ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟಾಬಯಲಾದ ಶಿಂಷಾ ನದಿಯೊಡಲು

ಮದ್ದೂರು: ಕೆರೆ, ಕಟ್ಟೆಯಲ್ಲಿ ನೀರಿಲ್ಲ, ಕೊಕ್ಕೆರೆ ಬೆಳ್ಳೂರಿಗೆ ಪಕ್ಷಿ ಭೇಟಿ ಕೊಡುತ್ತಿಲ್ಲ
Last Updated 8 ಮೇ 2017, 7:44 IST
ಅಕ್ಷರ ಗಾತ್ರ
ಮದ್ದೂರು: ಎರಡು ವರ್ಷಗಳಿಂದ ವಾಡಿಕೆ ಮಳೆ ಕ್ಷೀಣಿಸಿದ ಪರಿಣಾಮ ಶಿಂಷಾ ನದಿಯೊಡಲು ಬತ್ತಿದೆ. ಅಲ್ಲಲ್ಲಿ ನಿರ್ಮಾಣವಾಗಿರುವ ಚೆಕ್ ಡ್ಯಾಂ ಬಳಿ ಅಲ್ಪ ನೀರು ನಿಂತಿರುವುದನ್ನು ಬಿಟ್ಟರೆ ಈ ಬಾರಿ ನದಿ ಬಟಾಬಯಲಾಗಿದೆ.
 
ನದಿ ಬತ್ತಿದ ಪರಿಣಾಮ ನದಿ ಕಣಿವೆ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಕೆರೆಗಳು ಒಣಗಿವೆ.  ಜನ– ಜಾನುವಾರು ನೀರಿಲ್ಲದೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಜೀವಿ ಸಂಕುಲಕ್ಕೂ ಕುತ್ತು ಬಂದೊದಗಿದೆ. 
 
ಕೊಕ್ಕರೆಗೂ ಸಂಚಕಾರ: ಶಿಂಷಾ ನದಿಯ ಬರಿದಾದ ಇಂದಿನ ಸ್ಥಿತಿಯಿಂದಾಗಿ ವಿಶ್ವ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರು ಬಾಡಿದೆ.  ನದಿ, ಕೆರೆಗಳಲ್ಲಿ ನೀರಿಲ್ಲದ ಕಾರಣ ಹಕ್ಕಿಗಳಿಗೆ ಕುಡಿಯುವ ನೀರು, ಆಹಾರದ ಕೊರತೆ ಎದುರಾಗಿದೆ.   ಹೀಗಾಗಿ ಈ ಬಾರಿ ಫೆಲಿಕಾನ್ ಹಾಗೂ ಪೈಂಟೆಡ್ ಸ್ಟಾರ್ಕ್ ಕೊಕ್ಕರೆಗಳು ಬೆಳ್ಳೂರಿಗೆ ಭೇಟಿ ನೀಡಿಲ್ಲ.
 
ಗಣಿಗಾರಿಕೆ ಫಲ: ಸದಾ ತಣ್ಣನೆಯ ಮರಳನಿಂದ ಶುದ್ಧ ಸ್ಪಟಿಕದಂತಿದ್ದ ಶಿಂಷಾ ನದಿಯಲ್ಲಿ  ಎರಡು ದಶಕಗಳಿಂದ ಎಗ್ಗಿಲ್ಲದೇ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆದ ಪರಿಣಾಮ ನದಿಯ ಎರಡು ದಂಡೆಯಲ್ಲಿದ್ದ ಮರಳು ಲೂಟಿಕೋರರ ಪಾಲಾಗಿದೆ.

ಹೀಗಾಗಿ ನದಿ ಪಾತ್ರ ವಿಸ್ತಾರಗೊಂಡು ನೀರಿನ ಹರಿವಿನ ಪ್ರಮಾಣವು ಕುಸಿದಿದೆ.  ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಲಾದ ಶಿಂಷಾ ಏತನೀರಾವರಿ ಯೋಜನೆಯ ಘಟಕಗಳು ನೀರಿದಲ್ಲೇ ಕಣ್ಣು ಮುಚ್ಚಿ ನಿಂತಿವೆ.

ರೈತರ ಹಸಿರಿನ ಕನಸು ಮುರುಟಿದೆ. ಮಹತ್ವಕಾಂಕ್ಷಿ ಬನ್ನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಏತನೀರಾವರಿ ಯೋಜನೆ ನೀರಿಲ್ಲದೇ ಸ್ಥಗಿತಗೊಂಡಿವೆ. ನಿಷೇದಾಜ್ಞೆ  ನಡುವೆಯೂ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೇ ಸಾಗಿರುವುದು ವ್ಯವಸ್ಥೆಯ ಅಣಕವಾಗಿದೆ.
 
ಮಲಿನ ನದಿ ಸೇರ್ಪಡೆ: ಈ ಹಿಂದೆ ಸ್ವಚ್ಛ ತಿಳಿನೀರಿನ ಸರೋವರದಂತೆ ಕಂಗೊಳಿ ಸುತ್ತಿದ್ದ ಶಿಂಷಾ ನದಿಯ ಒಡಲಿಗೆ ಇದೀಗ ಮದ್ದೂರು ಪಟ್ಟಣದ ಒಳಚರಂಡಿ ಮಲಿನ ನೀರನ್ನು ಶುದ್ಧೀ ಕರಿಸದೆ  ಹರಿಬಿಟ್ಟ ಪರಿಣಾಮ ಇಡೀ ನದಿ ನೀರು ಮಲಿನಗೊಂಡು ಜಲಚರ ಗಳ ಮೇಲೆ ವ್ಯತಿರಿಕ್ತ ಪರಿಂಆಮ ಬೀರಿದೆ.
 
 ಸಮೀಪದ ಪುರಾಣ ಪ್ರಸಿದ್ಧ ವೈದ್ಯನಾಥಪುರದ ಬಳಿ  ಇದೇ ಕೊಳಕು ನೀರನ್ನು ಭಕ್ತರು ಸ್ನಾನ, ಬಟ್ಟೆ ತೊಳೆಯಲು ಬಳಸುತ್ತಿದ್ದು, ಚರ್ಮ ವ್ಯಾಧಿ ನಿವಾರಣೆಗೆ ‘ಭವರೋಗ ವೈದ್ಯನಾಥೇಶ್ವರ’ನನ್ನು ಪ್ರಾರ್ಥಿಸಲು ಬಂದವರು  ಹೊಸ  ಚರ್ಮ ರೋಗ ಅಂಟಿಸಿಕೊಳ್ಳುವ ಪರಿಸ್ಥಿತಿ ಇದೆ.
 
‘ಅಕ್ರಮ ಮರಳು ಗಣಿಗಾರಿಕೆ, ಮಲಿನ ನೀರು ಸೇರುವುದನ್ನು ತಪ್ಪಿಸಲು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಎಚ್ಚರಗೊಳ್ಳಬೇಕು’ ಎಂದು ಇಲ್ಲಿಯ ರೈತರು ಆಗ್ರಹಿಸಿದ್ದಾರೆ.
ಮಧುಸೂದನ ಮದ್ದೂರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT