ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂದಿನ ಮಕ್ಕಳಲ್ಲಿ ಅಕಾಲಿಕ ಪ್ರೌಢತೆ’

ಮಕ್ಕಳ ರಂಗ ತರಬೇತಿ ಶಿಬಿರದ ಸಮಾರೋಪ
Last Updated 3 ಮೇ 2017, 5:52 IST
ಅಕ್ಷರ ಗಾತ್ರ

ಉಡುಪಿ: ಮಕ್ಕಳು ಸಾಂಸ್ಕೃತಿಕವಾಗಿ ವಿಕಸನಗೊಂಡಾಗ ಅದು ಅವರ ಬದುಕಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಶಾಸಕ ವಿನಯ ಕುಮಾರ್ ಸೊರಕೆ ಅಭಿಪ್ರಾಯಪಟ್ಟರು.

ರಥಬೀದಿ ಗೆಳೆಯರು ಸಂಸ್ಥೆ ಮತ್ತು ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಜಂಟಿಯಾಗಿ ಆಯೋಜಿಸಿದ್ದ ‘ಕುಣಿಯೋಣ ಬಾರಾ’ ಮಕ್ಕಳ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಬೇಸಿಗೆ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿಯೂ ಆಯೋಜಿಸಿರುವುದು ಶ್ಲಾಘನೀಯ ಕೆಲಸ. ಈ ಶಿಬಿರದಲ್ಲಿ ಭಾಗವಹಿಸಿರುವ ಮಕ್ಕಳು ಇನ್ನಷ್ಟು ಕ್ರಿಯಾಶೀಲರಾಗು ತ್ತಾರೆ ಎಂಬ ನಂಬಿಕೆ ಇದೆ. ಇನ್ನು ಮುಂದೆಯೂ ಇಂತಹ ಶಿಬಿರಗಳನ್ನು ಆಯೋಜಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಅವಕಾಶ ನೀಡಿ ಎಂದರು.

ಕುಂಜಿಬೆಟ್ಟು ಟಿ.ಎಂ.ಎ ಪೈ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ್ ಮಾತನಾಡಿ, ‘ಕುಣಿಯೋಣು ಬಾರಾ ಇದು ಮಕ್ಕಳಿಗೆ ಮಾತ್ರವಲ್ಲ, ಹಿರಿಯ ರಿಗೂ ಕೂಡಾ ಎನ್ನುವುದು ನನ್ನ ಅನಿಸಿಕೆ. ಬದುಕಿನ ಜಂಜಡಗಳಿಂದಾಗಿ ನಾವೆಲ್ಲರೂ ನಮ್ಮ ಮುಗ್ಧತೆ ಕಳೆದು ಕೊಂಡಿದ್ದೇವೆ’ ಎಂದು ಹೇಳಿದರು.

ಇಂದಿನ ಮಕ್ಕಳಲ್ಲಿ ಅಕಾಲಿಕ ಪ್ರೌಢತೆಯನ್ನು ಕಾಣುತ್ತೇವೆ. ಅವರು ಬೆರಗು ಆಶ್ಚರ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಇಂದಿನ ಶಿಕ್ಷಣ ಪದ್ಧತಿ ಕಾರಣ. ಅವರು ಕಳೆದುಕೊಂಡ ಬೆರಗು ಅವರ ಆಶ್ಚರ್ಯ ಆವರ ಬಾಲ್ಯವನ್ನು ಇಂತಹ ಶಿಬಿರಗಳು ಮರಳಿಸುತ್ತವೆ ಎಂದರು.

ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಎಸ್‌. ಸುಮಾ ಮಾತನಾಡಿ,  ಹದಿನೈದು ದಿನಗಳ ಈ ಶಿಬಿರದಲ್ಲಿ 12 ಶಾಲೆಗಳ ವಿಭಿನ್ನ ಸಂಸ್ಕೃತಿಗಳ 40 ಮಕ್ಕಳು ಒಂದಾಗಿ ಕುಣಿದು– ಹಾಡಿದ್ದಾರೆ, ಒಂದಾಗಿ ಆಡಿ– ಉಂಡಿದ್ದಾರೆ. ಇಲ್ಲಿ ನಾಟಕ ಕಲಿಸೋದು, ಕಲಿಯೋದು ಅಷ್ಟೇ ನಡೆದಿಲ್ಲ, ಬದುಕಿನ ಶಿಕ್ಷಣ ಕಲಿಸಿ ಕೊಡಲಾಗಿದೆ.

ಕಟ್ಟುವ ಕೆಲಸವನ್ನು ಹಿರಿಯರು ಮಾಡಬೇಕು. ಅದರೆ, ಎಲ್ಲೆಲ್ಲೂ ಒಡಕೇ ಕಾಣುತ್ತಿದೆ. ಒಡೆಯುತ್ತಿರುವ ಈ ದಿನಮಾನದಲ್ಲಿ, ಕಟ್ಟುವ ಕೆಲಸವನ್ನು ಹೇಗ ಮಾಡ ಬೇಕು, ಜತೆಯಾಗಿ ಕೂಡಿ ಹೇಗೆ ಬದುಕಬೇಕು ಎಂದು ಈ ರಂಗ ಶಿಕ್ಷಣ ಹೇಳಿಕೊಟ್ಟಿದೆ ಎಂದರು.

ಶಿಬಿರದ ಸಂಚಾಲಕ ಸಂತೋಷ್ ನಾಯಕ್‌ ಪಟ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ, ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾ ಧ್ಯಾಯ ಗಣಪತಿ ಕಾರಂತ್ ಉಪಸ್ಥಿತರಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಕಾಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ ನಿರ್ವಹಿಸಿದರು. ಶಿಕ್ಷಕ ವಿಕ್ರಮ ಆಚಾರ್ಯ ವಂದಿಸಿದರು.

*
ಸಮಾನಾಂತರ ರೇಖೆಗಳಾ ಗಿರುವ ಫ್ಲ್ಯಾಟ್ ಮತ್ತು ಹಳ್ಳಿಗಾಡು ಸಂಸ್ಕೃತಿ ಸಂಧಿಸುವುದಿಲ್ಲ. ಇಂತಹ ಶಿಬಿರಗಳು ಇವೆರಡನ್ನು ಸಂಧಿಸುವಂತೆ ಮಾಡುತ್ತವೆ.
-ಡಾ.ಮಹಾಬಲೇಶ್ವರ ರಾವ್,
ಪ್ರಾಂಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT