ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ತರಬೇತಿ

Last Updated 30 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕ್ಯಾಂಪಸ್‌ ಆಯ್ಕೆ, ಉದ್ಯೋಗ ಮೇಳಗಳು ಈಗ ಶೈಕ್ಷಣಿಕ ಚಟುವಟಿಕೆಗಳ ಭಾಗವೇ ಆಗಿಬಿಟ್ಟಿವೆ. ಈ ಮೇಳಗಳಿಂದಾಗಿ ಕೌಶಲ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವಿವಿಧ ಕಂಪೆನಿಗಳಿಗೆ ಅನುಕೂಲವಾಗುತ್ತದೆ. ಅದೇ ರೀತಿ ತಮಗಿಷ್ಟವಾದ ಉದ್ಯೋಗವನ್ನು ಪಡೆಯಲು ವಿದ್ಯಾರ್ಥಿಗಳಿಗೂ ಅನುಕೂಲ. ಆದರೆ, ಇಂತಹ ಉದ್ಯೋಗಮೇಳಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೇ ಹೆಚ್ಚಿನ ಅವಕಾಶ ದೊರೆಯುತ್ತದೆ. ಉದ್ಯೋಗದ ಅಗತ್ಯ ಇರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತೀವ್ರತರವಾದ ಸ್ಪರ್ಧೆ ಎದುರಿಸಬೇಕಾಗುತ್ತದೆ.  ಇಂತಹ ವಿದ್ಯಾರ್ಥಿಗಳನ್ನು ಸಂದರ್ಶನಗಳಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಮಂಗಳೂರಿನ ‘ವಿಶ್ವಕೊಂಕಣಿ ಕೇಂದ್ರ’ ಕೆಲಸ ಮಾಡುತ್ತಿದೆ.

ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಸರ್ಕಾರಿ ಕಾಲೇಜುಗಳ ಮತ್ತು ಗ್ರಾಮೀಣ ಪ್ರದೇಶದ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡುತ್ತದೆ. ಮೊದಲ ಹಂತದಲ್ಲಿ, ನಿಜವಾಗಿಯೂ ಕೆಲಸದ ಅಗತ್ಯ ಇರುವ ವಿದ್ಯಾರ್ಥಿಗಳೆಷ್ಟು ಎಂಬ ಸಮೀಕ್ಷೆ ನಡೆಸಿ – ಕಾಲೇಜು ಶಿಕ್ಷಕರ ನೆರವಿನೊಂದಿಗೆ ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.

ಅವಶ್ಯಕತೆ ಮತ್ತು ಸ್ಪರ್ಧೆ

ಸಾಮಾನ್ಯವಾಗಿ ಒಂದು ಉದ್ಯೋಗ ಮೇಳಕ್ಕೆ ಆಸುಪಾಸಿನ ನಾಲ್ಕೈದು ಕಾಲೇಜುಗಳಲ್ಲಿ ಪದವಿ ತರಗತಿಯ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬರುತ್ತಾರೆ. ಪ್ರತಿಭಾವಂತರನ್ನು ಗುರುತಿಸಿ, ಸೂಕ್ತವೆನಿಸುವ ಅವಕಾಶಗಳನ್ನು ಕಂಪೆನಿಗಳು ಆಯ್ಕೆಯಾದವರ ಮುಂದಿಡುತ್ತವೆ. ಆದರೆ, ಈ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳದ ಹೊರತಾಗಿಯೂ ಕೆಲಸ ಗಿಟ್ಟಿಸಿಕೊಳ್ಳುವ ಛಾತಿ ಇರುತ್ತದೆ. ಅಂಕಗಳು, ಸಂದರ್ಶನವನ್ನು ಎದುರಿಸುವ ಕೌಶಲ ಇರುವ ಹಲವಾರು ವಿದ್ಯಾರ್ಥಿಗಳ ನಡುವೆಯೇ ಬಿಗಿಯಾದ ಸ್ಪರ್ಧೆ ಏರ್ಪಡುತ್ತದೆ. ಇವರ ಮಧ್ಯೆ ಆರ್ಥಿಕವಾಗಿ ಸಂಕಷ್ಟ ಎದುರಿಸುವ ಕುಟುಂಬದಿಂದ ಬಂದಿರುವ, ಹೆಚ್ಚೇನೂ ಅಂಕ ಗಳಿಸಲು ಪೂರಕ ವಾತಾವರಣ ಇಲ್ಲದೇ – ಒಂದಿಷ್ಟು ಅಂಕಗಳೊಂದಿಗೆ ಉದ್ಯೋಗ ಮೇಳಕ್ಕೆ ಬರುವ ಗ್ರಾಮೀಣ ಪ್ರದೇಶದ ಬೃಹತ್‌ ಸಂಖ್ಯೆಯ ವಿದ್ಯಾರ್ಥಿಗಳು ಅಲ್ಲಿರುತ್ತಾರೆ. ಅವರು ಪ್ರಖರ ಪ್ರತಿಭೆಗಳ ಸ್ಪರ್ಧೆಯ ನಡುವೆ ಹಿಂದೆ ಸರಿದು ಹೋಗುತ್ತಾರೆ. ಮೊದಲೆರಡು ಸುತ್ತಿನಲ್ಲಿಯೇ ಅವಕಾಶಗಳನ್ನು ಬಾಚಿಕೊಂಡ ಪ್ರತಿಭಾವಂತ ವಿದ್ಯಾರ್ಥಿಗಳು ಹಲವು ಆಯ್ಕೆಗಳನ್ನು ತಮ್ಮ ಮುಂದೆ ಹರಡಿಕೊಂಡಿರುತ್ತಾರೆ. ಹೀಗೆ ಅವಕಾಶಗಳನ್ನು ಪಡೆದ ಪ್ರತಿಭಾವಂತರಾದ ಹಲವಾರು ವಿದ್ಯಾರ್ಥಿಗಳ ಮುಂದೆ, ಶಿಕ್ಷಣ ಮುಂದುವರೆಸುವ ಮತ್ತೊಂದು ಅವಕಾಶವೂ ಇರುತ್ತದೆ ಎನ್ನುವುದನ್ನು ಗಮನಿಸಬೇಕು.

ಹಾಗಾದರೆ ಕೆಲಸದ ಅಗತ್ಯ ಇರುವ, ಕೌಶಲದ ವಿಚಾರದಲ್ಲಿ ಸ್ವಲ್ಪ ಹೆಚ್ಚುವರಿ ತರಬೇತಿಯ ಅಗತ್ಯ ಇರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಕಲ್ಪಿಸುವುದಾದರೂ ಹೇಗೆ? ಈ ನಿಟ್ಟಿನಲ್ಲಿ ದೀರ್ಘ ಅಧ್ಯಯನ ನಡೆಸಿದ ‘ವಿಶ್ವ ಕೊಂಕಣಿ ಕೇಂದ್ರ’ ಸಮಾಜಮುಖಿ ಹೆಜ್ಜೆ ಇಟ್ಟಿದೆ. 

ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಅಧ್ಯಯನದ ಉದ್ದೇಶದೊಂದಿಗೆ ಆರಂಭವಾದ ‘ವಿಶ್ವ ಕೊಂಕಣಿ ಕೇಂದ್ರ’, ಆರಂಭದಲ್ಲಿ ಕೊಂಕಣಿ ಭಾಷೆ ಮಾತನಾಡುವ ವಿವಿಧ ಸಮುದಾಯಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಶುರು ಮಾಡಿತು. ಕೊಂಕಣಿ ಮಾತನಾಡುವ ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತ ಆಗಬಾರದು ಎಂಬ ಕಾರಣಕ್ಕಾಗಿ, ವಿದ್ಯಾರ್ಥಿಗಳನ್ನು ಹುಡುಕಿ ಅವರಿಗೆ ವಿದ್ಯಾರ್ಥಿ ವೇತನ ನೀಡಲಾರಂಭಿಸಿತು. ‘ಕ್ಷಮತಾ’ ಎಂಬ ಹೆಸರಿನಲ್ಲಿ ಈ ಯೋಜನೆ ಯಶಸ್ವಿಯಾಯಿತು.

ಕೊಂಕಣಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ, ಉದ್ಯೋಗ ಕ್ಷೇತ್ರಕ್ಕೆ ಬೇಕಾದ ಪೂರ್ವತಯಾರಿ ಒದಗಿಸುವ  ಹಲವು ತರಗತಿಗಳನ್ನು ಕೇಂದ್ರ ಉಚಿತವಾಗಿ ನಡೆಸುತ್ತಿದೆ. 2010ರಿಂದ ಈವರೆಗೆ ₹ 15 ಕೋಟಿ ವಿದ್ಯಾರ್ಥಿ ವೇತನ ವಿತರಿಸಿದ್ದು, ಹೀಗೆ ವಿದ್ಯಾರ್ಥಿ ವೇತನ ಪಡೆದ ‘ಹಳೆಯ ವಿದ್ಯಾರ್ಥಿ ಸಂಘ’ವೇ ಈಗ ರೂಪುಗೊಂಡಿದೆ. ಈ ಯೋಜನೆ ಈಗಲೂ ಮುಂದುವರೆದಿದೆ.

ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ತರಬೇತಿ

ಉದ್ಯೋಗ ಹೊಂದಲು ಅನುಕೂಲವಾಗುವ ತರಬೇತಿ ಕೇವಲ ಕೊಂಕಣಿ ವಿದ್ಯಾರ್ಥಿಗಳಿಗೆ ಸೀಮಿತವಾಗದೆ, ಇತರ ಸಮುದಾಯಗಳಲ್ಲಿ ಇರುವ ಅವಕಾಶ ವಂಚಿತ ವಿದ್ಯಾರ್ಥಿಗಳಿಗೂ ದೊರೆಯಲಿ ಎಂಬ ಆಶಯದಿಂದ ಕಳೆದ ವರ್ಷದಿಂದ ಸಂಸ್ಥೆ ಹೊಸ ಹೆಜ್ಜೆ ಇಟ್ಟಿದೆ. ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೂ ತನ್ನ ತರಬೇತಿ ಚಟುವಟಿಕೆಗಳನ್ನು ವಿಸ್ತರಿಸಿದೆ. ‘ಕ್ಷಮತಾ ಯು ಗೆಟಿನ್‌’ ಎಂಬ ಹೆಸರಿನಲ್ಲಿ ನಡೆಯುವ ತರಬೇತಿ ವಿಭಿನ್ನವಾಗಿದೆ. ವಸತಿ ಸಹಿತ ಒಂದು ವಾರದ ಈ ತರಬೇತಿಯ ಸಂಪೂರ್ಣ ವೆಚ್ಚವನ್ನು ‘ಜ್ಯೋತಿ ಲ್ಯಾಬೊರೆಟರೀಸ್‌’ ಜಂಟಿ ವ್ಯವಸ್ಥಾಪಕ ನಿರ್ದೇಶಕ ಉಲ್ಲಾಸ್‌ ಕಾಮತ್‌ ಭರಿಸುತ್ತಿದ್ದಾರೆ.

ಬೆಳಿಗ್ಗೆ ಯೋಗದೊಂದಿಗೆ ಆರಂಭವಾಗುವ ತರಬೇತಿಯಲ್ಲಿ ಸಂವಹನ ಕೌಶಲ, ಇಂಗ್ಲಿಷ್‌ ಗ್ರಹಿಕೆ, ತಕ್ಕಮಟ್ಟಿಗೆ ಇಂಗ್ಲಿಷ್‌ನಲ್ಲಿ ಮಾತನಾಡುವುದು, ರೆಸ್ಯೂಮ್‌ ಬರೆಯುವುದು, ಸಂದರ್ಶನದ ರೀತಿ ರಿವಾಜು, ಕಚೇರಿಗೆ ಎಂಥ ಉಡುಪು ಧರಿಸಬೇಕು, ಊಟ, ತಿಂಡಿ, ಸ್ವಚ್ಛತೆಯಲ್ಲಿ ಸೌಜನ್ಯಯುತವಾಗಿ ಹೇಗೆ ವರ್ತಿಸಬೇಕು ಎಂಬ ತರಬೇತಿ ನೀಡಲಾಗುತ್ತದೆ. ‘ಐಪಾಯಿಂಟ್‌ ಸೊಲ್ಯೂಷನ್‌’ನ ಪ್ರದೀಪ್‌ ಶೆಣೈ ಈ ತರಬೇತಿಯನ್ನು ವಿನ್ಯಾಸಗೊಳಿಸಿದ್ದಾರೆ. ತರಬೇತಿ ಪಡೆದ ವಿದ್ಯಾರ್ಥಿಗಳಿಗೆಂದು ಒಂದು ಉದ್ಯೋಗ ಮೇಳವನ್ನೂ ಆಯೋಜಿಸಲಾಗುತ್ತದೆ. ಕೆಲಸವನ್ನು ಕಲಿಯಬಲ್ಲ ಅಭ್ಯರ್ಥಿ ಎಂಬ ಅರಿವು ಸಂದರ್ಶಕರಿಗೆ ಬಂದಲ್ಲಿ ಕೆಲಸ ನೀಡಲು ಕಂಪೆನಿಗಳು ಮುಂದಾಗುತ್ತವೆ.

‘ಭಾಷೆಯ ಸಮಸ್ಯೆ, ಹೊಸ ಪರಿಸರದಲ್ಲಿ ಹೊಂದಿಕೊಳ್ಳುವ ಸಮಸ್ಯೆಯನ್ನು ದಾಟಿ ಬಂದಕೂಡಲೇ ಈ ಅಭ್ಯರ್ಥಿಗಳು ಅದ್ಭುತವಾದ ಸಾಧನೆಯನ್ನೇ ಮಾಡುತ್ತಾರೆ’ ಎಂದು ‘ವಿಶ್ವಕೊಂಕಣಿ ಕೇಂದ್ರ’ದ ಸಹಾಯಕ ನಿರ್ದೇಶಕ ಗುರುದತ್‌ ಬಂಟ್ವಾಳ್‌ಕರ್‌ ಹೇಳುತ್ತಾರೆ.

**

ರಾಜ್ಯಕ್ಕೆ ವಿಸ್ತರಿಸುವ ಆಕಾಂಕ್ಷೆ
ಸಚಿವ ಆರ್‌.ವಿ. ದೇಶಪಾಂಡೆ ಅವರ ಸಲಹೆಯ ಮೇರೆಗೆ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕುಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ‘ವಿಶ್ವಕೊಂಕಣಿ ಕೇಂದ್ರ’ ಒಪ್ಪಿಕೊಂಡಿದೆ.

ಜೋಯಿಡಾ, ಭಟ್ಕಳ, ಹೊನ್ನಾವರ, ಕುಮಟಾ, ದಾಂಡೇಲಿ, ಹಳಿಯಾಳ ಪ್ರದೇಶದ ವಿದ್ಯಾರ್ಥಿಗಳಿಗೆ ತರಬೇತಿ ಸದ್ಯದಲ್ಲಿಯೇ ನಡೆಯಲಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ತರಬೇತಿ ನೀಡುವ ಈ ಹೆಜ್ಜೆಯನ್ನು ರಾಜ್ಯದ ವಿವಿಧೆಡೆಗೆ ವಿಸ್ತರಿಸುವ ಉದ್ದೇಶ ಕೇಂದ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT