ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆನಾಡನ್ನೂ ಬಿಡದ ಬರಗಾಲ; ಹನಿ ನೀರಿಗೆ ಹಾಹಾಕಾರ

Last Updated 25 ಏಪ್ರಿಲ್ 2017, 6:57 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಳೆ ಸುರಿಸುವ ನಿತ್ಯಹರಿದ್ವರ್ಣ ಕಾಡುಗಳಿರುವ ಜಿಲ್ಲೆ ಯಲ್ಲಿ ಮೂರು ವರ್ಷಗಳಿಂದ ಸತತ ‘ಬರಗಾಲ’ ಕಾಣಿಸಿಕೊಳ್ಳುತ್ತಿದೆ. ಶತ ಮಾನದಲ್ಲೇ ಕಂಡರಿಯದ ಭೀಕರ ಬರ ವನ್ನು ಕಳೆದ ಮುಂಗಾರು ಮತ್ತು ಹಿಂಗಾರಿನಲ್ಲೂ ಜಿಲ್ಲೆಯ ಜನರು ಅನುಭವಿಸಿದ್ದಾರೆ.

ಕಾಫಿ, ಕಾಳುಮೆಣಸು, ತೆಂಗು, ಅಡಿಕೆ ಬೆಳೆಗಳು ಬರದ ತೀವ್ರತೆಗೆ ಒಣಗಿ ಹೋಗಿವೆ. ಕೆರೆಕಟ್ಟೆಗಳು, ನದಿ, ಹಳ್ಳಗಳಲ್ಲಿ ನೀರಿಲ್ಲದೆ ಜನ, ಜನವಾರು, ಪಕ್ಷಿಗಳು, ವನ್ಯಜೀವಿಗಳು ಪರದಾಡು ವಂತಾಗಿದೆ. ಕೊಳವೆ ಬಾವಿಗಳು ಬತ್ತಿ ಹೋಗಿ, ಹಳ್ಳಿ ಜನರು ಟ್ಯಾಂಕರ್‌ಗಳಲ್ಲಿ ಪೂರೈಕೆಯಾಗುವ ನೀರಿಗೆ ಕಾದು ಕುಳಿತುಕೊಳ್ಳುವಂತಾಗಿದೆ. ರೇವತಿ ಮಳೆ ಅಲ್ಲಲ್ಲಿ ಬೀಳುತ್ತಿದ್ದರೂ ಇಡೀ ಜಿಲ್ಲೆಯಾ ದ್ಯಂತ ಹಸಿರು ಚಿಗಿಯುವಷ್ಟು, ಒಣಗಿ ಹೋಗಿರುವ ಬೆಳೆಗಳಿಗೆ ಜೀವಕಳೆ ಬರು ವಷ್ಟು ಹದ ಮಳೆ ಬಂದಿಲ್ಲ. ಇನ್ನೂ 15 ದಿನಗಳಲ್ಲಿ ವಾಡಿಕೆ ಮಳೆಯಾಗದಿದ್ದರೆ ಕುಡಿಯುವ ನೀರು ಮತ್ತು ಜಾನುವಾರು ಮೇವಿನ ಸಮಸ್ಯೆ ಇನ್ನಷ್ಟು ಬಿಗಡಾಯಿ ಸುತ್ತದೆ ಎನ್ನುವ ಆತಂಕವನ್ನು ಅಧಿಕಾರಿ ಗಳು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಬರ ನಿರ್ವಹಣೆ ಸಭೆಯಲ್ಲಿ ಹೊರಹಾಕಿದರು.

ಅತಿವೃಷ್ಟಿಯಿಂದ ಬೆಳೆಹಾನಿಗೆ ತುತ್ತಾಗುತ್ತಿದ್ದ ಮೂಡಿಗೆರೆ, ಕೊಪ್ಪ ಬರಪೀಡಿತ ತಾಲ್ಲೂಕುಗಳ ಹಣೆಪಟ್ಟಿ ಹಚ್ಚಿಕೊಂಡಿದೆ. ತುಂಗಾ ನದಿ ಉಕ್ಕಿ ಹರಿದು ತಗ್ಗು ಪ್ರದೇಶಗಳು ಜಲಾವೃತ ವಾಗುತ್ತಿದ್ದ ಶೃಂಗೇರಿ ತಾಲ್ಲೂಕನ್ನೂ ಕೂಡ ಬರಪೀಡಿತ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯ ಕೂಗೆದ್ದಿದೆ ಎಂದರೆ ಜಿಲ್ಲೆಯಲ್ಲಿ ಬರದ ಭೀಕರತೆ ಹೇಗಿರಬಹುದೆಂದು ಊಹಿಸಬಹುದು.

2016ರ ಜನವರಿ 1ರಿಂದ ಡಿಸೆಂಬರ್‌ 31ರ ಅವಧಿಯಲ್ಲಿ ಜಿಲ್ಲೆ ಯಲ್ಲಿ 1757.1 ಮಿ.ಮೀ. ವಾಡಿಕೆ ಮಳೆ ಯಾಗಬೇಕಿತ್ತು. ಆದರೆ ಆಗಿದ್ದು ಮಾತ್ರ 1192.9 ಮಿ.ಮೀ ಮಳೆ. ಶೇ 32 ಮಳೆ ಪ್ರಮಾಣ ಕಡಿಮೆಯಾಗಿದೆ. ಅದ ರಲ್ಲೂ ಮಲೆನಾಡು ಪ್ರದೇಶದಲ್ಲಿ ದಟ್ಟಾರಣ್ಯ ವಿರುವ ಭಾಗದಲ್ಲಿ ಮಾತ್ರ ಉತ್ತಮ ಮಳೆಯಾಗಿದೆ. ಅರೆ ಮಲೆನಾಡು ಮತ್ತು ಬಯಲು ಸೀಮೆಯ ಬಹುತೇಕ ಭಾಗಗಳಲ್ಲಿ ಅತಿ ಕಡಿಮೆ ಮಳೆಯಾಗಿದೆ. ಕಳಸಾಪುರ, ಲಕ್ಯಾ, ಅಂಬಳೆ ಹೋಬಳಿ, ಕಡೂರು ತಾಲ್ಲೂಕಿನ ಬಹುತೇಕ ಭಾಗದಲ್ಲಿ ಅತೀ ಕಡಿಮೆ ಪ್ರಮಾಣದ ಮಳೆ ಬಿದ್ದಿದೆ. ಕೆಲವು ಗ್ರಾಮಗಳಲ್ಲಿ ಕಳೆದ ವರ್ಷ ಒಂದೆರಡು ಹದ ಮಳೆ ಬಿದ್ದಿರುವುದು ಬಿಟ್ಟರೆ ಇವತ್ತಿಗೂ ವರುಣ ಕೃಪೆ ತೋರಿಯೇ ಇಲ್ಲ.

ಚಿಕ್ಕಮಗಳೂರು ತಾಲ್ಲೂಕಿನ ಬಯಲುಸೀಮೆ ಮತ್ತು ಕಡೂರು ತಾಲ್ಲೂಕಿನಲ್ಲಿ ಜನರು ಮತ್ತು ಜಾನು ವಾರುಗಳು ಜೀವ ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ. ಕೊಳವೆ ಬಾವಿ ಗಳಲ್ಲಿ ಸಮೃದ್ಧ ನೀರು ಉಳ್ಳವರು ಮಾತ್ರ ತೋಟ ತುಡಿಕೆ ಉಳಿಸಿಕೊಂಡಿದ್ದಾರೆ. ಸರಣಿ ಕೊಳವೆ ಬಾವಿ ಕೊರೆಸಿ ನೀರು ಬಾರದೆ ಸಾಲದ ಸುಳಿಗೆ ಸಿಲುಕಿ ದವರು ಕಣ್ಣೆದುರೇ ಒಣಗಿ ಹೋದ ಕಾಫಿ, ಕಾಳು ಮೆಣಸು, ಅಡಿಕೆ, ತೆಂಗಿನ ತೋಟಗಳನ್ನು ಕೈಬಿಟ್ಟು ತಲೆಮೇಲೆ ಕೈಹೊತ್ತು, ಮುಗಿಲು ದಿಟ್ಟಿಸುತ್ತಿದ್ದಾರೆ. ‘ನಿಲ್ಲಿ ಮೋಡಗಳೇ, ನಾಲ್ಕು ಹನಿಯ ಚೆಲ್ಲಿ’ ಎಂದು ಧ್ಯಾನಿಸುವಂತಾಗಿದೆ ರೈತರ ಪರಿಸ್ಥಿತಿ.

ಈಗಾಲೇ ಜಿಲ್ಲೆಯಲ್ಲಿ ಸುಮಾರು 484 ಹಳ್ಳಿಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಾಗಿ ಜಿಲ್ಲಾ ಪಂಚಾಯಿತಿ ಗುರುತಿಸಿದೆ. ಏಪ್ರಿಲ್‌, ಮೇ ತಿಂಗಳಲ್ಲಿ ವಾಡಿಕೆ ಮಳೆ ಬಾರದಿದ್ದರೆ ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿ ಗಳ ಸಂಖ್ಯೆ ದ್ವಿಗುಣ ಅಥವಾ ತ್ರಿಗುಣ ವಾಗುವುದರಲ್ಲಿ ಸಂಶಯವಿಲ್ಲ. ವಿವಿಧ ಯೋಜನೆಯ ಅನುದಾನದಡಿ 241 ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಉಳಿದ 220 ಗ್ರಾಮಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ ನೀರು ಕೊಡಲಾಗುತ್ತಿದೆ. ಬಾಕಿ 123 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದೆ. ಇದು ಕೂಡ ‘ಆನೆ ಹೊಟ್ಟೆಗೆ ಅರೆ ಮಜ್ಜಿಗೆ’ ಎನ್ನುವಂತಾಗಿದೆ.

‘15 ದಿನಗಳಿಗೊಮ್ಮೆ 15 ಕೊಡ ನೀರು ಕೊಟ್ಟರೆ ಜೀವನ ನಡೆಸುವುದು ಹೇಗೆ?’ ಎಂದು ತರೀಕೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಸಚಿವರ ಎದುರು ಸಮಸ್ಯೆಯ ಭೀಕರತೆ ತೆರದಿಟ್ಟರೆ, ‘ವಾರಕ್ಕೊಮ್ಮೆ ಮನೆ ಗೊಂದು ಬ್ಯಾರೆಲ್‌ ನೀರು ಕೊಟ್ಟರೆ ಜನ, ಜಾನುವಾರು ಬುದುಕುವುದು ಹೇಗೆ?’ ಎಂದು ಬಯಲು ಸೀಮೆಯ ಜಿಲ್ಲಾ ಪಂಚಾಯಿತಿ ಸದಸ್ಯರು ಗೋಳು ತೋಡಿಕೊಳ್ಳುತ್ತಾರೆ.

ಇನ್ನು ಮಲೆನಾಡು ಭಾಗದಲ್ಲಿ ಜಾನು ವಾರುಗಳಿಗೆ ಮೇವಿನ ಕೊರತೆಯ ಬಾಧೆ ಅಷ್ಟಾಗಿ ತಟ್ಟಿಲ್ಲ. ಆದರೆ, ಚಿಕ್ಕಮಗಳೂರು ತಾಲ್ಲೂಕಿನ ಬಯಲು ಸೀಮೆ, ಇಡೀ ಕಡೂರು ತಾಲ್ಲೂಕು ಹಾಗೂ ತರೀಕೆರೆಯ ತಾಲ್ಲೂಕಿನ ಅಜ್ಜಂಪುರ, ಶಿವನಿ ಭಾಗದಲ್ಲಿ ಮೇವಿಲ್ಲದೆ ಬಡಕ ಲಾದ ಜಾನುವಾರು ಗಳನ್ನು ಕಣ್ಣಲ್ಲಿ ನೋಡಲಾಗದೆ, ರೈತರು ಕೇಳಿದ ಬೆಲೆ ಮಾರಾಟ ಮಾಡಿದ್ದಾರೆ. ಇದರಲ್ಲಿ ಬಹಳಷ್ಟು ಜಾನುವಾರುಗಳು ಕಸಾಯಿ ಖಾನೆಯ ಪಾಲಾಗಿವೆ. ರೈತರು, ಪಶು ಸಂಗೋಪನೆ ಮಾಡುವವರ ಕೊಟ್ಟಿಗೆ ಯಲ್ಲಿ ಅರ್ಧದಷ್ಟು ಜಾನುವಾರು ಗಳನ್ನು ಈ ಬಾರಿಯ ಬರಗಾಲ ಖಾಲಿ ಮಾಡಿಸಿಬಿಟ್ಟಿದೆ.

ಜಿಲ್ಲೆಯಲ್ಲಿ 2012ರ ಜನಗಣತಿ ಪ್ರಕಾರ ದನ, ಎಮ್ಮೆಗಳು ಸೇರಿ ಒಟ್ಟು 4,08,446 ಜಾನುವಾರುಗಳಿರುವ ಅಂಕಿ ಅಂಶ ಜಿಲ್ಲಾಡಳಿತ ನೀಡಿದೆ. ‘ಜಾನುವಾರುಗಳ ಗಣತಿ ನಡೆದೇ ಇಲ್ಲ. ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ. ನನ್ನ ಮನೆಯಲ್ಲೂ 6 ಹಸುಗಳಿವೆ. ಪಶು ಇಲಾಖೆ ಅಧಿಕಾ ರಿಗಳು ಯಾವತ್ತು ಬಂದು ನೋಡಿ ದ್ದಾರೆ? ಯಾರ ಬಳಿ ಮಾಹಿತಿ ಕಲೆ ಹಾಕಿ ದ್ದಾರೆ’ ಎಂದು ಶಾಸಕ ಸಿ.ಟಿ.ರವಿ ಅವರು ಬರ ನಿರ್ವಹಣೆ ಸಭೆಯಲ್ಲಿ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳ ಮೇಲೆ ಹರಿಹಾಯ್ದರು.

ಹೌದು, 5 ವರ್ಷಗಳ ಹಿಂದಿನ ಅಂಕಿ-ಅಂಶ ಜಿಲ್ಲಾಡಳಿತ ನೀಡಿದೆ. ಆದರೆ, ಈಗ ಪರಿಸ್ಥಿತಿ ಏನಾಗಿದೆ ಎನ್ನುವ ವಾಸ್ತವ ಅರಿಯಲು ಅಧಿಕಾರಿಗಳು ಹಳ್ಳಿಗಳತ್ತ ಮುಖ ಮಾಡಿಲ್ಲ. ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸುತ್ತಿಲ್ಲ. ಪರಿಹಾರ ಕೊಡಿಸಲು ಸ್ಪಂದಿಸುತ್ತಿಲ್ಲ ಎನ್ನುವ ಅಸಮಾಧಾನ ಪ್ರತಿ ಹಳ್ಳಿಯಲ್ಲೂ ಮನೆಮಾಡಿದೆ ಎನ್ನುವುದು ಗ್ರಾಮೀಣ ಜನರ ಆರೋಪ.

ಮಾಚೇನಹಳ್ಳಿ, ಕಳಸಾಪುರ, ಸಿಂಧಿಗೆರೆ ಭಾಗದಲ್ಲಿ ದನಕರುಗಳಿಗೆ ಹಿಡಿ ಹುಲ್ಲೂ ಇಲ್ಲದೆ, ಅಡಿಕೆ ತೋಟದಲ್ಲಿ ಒಣಗಿ ಬೀಳುವ ಅಡಿಕೆ ಹಾಳೆ ಸಿಗಿದು ತಿನ್ನಿಸುತ್ತಿದ್ದಾರೆ. ಲಕ್ಕಮ್ಮನಹಳ್ಳಿ ಮತ್ತು ಲಕ್ಯಾದಲ್ಲಿ ಈ ರೀತಿ ಅಡಿಕೆ ಹಾಳೆ ತಿಂದು ಗಂಟಲಿನಲ್ಲಿ ಸಿಲುಕಿ ಹಸುಗಳು ಜೀವ ಕಳೆದುಕೊಂಡಿವೆ ಎಂದು ಜಿಲ್ಲಾ ಪಂಚಾ ಯಿತಿ ಸದಸ್ಯ ರವೀಂದ್ರ ಬೆಳವಾಡಿ ಸಚಿವರ ಎದುರೇ ವಾಸ್ತವ ಸಂಗತಿ ತೆರೆ ದಿಟ್ಟರು. ಮೇವು ವಿತರಣಾ ಕೇಂದ್ರಗ ಳಿಂದ ಜಾನುವಾರುಗಳಿಗೆ ಸರಿಯಾಗಿ ಮೇವು ವಿತರಣೆಯಾಗುತ್ತಿಲ್ಲ ಎನ್ನುವ ಅಸಮಾಧಾನವೂ ರೈತರು ಮತ್ತು ಜನಪ್ರತಿನಿಧಿಗಳಿಂದ ವ್ಯಕ್ತವಾಗುತ್ತಿದೆ.

ಬಯಲು ಸೀಮೆಯಲ್ಲಿ ತುರ್ತಾಗಿ ಗೋಶಾಲೆ ತೆರೆಸಲು ರೈತರು ಮತ್ತು ಜನಪ್ರತಿನಿಧಿಗಳು ಒತ್ತಡ ಹೇರಿದರೂ ಜಿಲ್ಲಾಡಳಿತ ಮಣಿದಿರಲಿಲ್ಲ. ಬಯಲು ಸೀಮೆಯಲ್ಲಿ ಮೇವಿಗೆ ತತ್ವಾರ ಬಂದು ಜನರು ಅಡಿಕೆ ಹಾಳೆ ತಿನ್ನಿಸಿ ಜಾನುವಾರುಗಳ ಜೀವ ಉಳಿಸಿಕೊ ಳ್ಳುತ್ತಿರುವ ಮನಕಲಕುವ ಪರಿಸ್ಥಿತಿ ಜಗಜ್ಜಾಹೀರಾದ ಮೇಲೆ ಚಿಕ್ಕಮಗ ಳೂರು ಮತ್ತು ಕಡೂರು ತಾಲ್ಲೂಕಿನಲ್ಲಿ 2 ಗೋಶಾಲೆ ತೆರೆಯಲು ಮುಂದಾಗಿದೆ. ಕೊಡುತ್ತಿರುವ ಮೇವು ಸಾಕಾಗುತ್ತಿಲ್ಲ ಎನ್ನುವ ಕೂಗು ಹೆಚ್ಚಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ದಿನಕ್ಕೆ ಒಂದು ಜಾನುವಾರಿಗೆ ಕೊಡುತ್ತಿದ್ದ 5 ಕೆ.ಜಿ. ಮೇವನ್ನು 10 ಕೆ.ಜಿ.ಗೆ ಹೆಚ್ಚಿಸಿ, ಅಗತ್ಯ ವಿರುವ ರೈತರಿಗೆ ಮೇವು ವಿತರಿಸಲು ಸೂಚನೆ ಕೊಟ್ಟಿದ್ದಾರೆ. ಬರವನ್ನು ಸಮರೋಪಾದಿಯಲ್ಲಿ ನಿಭಾಯಿಸಲು ಜಿಲ್ಲಾಡಳಿತಕ್ಕೆ ಕಠಿಣ ಸೂಚನೆ ಕೂಡ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT