ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೋಟಾನೋಟು ಕೊಟ್ಟು ಚಿನ್ನ ಹೊತ್ತೊಯ್ದಿದ್ದರು!

Last Updated 12 ಮೇ 2017, 10:03 IST
ಅಕ್ಷರ ಗಾತ್ರ
ಬೆಂಗಳೂರು: ಪರಿಚಿತ ಆಭರಣ ವ್ಯಾಪಾರಿಗೆ ₹ 32 ಲಕ್ಷ ಮೊತ್ತದ ಖೋಟಾನೋಟುಗಳನ್ನು ನೀಡಿ, 1 ಕೆ.ಜಿ ಚಿನ್ನದ ಬಿಸ್ಕತ್‌ಗಳನ್ನು ಕೊಂಡೊಯ್ದಿದ್ದ ಮೂವರು ವಂಚಕರು ಹಲಸೂರು ಗೇಟ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
 
ಈ ಸಂಬಂಧ ನಗರ್ತಪೇಟೆಯ ಆಭರಣ ವ್ಯಾಪಾರಿ ದಿನೇಶಕುಮಾರ್ ಅವರು ಏ.24ರಂದು ಹಲಸೂರು ಗೇಟ್ ಠಾಣೆಗೆ ದೂರು ಕೊಟ್ಟಿದ್ದರು.
‘ಮೈಸೂರಿನ ವಿನೋದ್ (45), ಹೇಮಂತ್ (33) ಹಾಗೂ ಹರೀಶ್‌ (31) ಎಂಬುವರನ್ನು ಬಂಧಿಸಿದ್ದೇವೆ.
 
ಆರೋಪಿಗಳಿಂದ 1 ಕೆ.ಜಿ ಚಿನ್ನದ ಬಿಸ್ಕತ್‌ ಗಳು, ಎರಡು ಕಾರುಗಳು, ನಕಲಿ ನೋಟು ತಯಾರಿಗೆ ಬಳಸುತ್ತಿದ್ದ ಕಲರ್ ಪ್ರಿಂಟರ್, ಕಂಪ್ಯೂಟರ್, ಸ್ಕ್ಯಾನಿಂಗ್ ಯಂತ್ರಗಳನ್ನು ಜಪ್ತಿ ಮಾಡಿ ದ್ದೇವೆ’ ಎಂದು ತನಿಖಾಧಿಕಾರಿ ಗಳು ಹೇಳಿದ್ದಾರೆ.
 
ಹಳೇ ಮಿತ್ರರು: ‘ಫಿರ್ಯಾದಿ ದಿನೇಶ್ ಮೊದಲು ಮೈಸೂರಿನಲ್ಲಿ ಆಭರಣ ಮಳಿಗೆ ಇಟ್ಟುಕೊಂಡಿದ್ದರು. ವಿನೋದ್ ಕೂಡ ಅದೇ ವ್ಯವಹಾರ ಮಾಡುತ್ತಿದ್ದ. ಹೀಗಾಗಿ, ಪರಸ್ಪರರ ನಡುವೆ ಗೆಳೆತನ ಬೆಳೆದಿತ್ತು. ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ವಾಸ್ತವ್ಯ ಬದಲಿಸಿದ ದಿನೇಶ್, ನಗರ್ತಪೇಟೆಯಲ್ಲಿ ಎಸ್‌ವಿಕೆ ಡೈಮಂಡ್ಸ್ ಮಳಿಗೆ ತೆರೆದಿದ್ದರು ಎಂದು ಅಧಿಕಾರಿಯೊಬ್ಬರು ವಿವರಿಸಿದರು.
 
ಇತ್ತ ಚಿನ್ನದ ವಹಿವಾಟಿನಲ್ಲಿ ನಷ್ಟ ಉಂಟಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ವಿನೋದ್, ಸಾಲ ಮಾಡಿ ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬಟ್ಟೆ ಅಂಗಡಿ ಆರಂಭಿಸಿದ್ದ. ಆದರೆ, ಅದೂ ಆತನ ಕೈ ಹಿಡಿಯಲಿಲ್ಲ. ಈ ಮಧ್ಯೆ ಸಾಲಗಾರರು ಹಣ ಮರಳಿಸುವಂತೆ ಒತ್ತಡ ಹೇರಲಾರಂಭಿಸಿದ್ದರು.
 
ಇದೇ ಸಂದರ್ಭದಲ್ಲಿ ಆತನ ಸ್ನೇಹಿತ ಹೇಮಂತ್, ತಾನು ಸಹ ₹ 6 ಲಕ್ಷ ಸಾಲ ಮಾಡಿಕೊಂಡಿರುವುದಾಗಿ ಹೇಳಿದ್ದ. ಆ ನಂತರ ಅವರಿಬ್ಬರೂ ಕಳ್ಳತನ ಮಾಡಿ ಯಾದರೂ ಸಾಲ ತೀರಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಈ ಹಂತದಲ್ಲಿ  ವಿನೋದ್‌ಗೆ ತನ್ನ ಹಳೇ ಗೆಳೆಯ ದಿನೇಶ್‌ ನೆನಪಾಗಿದ್ದರು. ಅವರಿಂದಲೇ ಸುಲಿಗೆ ಮಾಡಲು ಸಂಚು ರೂಪಿಸಿಕೊಂಡ ಎಂದು ಮಾಹಿತಿ ನೀಡಿದರು.
 
ಇದೇ ವೇಳೆ ಅವರಿಬ್ಬರಿಗೆ ಪರಿಚಿತ ನಾದ ಹರೀಶ್, ‘ನನ್ನ ಬಳಿ ಕಲರ್ ಪ್ರಿಂಟರ್ ಹಾಗೂ ಸ್ಕ್ಯಾನಿಂಗ್ ಯಂತ್ರ ವಿದೆ. ₹ 2 ಸಾವಿರ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಕೊಡುತ್ತೇನೆ. ಅವುಗಳನ್ನೇ ದಿನೇಶ್‌ಗೆ ಕೊಟ್ಟು ಆಭರಣ ಖರೀದಿಸಿಬಿಡಿ’ ಎಂದಿದ್ದ. ಅದಕ್ಕೆ ಅವರು ಒಪ್ಪಿಕೊಂಡಿದ್ದರು.
 
ಮರುದಿನವೇ ₹ 2 ಸಾವಿರ ಮುಖಬೆಲೆಯ 1,600 ನೋಟುಗಳನ್ನು ಮುದ್ರಿಸಿದ ಹರೀಶ್, ಅವುಗಳನ್ನು 16 ಕಂತೆಗಳನ್ನಾಗಿ ಮಾಡಿದ್ದ. ಅಲ್ಲದೆ, ಕೋಟ್ಯಾಕ್ ಮಹೇಂದ್ರಾ ಬ್ಯಾಂಕಿನಿಂದ ಕದ್ದು ತಂದಿದ್ದ ಬ್ಯಾಂಡ್‌ಗಳನ್ನು ಪ್ರತಿ ಕಂತೆಗೂ ಹಾಕಿದ್ದ.
 
ಮದುವೆ ನೆಪ: ಏ.24ರ ಮಧ್ಯಾಹ್ನ ದಿನೇಶ್ ಅವರಿಗೆ ಕರೆ ಮಾಡಿದ್ದ ವಿನೋದ್, ‘ಜೈ ಗುರುದೇವ್. ನನ್ನ ಹೆಸರು ಜುಗರಾಜ್. ಚಿಕ್ಕಮಗಳೂರಿ ನಿಂದ ಮಾತನಾಡುತ್ತಿದ್ದೇನೆ. ಮುಂದಿನ ತಿಂಗಳು ಮಗಳ ಮದುವೆ ಇದೆ. 1 ಕೆ.ಜಿ. ಚಿನ್ನದ ಬಿಸ್ಕತ್‌ಗಳನ್ನು ಕೊಡಿ. ನಮಗೆ ಬೇಕಾದ ವಿನ್ಯಾಸದಲ್ಲಿ ಆಭರಣ ಮಾಡಿಕೊಳ್ಳುತ್ತೇವೆ’ ಎಂದಿದ್ದ.
 
ಅದಕ್ಕೆ ದಿನೇಶ್, ‘ಚಿನ್ನ ಬೇಕಾದರೆ ಮಳಿಗೆಗೆ ಬನ್ನಿ’ ಎಂದಿದ್ದರು. ಆಗ ಆರೋಪಿ, ‘ನಾನು ಮದುವೆ ಕೆಲಸದಲ್ಲಿ ನಿರತನಾಗಿದ್ದೇನೆ. ರಾತ್ರಿ 9 ಗಂಟೆಗೆ ನನ್ನ ವ್ಯವಸ್ಥಾಪಕನನ್ನು ಮೈಸೂರು ಬ್ಯಾಂಕ್ ವೃತ್ತಕ್ಕೆ ಕಳುಹಿಸಿಕೊಡುತ್ತೇನೆ. 1 ಕೆ.ಜಿ ಚಿನ್ನಕ್ಕೆ ₹ 30 ಲಕ್ಷವಾಗುತ್ತದೆ. ನಾನು ₹ 32 ಲಕ್ಷ ಕೊಡುತ್ತೇನೆ’ ಎಂದು ಹೇಳಿದ್ದ.
 
₹ 2 ಲಕ್ಷದ ಆಸೆಗೆ ಬಿದ್ದ ದಿನೇಶ್, ರಾತ್ರಿ 9.30ರ ಸುಮಾರಿಗೆ ಚಿನ್ನದ ಬಿಸ್ಕತ್ ತೆಗೆದುಕೊಂಡು ಮಗನ ಜತೆ ಕಾರಿನಲ್ಲಿ ಮೈಸೂರು ಬ್ಯಾಂಕ್ ವೃತ್ತಕ್ಕೆ ಹೋಗಿದ್ದರು. ಸ್ವಲ್ಪ ಸಮಯದಲ್ಲೇ ₹ 32 ಲಕ್ಷ ಮೊತ್ತದ ಖೋಟಾನೋಟುಗಳನ್ನು ತೆಗೆದುಕೊಂಡು ಹೇಮಂತ್ ಅಲ್ಲಿಗೆ ಬಂದಿದ್ದ. ಈ ಸಂದರ್ಭದಲ್ಲಿ ವಿನೋದ್, ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ದೇವಸ್ಥಾನದ ಹಿಂಭಾಗದಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದ.
 
ನೋಟುಗಳ ಕಂತೆಗಳನ್ನು ದಿನೇಶ್ ಅವರಿಗೆ ಕೊಟ್ಟ ಹೇಮಂತ್, ಚಿನ್ನ ಪಡೆದುಕೊಂಡು ವಿನೋದ್‌ ಜತೆ ಕಾರಿ ನಲ್ಲಿ ಪರಾರಿಯಾಗಿದ್ದ. ಬ್ಯಾಂಕ್ ಹೆಸರಿ ನಲ್ಲಿ ರಬ್ಬರ್ ಬ್ಯಾಂಡ್ ಇದ್ದಿದ್ದರಿಂದ ಅಸಲಿ ನೋಟುಗಳೆಂದೇ ಭಾವಿಸಿದ್ದ ದಿನೇಶ್, ಮನೆಗೆ ಹೋಗಿ ಪರಿಶೀಲಿಸಿ ದಾಗ ಅವು ಖೋಟಾನೋಟುಗಳು ಎಂಬುದು ಗೊತ್ತಾಗಿತ್ತು. ನಂತರ ಅವರು ಠಾಣೆ ಮೆಟ್ಟಿಲೇರಿದ್ದರು.
 
ಚಿನ್ನ ಪಡೆದ ಬಳಿಕ ವಿನೋದ್ ಹಾಗೂ ಹೇಮಂತ್ ಮೈಸೂರಿನ ಕಡೆಗೆ ಹೊರಟಿದ್ದರು. ಪೂರ್ವಯೋಜಿತ ಸಂಚಿ ನಂತೆ ಹರೀಶ್ ಕಾರಿನಲ್ಲಿ ಮದ್ದೂರಿಗೆ ಬಂದಿದ್ದ. ಅಲ್ಲಿ ಅವರಿಬ್ಬರಿಂದ ಚಿನ್ನದ ಬಿಸ್ಕತ್‌ಗಳನ್ನು ಪಡೆದ ಆತ, ಅವುಗಳನ್ನು ಚೀಲದಲ್ಲಿ ಹಾಕಿ ಸಂಬಂಧಿಯ ಮನೆಯ ಲ್ಲಿಟ್ಟಿದ್ದ. 2 ದಿನಗಳ ನಂತರ ಪರಿಚಿತ ಆಭರಣ ವ್ಯಾಪಾರಿಗೆ ಅವುಗಳನ್ನು ಮಾರಿ ಅದರಿಂದ ಬಂದ ₹ 26 ಲಕ್ಷ ವನ್ನು ಹಂಚಿಕೊಂಡು ಸಾಲ ತೀರಿಸಿಕೊಂಡಿದ್ದರು.  
****
ಧ್ವನಿ ಗುರುತಿಸಿದ ವ್ಯಾಪಾರಿ
ತೆರಿಗೆ ವಂಚಿಸುವ ಉದ್ದೇಶದಿಂದ ದಿನೇಶ್ ಅವರೇ ಸುಳ್ಳು ದೂರು ಕೊಟ್ಟಿರಬಹುದು ಎಂಬ ಅನುಮಾನ ಆರಂಭದಲ್ಲಿ ವ್ಯಕ್ತವಾಗಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ‘ಕರೆ ಮಾಡಿದ್ದ ವ್ಯಕ್ತಿಯ ಧ್ವನಿಯು ಮೈಸೂರಿನ ಗೆಳೆಯ ವಿನೋದ್‌ನ ಧ್ವನಿಯಂತೆಯೇ ಇದೆ’ ಎಂದು ಹೇಳಿಕೆ ಕೊಟ್ಟರು.
 
ಆತನ ಮೊಬೈಲ್ ಸಂಖ್ಯೆ ಪರಿಶೀಲಿಸಿದಾಗ, ಜ.24ರ ರಾತ್ರಿ ಆತ ಮೈಸೂರು ಬ್ಯಾಂಕ್ ವೃತ್ತದಲ್ಲೇ ಇದ್ದ ಸಂಗತಿ ಗೊತ್ತಾಯಿತು. ಹೀಗಾಗಿ, ವಿನೋದನೇ ಕೃತ್ಯ ಎಸಗಿರುವುದು ಖಚಿತವಾಯಿತು’ ಎಂದು ತನಿಖಾಧಿಕಾರಿಗಳು ಹೇಳಿದರು.

ಕರೆ ಮಾಹಿತಿ ವಿವರ (ಸಿಡಿಆರ್) ಆಧರಿಸಿ ಹೂಟಗಳ್ಳಿಯ ಬಟ್ಟೆ ಅಂಗಡಿಯಲ್ಲೇ ವಿನೋದನನ್ನು ವಶಕ್ಕೆ ಪಡೆದೆವು. ವಿಚಾರಣೆ ವೇಳೆ ಆತ ನೀಡಿದ ಹೇಳಿಕೆ ಆಧರಿಸಿ ಉಳಿದಿಬ್ಬರನ್ನೂ ಬಂಧಿಸಿದೆವು ಎಂದು ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT