ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತದ ಪ್ರಶ್ನೆಯಾಗುತ್ತಿರುವ ಪ್ರೇಮ

Last Updated 8 ಮೇ 2017, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಕುಟುಂಬ ವ್ಯವಸ್ಥೆ ಬಹಳ ಸಶಕ್ತ ಎಂಬ ಭಾವನೆ ಭದ್ರವಾಗಿ ಇರುವಾಗಲೇ ಕುಟುಂಬ ಅತೀ ದುರ್ಬಲ ಘಟಕವಾಗುತ್ತಿದೆಯೇ? ಉತ್ತರ ಪ್ರದೇಶದಲ್ಲಿ ಈಗಾಗಲೇ ರಚನೆಯಾಗಿರುವ ‘ಆ್ಯಂಟಿ ರೋಮಿಯೊ ದಳ’ದ ಪರಿಕಲ್ಪನೆ ಮತ್ತು ಅದನ್ನು ಮಾಧ್ಯಮಗಳು ಜನರಿಗೆ ತಲುಪಿಸಿದ ವಿಧಾನಕ್ಕೆ ಸಿಕ್ಕ ಸ್ಪಂದನೆ ಈ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಇದು ಪ್ರೇಮಕ್ಕೆ ಮಾತ್ರ ಸಂಬಂಧಿಸಿದ ಪ್ರಶ್ನೆಯಲ್ಲ. ಇದು, ಲೈಂಗಿಕ ದೌರ್ಜನ್ಯ ತಡೆಯುವ ಉದ್ದೇಶದ ಪ್ರಾಮಾಣಿಕ ಪ್ರಯೋಗ. ಇದರಲ್ಲಿ ಕಾನೂನಿನ ಪ್ರಶ್ನೆಗಳಿರಬಹುದು, ಸಾಮಾಜಿಕ ಸಮಸ್ಯೆಗಳಿರಬಹುದು, ದುರ್ಬಳಕೆಯ ಸಾಧ್ಯತೆ ಇರಬಹುದು.

ಆದರೆ ಲೈಂಗಿಕ ದೌರ್ಜನ್ಯಗಳು ತಡೆಯಲು ಸಾಧ್ಯವಿಲ್ಲದಷ್ಟು ಪ್ರಮಾಣದಲ್ಲಿ ನಡೆಯುತ್ತಾ ಹೋದಾಗ, ‘ಸರ್ಕಾರ ಏನೂ ಮಾಡುತ್ತಿಲ್ಲ’ ಎಂಬ ಪ್ರತಿಭಟನೆಗಳು ಹೆಚ್ಚಿದಾಗ ಸರ್ಕಾರ ಬೇರೆ ಏನನ್ನು ಮಾಡಲು ಸಾಧ್ಯ? ಯಶಸ್ವಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಇಂತಹ ಏನೋ ಒಂದು ಪ್ರಯೋಗಕ್ಕೆ ಇಳಿಯುವುದು ಸರ್ಕಾರದ ಅನಿವಾರ್ಯ.
ಆದರೆ ಈ ಆಲೋಚನೆಯು ಆಡಳಿತಾನುಭವದ ಕೊರತೆ ಸೃಷ್ಟಿಸುವ ಒಂದು ಸಮಸ್ಯೆಯನ್ನು ಒಡಲೊಳಗೆ ಇರಿಸಿಕೊಂಡಿದೆ. ಪೊಲೀಸರು ಸರ್ಕಾರಿ ನೌಕರರು. ಅವರಿ
ರುವುದೇ ಸರ್ಕಾರದ ಕೆಲಸ ಮಾಡಲು ಎನ್ನುವ ಕಾನೂನು ಚೌಕಟ್ಟಿನೊಳಗೆ ಈ ಆಲೋಚನೆ ರೂಪುಗೊಂಡಿರುತ್ತದೆ. ಆದರೆ, ಸರ್ಕಾರಿ ನೌಕರರಾದ ಪೊಲೀಸರು ಮನುಷ್ಯರೂ ಆಗಿರುತ್ತಾರೆ. ಮಾನವ ಸಹಜವಾದ ಎಲ್ಲ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ಅವರಲ್ಲೂ ಇರುತ್ತವೆ ಎಂಬ ಸತ್ಯದ ಅರಿವು ಯೋಜನೆಯ ಆಲೋಚನೆಯಲ್ಲಿ ಕಾಣುವುದಿಲ್ಲ. ಆದ್ದ
ರಿಂದ ಇದರ ಮುಂದಿನ ಹಂತದಲ್ಲಿ ಯಾವುದು ಪ್ರೇಮ ಪ್ರಕರಣ, ಯಾವುದು ಲೈಂಗಿಕ ದೌರ್ಜನ್ಯ ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯೂ ಸರ್ಕಾರದ್ದಾಗುವುದು ಅನಿವಾರ್ಯ. ಕುಟುಂಬವು ಹೊಂದಿರುವ ಶಕ್ತಿ ಮತ್ತು ಅಧಿಕಾರಗಳು ಆಗ ಹೊರಟು ಹೋಗತೊಡಗುತ್ತವೆ.

ಯುವಕ-ಯುವತಿಯರ ಪ್ರೇಮ ಪ್ರಕರಣಗಳಲ್ಲಿ ಸಾರ್ವಜನಿಕ ಸಂಘಟನೆಗಳು ಮಧ್ಯಪ್ರವೇಶಿಸುವ ಮೂಲಕ ಕರ್ನಾಟಕದಲ್ಲಿ ಕುಟುಂಬದ ಅಧಿಕಾರ ಒಂದು ಮಟ್ಟಿಗೆ ಈಗಾಗಲೇ ಹೊರಟು ಹೋಗಿದೆ. ಆದರೆ ಅದು ಇನ್ನೂ ಅಧಿಕೃತವಾಗಿಲ್ಲ. ಅಧಿಕೃತಗೊಳ್ಳುವುದು ಯಾವುದೇ ವಿಷಯವನ್ನು ಆಡಳಿತ ತನ್ನ ತೆಕ್ಕೆಗೆ ತೆಗೆದುಕೊಂಡಾಗಲೇ.
ಪ್ರೇಮದ ಪ್ರಶ್ನೆಯೊಂದಿಗೆ ಸಾಮಾಜಿಕ ನೈತಿಕತೆ ಮತ್ತು ಧರ್ಮದ ಪ್ರಶ್ನೆಗಳೂ ಸೇರಿಕೊಂಡಿವೆ. ಆದರೆ ಧರ್ಮದ ತತ್ವ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಗ್ರಹಿಕೆಯಲ್ಲಿನ ದೋಷವನ್ನು ಸಮಾಜ ಇನ್ನೂ ಸ್ಪಷ್ಟಪಡಿಸಿಕೊಂಡಿಲ್ಲ. ಧರ್ಮಗಳು ಪ್ರೇಮವನ್ನು ನಿಷೇಧಿಸಿಲ್ಲ. ಬಹುಸಂಖ್ಯಾತ ಹಿಂದೂಗಳ ಧರ್ಮವೆಂದು ಯಾವುದನ್ನು ಹೇಳಲಾಗಿದೆಯೋ ಅದು ಪ್ರೇಮವನ್ನು ನಿರ್ವಹಿಸುವುದಕ್ಕಾಗಿಯೇ ಮನ್ಮಥ ಎಂಬ ದೇವರನ್ನು ಕಲ್ಪಿಸಿಕೊಂಡಿದೆ. ಸಾಹಿತ್ಯಕವಾಗಿ ಮನ್ಮಥ ಎಂಥ ಅದ್ಭುತ ರೂಪಕವೆಂದರೆ, ಉಳಿದೆಲ್ಲ ದೇವರ ಕೈಯಲ್ಲಿರುವ ನಿರ್ಜೀವ ಲೋಹದ ಬಿಲ್ಲು ಬಾಣಗಳನ್ನು ಪ್ರಯೋಗಿಸಿದರೆ ಅಂಗ ಛೇದನವಾಗುತ್ತದೆ. ಮನ್ಮಥ ತನ್ನ ಕೈಯಲ್ಲಿರುವ ರಸ ತುಂಬಿದ ಹಸಿ ಕಬ್ಬಿನ ಬಿಲ್ಲಿಗೆ ಅರವಿಂದ, ಅಶೋಕ, ಚೂತ, ನವಮಲ್ಲಿಕಾ, ನೀಲೋತ್ಪಲಗಳೆಂಬ ಹೂಬಾಣಗಳನ್ನು ಹೂಡಿ ಪ್ರಯೋಗಿಸಿದರೆ ಅಂಗಗಳ ಮಿಲನವಾಗುತ್ತದೆ. ಸ್ಮಶಾನದಲ್ಲೂ ಸತ್ತ ಮರಗಳು ಚಿಗುರೊಡೆದು ಹೂ ಬಿಡುತ್ತವೆ. ನೀರಿಲ್ಲದಲ್ಲಿ ನೀರಿನ ಝರಿ ಹರಿಯುತ್ತದೆ.


ಸತ್ತ ಮರಗಳು ಚಿಗುರೊಡೆಯುವುದು, ನೀರಿಲ್ಲದಲ್ಲಿ ನೀರಿನ ಝರಿ ಹರಿಯುವುದು ಕೆಟ್ಟದ್ದಲ್ಲ ಎಂದಾದರೆ ಪ್ರೇಮ ಒಳ್ಳೆಯದೆಂದೇ ಧರ್ಮವೂ ಪರಿಭಾವಿಸಿದೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.

ಸಮಸ್ಯೆ ಉದ್ಭವಿಸಿರುವುದು ಪ್ರೇಮದ ಪ್ರಶ್ನೆಯಲ್ಲಲ್ಲ; ಕಾಮದ ಪ್ರಶ್ನೆಯಲ್ಲಿ. ಗಂಡು-ಹೆಣ್ಣಿನ ಪ್ರೇಮದಲ್ಲಿ ಕಾಮದ ಅಸ್ತಿತ್ವ ಇರಬಾರದೆನ್ನುವುದು ಅವಾಸ್ತವಿಕ. ಕಾಮ ಕೂಡ ಪ್ರೇಮದ ವಿಕಾಸಾತ್ಮಕ ಸಾಧನವೇ. ಆದರೆ ನಾಗರಿಕತೆಯು ಕಾಮವನ್ನು ಮೂರು ರೀತಿಯಲ್ಲಿ ಅರ್ಥೈಸಿದೆ. ಅಶ್ಲೀಲ, ಕ್ರೌರ್ಯ ಮತ್ತು ಶೃಂಗಾರದ ರೂಪಗಳಲ್ಲಿ. ಶೃಂಗಾರ ರೂಪದ ಕಾಮವು ಸಾರ್ವತ್ರಿಕ ಮಾನ್ಯತೆ ಪಡೆದಿದೆ. ಕಾಮದ ಅಶ್ಲೀಲ ರೂಪವು ಅನೈತಿಕತೆಯನ್ನೂ, ಕ್ರೌರ್ಯದ ರೂಪವು ಲೈಂಗಿಕ ದೌರ್ಜನ್ಯವನ್ನೂ ಸೃಷ್ಟಿಸುತ್ತವೆ. ಅಂದರೆ ಪ್ರಶ್ನೆ ಇರುವುದು ಅಶ್ಲೀಲ ಮತ್ತು ಕ್ರೌರ್ಯದ ರೂಪವಾಗಿ ಬರುವ ಕಾಮದ ಬಗ್ಗೆ. ಇದನ್ನು ತಡೆಯಲೇಬೇಕು ಎನ್ನುವುದು ಸಮರ್ಥನೀಯ.

ಆದರೆ ತಡೆಯುವುದನ್ನು ಯಾರು ನಿರ್ವಹಿಸಬೇಕು ಎಂಬುದು ಮುಖ್ಯ ವಿಚಾರ. ಪ್ರೇಮ-ಕಾಮದಂತಹ ಖಾಸಗಿ ವಿಷಯಗಳನ್ನು ಕುಟುಂಬಕ್ಕಿಂತ ಹೆಚ್ಚು ಶಕ್ತಿಶಾಲಿಯಾದ ಘಟಕಗಳು ನಿರ್ವಹಿಸುವುದು ಅಪಾಯಕಾರಿ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ತನ್ನನ್ನು ಪ್ರತಿನಿಧಿಸುವ ಪ್ರಭುತ್ವ ಪರಮಾಧಿಕಾರ ಕಳೆದುಕೊಂಡಾಗ ಸಮಾಜ ಕೂಡ ತನ್ನೆಲ್ಲ ಅಧಿಕಾರಗಳನ್ನು ಕಳೆದುಕೊಳ್ಳುತ್ತದೆ. ಆಗ ಅಶ್ಲೀಲತೆ ಮತ್ತು ಕ್ರೌರ್ಯಗಳೆರಡನ್ನೂ ಒಳಗೊಂಡ ಬೀಭತ್ಸ ರೂಪದಲ್ಲಿ ಕಾಮದ ಅಟ್ಟಹಾಸ ನಡೆಯುತ್ತದೆ. ಯುದ್ಧ ಏಕೆ ನಡೆಯಬಾರದು ಎನ್ನುವುದಕ್ಕೆ ಮಹಾಭಾರತದಲ್ಲಿ ಕೃಷ್ಣ ಕೊಡುವ ಕಾರಣಗಳಲ್ಲಿ ಇದು ಪ್ರಬಲ ಕಾರಣ. ಹೊಯ್ಸಳ ಶಾಸನಗಳಲ್ಲಿ ಬರುವ ‘ಪೆಂಡೆರುಡೆಯುಡಿಯುರ್ಚು’ ಮತ್ತು ‘ಪೆಣ್ಬುಯಿಲ್’ ಪರಿಕಲ್ಪನೆಗಳು ಗೆದ್ದ ರಾಜ್ಯದಲ್ಲಿ ನಡೆಯುವ ಸಾಮೂಹಿಕ ಅತ್ಯಾಚಾರವನ್ನೇ ಹೇಳುತ್ತವೆ. ಒಂದು ಮತ್ತು ಎರಡನೇ ಮಹಾಯುದ್ಧಗಳಲ್ಲಿ ನಡೆದ ಕಾಮದ ಬೀಭತ್ಸ ಅಟ್ಟಹಾಸಕ್ಕೆ ಕೊನೆಮೊದಲಿಲ್ಲ.

ಶತ್ರು ರಾಜ್ಯದಲ್ಲೂ ಕಾಮದ ಅಟ್ಟಹಾಸ ನಡೆಯಬಾರದು (ನಿಜವಾಗಿ ಏನಾಗಿತ್ತೊ) ಎಂದವನು ಛತ್ರಪತಿ ಶಿವಾಜಿ ಮಾತ್ರ. ಕುಟುಂಬದ ಅಧಿಕಾರ ವ್ಯಾಪ್ತಿಯೊಳಕ್ಕೆ ಪ್ರವೇಶಿಸಲು ಪ್ರಭುತ್ವಕ್ಕೆ ಅವಕಾಶ ಸಿಕ್ಕಿದಾಗ ಕಾಮದ ಬೀಭತ್ಸ ಅಟ್ಟಹಾಸ ನಡೆದುದಕ್ಕೆ ಆಧಾರಗಳಿವೆ. ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದ ಸ್ಥಾಪನೆಯ ಹಿಂದೆ ಅಂತಹ ಒಂದು ಚರಿತ್ರೆ ಇದೆ. ಪ್ರಭುತ್ವ ಕೈಗೆತ್ತಿಕೊಂಡ ವಿಚಾರಗಳು ಯಾರು ಬೇಕಾದರೂ ಮಧ್ಯ ಪ್ರವೇಶಿಸಬಹುದಾದ ಸಾರ್ವಜನಿಕ ವಿಷಯಗಳೇ ಆಗುತ್ತವೆ. ಆದ್ದರಿಂದ ಗಂಡು ಹೆಣ್ಣಿನ ಪ್ರೇಮ-ಕಾಮದ ವಿಷಯಗಳು ಪ್ರಭುತ್ವ ಕೈಗೆತ್ತಿಕೊಳ್ಳುವ ವಿಷಯಗಳಾಗಲೇಬಾರದು.

ಆದರೆ ಇವು ಕೂಡ ಪ್ರಭುತ್ವ ಕೈಗೆತ್ತಿಕೊಳ್ಳುವ ವಿಷಯಗಳಾಗುತ್ತಿವೆ. ಯಾವಾಗ ಕುಟುಂಬವು ತನ್ನ ಪಾತ್ರವನ್ನು ನಿರ್ವಹಿಸಲು ವಿಫಲವಾಗುತ್ತದೊ ಆಗ ಇವೆಲ್ಲವೂ ಪ್ರಭುತ್ವದ ವಿಷಯಗಳಾಗುತ್ತವೆ. ಆದ್ದರಿಂದ ಕುಟುಂಬಗಳು ಹೆಚ್ಚು ವಿವೇಕವಂತವಾಗಬೇಕಾದದ್ದು ಇಂದಿನ ಅಗತ್ಯ. ಕಾಮದ ಅಶ್ಲೀಲ ಮತ್ತು ಕ್ರೌರ್ಯದ ರೂಪಗಳೆರಡೂ ಕಿರಿಯ ತಲೆಮಾರಿನಲ್ಲಿ ಬೆಳೆಸಬೇಕಾದ ಸಂಸ್ಕಾರವನ್ನು ಬೆಳೆಸಲು ಕುಟುಂಬ ವಿಫಲವಾಗಿರುವುದನ್ನು ಸೂಚಿಸುತ್ತವೆ. ಪ್ರೇಮದ ವಿಚಾರದಲ್ಲಿ ಕುಟುಂಬೇತರ  ಶಕ್ತಿಗಳ ಪ್ರವೇಶವು, ಕುಟುಂಬದ ಮುಖ್ಯಸ್ಥನು ಬೇಜವಾಬ್ದಾರಿಯಿಂದಲೋ, ಭಯಪಡಿಸುವ ಶಕ್ತಿಯಾಗಿ ಕಾಣಿಸಿಕೊಳ್ಳುವ ಮೂಲಕವೋ ಕಿರಿಯ ತಲೆಮಾರಿನ ವಿಶ್ವಾಸವನ್ನು ಪಡೆಯಲು ವಿಫಲನಾಗಿರುವುದನ್ನು ಸೂಚಿಸುತ್ತದೆ.

‘ಅಪ್ಪ ತನಗೆ ಯಾವುದೇ ಸಮಸ್ಯೆಗಳಿಂದ ಹೊರಬರುವ ದಾರಿ ತೋರಿಸಬಲ್ಲ’ ಎಂಬ ಭರವಸೆಯನ್ನು ತಂದೆಯಾದವನು ಮಕ್ಕಳಿಗೆ ಒದಗಿಸಲು ಸಾಧ್ಯವಾದರೆ ಪರಿಸ್ಥಿತಿ ಸಾಕಷ್ಟು ಸುಧಾರಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT