ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಜಾಗೃತಿ ಮೂಡಿಸಿ– ಕೃಷ್ಣಬೈರೇಗೌಡ

‘ಖಿನ್ನತೆ– ನಾವು ಮಾತಾಡೋಣ’ ಘೋಷ ವಾಕ್ಯದೊಂದಿಗೆ ಜಿಲ್ಲಾ ಮಟ್ಟದ ವಿಶ್ವ ಆರೋಗ್ಯ ದಿನಾಚರಣೆ
Last Updated 5 ಮೇ 2017, 9:08 IST
ಅಕ್ಷರ ಗಾತ್ರ

ವಿಜಯಪುರ: ದುಡಿಮೆಯ ಕೊರತೆಯಿಂದಾಗಿ ನಾನಾ ರೀತಿಯ ಕಾಯಿಲೆಗಳು ಕಾಣಿಸಿಕೊಂಡು ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

ವಿಜಯಪುರದ ಓಂಕಾರೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ‘ಖಿನ್ನತೆ (ಬೇಜಾರು ಕಾಯಿಲೆ) ನಾವು ಮಾತಾಡೋಣ’  ಎಂಬ ಘೋಷ ವಾಕ್ಯದೊಂದಿಗೆ ಜಿಲ್ಲಾ ಮಟ್ಟದ ವಿಶ್ವ ಆರೋಗ್ಯ ದಿನಾಚರಣೆ –2017 ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಜಿಲ್ಲಾಡಳಿತ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ಹಾಗೂ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು, ಸಮುದಾಯ ಆರೋಗ್ಯ ಕೇಂದ್ರ ವಿಜಯಪುರ ಇವರ ಸಹಯೋಗದಲ್ಲಿ  ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಜನರು ಅನಾರೋಗ್ಯಕ್ಕೆ ತುತ್ತಾಗುವುದಕ್ಕಿಂತ ಮುಂಚೆ ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಬದಲಾಗುತ್ತಿರುವ ಜನರ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ  ಜನರು, ತಮ್ಮ ಆರೋಗ್ಯಗಳ ಕಡೆಗೆ ಹೆಚ್ಚಿನ ಗಮನ ನೀಡದೇ, ಐಷಾರಾಮಿ ಜೀವನ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಗ್ರಾಮೀಣ ಪ್ರದೇಶಗಳ ಜನರು ಮೊದಲು ಹೊಲಗದ್ದೆಗಳಲ್ಲಿ ದುಡಿಮೆ ಮಾಡುತ್ತಿದ್ದಾಗ ಆರೋಗ್ಯವಂತ ಜೀವನ ಮಾಡುತ್ತಿದ್ದರು. ತೀವ್ರ ಮಳೆಯ ಕೊರತೆಯಿಂದಾಗಿ ದುಡಿಮೆಯ ವರ್ಗ ಕಡಿಮೆಯಾಗುತ್ತಿರುವುದರ ಪರಿಣಾಮವಾಗಿ ರಕ್ತದೊತ್ತಡ, ಆಸ್ತಮಾ, ಡಯಾಬಿಟಿಸ್, ನಂತರ ಮಾರಕ ಕಾಯಿಲೆಗಳು ಜನರನ್ನು ಕಾಡುತ್ತಿವೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನಾಂಶವಿರುವ ಆಹಾರವನ್ನೇ  ಸೇವಿಸುತ್ತಿದ್ದಾರೆ. ಸ್ವಚ್ಛತೆಯ ಕಡೆಗೆ ಗಮನ ನೀಡುತ್ತಿಲ್ಲ ಎಂದರು.

ಹಿರಿಯ ಚಲನಚಿತ್ರನಟಿ ಲೀಲಾವತಿ ಮಾತನಾಡಿ, ದಿನನಿತ್ಯ ಒತ್ತಡದಲ್ಲೇ ಜೀವಿಸುತ್ತಿರುವ ಜನರೇ ಹೆಚ್ಚಾಗಿದ್ದಾರೆ. ತೀವ್ರ ನೀರಿನ ಸಮಸ್ಯೆ, ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಉಪಯೋಗ ಮಾಡುತ್ತಿರುವ ರಸಗೊಬ್ಬರಗಳು, ರೋಗ ನಿಯಂತ್ರಣಕ್ಕಾಗಿ ಉಪಯೋಗ ಮಾಡುವಂತಹ ರಾಸಾಯನಿಕ ಔಷಧಿಗಳ ಪ್ರಭಾವದಿಂದಾಗಿ ಸಣ್ಣ ವಯಸ್ಸಿನಿಂದ ಹಿರಿಯರವರೆಗೆ  ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ, ಖಿನ್ನತೆ ಪ್ರಪಂಚದ ಎಲ್ಲಾ ದೇಶಗಳ, ಎಲ್ಲ ವಯೋಮಾನದ ಜನರನ್ನೂ ಬಾಧಿಸುತ್ತದೆ. ಅದು ವ್ಯಕ್ತಿಯ ಬಲಹೀನತೆ ಅಲ್ಲ. ಮಾನಸಿಕ ಖಿನ್ನತೆ ಈಗ ಸಾರ್ವಕಾಲಿಕ ಆರೋಗ್ಯ ಸಮಸ್ಯೆಯಾಗಿ ಬೆಳೆದು ನಿಲ್ಲುತ್ತಿದೆ ಎಂದು ತಿಳಿಸಿದರು.

ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಸಮಾಜದಲ್ಲಿ ಯಾರು ಎಷ್ಟೇ ಆಸ್ತಿ ಅಂತಸ್ತು ಗಳಿಸಿದರೂ ಆರೋಗ್ಯವಿಲ್ಲದೆ ಹೋದರೆ ಅವರು ಸಂಪಾದನೆ ಮಾಡಿದ ಸಂಪತ್ತು ಶೂನ್ಯವಾಗುತ್ತದೆ. ಪ್ರತಿಯೊಬ್ಬ ನಾಗರಿಕರು ಆರೋಗ್ಯ ಕಾಪಾಡುವುದರ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು. ಖಿನ್ನತೆ ಇರುವ ವ್ಯಕ್ತಿಗೆ ಇಂತಹ ಅವಕಾಶ ಕಡಿಮೆ. ಭಾವನೆ  ಹಂಚಿಕೊಂಡಾಗ  ಪರಿಹಾರ ದೊರೆಯುತ್ತದೆ ಎಂದರು.

ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ದಾನ ಮಾಡಿರುವ ಹಿರಿಯ ಚಿತ್ರನಟಿ ಲೀಲಾವತಿ, ಅವರ ಪುತ್ರ ಚಿತ್ರನಟ ವಿನೋದ್ ರಾಜ್ ಅವರನ್ನು ಸನ್ಮಾನಿಸಲಾಯಿತು. ಪತಂಜಲಿ  ಯೋಗಾಶ್ರಮದ ಪ್ರಕಾಶ್ ಗುರೂಜಿ, ಚಿತ್ರನಟ ವಿನೋದ್ ರಾಜ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಜಗದೀಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿಚಿನ್ನಪ್ಪ, 

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಧರ್ಮೇಂದ್ರ, ತಹಶೀಲ್ದಾರ್ ಜಿ.ಎ. ನಾರಾಯಣಸ್ವಾಮಿ, ಕೆ.ಪಿ.ಸಿ.ಸಿ.ಸದಸ್ಯ ಸಿ.ಕೆ.ರಾಮಚಂದ್ರಪ್ಪ, ಹೊಸಕೋಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆಂಚೇಗೌಡ, ಬೈರಾಪುರ ರಾಜಣ್ಣ, ತಾಲ್ಲೂಕು ಆರೋಗ್ಯಾಧಿಕಾರಿ ರಶ್ಮಿಕೃಷ್ಣಮೂರ್ತಿ, ಡಾ.ಮಂಜುಳಾ ಹಾಜರಿದ್ದರು.

*
ಜನರು ಧ್ಯಾನ, ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು.
-ಲೀಲಾವತಿ, ಹಿರಿಯ ಚಲನಚಿತ್ರನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT