ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಚಿ, ಬಣ್ಣ, ವಾಸನೆ ಮತ್ತು ಮಾತು

Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ವರರುಚಿ
ಮಾತಿಗೆ ಬಣ್ಣ, ವಾಸನೆ, ತೂಕ, ರುಚಿ ಇರುವುದಿಲ್ಲವೆನ್ನುವ ಮಾತು ತಾಂತ್ರಿಕವಾಗಿಯಷ್ಟೇ ಸರಿ. ಆಡುವ ಮಾತು ಸಂದರ್ಭಕ್ಕೆ ತಕ್ಕಂತೆ ಪಡೆಯುವ ರೂಪ ಹಾಗೂ ಅದರಿಂದಾಗುವ ಪರಿಣಾಮಕ್ಕೆ ಪುರಾಣ, ಚರಿತ್ರೆಗಳಲ್ಲಿ ಸಾಕಷ್ಟು ಉದಾಹರಣೆಗಳಿವೆ. ಇಂದಿನ ಯುವ ತಲೆಮಾರಂತೂ ಬಿಡುಬೀಸಾಗಿ ಮಾತಿನಲ್ಲಿ ತೊಡಗಿಕೊಂಡಿದೆ. ಹಗುರ ಮಾತಿಗೆ ಗೌರವ ತಂದುಕೊಡುವ ಹೊಣೆಗಾರಿಕೆ ಬಗ್ಗೆ ಈ ಬರಹ
ಎಲ್ಲರ – ವಿಶೇಷವಾಗಿ ತರುಣ ತರುಣಿಯರ ಗಮನಸೆಳೆಯುತ್ತದೆ.
****
ಸಂಪರ್ಕ ಸಾಧ್ಯತೆಗಳು ಹೆಚ್ಚುತ್ತಿದ್ದಂತೆ ಜಾತಿ ಸಂಘಟನೆಗಳು, ಧರ್ಮಾಧಾರಿತ ಬೈಠಕ್, ಸಭೆ, ಸಮಾರಂಭಗಳು, ಜಾತಿ ಹಿತಾಸಕ್ತಿಗೆ ಸಂಬಂಧಪಟ್ಟ ರ್ಯಾಲಿಗಳು, ಹಕ್ಕೊತ್ತಾಯಗಳು ಹೆಚ್ಚಾಗುತ್ತಿವೆ.

ವಾಸ್ತವಿಕ ಜಗತ್ತಿನ ಅರಿವು ಸಣ್ಣದಾಗುತ್ತ ಎಲ್ಲೆಲ್ಲೋ ಕೈಗೆಟುಕಲಾರದಷ್ಟು ದೂರದವರೂ ಇಂದು ಕಿವಿಗೆಟುಕುವಾಗ ಸುದ್ದಿ ಸಮಾಚಾರಗಳು, ಮರೆಯಬಹುದಾದ ಸಣ್ಣ–ಪುಟ್ಟ ಸಂಗತಿಗಳು, ಜಾತಿನಿಂದನೆ, ಜಾತಿಕಲಹಗಳು, ಓತಪ್ರೋತವಾಗಿ ಗಾಳಿಗೆ ತೂರುವ ಹೇಳಿಕೆಗಳು ಹೆಚ್ಚೆಚ್ಚು ರಾಜಕೀಯ ಕಾರಣಕ್ಕಾಗಿ ಚರ್ಚೆಗೊಳಗಾಗುತ್ತಿವೆ. ಬೆಳಕಿನ ಸಂಗಡವೇ ಹೊತ್ತು ಹೊತ್ತಿಗೆ ಕತ್ತಲು ಬರುತ್ತದೆ ಎಂಬುದು ಇಂದು ಸಾಮಾನ್ಯ ಸಂಗತಿಯಾಗಿ, ಕತ್ತಲನ್ನು ಬೆಳಕು ಮಾಡುವ ಹಂಬಲ ನಮ್ಮದಾಗುತ್ತಿದೆಯೇ...?
 
ತಾತ್ವಿಕವಾಗಿ ನೆರಳಿಲ್ಲದಿದ್ದರೆ ಆಕಾರಕ್ಕೆ ಅಸ್ತಿತ್ವವೇ ಇರುವುದಿಲ್ಲ. ಈ ನೆರಳು ಬೆಳಕಿನ ನಡುವೆ ಅಸಂಖ್ಯಾತ ಸಂಗತಿಗಳು ನಡೆಯುತ್ತಿದ್ದು, ಆ ಅನುಭವಗಳು ಕೂಡ ನಮ್ಮ ಅರಿವಿಗೆ ಬಾರದಷ್ಟು ಪ್ರಜ್ಞಾಹೀನವಾಗಿ ವರ್ತಿಸುವ ಸಮುದಾಯ ಪ್ರಜ್ಞೆ ಯಾವ ಬಗೆಯ ಸಮಾಜೋ ರಾಜಕೀಯ, ಸಮಾಜೋ ಧಾರ್ಮಿಕ ಸಂಸ್ಥೆಗಳನ್ನು ಕಟ್ಟಲು ಹಂಬಲಿಸುತ್ತಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಾದ್ದು ಈ ತಲೆಮಾರಿನ ನಮ್ಮೆಲ್ಲರ ಹೊಣೆಯಾಗಿದೆ.  
 
ಷೇಕ್ಸ್‌ಪಿಯರ್ ತನ್ನ ನಾಟಕಗಳಲ್ಲಿ ಗ್ರಹಿಸುವ ಜಗತ್ತು ಇಂದು ಭಿನ್ನವಾಗಿಲ್ಲ ಎಂದು ನೋಡುತ್ತ ಹೋದರೆ ರಾಜಕೀಯವಾಗಿ ಸ್ಥಿತ್ಯಂತರಗೊಳ್ಳುತ್ತಿರುವ ನವನವೀನ ಸಮಾಜ ತನ್ನ ನಾಗರಿಕತೆಯ ಅಹಮಿಕೆಯನ್ನು ಕಳಚಿಕೊಳ್ಳುತ್ತ ಬೆತ್ತಲಾಗುವ ಹೊಸ್ತಿಲಲ್ಲಿದೆ. ಅಧ್ಯಾತ್ಮವು ನಾಗರಿಕತೆಯ ಹುಟ್ಟು ಸಾವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಟಾಯ್ನಬೀ ಹೇಳುತ್ತಾನೆ.

ಆದರೆ ಬೌದ್ಧಪಂಥವೊಂದು ‘ಈ ಜಗತ್ತಿನ ಸೃಷ್ಟಿಯೊಳಗೆ ಪಂಚಮಹಾಭೂತಗಳು ಒಂದರೊಳಗೊಂದು ಬೆಸೆದುಕೊಂಡು ನಾವು ಕಾಣುತ್ತಿರುವ ವಾಸ್ತವದ ನೆಲೆಗಳು ದಿನದಿಂದ ದಿನಕ್ಕೆ ಮಾರ್ಪಾಡುಗೊಳ್ಳುತ್ತಾ ಸಾಗುತ್ತವೆ... ಹಾಗಾಗಿ ಇಲ್ಲಿ ನಾವು ಹೊಸದೇನನ್ನಾದರೂ ನಿರ್ಮಿಸಿದೆವು ಎಂಬ ಅಹಮ್ಮು ಬರೀ ಬೊಗಳೆ’ ಎಂಬುದಾಗಿ ವಿವರಿಸುತ್ತದೆ. 
 
ಇಲ್ಲಿ ಆಪತ್ತು ಎಂಬುದೇನಾದರೂ ಬರುವುದಿದ್ದರೆ ಅದು ಈ ಬರಗಾಲ, ಪ್ರವಾಹ, ಜೋರುಗಾಳಿ, ಬೆಂಕಿಮಳೆ, ಪರಕೀಯರ ದಾಳಿ, ದೇವರ ವಿಕೋಪದಿಂದ ಬರುವಂಥದ್ದಲ್ಲ. ಅದು ಈ ನಾಗರಿಕತೆಯೇ ತಂದುಕೊಳ್ಳುವ ವಿಪತ್ತು ಎಂಬುದಾಗಿ ಟಾಯ್ನಬೀ ‘ಏ ಸ್ಟಡಿ ಆಫ್ ಹಿಸ್ಟರಿ’ಯಲ್ಲಿ ಹೇಳುತ್ತಾನೆ.

ಹಗುರ ಮಾತಿನಲ್ಲಿ ಈ ಕತ್ತಲನ್ನು –ಬೆಳಕಿನ ಸೆಳೆತವನ್ನು, ಇವೆರಡರ ನಡುವೆ ನಡೆದ ತಿಕ್ಕಾಟದ ಫಲಾಫಲವನ್ನು ಜನರಿಗೆ ತಲುಪಿಸಬೇಕಾದ ತಾತ್ವಿಕ ವೈಚಾರಿಕತೆ ಎನ್ನುವುದು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಪ್ರತಿಯೊಂದಕ್ಕೂ ಅಗತ್ಯವಾದ ದಾಖಲೆ, ಅತ್ಯಗತ್ಯವಾದ ವೈಜ್ಞಾನಿಕ ವಿಶ್ಲೇಷಣೆಯ ಮಟ್ಟದಲ್ಲಿ ಚಲಿಸಲಾರದಂತೆ ನಿಂತು ಬಿಟ್ಟಿತೇನು?
 
ನಮ್ಮೊಳಗಿನ ಪ್ರೇರಕಶಕ್ತಿಯನ್ನು ಅವಲಂಬಿಸಿ ಸೃಜನಶೀಲರಾಗಬೇಕಾದ ಕವಿ–ಕಲಾವಿದರೂ ಇಂದು ಪ್ರಚೋದನೆಗೆ ಒಳಗಾಗುತ್ತಿದ್ದಾರೆಯೇ? ಆ ಪ್ರಚೋದನೆಯ ಅಫೀಮು ಯುವ ಸಮುದಾಯ ಕಟ್ಟಿಕೊಳ್ಳಲು ಬಯಸುವ ರಾಜಕೀಯ, ಸಾಮಾಜಿಕ, ಆರ್ಥಿಕ ಮೂಲದ್ದಾಗಿ ಅದು ಸೈದ್ಧಾಂತಿಕ ಮಂಡನೆಯಷ್ಟೇ ಆಗುತ್ತಿದೆ ಎಂಬಂತಾಗುತ್ತಿದೆ.
 
ಪತ್ರಿಕೆಗಳಲ್ಲಿ ಬರೆಯುವ ಒಳಪುಟದ ಲೇಖನಗಳನ್ನು ಸತತವಾಗಿ ನಾಲ್ಕೈದು ಓದಿದರೆ ಅವೆಲ್ಲವೂ ಭಾಷಾಪ್ರೌಢಿಮೆಯಿಂದಲೋ ಇಲ್ಲಾ ವಿಷಯ ನಿರೂಪಣೆಯಿಂದಲೋ ಬೇರೆಬೇರೆಯಾಗಿ ಕಾಣುತ್ತವಷ್ಟೆ! ಸಮಾನತೆ ಆಶಯ ಹೊತ್ತ ಸಂಗತಿಗಳೂ ಒಂದೇ ಪಡಿಯಚ್ಚಿನ ಮಾದರಿಯನ್ನು ಪ್ರಕಟಪಡಿಸುತ್ತವೆ.  
 
‘ಹೃದಯವುಳ್ಳ ಹಾದಿಯಲ್ಲಿ’ ಎಂಬ ಲೇಖನದಲ್ಲಿ ಯಶವಂತ ಚಿತ್ತಾಲರು ಹನೇಹಳ್ಳಿಯ ಪ್ರಚೋದನೆಯ ಬಗ್ಗೆ ಬರೆಯುತ್ತಾರೆ. ಅದರೊಡನೆ ಕೆನೆಯುತ್ತಾ ಅರಿವಿಲ್ಲದೆ ಹೊಳೆಯುವ ಒಂದೊಂದು ಸಾಲು ಮುಂದಿನ ಸಾಲಿಗೆ ಪ್ರಚೋದನೆ ಕೊಟ್ಟ ಹಾಗಿನ ಸೃಜನಶೀಲತೆ ಮೊದಲ ವಾಕ್ಯದಿಂದಲೇ ಆರಂಭವಾದರೂ ಅಲ್ಲಿ ಅರಿವು ಮತ್ತು ಇರುವಿನ ಪ್ರಜ್ಞೆ ಪ್ರತಿಮಾ ರೂಪದಲ್ಲಿ ಪ್ರಕಟಗೊಳ್ಳುವುದು ಒಂದು ನಮೂನೆಯ ಪವಾಡವಲ್ಲವೇ! 
 
ಇದೇ ಮಾದರಿಯ ಮಾಂತ್ರಿಕ ವಾಸ್ತವದ ನೆಲೆಗಟ್ಟಿನಲ್ಲಿ ನಮ್ಮ ನೆಲದ ಅನೇಕ ಸಂತರು ಬದುಕಿ ಹೋಗಿದ್ದಾರೆ. ಬೆಳೆಗೆರೆ ಕೃಷ್ಣಶಾಸ್ತ್ರಿಗಳ ‘ಯೇಗ್ದಾಗೆಲ್ಲಾ ಐತೆ’ ಕೃತಿಯ ಮುಕುಂದೂರ ಸ್ವಾಮಿಗಳು ಬದುಕಿನ ಸಕೀಲನ್ನು ಪವಾಡವೆಂದೇ ನೋಡುತ್ತಾರೆ.

ನಾಗಲಿಂಗಸ್ವಾಮಿಗಳಿಗೆ ಮೊಲೆಯುಣಿಸುವ ಸಮಗಾರ ಭೀಮವ್ವ, ಕಡಕೋಳ ಮಡಿವಾಳಪ್ಪನ ದಿವ್ಯದೃಷ್ಟಿಗೆ ಕಾಣುವ ಶರೀಫ, ಹೆಗಲ ಮೇಲಿನ ವಸ್ತ್ರವನ್ನು ಐದು ತುಂಡಾಗಿ ಹರಿದು ಪಂಚಮಹಾಭೂತಗಳಲ್ಲಿ ತೂರುವ ಸಿದ್ಧಾರೂಢರು, ಮಂಟೇಸ್ವಾಮಿ, ತಿಪ್ಪೇರುದ್ರ, ಹೀಗೆ ಹಲವಾರು ಸಂತರು ಜನಮಾನಸದಲ್ಲಿ, ಸಾಹಿತ್ಯದಲ್ಲಿ ಒಂದು ಭಾಗವಾಗಿ ಮೌಖಿಕವಾಗಿ ಕಾವ್ಯವಾಗಿದ್ದಾರೆ. 
 
ಬೆಣ್ಣೆಹಳ್ಳದ ನೀರಿನಲ್ಲಿ ಲವಣಾಂಶವಿದ್ದು, ಅಲ್ಲಿ ಚರ್ಮರೋಗವಿರುವ ಯಾರೇ ಸ್ನಾನ ಮಾಡಿದರೆ ಅಥವಾ ಆ ನೀರಿನಲ್ಲಿ ಒಂದೊಪ್ಪತ್ತು ಮುಳುಗಿ ಕುಳಿತರೆ ರೋಗ ಗುಣವಾಗುತ್ತದೆ ಎಂಬುದು ನಿಜವಾದ ವಾಸ್ತವ ಇರಬಹುದು. ಆದರೆ ಸಮುದಾಯವು ಅದನ್ನು ‘ಚಾಂಗದೇವರ ಪವಾಡ’ವೆಂದು ನಂಬುತ್ತದೆ.

ಆ ನಂಬುಗೆಯು ಹತ್ತಾರು ಹಕ್ಕುಗಳ ಸಮಾಜದ ಒಳಿತಿಗಾಗಿ ರೂಪುಗೊಂಡಿರುತ್ತವೆ. ಮೊದಲನೆಯದಾಗಿ, ದೇವರು ಎಂಬ ವಿಶ್ವಾಸವೋ ಭಯವೋ ನಾಗರಿಕನಾಗಿರಲು, ದಯಾಪರನಾಗಿರಲು ಹೆಚ್ಚು ಅವಕಾಶ ಒದಗಿಸುತ್ತದೆ. ಅಲ್ಲಿ ದೇವರನ್ನು ನಂಬಲೇಬೇಕು, ಇಂತಿಷ್ಟು ಹೊತ್ತಿಗೆ, ಇಂತಿಷ್ಟು ಪ್ರಕಾರಗಳಲ್ಲಿ ಪೂಜಿಸಲೇಬೇಕೆಂಬ ನಿಯಮ ಬಂದಲ್ಲಿ ನುಸುಳುವ ಭಕ್ತನ ಮನಸ್ಸು ಜಾಗ್ರತವಾಗಿಬಿಡುತ್ತದೆ.

ಬ್ರೆಕ್ಟ್ ತನ್ನ ‘ಗುಡ್ ವುಮೆನ್ ಆಫ್ ಸೇಜುವಾನ್’ ನಾಟಕದಲ್ಲಿ – ದೇವತೆಗಳು ಬಂದು ಸೂಳೆಯೊಬ್ಬಳಿಗೆ ಐಶ್ವರ್ಯ ಕರುಣಿಸಿ ಆಕೆಯಿಂದ ಆಟ ಆರಂಭಿಸುತ್ತಾರೆ. ಇಡೀ ನಾಟಕ ಆಸ್ತಿ ಸಂಚಯಿಸುವುದರ ಜೊತೆಗೆ ವ್ಯಯಿಸುವ ಮನುಷ್ಯನ ಭಾವನೆಗಳ ಸಂಕಲನ ವ್ಯವಕಲನದ ಲೆಕ್ಕಾಚಾರದಲ್ಲಿ ಆರಂಭವಾಗುತ್ತದೆ.
 
ಅಲ್ಲಿ ಕರುಣೆ, ವಾತ್ಸಲ್ಯ, ಪ್ರೇಮ, ನಂಬುಗೆ ಸಂಬಂಧಗಳ ಹುಸಿ ಸ್ವಭಾವವನ್ನು ನಾಟಕೀಯಗೊಳಿಸುವ ಬಗೆಯೂ ಬ್ರೆಕ್ಟ್ ಕಟ್ಟಿಕೊಂಡಿದ್ದ ಸಿದ್ಧಾಂತದಿಂದ ಪ್ರಚೋದನೆಗೊಂಡದ್ದು ಎನ್ನಲು ಸಾಧ್ಯವೇ ಇಲ್ಲ. ಅದು ಪರಿಸರದ ಪ್ರೇರಣೆ. ಪರಿಸರವೆಂಬುದು ಸೃಷ್ಟಿಸಿಕೊಂಡದ್ದು ಹೇಗೋ ಹಾಗೆ ಈ ಸಿದ್ಧಾಂತಗಳು ಕೂಡ ಇಲ್ಲಿಯೇ ರೂಪಿತವಾದವುಗಳು. 
 
ಷೇಕ್ಸ್‌ಪಿಯರ್‌ನ ‘ಮರ್ಚೆಂಟ್ ಆಫ್ ವೆನಿಸ್’ ನಾಟಕದಲ್ಲಿ ಶೈಲಾಕ್‌ಗೆ ಪೋರ್ಷಿಯಾ ಹೇಳುತ್ತಾಳೆ– ‘ಧರ್ಮಕ್ಕೆ ಶರಣಾಗು, ಧರ್ಮ ನಿನಗೆ ಕರುಣೆ ತೋರಿಸುತ್ತದೆ’ ಎಂದು. ಶೈಲಾಕ್ ಮಂಡಿಯೂರಬಲ್ಲ, ಆದರೆ ಈ ಪರಿಸರ ಸೃಷ್ಟಿಸಿಕೊಂಡ ಮತ್ತೊಂದು ಧಾರ್ಮಿಕ ಸಿದ್ಧಾಂತಕ್ಕೆ ಶರಣಾಗಲಾರ. ಅದೇ ಕಾರಣಕ್ಕೆ ಷೇಕ್ಸ್‌ಪಿಯರ್‌ ನಾಟಕಗಳು ಇಂದಿಗೂ ಪ್ರಸ್ತುತವೆನಿಸುವುದು.

ಒಂದು ಸಣ್ಣ ವ್ಯಾಜ್ಯದ ಮೂಲಕ ಎರಡು ಧರ್ಮಸಂಸ್ಥೆಗಳ ನಡುವೆ ನಾಟಕೀಯ ತಿಕ್ಕಾಟವನ್ನು ಕವಿ ಸೃಷ್ಟಿಸುತ್ತಾನೆ. ಅಲ್ಲಿನ ಶೈಲಾಕ್ ಮನಃಸ್ಥಿತಿಯ ಹೊಯ್ದಾಟ ಇಂದು ಕಡಿಮೆಯೇನಾಗಿಲ್ಲ. ಇಂದು ಬಹಳಷ್ಟು ಚರ್ಚೆ ಆಗುತ್ತಿರುವ ಸೈನಿಕನೂ ಮನುಷ್ಯನೇ ಎಂಬುದನ್ನು ಮರೆಯಬಾರದು.

ಅವನ ಅನತಿ ದೂರದಲ್ಲಿ ಶ್ರಮಿಕನಿದ್ದಾನೆ, ಶ್ರದ್ಧಾವಂತ ಶಿಕ್ಷಕನಿದ್ದಾನೆ, ಮಕ್ಕಳಿದ್ದಾರೆ, ಧಾರ್ಮಿಕ ಕೇಂದ್ರಗಳಿವೆ, ಗಾಳಿಗೂಡಿ ಓಡಾಡುವ ಅಸಂಖ್ಯಾತ ಸಂಚಾರೀ ಭಾವಗಳಿದ್ದಾವೆ. ಅವೆಲ್ಲವೂ ನಾಗರಿಕತೆಯ ಸಕೀಲನ್ನು ಅರ್ಥಮಾಡಿಕೊಳ್ಳಲು ಕೆಲವೊಂದಷ್ಟನ್ನು ನಂಬುತ್ತವೆ. ಆ ನಂಬುಗೆಗೆ ದ್ರೋಹ ಮಾಡಬಲ್ಲ ದುಷ್ಟಶಕ್ತಿಗಳೂ ಇರುತ್ತವೆ. ರಾಜಕೀಯ ಕಾರಣಕ್ಕಾಗಿ, ಸೈದ್ಧಾಂತಿಕ ನಿಲುವುಗಳಿಗೆ ಮುಖ್ಯವಾಗುವ ನಾಟಕಗಳ ಪಾತ್ರಗಳಂತೆ ಸಮಾಜವಿಲ್ಲ, ಸಮಾಜದ ಅನುಕರಣೆಯಲ್ಲಿ ಸೃಜನಶೀಲ ನಾಟ್ಯವಿದೆ. 
***
ರಾಜಕೀಯ ಕಾರಣದಿಂದ ಗೊಂದಲಕ್ಕೀಡಾಗುತ್ತಿರುವ ಇಂದಿನ ಯುವ ಸಮುದಾಯ ಅರಿವು ಮತ್ತು ಇರುವನ್ನು ಒರೆಗೆ ಹಚ್ಚಿ ಸಮಷ್ಟಿ ತತ್ವವನ್ನು ಪಡೆದುಕೊಳ್ಳಲು ಹವಣಿಸುತ್ತಿಲ್ಲ. ವಿಷಾದವೆಂದರೆ ಹಗುರ ಮಾತಿನ ಆಡಂಬರಕ್ಕೆ ಸಿಕ್ಕಿ, ಭಿನ್ನಾಭಿಪ್ರಾಯಗಳಲ್ಲಿ ಅಥವಾ ಬಹುಪರಾಕುಗಳಲ್ಲಿ ತೊಡಗಿಕೊಂಡಿದೆ. ಹೀಗೆ ಮುಂದುವರೆದರೆ ಟಾಯ್ನಬೀ ಹೇಳುವ ‘ನಾಗರಿಕತೆಯ ಅವನತಿ’  ಲಕ್ಷಣಗಳು ಗೋಚರಿಸುತ್ತಿವೆ. ಮನುಷ್ಯ ಮತ್ತು ಮನುಷ್ಯತ್ವದ ಕಡೆಗೆ ಹೆಚ್ಚು ವಾಲಬೇಕಾದ ಅಗತ್ಯ ಇಂದಿನದಾಗಿದೆ.                           
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT