ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಬೆಳೆಗಾರರ ಕಂಪೆನಿ ಅಸ್ತಿತ್ವಕ್ಕೆ

ಮಳವಳ್ಳಿ ತಾಲ್ಲೂಕಿನಲ್ಲಿ ಒಂದು ಸಾವಿರ ರೈತರ ಸದಸ್ಯತ್ವ; ಕೃಷಿ ಯಂತ್ರೋಪಕರಣ ವಿತರಣೆ
ಅಕ್ಷರ ಗಾತ್ರ
ಮಳವಳ್ಳಿ:  ತೋಟಗಾರಿಕೆ ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ಕೃಷಿ  ಯಂತ್ರೋಪಕರಣ ವಿತರಿಸಲು ಪಟ್ಟಣದಲ್ಲಿ ತಾಲ್ಲೂಕು ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿ ಆರಂಭವಾಗಿದೆ.
 
ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ತಾಲ್ಲೂಕಿನ ಬಿ.ಜಿ.ಪುರ ಹೋಬಳಿಯ ಕ್ಯಾತನಹಳ್ಳಿಯಲ್ಲಿ ಕಂಪೆನಿ ಪ್ರಾರಂಭವಾಗಿದ್ದು, ತಾಲ್ಲೂಕಿನ 33 ಗ್ರಾಮಗಳ ಒಂದು ಸಾವಿರ ಬೆಳೆಗಾರರು ತಲಾ ₹ 1,000 ಷೇರು ಹಣ ಪಾವತಿಸಿ ಸದಸ್ಯತ್ವ ಪಡೆದರೆ ಸೌಲಭ್ಯ ದೊರೆಯಲಿದೆ.

ತೋಟಗಾರಿಕೆ ಚಟುವಟಿಕೆಗೆ ಬೇಕಾದ ಟ್ರ್ಯಾಕ್ಟರ್‌, ಪವರ್ ಟಿಲ್ಲರ್, ಸ್ಪ್ರೇಯರ್, ಬಾಳೆ ಗುಂಡಿ ಕೀಳುವ ಸಾಧನ, ಮಲ್ಚಿಂಗ್ ಶೀಟ್, ಕ್ರೇಟ್ಸ್‌ ಸೇರಿ ಹಲವು ಸವಲತ್ತುಗಳನ್ನು ರಿಯಾಯಿತಿ ದರದಲ್ಲಿ ಬಾಡಿಗೆ ಮತ್ತು ಮಾರಾಟ ಮಾಡಲಾಗುತ್ತಿದೆ.
 
ಹಾಲಿ ಬಿ.ಜಿ.ಪುರ ಹೋಬಳಿಯ 12 ಗ್ರಾಮ, ಕಿರುಗಾವಲು ಹೋಬಳಿಯ 17 ಗ್ರಾಮಗಳು ಹಾಗೂ ಕಸಬಾ ಹೋಬಳಿಯ 3 ಗ್ರಾಮಗಳ ಒಟ್ಟು 32 ಗ್ರಾಮಗಳಿಂದ ಒಂದು ಸಾವಿರ ರೈತರು ಸದಸ್ಯತ್ವ ಪಡೆದಿದ್ದಾರೆ.
 
ಇದರ ಜತೆಗೆ ಕೀಟನಾಶಕ, ಗೊಬ್ಬರ ಒದಗಸುವ ಉದ್ದೇಶವನ್ನೂ ಹೊಂದಿದೆ. ‘ಮಧ್ಯವರ್ತಿಗಳಿಲ್ಲದೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ದೊಡ್ಡಬೂವಳ್ಳಿ ಬಳಿ ರೈತರೊಬ್ಬರಿಂದ ಎರಡು ಎಕರೆ ಭೂಮಿಯನ್ನು  ಕಾರಾರು ಮೂಲಕ ಪಡೆದಿದ್ದು ಶೀಘ್ರವೇ ಒಂದೇ ಕಡೆ ಎಲ್ಲ ಸೌಲಭ್ಯ  ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಕಂಪೆನಿ ಅಧ್ಯಕ್ಷ ಜಗದೀಶ್ ತಿಳಿಸಿದರು.
 
ಮಾರ್ಚ್‌ 2016ರಲ್ಲಿ ಕಂಪನಿ ನೋಂದಣಿಯಾಗಿದ್ದು ಮೊದಲಿಗೆ ರಾವಣಿಯ ರವಿಶಂಕರ್ ಅಧ್ಯಕ್ಷರಾಗಿದ್ದು, ಈಚೆಗೆ ಕುಂದೂರಿನ ಕೆ.ಎಂ.ಜಗದೀಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸಹನಾ ಕಾರ್ಯನಿರ್ವಹಿಸುತ್ತಿದ್ದಾರೆ.

‘ರೈತ ಉತ್ಪಾದಕರ ಕಂಪೆನಿ ಜೊತೆಗೆ ಸರ್ಕಾರೇತರ ಸಂಸ್ಥೆ ಐಸಿಸಿ ಒಎ ಕಂಪೆನಿ ಸಹ ಈ ಎಲ್ಲ ಬೆಳೆಗಾರರಿಗೆ ಹಲವು ರೀತಿಯ ನೆರವು ನೀಡುತ್ತಿದೆ’ ಎಂದು ಮುಖ್ಯಕಾರ್ಯನಿರ್ವಾಹಕಿ ಎಸ್.ಆರ್‌. ಸಹನಾ ತಿಳಿಸಿದರು.
 
‘ತಾಲ್ಲೂಕು ನೀರಾವರಿ ವಂಚಿತ ಪ್ರದೇಶವಾಗಿದ್ದರೂ ಸ್ವಾವಲಂಬಿ ನೀರು ಬಳಸಿಕೊಂಡು ತೋಟಗಾರಿಕೆ ಬೆಳೆಗಳಿಗೆ ಆದ್ಯತೆ ನೀಡಲು ಇಲಾಖೆ, ಬೆಳೆಗಾರರು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.
 
ತೋಟಗಾರಿಕೆ ಇಲಾಖೆಯಿಂದ ಬೆಳೆಗಾರರಿಗೆ ಹನಿನೀರಾವರಿ, ಸಬ್ಸಿಡಿ ಯೋಜನೆ, ತಾಂತ್ರಿಕ ಸಲಹೆ ನೀಡಿ ಉತ್ತಮ ಬೆಳೆಗಾರರನ್ನಾಗಿ ಮಾಡಲು ಸಂಘ ಸಾವಿರ ಬೆಳೆಗಾರರ ಕಂಪೆನಿ ನೋಂದಣಿ ಮಾಡಿಸಿದ್ದು  ಇತ್ತೀಚೆಗೆ ಕೆಲವು ತೋಟಗಾರಿಕೆ ಬೆಳೆಗಾರರು ಲಾಭವ ಗಳಿಸಿದ್ದಾರೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದರ್ಶನ್ ಹೇಳಿದರು.
 
 ಈ ಕಂಪನಿ ಜೊತೆ ತೋಟಗಾರಿಕೆ ಇಲಾಖೆ ಮೂರು ವರ್ಷ  ಸಹಕಾರ ನೀಡಲಿದ್ದು  ನಂತರ ಅದನ್ನು ಕಂಪೆನಿಯ ಆಡಳಿತ ಮಂಡಳಿಯೇ ಉಸ್ತುವಾರಿ ವಹಿಸಿಕೊಳ್ಳಲಿದೆ. 
ಎನ್‌.ಪುಟ್ಟಸ್ವಾಮಾರಾಧ್ಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT