರಿಸುವ ಸ್ಪರ್ಧೆಗಳನ್ನೂ ಆಯೋಜಿಸುತ್ತಾರೆ. ಗೆದ್ದವರಿಗೆ ರಿಮೋಟ್ ಕಂಟ್ರೋಲ್ಡ್ ವಿಮಾನ ಬಹುಮಾನ. ಪ್ರಾಥಮಿಕ ಶಾಲಾ ಹಂತದ ವಿದ್ಯಾರ್ಥಿಗಳಿಂದ ಎಂಜಿನಿಯರಿಂಗ್ ವರೆಗೂ ವಿವಿಧ ತರಗತಿಯ ವಿದ್ಯಾರ್ಥಿಗಳಿಗೂ ಇವರು ಕಾರ್ಯಾಗಾರ ಆಯೋಜಿಸುತ್ತಾರೆ.
 
 
ಸುಮಾರು 23  ವಿವಿಧ ಮಾದರಿಯ ವಿಮಾನದ ಮಾದರಿಗಳು ಹ್ಯಾಪಿ ಲ್ಯಾಂಡಿಂಗ್‌ ಬಳಿ ಇವೆ. ಹೈವಿಂಗ್ ಕ್ರೇನರ್, ಎಲೆಕ್ಟ್ರಿಕ್ ಝಾಪ್, ಹನಿ ಬೀ, ಟೆಲಿಮ್ಯಾಸ್ಟ್ರೊಗಳು ಇವರ ಸಂಗ್ರಹದಲ್ಲಿರುವ ಪ್ರಮುಖ ವಿಮಾನ ಮಾದರಿಗಳು.   
 
‘ವಿಮಾನ ಚಾಲನೆಯಲ್ಲಿ ಟೇಕ್‌ಆಫ್‌ಗಿಂತ ಲ್ಯಾಂಡಿಂಗ್ ಸವಾಲಿನದ್ದು. ಹಾಗಾಗಿ ವಿಮಾನದಲ್ಲಿ ಪ್ರಯಾಣಿಸುವವರಿಗೆ ‘ಹ್ಯಾಪಿ ಲ್ಯಾಂಡಿಂಗ್’ ಎಂದು ಶುಭ ಕೋರುವ ವಾಡಿಕೆ ಇದೆ. ನಮ್ಮ ಕಾರ್ಯಾಗಾರ ಉದ್ದೇಶ ‘ಸರಿಯಾಗಿ ಗುರಿತಲುಪಲಿ’ ಎಂಬುದೇ ಆಗಿರುವುದರಿಂದ ಈ ಹೆಸರು ಇಟ್ಟಿದ್ದೇವೆ’ ಎಂದು ತಮ್ಮ ಸಂಸ್ಥೆಯ ಹೆಸರಿನ ಹಿಂದಿನ ಅರ್ಥ ಹೇಳುತ್ತಾರೆ ಸಂಸ್ಥೆಯ ಮತ್ತೊಬ್ಬ ಸಂಸ್ಥಾಪಕ ಪ್ರದೀಪ್‌.
 
 
ವಿಮಾನದ ತಾಂತ್ರಿಕ ಮಾಹಿತಿಯ ಜೊತೆಗೆ ಪೈಲೆಟ್‌, ವಿಮಾನದ ಇತರೆ ಸಿಬ್ಬಂದಿ ಮತ್ತು ಏರ್‌ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ಅವರ ಕಾರ್ಯ ಮಾಹಿತಿಯನ್ನೂ ತಿಳಿಸಿಕೊಡುತ್ತಾರೆ.   
 
‘ಶಿಕ್ಷಣ ಪೂರ್ಣಗೊಳಿಸಿದ ಮೇಲೆ ಕೌಶಲದ ಕೊರತೆಯಿಂದಾಗಿ ನಿರುದ್ಯೋಗಿಗಳಾಗದೇ ವಿದ್ಯಾರ್ಥಿ ದೆಸೆಯಲ್ಲೇ ಉತ್ತಮ ಮಾಹಿತಿ ತಿಳಿದುಕೊಳ್ಳಲಿ ಮತ್ತು ಕೌಶಲದ ಪ್ರಾಮುಖ್ಯತೆ ಮನದಟ್ಟಾಗಲಿ ಎಂಬುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ’ ಎನ್ನುತ್ತಾರೆ ಲಿಯೋ.
ಸಂಪರ್ಕಕ್ಕೆ: 95915 02007

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT