ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಖಾತೆಯಿಂದ ₹ 2.6 ಲಕ್ಷ ಎಗರಿಸಿದರು

ಆ್ಯಪ್ ಮೂಲಕ ಹಣ ವರ್ಗ
Last Updated 25 ಏಪ್ರಿಲ್ 2017, 19:50 IST
ಅಕ್ಷರ ಗಾತ್ರ

ಬೆಂಗಳೂರು:  ಬೌರಿಂಗ್ ಆಸ್ಪತ್ರೆ ವೈದ್ಯರೊಬ್ಬರ ಕ್ರೆಡಿಟ್ ಕಾರ್ಡ್‌ ವಿವರಗಳನ್ನು ಕದ್ದ ಆನ್‌ಲೈನ್ ವಂಚಕರು,  ಅವರ ಬ್ಯಾಂಕ್ ಖಾತೆಯಿಂದ  ₹ 2.6 ಲಕ್ಷವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ವೈದ್ಯ ಕಿಶೋರ್ ಮಂಗಳವಾರ ಸೈಬರ್ ಠಾಣೆಗೆ ದೂರು ಕೊಟ್ಟಿದ್ದಾರೆ.

ಕಿಶೋರ್ ಅವರ ಹೆಸರು ಹಾಗೂ ಬ್ಯಾಂಕ್ ಖಾತೆಯ ವಿವರ ಬಳಸಿಕೊಂಡು  ‘ಎಸ್‌ಬಿಐ ಇ–ಬಡ್ಡಿ’ ಆ್ಯಪ್ ಡೌನ್‌ಲೋಡ್ ಮಾಡಿರುವ ದುಷ್ಕರ್ಮಿಗಳು, ₹ 20 ಸಾವಿರದಂತೆ 13 ಸಲ ತಮ್ಮ ಖಾತೆಗೆ ಹಣ ವರ್ಗ ಮಾಡಿಕೊಂಡಿದ್ದಾರೆ.

‘ಬೇರೆ ಸಮಯದಲ್ಲಿ ವರ್ಗವಾದರೆ ಕಾರ್ಡ್‌ನ ಮೂಲ ಮಾಲೀಕರಿಗೆ ಮೊಬೈಲ್ ಸಂದೇಶದ ಮೂಲಕ ತಕ್ಷಣಕ್ಕೇ ವಿಷಯ ತಿಳಿಯುತ್ತದೆ ಎಂದು ದುಷ್ಕರ್ಮಿಗಳು ಬೆಳಗಿನ ಜಾವ 4ರಿಂದ 4.40ರ ಅವಧಿಯಲ್ಲಿ ಕೃತ್ಯ ಎಸಗಿದ್ದಾರೆ. ಈ ಸಮಯದಲ್ಲಿ ಕಿಶೋರ್  ಮಲಗಿದ್ದರಿಂದ ಸಂದೇಶ ಬಂದರೂ ಗೊತ್ತಾಗಿಲ್ಲ’ ಎಂದು ಸಿಸಿಬಿ ಡಿಸಿಪಿ ಆನಂದ್‌ ಕುಮಾರ್ ತಿಳಿಸಿದರು.

ಅವರು ಇತ್ತೀಚೆಗೆ ಆನ್‌ಲೈನ್ ಮೂಲಕ ಕೆಲ ವಸ್ತುಗಳನ್ನು ಖರೀದಿ ಮಾಡಿದ್ದರು. ಆಗ ಕಾರ್ಡ್‌ನ ವಿವರ ನೀಡಿ ಹಣ ಪಾವತಿ ಮಾಡಿದ್ದರು. ದುಷ್ಕರ್ಮಿಗಳು ಅಲ್ಲಿಂದಲೇ ಮಾಹಿತಿ ಕದ್ದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

13 ಸಿಮ್ ಬಳಕೆ:  ‘ಆ್ಯಪ್‌ ಮೂಲಕ ದಿನಕ್ಕೆ ₹ 20 ಸಾವಿರದವರೆಗೆ ಮಾತ್ರ ವಹಿವಾಟು ಮಾಡಬಹುದು. ಹೀಗಾಗಿ, ಆರೋಪಿಗಳು ಕೃತ್ಯಕ್ಕೆ 13 ಸಿಮ್ ಕಾರ್ಡ್‌ಗಳನ್ನು ಬಳಸಿದ್ದಾರೆ. ಹೊಸ ಮೊಬೈಲ್ ಸಂಖ್ಯೆಯಿಂದ ಆ್ಯಪ್ ಡೌನ್‌ಲೋಡ್ ಮಾಡಿ, ಅದಕ್ಕೆ ಕಾರ್ಡ್‌ನ ಮಾಹಿತಿಗಳನ್ನು ತುಂಬಿ ಆ್ಯಪ್ ಚಾಲೂ ಮಾಡಿದ್ದಾರೆ. ಅದರಿಂದ ₹ 20 ಸಾವಿರ ವರ್ಗವಾದ ಬಳಿಕ ಆ ಸಿಮ್ ಕಿತ್ತೆಸೆದಿದ್ದಾರೆ’ ಎಂದು ಡಿಸಿಪಿ ತಿಳಿಸಿದರು.

‘ಪುನಃ ಹೊಸ ಸಿಮ್ ಹಾಕಿ, ಮತ್ತೊಮ್ಮೆ ಆ್ಯಪ್ ಡೌನ್‌ಲೋಡ್ ಮಾಡಿದ್ದಾರೆ. ಅದರಿಂದ ಮತ್ತೆ ₹ 20 ಸಾವಿರ ವರ್ಗ ಮಾಡಿಕೊಂಡಿದ್ದಾರೆ. ಹೀಗೆ, 13 ಸಿಮ್‌ಗಳಿಂದ ₹ 2.6 ಲಕ್ಷದವರೆಗೆ ಎಗರಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

* ಸೈಬರ್ ವಂಚನೆ ಸಂಬಂಧ 3 ತಿಂಗಳಲ್ಲಿ 762 ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್ ಖಾತೆಯ ವಿವರವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು
–ಸೈಬರ್ ಪೊಲೀಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT