ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಧಾರಾಕಾರ ಮಳೆ

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಮಳೆಯಾಗಿದೆ. ಸುರಪುರದಲ್ಲಿ ಶುಕ್ರವಾರ ರಾತ್ರಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿದ್ದಾನೆ.

ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಶನಿವಾರ ಸಂಜೆ ಮಡಿಕೇರಿ, ವಿರಾಜಪೇಟೆ, ಸುಂಟಿಕೊಪ್ಪ, ಕುಶಾಲನಗರ, ಮಾಯಮುಡಿ, ಕೋಣನಕಟ್ಟೆ, ಪೊನ್ನಪ್ಪಸಂತೆ ಭಾಗದಲ್ಲಿ ಗುಡುಗು ಸಹಿತ ರಭಸದ ಮಳೆ ಸುರಿಯಿತು.

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ ಮಳೆ ಆಗಿದೆ.

ಚಿಕ್ಕಮಗಳೂರು ನಗರದಲ್ಲಿ ಶನಿವಾರ ಮಧ್ಯಾಹ್ನ ರಭಸದಿಂದ ಮಳೆ ಸುರಿಯಿತು. ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದ್ದರಿಂದ ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. 

ಕಡೂರಿನಲ್ಲಿ ಮಳೆ: ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಶನಿವಾರ ಬಿರುಸಿನಿಂದ ಮಳೆ ಸುರಿಯಿತು. ಹಿರೇನಲ್ಲೂರು ಹೋಬಳಿಯ ಅರೇಹಳ್ಳಿ, ಬಿಸಿಲೆರೆ, ಬಾಸೂರು, ನಾಗಗೊಂಡನಹಳ್ಳಿ, ಬಿಳುವಾಲ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದು ರೈತರಿಗೆ ಸಂತಸ ತಂದಿತು.

ಕೆಲವೆಡೆ ಮಳೆ: ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಶನಿವಾರ ಗುಡುಗು ಸಹಿತ ಮಳೆಯಾಗಿದೆ. ಎರಡು ದಿನಗಳಿಂದ ಸ್ವಲ್ಪ ಮಳೆಯಾಗಿರುವ ಕಾರಣ ಬಿಸಿಲ ತಾಪ ಕಡಿಮೆಯಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೆಲಭಾಗದಲ್ಲಿ ಮಳೆಯಾಗಿದೆ. ಮಲೇಬೆನ್ನೂರು ಹೋಬಳಿಯಲ್ಲಿ ಶನಿವಾರ ಒಂದು ಗಂಟೆಗೂ ಹೆಚ್ಚುಕಾಲ ಆಲಿಕಲ್ಲು ಮಳೆಯಾಗಿದೆ.

ಚಿತ್ರದುರ್ಗ ನಗರದ ಸುತ್ತಮುತ್ತ ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ ಶನಿವಾರವೂ ಭರಣಿ ಮಳೆ ಮುಂದುವರಿದಿದೆ.

ಆಲಿಕಲ್ಲು ಮಳೆ: ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನ ಸುಮಾರು ಒಂದೂವರೆ ತಾಸು ಆಲಿಕಲ್ಲು ಸಮೇತ ಧಾರಾಕಾರ ಮಳೆ ಸುರಿದಿದೆ.

ಬೆಳಗಾವಿ ಪಕ್ಕದ ಸಾಂಬ್ರಾ, ಸೂಳೆಬಾವಿ, ಮಾರಿಹಾಳ, ನೇಸರಗಿ, ಕಡೋಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ.  ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಬೆಳಗಾಲಪೇಟೆಯಲ್ಲಿ ಸಂಜೆ ಒಂದು ತಾಸು ಆಲಿಕಲ್ಲು ಸಹಿತ ಮಳೆಯಾಗಿದೆ. ಶಿಗ್ಗಾವಿ, ಸವಣೂರು, ಬಂಕಾಪುರ, ಹಾವೇರಿ, ಗುತ್ತಲ ಬ್ಯಾಡಗಿ, ಹಿರೇಕೆರೂರಿನ ಗ್ರಾಮೀಣ ಭಾಗದಲ್ಲಿ ತುಂತುರಾಗಿ ಸುರಿದಿದೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಮಧ್ಯಾಹ್ನ ಸಾಧಾರಣ ಮಳೆಯಾಗಿದೆ. ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ತಿಕೋಟಾ ಸುತ್ತಮುತ್ತ ಕೆಲ ಕಾಲ ಬಿರುಗಾಳಿಯೊಂದಿಗೆ ರಭಸದ ಮಳೆಯಾಗಿದೆ. ತಾಂಬಾ ಸಮೀಪದ ಶಿರಕನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎಮ್ಮೆಗಳು ಮೃತಪಟ್ಟಿವೆ.

ಸಿಡಿಲು ಬಡಿದು ಯುವಕ ಸಾವು
ಯಾದಗಿರಿ ಜಿಲ್ಲೆ ಸುರಪುರ ನಗರಸಭೆ ವ್ಯಾಪ್ತಿಯ ಹಸನಾಪುರದಲ್ಲಿ ಶಿವಪ್ಪ ಭೀಮರಾಯ (35) ಸಿಡಿಲು ಬಡಿದು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

ಬೀದರ್ ನಗರದಲ್ಲಿ ಶನಿವಾರ ಸಂಜೆ ಕೆಲ ಹೊತ್ತು ಗುಡುಗು, ಮಿಂಚಿನೊಂದಿಗೆ ಮಳೆ ಸುರಿಯಿತು.

ಇಂದು ಮಳೆ ಸಾಧ್ಯತೆ
ಬೆಂಗಳೂರು:
ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಭಾನುವಾರವೂ ಗುಡುಗು, ಸಿಡಿಲುಸಹಿತ ಮಳೆಯಾಗುವ ಸಾಧ್ಯತೆ ಇದೆ.

‘ಕನ್ಯಾ­ಕುಮಾರಿಯ ದಕ್ಷಿಣ ಭಾಗದ ಕೊಮರಿನ್‌ ಪ್ರದೇಶದಿಂದ ಮಹಾರಾಷ್ಟ್ರದವರೆಗೆ ‘ಕಡಿಮೆ ಒತ್ತಡದ ತಗ್ಗು’ (ಟ್ರಫ್‌) ನಿರ್ಮಾಣವಾಗಿದೆ.

ಇದು ಕರ್ನಾಟಕದ ಒಳನಾಡು ಪ್ರದೇಶದ ಅಡ್ಡಲಾಗಿ ಹಾದು ಹೋಗಿದೆ. ಇದರಿಂದ ಶನಿವಾರ ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಉತ್ತಮ ಮಳೆಯಾಗಿದೆ. ಇದೇ ಸ್ಥಿತಿ ಮುಂದುವರಿದರೆ ಭಾನುವಾರವೂ ಮಳೆ ಬೀಳುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸುಂದರ್‌ ಎಂ. ಮೇತ್ರಿ ತಿಳಿಸಿದರು.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಎಸ್‌.ಎಸ್‌.ಎಂ.ಗವಾಸ್ಕರ್‌ ಮಾತನಾಡಿ, ‘ಮುಂಗಾರುಪೂರ್ವ ಮಳೆ ಚುರುಕಾಗಿದೆ. ಹೀಗಾಗಿ ಕೆಲವೆಡೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆ ಬೀಳುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT