ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಜಿಕೆ ನೆನಪಲ್ಲಿ ರಾಷ್ಟ್ರೀಯ ರಂಗೋತ್ಸವ

ರಂಗಭೂಮಿ
Last Updated 12 ಮೇ 2017, 19:30 IST
ಅಕ್ಷರ ಗಾತ್ರ

ಮೇ 15ರಿಂದ 20ರ ತನಕ ನಡೆಯಲಿರುವ ಈ ರಂಗೋತ್ಸವದಲ್ಲಿ ಸಿಜಿಕೆ ಅಭಿಮಾನಿಗಳು ಮತ್ತು ರಂಗಪ್ರೇಮಿಗಳ ದಂಡೇ ನೆರೆಯಲಿದೆ...

ಕನ್ನಡ ರಂಗಭೂಮಿಗೆ ನವಚೈತನ್ಯ ತಂದವರು ಸಿ.ಜಿ.ಕೆ. ಎಂದೇ ಹೆಸರಾಗಿದ್ದ ಸಿ.ಜಿ. ಕೃಷ್ಣಸ್ವಾಮಿ ಅವರು. ರಂಗ ನಿರ್ದೇಶಕ, ರಂಗ ಸಂಘಟಕ ಸೇರಿದಂತೆ  ಹತ್ತುಹಲವು ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಸಿಜಿಕೆ ಯುವಜನರನ್ನು ಅಪಾರ ಸಂಖ್ಯೆಯಲ್ಲಿ ರಂಗಭೂಮಿಗೆ ಸೆಳೆದಿದ್ದರು.

ತಮ್ಮ ಒಡಲಲ್ಲಿ ‘ಒಡಲಾಳ’ದ ಸಾಕವ್ವನಂಥ ಮಮತೆ ಇಟ್ಟುಕೊಂಡಿದ್ದ ಸಿಜಿಕೆ ಅವರ ರಂಗಮಾಂತ್ರಿಕ ಸ್ಪರ್ಶಕ್ಕೆ ಮನಸೋತ ಹಲವರು ನಾಟಕಕಾರರಾಗಿ, ತಂತ್ರಜ್ಞರಾಗಿ, ಕಲಾವಿದರಾಗಿ ರೂಪುಗೊಂಡರು.

ಸಿಜಿಕೆ ಅವರನ್ನು ಗುರು, ಸ್ನೇಹಿತ, ಆದರ್ಶವನ್ನಾಗಿ ಪಡೆದ ಸಮಾನ ಮನಸ್ಕರ ಗುಂಪು ‘ರಂಗನಿರಂತರ’ ಮೂರು ವರ್ಷಗಳಿಂದ ಸಿಜಿಕೆ ನೆನಪಿನಲ್ಲಿ ರಾಷ್ಟ್ರೀಯ ರಂಗೋತ್ಸವವನ್ನು ಆಯೋಜಿಸುತ್ತಿದೆ.  ರಂಗೋತ್ಸವದ ಮೂಲಕ   ಸಿಜಿಕೆ ಹಾಕಿಕೊಟ್ಟ ರಂಗ ಮಾದರಿಗಳನ್ನು ಎಲ್ಲರಿಗೂ ತಲುಪಿಸುವ ಕೆಲಸವನ್ನು ‘ರಂಗನಿರಂತರ’ ಮಾಡುತ್ತಿದೆ.

‘ರಂಗೋತ್ಸವದಲ್ಲಿ ಭಾರತೀಯ ರಂಗಭೂಮಿಯ ಬೇರೆ ಭಾಷೆಗಳ ವಿಶಿಷ್ಟ ನಾಟಕಗಳನ್ನು ಆಯ್ಕೆ ಮಾಡಿ ಆಹ್ವಾನಿಸಿ, ಕನ್ನಡ ರಂಗಭೂಮಿಗೆ ಪರಿಚಯಿಸುವ ಮತ್ತು ಕನ್ನಡ ರಂಗಭೂಮಿಯ ಕ್ರಿಯಾಶೀಲ ಕೆಲಸಗಳನ್ನು ಭಾರತೀಯ ರಂಗಭೂಮಿಗೆ  ತೋರಿಸುವ ಹೆಮ್ಮೆಯ ಕೆಲಸವನ್ನು ರಂಗನಿರಂತರ ಮಾಡುತ್ತಿದೆ’ ಎನ್ನುತ್ತಾರೆ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ನಿರ್ದೇಶಕಿ ಡಾ.ವಿಜಯಾ.

‘ಉತ್ಸವದ ನಿಮಿತ್ತ ರಂಗಭೂಮಿಯಲ್ಲಿ ಕೆಲಸ ಮಾಡಿರುವ 50 ಜನರ ಭಾವಚಿತ್ರಗಳನ್ನು ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ        ಪ್ರದರ್ಶಿಸಲಾಗುವುದು. ನಾಟಕ ಮುಗಿದ ಮಾರನೇ ದಿನ ಚರ್ಚೆ ನಡೆಯಲಿದೆ. ಪ್ರತಿದಿನವೂ ಒಬ್ಬೊಬ್ಬ ರಂಗತಜ್ಞರು ನಾಟಕದ ಕುರಿತು ಮಾತನಾಡುತ್ತಾರೆ. ನಾಟಕದ ಮುಗಿದ ಮೇಲೆ ನೆನಪು–ಅಣಕು ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಮಾಡಲಾ ಗುತ್ತದೆ’ ಎಂದು ವಿವರಿಸುತ್ತಾರೆ ಅವರು.

‘ಈ ಹಿಂದೆ ಒಂದೇ ವರ್ಗ ಅಥವಾ ಒಂದಷ್ಟು ಜನರು ಮಾತ್ರ ರಂಗಭೂಮಿಯಲ್ಲಿ ಕೆಲಸ ಮಾಡಬಹುದು ಎನ್ನುವಂಥ ವಾತಾವರಣವಿತ್ತು. ಇದು ಗೊತ್ತೋ, ಗೊತ್ತಿಲ್ಲದೆಯೋ ನಿರ್ಮಾಣವಾಗಿದ್ದ ವಾತಾವರಣ. ಅದನ್ನು ಮುರಿದವರು ಸಿಜಿಕೆ. ಅವರ ಒತ್ತಾಸೆಯಿಂದಲೇ ಕಿ.ರಂ. ನಾಗರಾಜ್, ಎಲ್. ಹನುಮಂತಯ್ಯ, ಎಚ್‌.ಎಸ್. ಶಿವಪ್ರಕಾಶ್ ಅವರು ನಾಟಕ ಬರೆದರು.

ಅರ್ಹರನ್ನು ಸಾಂಸ್ಕೃತಿಕ ಜಗತ್ತಿಗೆ ಪರಿಚಯಿಸಿ, ರಂಗ ಚಳವಳಿ ಕಟ್ಟಿದವರು ಸಿಜಿಕೆ. ಅವರ ಅಗಾಧವಾದ ಆಲೋಚನೆಯಲ್ಲಿ ಬಿಂದುವಿನಷ್ಟು ಕೆಲಸ ನಾವು ಮಾಡುತ್ತಿದ್ದೇವೆ. ಉತ್ಸವದಲ್ಲಿ ಸಿಜಿಕೆ ಅವರನ್ನು ಸ್ಮರಿಸುತ್ತಾ ಅವರಿಂದ ಬದುಕು ಕಂಡುಕೊಂಡವರು ಅವರಿಗೆ ರಂಗ ಗೌರವ ಸಲ್ಲಿಸುತ್ತಾರೆ. ರಂಗಪ್ರೇಮಿಗಳಿಗೆ ಸ್ಫೂರ್ತಿ ನೀಡುವಂಥ ಉತ್ಸವವಿದು’ ಎಂದು ನುಡಿಯುತ್ತಾರೆ ವಿಜಯಾ.

ಈ ಬಾರಿ ರಂಗೋತ್ಸವದಲ್ಲಿ ಮಲಯಾಳಂ, ಬಂಗಾಳಿ, ಹಿಂದಿ ಮತ್ತು ಕನ್ನಡ ಭಾಷೆಯ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ನಾಟಕ ಮುಗಿದ ಮರುದಿನ ಒಂದು ತಾಸು ನಾಟಕದ ಕುರಿತು ರಂಗಸ್ಪಂದನೆ ಇರುತ್ತದೆ. ಮೊದಲ ದಿನ ಹೊರತು ಪಡಿಸಿ ಉಳಿದ ದಿನ ಬೀದಿನಾಟಕ, ಕಿನ್ನರಿ ಮೇಳ, ಸಂಚಾರಿ (ಕಲ್ಯಾಣಿ ರಾಗದ ಸ್ವಗತ), ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ.

ಈ ಬಾರಿ ‘ನೆನಪು–ಅಣಕು’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ರಂಗನಿರಂತರ ರೂಪಿಸಿದೆ.  ಆರ್.ನಾಗೇಶ್ (ಎಂ.ವೆಂಕಟರಾಜು),    ಬಿ.ವಿ. ಕಾರಂತ (ಅರುಣ್‌ಸಾಗರ್‌), ಸಿಜಿಕೆ (ಗುರು ಶಾಂತಪ್ಪ),  ಸಿ.ಆರ್.ಸಿಂಹ (ಋತ್ವಿಕ್ ಸಿಂಹ) ಈ ಅಣಕು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ವಿಭಿನ್ನ ಪ್ರಚಾರ
ಸಿಜಿಕೆ ರಾಷ್ಟ್ರೀಯ ರಂಗೋತ್ಸವಕ್ಕಾಗಿ ರಂಗನಿರಂತರ ಮಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಖ್ಯಾತ ನಟ ಪ್ರಕಾಶ್‌ ರೈ, ಲೇಖಕಿ ಡಾ.ವಿಜಯಾ,  ಸಚಿವೆ ಉಮಾಶ್ರೀ ಅವರು ರಂಗೋತ್ಸವದ ಕುರಿತು ಈ ವಿಡಿಯೊದಲ್ಲಿ ಮಾತನಾಡಿದ್ದಾರೆ.

ಸಿ.ಜಿ.ಕೆ. ರಾಷ್ಟ್ರೀಯ ರಂಗೋತ್ಸವ 2017: ಚಾಲನೆ–ದೇವನೂರ ಮಹಾದೇವ, ಅತಿಥಿ–ಸಚಿವೆ ಉಮಾಶ್ರೀ, ಕೆ.ವೈ. ನಾರಾಯಣ ಸ್ವಾಮಿ, ಅಪ್ಪಯ್ಯ, ಅಧ್ಯಕ್ಷತೆ–ಡಾ.ವಿಜಯಾ, ರಂಗಗೀತೆಗಳು–ಜನಾರ್ದನ್ (ಜನ್ನಿ), ‘ಏಕ ದಶಾನನ’ ಕನ್ನಡ ನಾಟಕ ಪ್ರದರ್ಶನ, ಪ್ರಸ್ತುತಿ–ಆಳ್ವಾಸ್ ಎಜುಕೇಷನ್ ಟ್ರಸ್ಟ್‌, ನಿರ್ದೇಶನ–ಜೀವನ್‌ರಾಂ ಸುಳ್ಯ, ಆಯೋಜನೆ–ರಂಗನಿರಂತರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ,  ಮೇ 15 (ಸೋಮವಾರ) ಸಂಜೆ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT