ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಗಿದ್ದಲ್ಲೇ ಶವವಾದ ಕಾರ್ಖಾನೆ ನೌಕರ

Last Updated 25 ಏಪ್ರಿಲ್ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು:  ರಾತ್ರಿ ಮನೆಯಲ್ಲಿ ಮಲಗಿದ್ದ ಜಗದೀಶ್ ಎಂಬ ಕಾರ್ಖಾನೆ ನೌಕರ ಬೆಳಗಾಗುವಷ್ಟರಲ್ಲಿ ಸಾವನ್ನಪ್ಪಿದ್ದರಿಂದ ಅನುಮಾನಗೊಂಡ ಅವರ ಸಂಬಂಧಿಕರು, ಸಾವಿನ ಹಿಂದೆ ಮೃತರ ಪತ್ನಿ ಪವಿತ್ರಾ ಅವರ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿ ಚಂದ್ರಾಲೇಔಟ್ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಮನೆಯಲ್ಲಿ ಸಿಂಪಡಿಸಿದ್ದ ತಿಗಣೆ ಔಷಧದ ವಾಸನೆಯಿಂದ ಪತಿ ಮೃತಪಟ್ಟಿದ್ದಾರೆ’ ಎಂದು ಪವಿತ್ರಾ ಪೊಲೀಸರಿಗೆ ತಿಳಿಸಿದ್ದಾರೆ. ‘ದಂಪತಿ ನಡುವೆ ಅನ್ಯೋನ್ಯತೆ ಇರಲಿಲ್ಲ. ಪತ್ನಿಯಿಂದಲೇ ಕೊಲೆ ನಡೆದಿರಬಹುದು’ ಎಂಬುದು ಕುಟುಂಬ ಸದಸ್ಯರ ಅನುಮಾನ.

ಮಂಡ್ಯ ಜಿಲ್ಲೆ ಬಸರಾಳು ಗ್ರಾಮದ ಜಗದೀಶ್, ದುದ್ದ ಹೋಬಳಿಯ ಪವಿತ್ರಾ ಅವರನ್ನು 10 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ಎರಡು ದಿನಗಳ ಹಿಂದೆ ಅಜ್ಜಿ ಮನೆಗೆ ಹೋಗಿದ್ದರು.

‘ಚಿಕ್ಕಮ್ಮನ ಮಗನ ಹುಟ್ಟುಹಬ್ಬದ ಆಚರಣೆಗಾಗಿ ಭಾನುವಾರ (ಏ. 23) ನಾಯಂಡಹಳ್ಳಿಯ ಅವರ ಮನೆಗೆ ಹೋಗಿದ್ದೆ. ರಾತ್ರಿ ಅಲ್ಲೇ ಉಳಿದು, ಬೆಳಿಗ್ಗೆ 8 ಗಂಟೆಗೆ ಮನೆಗೆ ಬಂದಾಗ ಪತಿ ಬೆತ್ತಲಾಗಿ ಮಲಗಿದ್ದರು. ಮುಖಕ್ಕೆ ನೀರು ಸಿಂಪಡಿಸಿದರೂ ಎದ್ದೇಳಲಿಲ್ಲ. ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಕರೆದೊಯ್ದೆ. ಪತಿ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದರು’ ಎಂದು ಪವಿತ್ರಾ ಹೇಳಿದ್ದಾರೆ.

ಶವ ವಾಪಸ್‌!: ಪತಿಯ ಸಾವಿನ ಸುದ್ದಿಯನ್ನು ಸಂಬಂಧಿಕರಿಗೂ ತಿಳಿಸದ ಪವಿತ್ರಾ, ಆಸ್ಪತ್ರೆಯ ಆಂಬುಲೆನ್ಸ್‌ನಲ್ಲೇ ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಿದ್ದರು. ಇದರಿಂದ  ಅನುಮಾನಗೊಂಡ ಸಂಬಂಧಿಗಳು, ಅದೇ ಆಂಬುಲೆನ್ಸ್‌ನಲ್ಲಿ ಶವವನ್ನು ವಾಪಸ್ ನಗರಕ್ಕೆ ತಂದರು. ಬಳಿಕ ಚಂದ್ರಾಲೇಔಟ್ ಠಾಣೆಗೆ ದೂರು ಕೊಟ್ಟರು.

‘ದೇಹದ ಮೇಲೆ ಗಾಯದ ಗುರುತುಗಳಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ‘ಅತಿಯಾದ ಮದ್ಯಸೇವನೆ, ತಿಗಣೆ ಔಷಧದ ವಾಸನೆಯಿಂದ ಉಸಿರಾಟದ ತೊಂದರೆ ಉಂಟಾಗಿದೆ’ ಎಂದು ಮೌಖಿಕ ಹೇಳಿಕೆ ಕೊಟ್ಟಿದ್ದಾರೆ. ಅಂತಿಮ ವರದಿಗೆ ಕಾಯುತ್ತಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT