ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: ಈ ತಿಂಗಳೂ ಸಂಚಾರ ಅನುಮಾನ

ಉತ್ತರ– ದಕ್ಷಿಣ ಕಾರಿಡಾರ್‌: ಸಿಆರ್‌ಎಸ್‌ ಕಚೇರಿಗೆ ಇನ್ನೂ ತಲುಪದ ಪ್ರಸ್ತಾವ
Last Updated 2 ಮೇ 2017, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಯೋಜನೆಯ ಮೊದಲ ಹಂತದ ಕಾಮಗಾರಿಗಳು ಏಪ್ರಿಲ್‌ನಲ್ಲಿ ಸಂಪನ್ನಗೊಳ್ಳಲಿದ್ದು, ಪೂರ್ಣ ಪ್ರಮಾಣದಲ್ಲಿ ವಾಣಿಜ್ಯ ಸಂಚಾರವೂ ಆರಂಭವಾಗಲಿದೆ’ ಎಂಬ ಬೆಂಗಳೂರು ಮಟ್ರೊ ರೈಲು ನಿಗಮದ ಭರವಸೆ  ಹುಸಿಯಾಗಿದೆ. 

ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್‌) ಸಂಪಿಗೆ ರಸ್ತೆ–ಯಲಚೇನಹಳ್ಳಿ ಮಾರ್ಗವನ್ನು ಏಪ್ರಿಲ್‌ ಅಂತ್ಯದೊಳಗೆ ತಪಾಸಣೆ ನಡೆಸಲಿದ್ದಾರೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದರು. ಆದರೆ, ಈ ಮಾರ್ಗದ  ಪರೀಕ್ಷೆಗಳು ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಸಿಆರ್‌ಎಸ್‌ ಕಚೇರಿಗೆ ಈ ಮಾರ್ಗದ ತಪಾಸಣೆಗೆ ಸಂಬಂಧಿಸಿದ ಪ್ರಸ್ತಾವ ಇನ್ನೂ ಸಲ್ಲಿಕೆಯೇ ಆಗಿಲ್ಲ.

‘ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿವರೆಗಿನ ಮಟ್ರೊ ಮಾರ್ಗದ ತಪಾಸಣೆ ಬಗ್ಗೆ ಬಿಎಂಆರ್‌ಸಿಎಲ್‌ನಿಂದ ನಮಗಿನ್ನೂ ಪ್ರಸ್ತಾವವೇ ಬಂದಿಲ್ಲ’ ಎಂದು ಸಿಆರ್‌ಎಸ್‌ ಕಚೇರಿ ಮೂಲಗಳು ತಿಳಿಸಿವೆ. ಮೊದಲ ಹಂತದಲ್ಲಿ ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ಸಂಪಿಗೆ ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿ ನಿಲ್ದಾಣದವರೆಗಿನ ಮಾರ್ಗದಲ್ಲಿ  ಮಾತ್ರ  ವಾಣಿಜ್ಯ ಸಂಚಾರ ಆರಂಭವಾಗುವುದಕ್ಕೆ ಬಾಕಿ ಇದೆ.

ಇಲ್ಲೀಗ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಉಳಿದ 31 ಕಿ.ಮೀ ಉದ್ದದ   ಮಾರ್ಗದಲ್ಲಿ ವಾಣಿಜ್ಯ ಸಂಚಾರ ಈಗಾಗಲೇ ಆರಂಭವಾಗಿದೆ.
ಮೆಟ್ರೊ ಮಾರ್ಗದ ಕಾಮಗಾರಿ ಪೂರ್ಣಗೊಂಡ ಬಳಿಕ ಅದರ ಅಲ್ಟ್ರಾಸಾನಿಕ್ ವೆಲ್ಡ್‌ ಟೆಸ್ಟ್‌, ಲೇಸರ್‌ ಪೊಸಿಷನಿಂಗ್‌ ಟೆಸ್ಟ್‌, ಸಿಗ್ನಲ್‌ ಕಾನ್‌ಫಿಗರೇಷನ್‌ ಟೆಸ್ಟ್‌,  ವೇಗ ಪರೀಕ್ಷೆ, ಹಳಿಯಲ್ಲಿ ಏಕಕಾಲದಲ್ಲಿ  ಒದಕ್ಕಿಂತ ಹೆಚ್ಚು ರೈಲುಗಳನ್ನು ಚಲಾಯಿಸುವ ಪರೀಕ್ಷೆ, ವಿದ್ಯುತ್‌ ಮಾರ್ಗದ  ಪರೀಕ್ಷೆ, ಹೊಗೆ ನಿವಾರಣೆ (ಸುರಂಗ ಮಾರ್ಗದಲ್ಲಿ) ಮಾಡುವ ಪರೀಕ್ಷೆ ಸೇರಿದಂತೆ 18 ಬಗೆಯ  ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ.

‘ಈ ಮಾರ್ಗದ ಪರೀಕ್ಷೆಗಳು ಇನ್ನೂ ಪೂರ್ಣಗೊಂಡಿಲ್ಲ.  ಹಾಗಾಗಿ ಅದರ ತಪಾಸಣೆ ಬಗ್ಗೆ ಸಿಆರ್‌ಎಸ್‌ ಕಚೇರಿಗೆ ಇನ್ನೂ ಪ್ರಸ್ತಾವ ಕಳುಹಿಸಿಲ್ಲ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಸಿಂಗ್‌ ಖರೋಲ ತಿಳಿಸಿದರು.

ಮೇ 12ರ ಬಳಿಕ ಪ್ರಸ್ತಾವ ಸಲ್ಲಿಕೆ: ‘ಈ ಮಾರ್ಗದ ಪರೀಕ್ಷೆಗಳು ಮೇ 12 ರವರೆಗೂ ಮುಂದುವರಿಯಲಿವೆ. ಅದಾದ ಬಳಿಕ ಇದರ ತಪಾಸಣೆ ನಡೆಸುವಂತೆ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸುತ್ತೇವೆ’ ಎಂದು ಖರೋಲ ತಿಳಿಸಿದರು.  

‘ಸುರಕ್ಷತಾ ಆಯುಕ್ತರು ಈ ಮಾರ್ಗದ ತಪಾಸಣೆ ನಡೆಸಿ ಪ್ರಮಾಣಪತ್ರ ನೀಡಿದ ಬಳಿಕವಷ್ಟೇ ಉತ್ತರ ದಕ್ಷಿಣ ಕಾರಿಡಾರ್‌ನಲ್ಲಿ ಪೂರ್ಣಪ್ರಮಾಣದ ವಾಣಿಜ್ಯ ಸಂಚಾರ ಸಾಧ್ಯ. ಈ  ಮಾರ್ಗದಲ್ಲಿ ಸುರಂಗದ ಮೂಲಕವೂ ರೈಲು ಸಂಚರಿಸಬೇಕಿದೆ. ಹಾಗಾಗಿ  ತಪಾಸಣೆ ಪ್ರಕ್ರಿಯೆಗೆ ಏನಿಲ್ಲವೆಂದರೂ 15 ದಿನಗಳು ಬೇಕಾಗುತ್ತವೆ. ಮೊದಲ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ  ವಾಣಿಜ್ಯ ಸಂಚಾರ ಆರಂಭಿಸಲು ಇನ್ನೂ ಒಂದು ತಿಂಗಳು ಕಾಯಬೇಕಾಗುತ್ತದೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ವಿಳಂಬಕ್ಕೆ ಆಕ್ರೋಶ: ಮೆಟ್ರೊ ಮೊದಲ ಹಂತ ವಿಳಂಬವಾಗುತ್ತಿರುವುದಕ್ಕೆ ರೈಲ್ವೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪೂರ್ವ–ಪಶ್ಚಿಮ ಕಾರಿಡಾರ್‌ ಸುರಂಗಮಾರ್ಗ ಉದ್ಘಾಟನೆ ಸಂದರ್ಭದಲ್ಲಿ ಮೊದಲ ಹಂತದ ಕಾಮಗಾರಿಯನ್ನು 2016ರ ನವೆಂಬರ್‌ ಒಳಗೆ ಪೂರ್ಣಗೊಳಿಸುವುದಾಗಿ  ಹೇಳಿದ್ದರು. ನಂತರ 2017ರ ಜನವರಿಯ ಗಡುವು ವಿಧಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಹಂತದ ಎಲ್ಲಾ ಕಾಮಗಾರಿಗಳೂ 2017ರ ಏಪ್ರಿಲ್‌ ಒಳಗೆ ಪೂರ್ಣಗೊಳ್ಳಬೇಕು ಎಂದು ಸೂಚಿಸಿದ್ದರು. ಈಗಾಗಲೇ  ಹಲವು ಗಡುವುಗಳನ್ನು ಮೀರಿರುವ ನಿಗಮವು  ಮತ್ತೆ ಮತ್ತೆ ಮಾತು ತಪ್ಪುತ್ತಿದೆ’ ಎಂದು ಕರ್ನಾಟಕ ರೈಲ್ವೆ ವೇದಿಕೆಯ ಕೆ.ಎನ್‌.ಕೃಷ್ಣಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದರು. 

2006ರ ಏಪ್ರಿಲ್‌ 25ರಂದು ಈ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿತ್ತು. 2006ರ ಜೂನ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇದಾಗಿ 10 ವರ್ಷಗಳ ಬಳಿಕವೂ ಯೋಜನೆ ಪೂರ್ಣಗೊಂಡಿಲ್ಲ.  

‘ಮೊದಲ ಹಂತದ ಕಾಮಗಾರಿಗಳು ಈಗಾಗಲೇ ಬಹಳಷ್ಟು ತಡವಾಗಿವೆ. ಹಾಗಾಗಿ ಆದಷ್ಟು ಬೇಗ ಈ ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಮೆಟ್ರೊ ಸಂಚಾರ ಆರಂಭಿಸಬೇಕು’ ಎಂದು ಕೃಷ್ಣಪ್ರಸಾದ್‌ ಒತ್ತಾಯಿಸಿದರು.  

ಮೆಟ್ರೊ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳದ ಕಾರಣ ವೆಚ್ಚದಲ್ಲಿ ಭಾರಿ ಹೆಚ್ಚಳವಾಗಿದೆ.ಪ್ರತಿ ಕಿಲೋ ಮೀಟರ್‌ ಕಾಮಗಾರಿಗೆ,   ಆರಂಭದಲ್ಲಿ ನಿಗದಿಪಡಿಸಿದ್ದಕ್ಕಿಂತ ₹ 144 ಕೋಟಿ ಮೊತ್ತವನ್ನು  ಹೆಚ್ಚುವರಿಯಾಗಿ ಖರ್ಚು ಮಾಡಿದೆ. ಇದು ನಾಗರಿಕರಿಗೆ ಹೊರೆಯಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ
ಸಂಪಿಗೆ ರಸ್ತೆ–ಯಲಚೇನಹಳ್ಳಿ ಮಾರ್ಗದ ಸುರಕ್ಷತೆ ತಪಾಸಣೆ ಪೂರ್ಣಗೊಳ್ಳುವ ಮುನ್ನವೇ ಮೊದಲ ಹಂತದ ಯೋಜನೆಯ ಉದ್ಘಾಟನೆಯನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಂದ ಉದ್ಘಾಟನೆ ಮಾಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

‘ಮೆಟ್ರೊ ಮೊದಲ ಹಂತವು ಪೂರ್ಣಗೊಂಡ ಬಳಿಕ  ನಗರದ  ಸಾರ್ವಜನಿಕ ಸಾರಿಗೆಯಲ್ಲಿ ಹೊಸ ಯುಗ ಆರಂಭವಾಗಲಿದೆ. ಇದರ ಉದ್ಘಾಟನೆಯ ಐತಿಹಾಸಿಕ ಕ್ಷಣದಲ್ಲಿ ಮುಖ್ಯ ಅತಿಥಿಯಾಗಿ  ನೀವು ಪಾಲ್ಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಈ ಕುರಿತು ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಉದ್ಘಾಟನೆಯ ದಿನಾಂಕವನ್ನು ಪತ್ರದಲ್ಲಿ ನಮೂದಿಸಿಲ್ಲ.

‘ಮಾಗಡಿ ರಸ್ತೆಯಿಂದ ಎಂ.ಜಿ.ರಸ್ತೆ ಮಾರ್ಗದ ನಡುವಿನ ಸುರಂಗ ಮಾರ್ಗ ಪೂರ್ಣಗೊಂಡ ಬಳಿಕ ಅದರ ಉದ್ಘಾಟನೆ ಸಲುವಾಗಿ 20 ದಿನ ವಿಳಂಬವಾಯಿತು. ಮೊದಲ ಹಂತ ಈಗಾಗಲೇ ವಿಳಂಬವಾಗಿದೆ.  ಗಣ್ಯರಿಗಾಗಿ ಕಾಯುವ ಸಲುವಾಗಿ ನಾಗರಿಕರಿಗೆ ಈ ಸೌಲಭ್ಯವನ್ನು  ತಲುಪಿಸುವಲ್ಲಿ ಇನ್ನಷ್ಟು ವಿಳಂಬ ಮಾಡಬಾರದು’ಎನ್ನುತ್ತಾರೆ ನಾಗಸಂದ್ರ ನಿವಾಸಿ ಸುಧೀಂದ್ರ.

‘3 ವರ್ಷಗಳಲ್ಲಿ ಎರಡನೇ ಹಂತ ಪೂರ್ಣ’
‘ಮೆಟ್ರೊ ಮೊದಲ ಹಂತದ ಕಾಮಗಾರಿ ಸಂಪೂರ್ಣ ಮುಗಿದಿದ್ದು, ರೈಲ್ವೆ ಸುರಕ್ಷತಾ ಆಯುಕ್ತರು ನಾಗಸಂದ್ರ-ಪುಟ್ಟೇನಹಳ್ಳಿ ಮಾರ್ಗದಲ್ಲಿ ಮೇ 12 ರಂದು ಪ್ರಾಯೋಗಿಕ ಸಂಚಾರ ನಡೆಸಲಿದ್ದಾರೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

‘ಮೆಟ್ರೊ ಎರಡನೇ ಹಂತದ ಕಾಮಗಾರಿಗಳು  ಆರಂಭವಾಗಲಿದ್ದು, ನಾಯಂಡಹಳ್ಳಿ,  ಕೆಂಗೇರಿ, ಬೈಯಪ್ಪನಹಳ್ಳಿ ವೈಟ್‌ ಫೀಲ್ಡ್‌, ಸಿಲ್ಕ್‌ ಬೋರ್ಡ್‌  ಮತ್ತು ಕೆ.ಆರ್.ಪುರ ನಡುವಿನ ಕಾಮಗಾರಿ ತ್ವರಿತಗೊಳಿಸುತ್ತೇವೆ. 2-3 ವರ್ಷದಲ್ಲಿ ಕಾಮಗಾರಿ ಅಂತಿಮಗೊಳಿಸುವ ಗುರಿ ಹೊಂದಲಾಗಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ನಾಗವಾರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೆಟ್ರೊ ಮಾರ್ಗ ರಚಿಸಲು 6 ವಿವಿಧ  ಮಾರ್ಗಗಳ ಪರಿಶೀಲನೆ ನಡೆದಿದೆ. ಯಾವ ಮಾರ್ಗದಲ್ಲಿ ಮೆಟ್ರೊ ನಿರ್ಮಿಸಬೇಕು ಎಂಬ ಬಗ್ಗೆ  ಪರಿಶೀಲನೆ ನಡೆದಿದೆ. ನಾಗವಾರ- ವಿಮಾನ ನಿಲ್ದಾಣದ ನಡುವಿನ ಮಾರ್ಗ  ಮೆಟ್ರೊ 2ಬಿ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕೇ ಎಂಬ ಬಗ್ಗೆ  ಚರ್ಚೆ ನಡೆಯುತ್ತಿದ್ದು ಸದ್ಯವೇ  ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.
*
ಮೆಟ್ರೊ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಇದೇ 10 ಅಥವಾ 12ರವರೆಗೆ  ಸಂಪಿಗೆ ರಸ್ತೆ– ಯಲಚೇನಹಳ್ಳಿ ಮಾರ್ಗದ ಪರೀಕ್ಷಾರ್ಥ ಸಂಚಾರ ಮುಂದುವರಿಯಲಿದೆ.
ವೆಂಕಯ್ಯ ನಾಯ್ಡು
ಕೇಂದ್ರ ನಗರಾಭಿವೃದ್ಧಿ ಸಚಿವ
*
ತಾಂತ್ರಿಕ ದೋಷದಿಂದ ಯೋಜನೆ ವಿಳಂಬವಾಗುತ್ತಿದ್ದರೆ ನಿಗಮವು ಅದನ್ನು ಬಹಿರಂಗಪಡಿಸಬೇಕು. ಸುಮ್ಮನೇ ಗಡುವು ನಿಗದಿಪಡಿಸಿ, ವಿಸ್ತರಿಸುವುದರಲ್ಲಿ ಅರ್ಥವಿಲ್ಲ.
ಕೆ.ಎನ್‌.ಕೃಷ್ಣಪ್ರಸಾದ್‌
ಕರ್ನಾಟಕ ರೈಲ್ವೆ ವೇದಿಕೆ
*
2017ರ ಮೇ ಅಂತ್ಯದೊಳಗೆ ಉತ್ತರ–ದಕ್ಷಿಣ ಕಾರಿಡಾರ್‌ನಲ್ಲೂ ಪೂರ್ಣಪ್ರಮಾಣ ಸಂಚಾರ ಆರಂಭವಾಗಲಿದೆ.
ಪ್ರದೀಪ ಸಿಂಗ್‌ ಖರೋಲ
ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT