ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನ ಬೆಂಕಿ ನಂದಿಸಲು ಹೊರಟ ಗುಬ್ಬಚ್ಚಿ!

Last Updated 9 ಮೇ 2017, 4:01 IST
ಅಕ್ಷರ ಗಾತ್ರ

ಒಂದು ಕಾಡಿಗೆ ದೊಡ್ಡ ರೀತಿಯಲ್ಲಿ ಬೆಂಕಿ ಬಿದ್ದು ಹತ್ತು ಹಲವು ಪ್ರಾಣಿಗಳು, ಮರಗಿಡ ಸಜೀವ ದಹನವಾಗುತ್ತಿದ್ದವು. ಸನಿಹದಲ್ಲೇ ಇದ್ದ ಮನುಷ್ಯರು, ಪ್ರಾಣಿಗಳು ಅದನ್ನು ನೋಡುತ್ತ ನಿಂತಿದ್ದವು. ಯಾರೂ ಏನೂ ಪರಿಹಾರ ಯತ್ನಕ್ಕೆ ಹೊರಡಲಿಲ್ಲ. ಮೂಲೆಯಲ್ಲಿದ್ದ ಗುಬ್ಬಚ್ಚಿ ಪಕ್ಕದ ಕೆರೆಗೆ ಹಾರಿ ಹೋಯಿತು. ರೆಕ್ಕೆ ಒದ್ದೆ ಮಾಡಿ ತಂದು ಬೆಂಕಿಗೆ ಸುರಿಯಲು ಶುರು ಮಾಡಿತು.

ಆನೆ, ಚಿರತೆ, ಮಾನವರು ಗಹಗಹಿಸಿ ನಕ್ಕರು. ‘ನಿನ್ನ ಈ ನಾಕು ಹನಿ ನೀರಿಂದ ಕಾಳ್ಗಿಚ್ಚು ಆರುವುದುಂಟೇ’ ಎಂದು ಮೂದಲಿಸಿದರು. ಗುಬ್ಬಚ್ಚಿ ಪಡಿನುಡಿಯಿತು. ‘ಇಲ್ಲ. ನನಗೂ ಗೊತ್ತು ಕಿಚ್ಚು ನಂದಲಾರದು. ಆದರೆ ನಾಳೆ ಈ ದುರಂತದ ಚರಿತ್ರೆ ಹೊರಬರುವಾಗ ಕಣ್ಣೆದುರು ಇಂಥಾ ಅನಾಹುತ ಆದಾಗಲೂ ಪ್ರಯತ್ನ ಮಾಡದವರ ಪಟ್ಟಿಯಲ್ಲಿ ನೀವೆಲ್ಲಾ ಇರುತ್ತೀರಿ. ಪ್ರಯತ್ನಿಸಿದವ ಎಂದು ನನ್ನ ಹೆಸರು ದಾಖಲಾಗುತ್ತದೆ’ ಉತ್ತರ ಸೋಲಾಪುರದ ಹಳ್ಳಿ ಪಡ್ಸಾಲಿಯಲ್ಲೂ ಇಂತಹ ಗುಬ್ಬಚ್ಚಿ ಯತ್ನವೊಂದು ನಡೆದಿದೆ.

ಈ ಗ್ರಾಮದ ಐದು ಮಂದಿಯನ್ನು ಜಲಾನಯನ ತರಬೇತಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಐವರೂ ಕೈಕೊಟ್ಟರು.  ಇವರಿಗೆ ಬದಲು ಇನ್ನೈವರನ್ನು ಈ ಗ್ರಾಮ ತರಬೇತಿಗೆ ಝಕನ್ ಗಾಂವಿಗೆ ಕಳಿಸಿತ್ತು.

ಎರಡನೆ ಟೀಮನ್ನು ಪುಸಲಾಯಿಸುವಾಗ ಸರಪಂಚರಿಗೆ ಇವರೂ ಕೈಬಿಟ್ಟು ಹೋದರೆ ಎಂಬ ಚಿಂತೆಯಿತ್ತು. ಅದಕ್ಕೇ ‘ತರಬೇತಿಯ ಸ್ಥಳದ ಹತ್ತಿರವೇ ಇದೆ ಮಹಾಬಲೇಶ್ವರ, ಅಲ್ಲಿಗೊಂದು ಸುಖಯಾತ್ರೆ’ ಎನ್ನುತ್ತಲೇ ಸುಖವಾಸವನ್ನೇ ಹೈಲೈಟ್ ಮಾಡಿದ್ದರು.

ಬದಲಿ ತಂಡದಲ್ಲಿದ್ದ ಒಬ್ಬ ವ್ಯಕ್ತಿ ವಿಷ್ಣು ಭೋಸಲೆ. 45ರ ಕೃಷಿಕ. ಐದು ವರ್ಷ ಹಿಂದೆ ತಮ್ಮ ಊರುಬಿಟ್ಟು ಹೋದ ಮೇಲೆ ಖಿನ್ನರಾಗಿದ್ದರು. ಅವರನ್ನು ಹತ್ತಿರದಲ್ಲಿ ಬಲ್ಲವರು ಹೇಳುತ್ತಾರೆ, ‘ವಿಷ್ಣು ಭಾಯಿ ಕಳೆದೈದು ವರ್ಷದಿಂದ ನಕ್ಕದ್ದೂ ಇಲ್ಲ, ಅತ್ತದ್ದೂ ಇಲ್ಲ, ಮಾತೇ ಕಮ್ಮಿ, ಸೈಲೆಂಟ್ ಮೋಡ್ ಅವರದು’ ಅಂತ.

ತೋರಿಸಿದ್ದು ಮಹಾಬಲೇಶ್ವರದ ಆಕರ್ಷಣೆ. ಇಲ್ಲಿ ನೋಡಿದರೆ, ಹಳ್ಳಿಯಲ್ಲಿ ಕೂರಿಸಿ ದಿನವಿಡೀ ಮಣ್ಣು-ನೀರಿನ ಬಗ್ಗೆ ಒಣಪಾಠ. ವಿಷ್ಣು ಅವರ ಸೈಲೆಂಟ್ ಮೋಡ್ ಬದಲಾಯಿತು. ಬಂದದ್ದು ಸಿಟ್ಟೋ ಸಿಟ್ಟು. ಸಂಘಟಕರು ಎಲ್ಲಾ ಜಾಣ್ಮೆ ಬಳಸಿ ಹೇಗೋ ಎರಡು ದಿನ ಕೂರಿಸಿದರು. ಮೂರನೇ ದಿನ ಕಿವಿಯಲ್ಲಿ ಗುಟ್ಟು ಹೇಳುವ ಆಟ ಬಂತು. ಸಹವರ್ತಿ ಅಂದು ಕಿವಿಯಲ್ಲಿ ಉಸುರಿದ ಮಾತು ಒರಿಜಿನಲ್ಲಿಗಿಂತ ಎಷ್ಟೋ ಬದಲಾಗಿ ಎಲ್ಲಿಗೋ ತಲಪಿತ್ತು. ವಿಷ್ಣು ಬಿದ್ದುಬಿದ್ದು ನಕ್ಕರು. ಅಂದು ಸಂಜೆ ವಿಷ್ಣು ಸಂಘಟಕರ ಕ್ಷಮೆ ಕೇಳಿದರು. ‘ನೀವು ಬದುಕಿನ ಪಾಠ ಹೇಳುತ್ತಿದ್ದಿರಿ. ಗೊತ್ತಾಗಲಿಲ್ಲ. ಕ್ಷಮಿಸಿ. ನಾನಿನ್ನು ಬದುಕಿರುವವರೆಗೂ ನೆಲಜಲ ಕೆಲಸ ಕೈಲಾದಷ್ಟು ಮಾಡುತ್ತೇನೆ’ ಎಂದು ಪಣ ತೊಟ್ಟರು.
ಏಪ್ರಿಲ್ 8ರಂದು ಊರಿಗೆ ಬಂದು ಶ್ರಮದಾನ ಸುರುವಾದಾಗಲೇ ಕಾದಿತ್ತು ಅಗ್ನಿಪರೀಕ್ಷೆ. ಅದೆಷ್ಟೇ ಸಭೆ ನಡೆಸಿದರೂ ಊರವರು ಬಿಡಿ, ಜತೆಗೆ ತರಬೇತಿ ಪಡೆದ ನಾಕು ಮಂದಿಯೂ ಮಂಗಮಾಯ. ವಿಷ್ಣು ಬೇಸರ ಪಡಲಿಲ್ಲ. ತಾನೇ ಒಬ್ಬಂಟಿಯಾಗಿ ಇಂಗುಕೊಳದ ಹೂಳೆತ್ತತೊಡಗಿದರು.

ಪ್ರತಿದಿನ ಊರವರ ಭೇಟಿ, ಶ್ರಮದಾನಕ್ಕೆ ಕರೆ. ಸ್ಪಂದಿಸಿದವರು ಇಬ್ಬರೆ. 65ರ ಶಾಹಾಜಿ ಭೋಸ್ಲೆ, 67ರ ಮಾಣಿಕ್ ಮಾಲಿ. ಪಾಪ, ಸರಿಯಾಗಿ ನಡೆದಾಡಾಲೂ ಆಗದ ಮಂದಿ ಮಣ್ಣಿನ ಕೆಲಸಕ್ಕೆ ಸಾಥ್ ಕೊಟ್ಟರು.

‘ಮೂರೇ ಮಂದಿಯ ಶ್ರಮದಾನದ ಊರು’, ಎಂಬ ಸುದ್ದಿಯನ್ನು ತಾಲೂಕು ಸಮನ್ವಯಕಾರ ವಿಕಾಸ್ ಗಾಯಕ್ ವಾಡ್ ಪಾನಿ ಫೌಂಡೇಶನಿಗೆ ಮಿಂಚಿಸಿದರು. ಅಚ್ಚರಿ ಏನು ಗೊತ್ತೇ?

ಏಪ್ರಿಲ್ 13ಕ್ಕೆ ಆ ಹಳ್ಳಿಗೆ ಒಂದು ಸಂತಸಾಘಾತ. ಅಮೀರ್ ಖಾನ್ ಮತ್ತವರ ಅರ್ಧಾಂಗಿ ಕಿರಣ್ ರಾವ್ ಬಂದಿಳಿದವರೇ ವಿಷ್ಣು ಜತೆ ಮಾತಾಡಿದರು. ಅಮೀರ್ ಸ್ವತಃ ಪಿಕಾಸಿ ಹಿಡಿದು ಕೊಳಕ್ಕಿಳಿದರು. ‘ಯಾರೂ ಸಹಾಯ ಮಾಡಬೇಡಿ. ನನಗೆ ವಿಷ್ಣು ಭಯ್ಯಾರದೇ ಪ್ರೇರಣೆ. ನಾನೊಬ್ಬನೇ ಟ್ರಾಕ್ಟರ್ ಟ್ರಾಲಿ ತುಂಬಿ ನೋಡಬೇಕು’ ಎನ್ನುತ್ತಾ ಅರ್ಧ ಗಂಟೆಯಲ್ಲಿ ತುಂಬೇ ಬಿಟ್ಟರಂತೆ.

ಜನಜಂಗುಳಿ ಸೇರಿ ಮುಖ್ಯ ಆಶಯಕ್ಕೆ ಭಂಗ ಬಾರದಿರಲಿ ಎಂದು ವಿಚಾರ ಗುಟ್ಟಾಗಿಟ್ಟಿದ್ದರು. ಪಾನಿ ಫೌಂಡೇಶನ್ ಈ ಯಶೋಗಾಥೆಯನ್ನು ಚಿತ್ರೀಕರಿಸಿ ತನ್ನ ಜಾಲತಾಣಕ್ಕೆ (http://www.paanifoundation.in)  ಏರಿಸಿದೆ.  ಹೆಸರು : ‘ಹೌ ಎ ವಿಲೇಜರ್ ಫ್ರಮ್ ಸೋಲಾಪುರ್ ವೇಜ್ಡ್ ಎ ವಾರ್ ಅಗೈನ್ಸ್ಟ್ ಡ್ರಾಟ್. ಈ ಮರಾಠಿ ಚಿತ್ರದ ಕೊಂಡಿ : https://youtu.be/WiDfAgysj5A ಅಮೀರ್ ಭೇಟಿಯ ನಂತರ ಈಗ ಶ್ರಮದಾನಿಗಳ ಸಂಖ್ಯೆ 22ಕ್ಕೇರಿದೆ. ಪಾನಿ ಫೌಂಡೇಶನ್ ವಿಷ್ಣು ಅವರಿಗೆ ಒಂದು ಟ್ಯಾಬ್ಲೆಟ್ ಕೊಟ್ಟಿದೆ. ಅದರ ಮೂಲಕ ಅವರು ನೀರೆಚ್ಚರದ ವಿಡಿಯೋ ತೋರಿಸುತ್ತಾರೆ. ಊರವರಿಗೆ ಗುಬ್ಬಚ್ಚಿ ಕತೆ ಹೇಳುತ್ತಾರೆ. ಮೌನ, ಅಸಹಕಾರಗಳು ಕರಗುತ್ತಿವೆ. ಇಂಗುಕೊಳದ ಹೂಳು ಬುಟ್ಟಿಬುಟ್ಟಿಯಾಗಿ ಕಾಲಿಯಾಗುತ್ತಿದೆ. ಜನಮಾನಸದ ಮನದ ಹೂಳೂ ಕೂಡಾ ಹಾಗೇನೆ.

ಶ್ರೀ ಪಡ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT