ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡ ವಸೂಲಿಗೆ ಮನೆ ಬಾಗಿಲಿಗೇ ಪೊಲೀಸರು!

ಸಂಚಾರ ನಿಯಮ ಉಲ್ಲಂಘನೆ: ನೋಟೀಸ್‌ ನೀಡಿದರೂ ಲೆಕ್ಕಿಸದ ವಾಹನ ಚಾಲಕರು
Last Updated 2 ಮೇ 2017, 19:42 IST
ಅಕ್ಷರ ಗಾತ್ರ
ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದವರ ಮನೆ ಬಾಗಿಲಿಗೇ ಹೋಗಿ ದಂಡ ವಸೂಲಿ ಮಾಡಲು  ನಗರ ಸಂಚಾರ ಪೊಲೀಸರು ಮುಂದಾಗಿದ್ದಾರೆ. 
 
‘ನಿಯಮ ಉಲ್ಲಂಘಿಸಿದ್ದಕ್ಕೆ ನೋಟಿಸ್ ನೀಡಿದರೂ ಸವಾರರು ಲೆಕ್ಕಿಸುತ್ತಿಲ್ಲ. ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಅವರ ಮನೆಗೇ ಹೋಗಿ ದಂಡ ವಸೂಲಿ ಮಾಡುವ ಕಾರ್ಯಾಚರಣೆ ಪ್ರಾರಂಭವಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು. 
 
‘ಹಲವು ಸಲ ನಿಯಮ ಉಲ್ಲಂಘಿಸಿದ ಹಾಗೂ ದಂಡವನ್ನೂ ಪಾವತಿಸದ 500 ವಾಹನಗಳನ್ನು ಗುರುತಿಸಲಾಗಿದೆ. ಆ ವಾಹನಗಳ ಸಂಖ್ಯೆ ಹಾಗೂ ಮಾಲೀಕರ ವಿಳಾಸವನ್ನು ಪತ್ತೆ ಹಚ್ಚಿದ್ದೇವೆ’ ಎಂದರು. 
 
‘ಈ ವಾಹನಗಳು 22,376 ಬಾರಿ ಸಂಚಾರ ನಿಯಮ ಉಲ್ಲಂಘಿಸಿವೆ. ಈ ಪೈಕಿ ಆಟೊ ಚಾಲಕರ ವಿರುದ್ಧವೇ ಹೆಚ್ಚು ಪ್ರಕರಣಗಳಿವೆ’ ಎಂದರು.
 
ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಸಂಚಾರ ವಿಭಾಗದ ಹೆಚ್ಚುವರಿ ಕಮಿಷನರ್ ಹಿತೇಂದ್ರ, ‘30ಕ್ಕೂ ಹೆಚ್ಚು ಸಲ ನಿಯಮ ಉಲ್ಲಂಘಿಸಿದ ವಾಹನ ಚಾಲಕರನ್ನು ಪತ್ತೆ ಹಚ್ಚಿ, ಅವರ ಮನೆಗೆ ಹೋಗಿ ದಂಡ ವಸೂಲಿ ಮಾಡುವಂತೆ ಸೂಚಿಸಿದ್ದೇನೆ’ ಎಂದರು. 
 
‘ಪೊಲೀಸರು ಇದುವರೆಗೆ  350 ಚಾಲಕರ ಮನೆಗೆ ಹೋಗಿ ದಂಡ ವಸೂಲಿ ಮಾಡಿದ್ದಾರೆ’ ಎಂದು ಹೇಳಿದರು. ‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಿಯಮ ಉಲ್ಲಂಘನೆ ಪ್ರಮಾಣ ಶೇ 30ರಷ್ಟು ಕಡಿಮೆ ಆಗಿದೆ. 
 
ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನಿಯಮ ಉಲ್ಲಂಘನೆ ತಡೆಗೆ ಬೇರುಮಟ್ಟದಲ್ಲಿ  ಚಿಕಿತ್ಸೆ ನೀಡುವ ಅಗತ್ಯವಿದೆ. ನಗರ ವ್ಯಾಪ್ತಿಯಲ್ಲಿ ಮತ್ತಷ್ಟು ಕಠಿಣ ನಿಯಮ ಜಾರಿಗೆ ತರಲು ಚಿಂತಿಸಲಾಗಿದೆ’ ಎಂದು ಮಾಹಿತಿ ನೀಡಿದರು. 
****
21 ತಿಂಗಳಲ್ಲಿ 70 ಸಲ ನಿಯಮ ಉಲ್ಲಂಘಿಸಿದ್ದ ಕ್ಯಾಂಟರ್‌ ಚಾಲಕ!
ಬೆಂಗಳೂರು:
21 ತಿಂಗಳಲ್ಲಿ 70 ಸಲ ಸಂಚಾರ ನಿಯಮ ಉಲ್ಲಂಘಿಸಿದ ಕ್ಯಾಂಟರ್ ಚಾಲಕನಿಂದ ಮೈಕೊ ಲೇಔಟ್ ಪೊಲೀಸರು ಮಂಗಳವಾರ ದಂಡ ವಸೂಲಿ ಮಾಡಿದ್ದಾರೆ.

ಬೆಳಿಗ್ಗೆ 10.30ರ ಸುಮಾರಿಗೆ ಸಂಚಾರ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ನಿರತರಾಗಿದ್ದರು. ಹೊಸೂರು ರಸ್ತೆ ಕಡೆಯಿಂದ ಕ್ಯಾಂಟರ್ ಚಲಾಯಿಸಿಕೊಂಡು ಬಂದ ಬಾಬು ಡೈರಿ ಸರ್ಕಲ್‌ನಲ್ಲಿ ಸಿಗ್ನಲ್ ಜಂಪ್ ಮಾಡಿದ್ದ. ಈ ವೇಳೆ ಪೊಲೀಸರು ತಡೆದು ಪರಿಶೀಲನೆ ನಡೆಸಿದರು.

‘61 ಬಾರಿ ವಾಹನ ನಿಲುಗಡೆ ನಿಷೇಧಿಸಿದ ಜಾಗದಲ್ಲಿ ವಾಹನ ನಿಲುಗಡೆ, ತಲಾ 4 ಸಲ ಸಿಗ್ನಲ್ ಜಂಪ್, ಏಕಮುಖ ರಸ್ತೆಯಲ್ಲಿ ಸಂಚಾರ ಹಾಗೂ ಒಂದು
ಸಲ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಕೆ  ಸಂಬಂಧ ಪ್ರಕರಣಗಳು ದಾಖಲಾಗಿವೆ’ ಎಂದು ಮಾಹಿತಿ ನೀಡಿದರು. ಪ್ರತಿ ಪ್ರಕರಣಕ್ಕೆ ತಲಾ ನೂರು ರೂಪಾಯಿಯಂತೆ ₹ 7 ಸಾವಿರ ದಂಡ ವಸೂಲಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
****
ಬಾಕಿ ಉಳಿಸಿಕೊಂಡಿರುವ ದಂಡ ವಸೂಲಿಗೆ ಸಂಚಾರ ಪೊಲೀಸರು ಮನೆ ಬಾಗಿಲಿಗೇ ಬರಲಿದ್ದಾರೆ
ಹಿತೇಂದ್ರ, ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT